Advertisement

ಪುತ್ತೂರು: ಯಾರಿಗೂ ಬೇಡವಾದ ಶುದ್ಧ ನೀರಿನ ಘಟಕಗಳು!

04:22 PM May 31, 2024 | Team Udayavani |

ಕಿರಣ್‌ ಪ್ರಸಾದ್‌ ಕುಂಡಡ್ಕ
ಪುತ್ತೂರು: ಈ ಬೇಸಗೆಯಲ್ಲಿ ತಾಲೂಕಿನ ಕೆಲವು ಭಾಗಗಳಲ್ಲಿ  ನೀರಿಗೂ ತತ್ವಾರ ಉಂಟಾಗಿತ್ತು. ಹಾಗಂತ ಲಕ್ಷ-ಲಕ್ಷ ರೂ. ಖರ್ಚು ಮಾಡಿ ನೀರು ಪೂರೈಸಲೆಂದೇ ನಿರ್ಮಿಸಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕ ಹನಿ ನೀರು ಕೊಡುವ ಸ್ಥಿತಿಯಲ್ಲಿರಲಿಲ್ಲ. ಪಕ್ಕಾ ರಹಸ್ಯ ಬಂಗಲೆಯನ್ನು ನೆನಪಿಸುತ್ತಿರುವ ಈ ಘಟಕದ ಸ್ಥಿತಿಗೆ ಆಡಳಿತ ವ್ಯವಸ್ಥೆ ತಲೆ ತಗ್ಗಿಸುವಂತಿದೆ. ಈ ಬಾರಿ ಬಯಲಾದದ್ದು ಬರಗಾಲವಲ್ಲ, ಶುದ್ಧ ನೀರಿನ ಘಟಕದ ವ್ಯವಸ್ಥೆಯ ಬಂಡವಾಳ.

Advertisement

ಏನಿದು ಶುದ್ಧ ನೀರಿನ ಘಟಕ?
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆಯ ನೇತೃತ್ವದಲ್ಲಿ 2016 ರಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ
ಯೋಜನೆ ಪ್ರಸ್ತಾಪ ವಾದಾಗ ದ. ಕ.ಜಿಲ್ಲೆಗೆ ಸೂಕ್ತ ಅಲ್ಲ ಅನ್ನುವ ಅಭಿಪ್ರಾಯ ಕೇಳಿ ಬಂದಿತ್ತು. ಮುಂದೊಂದು ದಿನ
ನೀರಿಗಾಗಿ ಹಾಹಾಕಾರ ಉಂಟಾದಾಗ ಪ್ರಯೋಜನ ಆದೀತು ಎನ್ನುವ ಉತ್ತರ ನೀಡಿ ಯೋಜನೆ ತರಾತುರಿಯಲ್ಲಿ ಚಾಲನೆ ನೀಡಲಾಯಿತು.

ಗ್ರಾ.ಪಂ. ವ್ಯಾಪ್ತಿಗಳಲ್ಲಿ 12 ಲಕ್ಷ ರೂ. ವೆಚ್ಚದಲ್ಲಿ ಘಟಕ ನಿರ್ಮಾಣ ಕೈಗೆತ್ತಿಕೊಳ್ಳಲಾಗಿತ್ತು. ಕೆಆರ್‌ಡಿಎಲ್‌ ಕಾಮಗಾರಿ ನಿರ್ವಹಣೆ
ಜವಾಬ್ದಾರಿ ಹೊಂದಿತ್ತು. ಈ ಯೋಜನೆ ಪ್ರಕಾರ ಜನವಸತಿ ಪ್ರದೇಶದಲ್ಲಿ ಘಟಕ ನಿರ್ಮಿಸಿ ನೀರಿನ ಅಗತ್ಯವುಳ್ಳ ವ್ಯಕ್ತಿಯು
2 ರೂ.ಕಾಯಿನ್‌ ಹಾಕಿ 20 ಲೀಟರ್‌ ನೀರನ್ನು ಪಡೆದುಕೊಳ್ಳುವುದಾಗಿತ್ತು. 13 ಸ್ಥಳ, 7 ಘಟಕ ತಾಲೂಕಿನಲ್ಲಿ 13 ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲು ಸ್ಥಳ ಗುರುತು ಮಾಡಿದ್ದರೂ ಪೂರ್ಣಗೊಂಡದ್ದು 7 ಮಾತ್ರ. ಉಳಿದದ್ದು ಆರಂಭದಲ್ಲೇ ನಿಂತಿತ್ತು. ಕೆಲವೆಡೇ ಅಡಿಪಾಯ ಹಂತದಲ್ಲೇ ಬಾಕಿಯಾಯಿತು.

ಕೆಲವು ವರ್ಷಗಳ ಬಳಿಕ ರಾಜ್ಯದ ಬೇರೆ ಬೇರೆ ಭಾಗದಲ್ಲಿ ಘಟಕ ನಿರ್ಮಾಣದಲ್ಲಿ ಕಂಡು ಬಂದ ಅವ್ಯವಹಾರ, ಸೂಕ್ತವಲ್ಲದ
ಕಡೆ ನಿರ್ಮಾಣ, ಗುತ್ತಿಗೆದಾರರ ವಿಳಂಬ ಕಾರಣಗಳಿಂದ ಯೋಜನೆಯನ್ನು ಮುಂದುವರಿಸದಂತೆ ಸೂಚನೆ ನೀಡಲಾಯಿತು. ಈ ಪೈಕಿ ಐದು ವರ್ಷದ ಹಿಂದೆ ಪುತ್ತೂರು ತಾಲೂಕಿನಲ್ಲಿ ಪೂರ್ಣಗೊಂಡ 7 ಘಟಕಗಳನ್ನು ಕೆಆರ್‌ ಡಿಸಿಎಲ್‌ ಗ್ರಾಮ ಪಂಚಾಯತ್‌ಗೆ
ಹಸ್ತಾಂತರಿಸಿತ್ತು.

ಗಡಿ ಗ್ರಾಮದ ಕಥೆಯೂ ಅದೇ ಪುತ್ತೂರು ತಾಲೂಕಿನ ಗಡಿ ಗ್ರಾಮ, ಕಡಬ ತಾಲೂಕಿಗೆ ಸೇರಿರುವ ಸವಣೂರು ಗ್ರಾ.ಪಂ.ನ ಎರಡು ಕಡೆ ಘಟಕ ನಿರ್ಮಾಣವಾಗಿದೆ. ಅವೆರೆಡೂ ಪಾಳು ಬಿದ್ದು ತನ್ನ ಸ್ಥಿತಿಗೆ ತಾನೇ ಮರುಗುತ್ತಿದೆ. ಮಂಜುನಾಥನಗರ ಬಳಿ ನಿರ್ಮಿಸಿರುವ ಘಟಕದ ಬಾಗಿಲು ತುಂಡಾಗಿ ಪೊದೆ ತುಂಬಿದೆ. ಸವಣೂರು ಬಳಿ ಜನ ಸಂಚಾರವೇ ಇಲ್ಲದ ಕಡೆ ಘಟಕ ನಿರ್ಮಿಸಿದ್ದು ಅದು ಮಣ್ಣು, ಪೊದೆ ಆವೃತವಾಗಿ ಇತಿಹಾಸದ ಪುಟ ಸೇರಲು ಅಣಿಯಾಗಿದೆ.

Advertisement

ಕಳ್ಳರ ತಾಣ
ಜನವಸತಿ ಕೇಂದ್ರಗಳಲ್ಲಿ ಘಟಕ ನಿರ್ಮಿಸಿದರೆ ಅದರಿಂದ ಪ್ರಯೋಜನ ಇತ್ತು. ಆದರೆ ಜನ ಸಂಚಾರ ಇಲ್ಲದ, ವಾಹನ ಪಾರ್ಕಿಂಗ್‌ಗೆ ಸ್ಥಳ ಇಲ್ಲದ ಕಡೆಗಳಲ್ಲಿ ಘಟಕ ಸ್ಥಾಪಿಸಲಾಗಿದೆ ಅನ್ನುವುದು ಗ್ರಾ.ಪಂ.ಗಳ ಆರೋಪ. ಘಟಕ ನಿರ್ಮಿಸಿ ಗ್ರಾ.ಪಂ.ಗೆ ಹಸ್ತಾಂತರಿಸುವ ಸಂದರ್ಭದಲ್ಲಿ ಘಟಕದ ಕಾರ್ಯನಿರ್ವಹಣೆ ಬಗ್ಗೆ ತರಬೇತಿ ನೀಡುವುದಾಗಿ ಜಿ.ಪಂ. ಹೇಳಿತ್ತು. ಆ ತರಬೇತಿಯು ನೀಡಲಿಲ್ಲ. ಪರಿಣಾಮ ಗ್ರಾ.ಪಂ. ಘಟಕದ ಕಡೆಗೆ ತಲೆ ಹಾಕುವ ಪ್ರಯತ್ನವನ್ನೂ ಮಾಡಲಿಲ್ಲ. ಐದು ವರ್ಷದ ಹಿಂದೆ ಆರಂಭದಲ್ಲಿ ಕೆಲವೆಡೆ ಕಾಯಿನ್‌ ಹಾಕಿ ನೀರು ಪಡೆಯುವ ಪ್ರಯತ್ನ ನಡೆದಿದ್ದರೂ ಕೆಲವು ತಿಂಗಳಲ್ಲೇ ಅದು
ನಿಂತು ಹೋಗಿದೆ. ಸದ್ಯದ ಪರಿಸ್ಥಿತಿ ಹೇಗಿದೆ ಅಂದರೆ, ಘಟಕಗಳು ಪೊದೆ ತುಂಬಿ ಪ್ರವೇಶವೇ ಇಲ್ಲದಂತಿದೆ. ಅಲ್ಲಿನ ಲಕ್ಷಾಂತರ ರೂ. ಮೌಲ್ಯದ ಯಂತ್ರ, ಕಟ್ಟಡದ ಪರಿಕರಗಳು ಕಳ್ಳರ ಪಾಲಾಗಿವೆ.

ಗಿಡಗಂಟಿಗಳಿಂದ ತುಂಬಿದ ಘಟಕ
ಕಬಕ ಗ್ರಾ.ಪಂ.ಗೆ ಒಳಪಟ್ಟ ಮುರ ಪ್ರದೇಶ ಜನನಿಬಿಡ ಪಟ್ಟಣ. ಇದು ನಗರಕ್ಕೆ ತಾಗಿಕೊಂಡಿದೆ. ಇಲ್ಲಿ ರಸ್ತೆ ಬದಿಯಲ್ಲೇ ಘಟಕ ನಿರ್ಮಾಣ ಮಾಡಲಾಗಿದೆ. ಇಡೀ  ಘಟಕವೇ ಗಿಡಗಂಟಿಳಿಂದ ಆವೃತವಾಗಿದೆ. ಬಾಗಿಲು ತೆರೆದಿದೆ. ಯಂತ್ರಗಳೆಲ್ಲ ತುಕ್ಕು ಹಿಡಿದಿದೆ. ಕೈಗೆ ಸಿಕ್ಕವೂ ಕಳ್ಳರ  ಪಾಲಾಗಿದೆ. ಆರ್ಯಾಪು ಗ್ರಾ.ಪಂ. ವ್ಯಾಪ್ತಿಯ ಆರ್ಯಾಪು ಬಳಿ ಜನವಸತಿ ಇಲ್ಲದೆ ಕಡೆ ಘಟಕ ಇದ್ದು ಪಾಳು ಬಿದ್ದಿದೆ. ಇಲ್ಲಿ ವಿದ್ಯುತ್‌ ಪರಿಕರಗಳಿಗೆ ಬಳ್ಳಿ ಸುತ್ತಿ ಅಪಾಯ ಆಹ್ವಾನಿಸುತ್ತಿದೆ.

ವಿದ್ಯಾರ್ಥಿಗಳಿಗೆ ಅನುಕೂಲ
ಕುರಿಯ ಗ್ರಾಮದ ಇಡಬೆಟ್ಟುವಿನಲ್ಲಿ ನಿರ್ಮಿಸಿರುವ ಘಟಕದ್ದು ದಯನೀಯ ಸ್ಥಿತಿ. ಸರಕಾರಿ ಪ್ರಾಥಮಿಕ ಶಾಲೆಯ ಗೇಟಿನ ಪಕ್ಕವೇ ಇರುವ ಈ ಘಟಕ ಸಮರ್ಪಕವಾಗಿದ್ದರೆ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತಿತ್ತು. ಅಂತಹ ಪ್ರಯತ್ನವೇ ಆಗಿಲ್ಲ. ಇಲ್ಲಿ ಘಟಕದ ಬಾಗಿಲು ತುಂಡಾಗಿ ನೇತಾಡುತ್ತಿದೆ. ಪೊದೆ ಆವರಿಸಿದೆ, ಯಂತ್ರ ಧೂಳು ತುಂಬಿದೆ.

ಟಕವನ್ನೇ ಹೊತ್ತೂಯ್ದರು
ಉಪ್ಪಿನಂಗಡಿಯಲ್ಲಿ ಎರಡು ಘಟಕ ನಿರ್ಮಿಸಲಾಗಿದ್ದರೂ ಎರಡೂ ಕೂಡ ಕಾರ್ಯ ನಿರ್ವಹಣೆಯನ್ನು ನಿಲ್ಲಿಸಿವೆ. ಬಸ್‌ ನಿಲ್ದಾಣದ ಬಳಿಯ ಘಟಕವನ್ನೇ ದುರಸ್ತಿಯ ನೆಪದಲ್ಲಿ ಹೊತ್ತೂಯ್ದು ವರ್ಷಗಳೇ ಕಳೆದಿವೆ. ಬಲಾ°ಡು
ಗ್ರಾ.ಪಂ. ವ್ಯಾಪ್ತಿಯ ಬೆಳಿಯೂರು ಕಟ್ಟೆಯಲ್ಲಿನ ಘಟಕ ಆರಂಭದ ದಿನದಲ್ಲಿ ದುರಸ್ತಿಯಿಂದ ಬಳಲಿತ್ತು. ಈಗಂತೂ ನೀರು ಹರಿಸಲು ಶಕ್ತವಾಗಿದ್ದರೂ ಪರಿಪೂರ್ಣ ಎನ್ನುವಂತಿಲ್ಲ.
ಇನ್ನೂ ಬಜತ್ತೂರು ಗ್ರಾ.ಪಂ.ನ ಬೆದ್ರೋಡಿಯಲ್ಲಿ ನಿರ್ಮಿಸಿರುವ ಘಟಕ ಕಳೆದ ಮೂರು ವರ್ಷಗಳಿಂದ ಕೆಟ್ಟು ನಿಂತಿದೆ. ಇಲ್ಲಿ
ಘಟಕವೇ ಬೇಡ ಎಂದು ಗ್ರಾ.ಪಂ. ಮೇಲಾಧಿಕಾರಿಗಳಿಗೆ ಪತ್ರ ಬರೆದು ಸ್ಥಳಾಂತರಕ್ಕೆ ಆಗ್ರಹಿಸಲುಮುಂದಾಗಿದೆ.
ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next