Advertisement

ಬೇಸಗೆ ರಜೆ ಮುಗಿಸಿ ಶಾಲೆಯತ್ತ ಹೆಜ್ಜೆ ಹಾಕಿದ ಮಕ್ಕಳು

01:22 AM Jun 01, 2024 | Team Udayavani |

ಮಂಗಳೂರು/ಉಡುಪಿ: ಉಭಯ ಜಿಲ್ಲೆಗಳಲ್ಲಿ ಒಂದೂವರೆ ತಿಂಗಳ ಬೇಸಗೆ ರಜೆ ಮುಗಿಸಿದ ವಿದ್ಯಾರ್ಥಿಗಳು ಶುಕ್ರವಾರ ಶಾಲೆಯತ್ತ ಹೆಜ್ಜೆ ಇಟ್ಟಿದ್ದಾರೆ. ಮೊದಲ ಬಾರಿಗೆ ಶಾಲೆಗೆ ದಾಖಲಾದ ವಿದ್ಯಾರ್ಥಿಗಳನ್ನು ಸಂಭ್ರಮ – ಸಡಗರದ ಶಾಲಾ ಪ್ರಾರಂಭೋತ್ಸವದ ಮೂಲಕ ಬರಮಾಡಿಕೊಳ್ಳಲಾಯಿತು.

Advertisement

ಶಾಲಾ ಕಟ್ಟಡ, ಆವರಣವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಮಕ್ಕಳಿಗೆ ಸಿಹಿತಿನಿಸು ನೀಡಿ ಶಾಲೆಗೆ ಸ್ವಾಗತಿಸಲಾಯಿತು. ಹೊಸದಾಗಿ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಪನ್ನೀರು ಚುಮುಕಿಸಿ, ಆರತಿ ಬೆಳಗಿ, ಪುಷ್ಪಾರ್ಚನೆ ಮಾಡಲಾಯಿತು.

ಮಂಗಳೂರಿನ ಮಣ್ಣಗುಡ್ಡೆ ಸರಕಾರಿ
ಶಾಲೆಯಲ್ಲಿ ಪುಸ್ತಕಗಳನ್ನು ಪಲ್ಲಕಿ ಮೆರವಣಿಗೆ ಮೂಲಕ ವಿದ್ಯಾರ್ಥಿಗಳು ಶಾಲೆಗೆ ತಂದರು. ಬೊಕ್ಕಪಟ್ಣ ಶಾಲೆ ಯಲ್ಲಿ ಅಕ್ಕಿಯಲ್ಲಿ ಬರೆಸುವ ಮೂಲಕ ಶಿಕ್ಷಕರು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು. ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ – ಪುಸ್ತಕಗಳನ್ನು ವಿತರಿಸಲಾಯಿತು.

ಮಧ್ಯಾಹ್ನ ಬಿಸಿಯೂಟದೊಂದಿಗೆ “ಪಾಯಸ’ ವಿಶೇಷವಾಗಿ ಮಕ್ಕಳಿಗೆ ಬಡಿಸಲಾಯಿತು. ಕೆಲವು ಶಾಲೆಗಳಲ್ಲಿ ಸಿಹಿತಿಂಡಿ, ಐಸ್‌ಕ್ರೀಂ ಕೂಡ ವಿತರಿಸಲಾಯಿತು.

ಚುನಾವಣ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಶಾಲಾ ಪ್ರಾರಂಭೋತ್ಸವದಲ್ಲಿ ಭಾಗವಹಿಸಿಲ್ಲ. ದ.ಕ. ಡಿ.ಡಿ.ಪಿ.ಐ. ವೆಂಕಟೇಶ ಸುಬ್ಯಾಯ ಪಾಟಗಾರ ಹಾಗೂ ವಿವಿಧ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಪ್ರಾರಂಭೋತ್ಸವದಲ್ಲಿ ಭಾಗವಹಿಸಿದರು.

Advertisement

ಜಿಲ್ಲಾದ್ಯಂತ ಸಡಗರದ ಶಾಲಾರಂಭೋತ್ಸವ
ಉಡುಪಿ: ಜಿಲ್ಲಾದ್ಯಂತ ಶುಕ್ರವಾರ ಎಲ್ಲ ಶಾಲೆಗಳಲ್ಲೂ ವಿದ್ಯಾರ್ಥಿಗಳನ್ನು ಹೊಸ ಶೈಕ್ಷಣಿಕ ವರ್ಷಕ್ಕೆ ಪ್ರೀತಿ ಪೂರ್ವಕವಾಗಿ ಸ್ವಾಗತಿಸಿದ್ದಾರೆ.

2024-25ನೇ ಸಾಲಿನ ಶೈಕ್ಷಣಿಕ ವರ್ಷದ ಆರಂಭೋತ್ಸದ ಹಿನ್ನೆಲೆಯಲ್ಲಿ ಎಲ್ಲ ಶಾಲೆಗಳನ್ನು ತಳಿರು ತೋರಣ ಕಟ್ಟಿ ವಿಶೇಷವಾಗಿ ಸಿಂಗಾರ ಮಾಡಲಾಗಿತ್ತು. ಕೆಲವೊಂದು ಶಾಲೆಯಲ್ಲಿ ಮಕ್ಕಳನ್ನು ಗುಲಾಬಿ ಹೂ ನೀಡಿ ಸ್ವಾಗತಿಸಿದರೆ, ಇನ್ನು ಕೆಲವು ಶಾಲೆಗಳಲ್ಲಿ ಹೊಸದಾಗಿ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಹೂವಿನ ಮಳೆಗೈದಿದ್ದಾರೆ. ಮಕ್ಕಳಿಗೆ ಮೈದಾನದಲ್ಲಿ ತಮ್ಮ ಇಚ್ಛೆಯಂತೆ ಆಟವಾಡಲು ಬಿಟ್ಟಿದ್ದಾರೆ. ಬಹುತೇಕ ಶಾಲೆಗಳಲ್ಲಿ ಸಿಹಿ ವಿತರಣೆ ಮಾಡಿದ್ದಾರೆ. ಮಧ್ಯಾಹ್ನದ ಬಿಸಿ ಊಟದ ಜತೆಗೆ ಪಾಯಸ ನೀಡಲಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಕೆ. ಗಣಪತಿ ಅವರು ವಿವಿಧ ಶಾಲೆಗೆ ಭೇಟಿ ನೀಡಿ ಮೊದಲ ದಿನದ ಕಾರ್ಯಕ್ರಮ ಸಹಿತ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಜನ ಪ್ರತಿನಿಧಿಗಳು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಿದರು. ಒಟ್ಟಿನಲ್ಲಿ ಜಿಲ್ಲಾದ್ಯಂತ ಶಾಲಾಂಭೋತ್ಸವ ಅಚ್ಚುಕಟ್ಟಾಗಿ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next