Advertisement

ಕೃಷಿಕರಿಗೆ ಈಗ ಓಡುಹುಳಗಳ ಕಾಟ! ಕಳೆದ ವರ್ಷದಿಂದ ಉಪಟಳ ಹೆಚ್ಚು

12:11 AM Jun 20, 2024 | Team Udayavani |

ಮಂಗಳೂರು: ಸಂಜೆಯಾಗುತ್ತಲೇ ಎಲ್ಲೆಲ್ಲಿಂದಲೋ ಹಾರಿ ಬರುವ ಕೀಟಗಳು… ಮನೆ ಸಂದುಗೊಂದಿಗಳಲ್ಲಿ ಸೇರಿಕೊಂಡು ಅಟಾಟೋಪ ಸೃಷ್ಟಿಸುತ್ತವೆ, ರಾತ್ರಿ ದೀಪಗಳಿಗೂ ಮುತ್ತಿಕೊಂಡು ಕಿರಿಕಿರಿ ಉಂಟು ಮಾಡುತ್ತವೆ.
ಸದಾ ಒಂದಿಲ್ಲೊಂದು ಕೀಟ, ಕ್ರಿಮಿಗಳಿಂದ ಕಷ್ಟಕ್ಕೆ ತುತ್ತಾಗುವ ಕೃಷಿಕರಿಗೆ ಹಾಗೂ ಅರಣ್ಯ-ತೋಟ ಪ್ರದೇಶದ ಜನರಿಗೆ ಈ ಓಡು ಹುಳ ಅಥವಾ ಕೆಲ್ಲು ಹುಳಗಳಿಂದ ಬಾಧೆ ಎದುರಾಗಿದೆ.

Advertisement

ಪುತ್ತೂರು, ಕಾಸರಗೋಡು, ಸುಳ್ಯದ ಹಲವು ಭಾಗಗಳಿಂದ ಈ ಕೀಟಗಳ ಉಪಟಳದ ಬಗ್ಗೆ ದೂರುಗಳು ಬಂದಿವೆ. ನೋಡಲು ಗಲೀಜಾಗಿರುವ ಹುಳಗಳು ಮೈ ಮೇಲೆ ಬಿದ್ದರೆ ತುರಿಕೆ, ಉರಿ ಕೂಡ ಉಂಟಾಗುತ್ತದೆ. ಊಟ ಮಾಡುವಾಗ ತಟ್ಟೆಗೂ ಬೀಳುತ್ತವೆ. ಹಾಗಾಗಿ ರಾತ್ರಿ ವೇಳೆ ಇವುಗಳಿಂದಾಗಿ ಅನುಭವಿಸುವ ಕಷ್ಟ ಅಷ್ಟಿಷ್ಟಲ್ಲ.

ಹತ್ತು ವರ್ಷಗಳಿಂದಲೇ ಈ ಓಡು ಹುಳಗಳ ಉಪದ್ರ ದ.ಕ., ಕಾಸರಗೋಡು ಜಿಲ್ಲೆಯ ಅಲ್ಲೊಂದಿಲ್ಲೊಂದು ಭಾಗದಲ್ಲಿ ಕೇಳಿ ಬರುತ್ತಿತ್ತು, ಈ ಬಾರಿಯಂತೂ ತೀರಾ ಹೆಚ್ಚಾಗಿದೆ.

ಎಪ್ರಿಲ್‌ ಮೇ ತಿಂಗಳಲ್ಲಿ ಇದು ಹೆಚ್ಚಿದೆ. ಬೇಸಗೆಯಲ್ಲಿ ಒಂದೆರಡು ಮಳೆ ಬಂದು ಧಗೆ ಹೆಚ್ಚಾಗುವಾಗ ಈ ಕೀಟಗಳ ಸಂಖ್ಯೆಯೂ ಹೆಚ್ಚುತ್ತದೆ. ನಿರಂತರ ಮಳೆ ಸುರಿದು, ವಾತಾವರಣ ಸಾಕಷ್ಟು ತಂಪಾದ ಬಳಿಕ ನಿಧಾನವಾಗಿ ಅವುಗಳ ಸಂಖ್ಯೆ ಕಡಿಮೆಯಾಗುತ್ತದೆ.

ಜಾನುವಾರುಗಳ ಕೊಟ್ಟಿಗೆಯಲ್ಲಿ, ಮರಗಳಲ್ಲಿ, ಮನೆಯ ಮಾಡಿನಲ್ಲಿ ಎಲ್ಲೆಂದರಲ್ಲಿ ಕೀಟಗಳೇ ಇರುತ್ತವೆ. ಕೆಲವೊಮ್ಮೆ ರಾಶಿ ರಾಶಿ ಬಾಚಿ ಬೆಂಕಿಗೆ ಹಾಕಿದ್ದೂ ಇದೆ. ಈಗೀಗ ಜನ ಬೇಸತ್ತು ಕೀಟನಾಶಕಗಳನ್ನು ಅಥವಾ ಡೀಸೆಲನ್ನು ಸಿಂಪಡಿಸಿ ನಿಯಂತ್ರಿಸುತ್ತಿದ್ದಾರೆ ಎನ್ನುವುದು ಕೃಷಿಕರು ನೀಡುವ ಮಾಹಿತಿ.

Advertisement

ರಬ್ಬರ್‌ ತೋಟಗಳಿಂದ ಆರಂಭ?
ದಶಕಗಳ ಹಿಂದೆ ಓಡು ಹುಳಗಳು ಸಣ್ಣಸಂಖ್ಯೆಯಲ್ಲಿ ಕಂಡು ಬರುತ್ತಿದ್ದವು, ಆದರೆ ಹೆಚ್ಚಿದ ರಬ್ಬರ್‌ ತೋಟಗಳಿಗೆ ಇವುಗಳ ದಾಳಿ ಜಾಸ್ತಿಯಾಗಿತ್ತು ಹಾಗೂ ರಬ್ಬರ್‌ ಕೀಟಗಳೆಂದೇ ಇವುಗಳನ್ನು ತೋಟಗಾರಿಕೆ ವಿಜ್ಞಾನಿಗಳು ಕರೆಯುತ್ತಾರೆ.

ಲಭ್ಯ ಮಾಹಿತಿ ಪ್ರಕಾರ ರಬ್ಬರ್‌ ತೋಟಗಳಿಗೆ ಸಮೀಪ ಇರುವ ಮನೆಗಳಿಗೆ ಇವುಗಳ ಬಾಧೆ ಜಾಸ್ತಿ. ದೊಡ್ಡ ಸಂಖ್ಯೆಯಲ್ಲಿ ಹಾರಿ ಬಂದು ಮನೆಯೊಳಗೆ ಸೇರಿಕೊಳ್ಳುತ್ತವೆ. ಸಂಖ್ಯೆ ಹೆಚ್ಚಿಸಿಕೊಂಡ ಬಳಿಕ ಇವು ದೂರದ ಕಟ್ಟಡಗಳಿಗೂ ಬರುವುದುಂಟು.

ತೊಂದರೆ ಏನು?
ಆಂಗ್ಲ ಭಾಷೆಯಲ್ಲಿ ಮಪ್ಲಿ ಬೀಟಲ್‌ ಎಂದು ಕರೆಯಲ್ಪಡುವ ಓಡುಹುಳಗಳ ಶಾಸ್ತ್ರೀಯ ಹೆಸರು(Luprops tristis).. ಇವುಗಳಿಂದ ಇದು ವರೆಗೆ ಬೆಳೆಗಳಿಗೆ ತೊಂದರೆಯಾದ ವರದಿಯಿಲ್ಲ, ರಬ್ಬರ್‌ ಮರಗಳಿಗೆ ಇವು ಮುತ್ತಿಕೊಳ್ಳುತ್ತವಾದರೂ ಬೆಳೆಗೆ ಬಾಧೆ ಕಂಡು ಬಂದಿಲ್ಲ. ಆದರೆ ಮನುಷ್ಯರು ಇವುಗಳನ್ನು ಮುಟ್ಟಿದಾಗ ಅವು ಒಂದು ವಿಧದ ದ್ರವವನ್ನು ಸ್ರವಿಸುತ್ತವೆ, ಅದು ತಾಗಿದರೆ ಮೈಮೇಲೆ ತುರಿಕೆ ಕಜ್ಜಿ, ಗುಳ್ಳೆ ಕಾಣಿಸಿಕೊಳ್ಳುತ್ತದೆ.

ಕಳೆದ ವರ್ಷದಿಂದ ಈ ಮಪ್ಲಿ ಬೀಟಲ್‌ಗ‌ಳ ತೊಂದರೆ ಬಗ್ಗೆ ಕೃಷಿಕರಿಂದ ದೂರುಗಳು ಬರುತ್ತಿವೆ. ಹೆಚ್ಚಾಗಿ ರಬ್ಬರ್‌ ಕಾಡುಗಳಿರುವಲ್ಲಿ ಸಮಸ್ಯೆ ಅಧಿಕ. ಸಿಂಥೆಟಿಕ್‌ ರಾಸಾಯನಿಕ ಕೀಟನಾಶಕಗಳನ್ನು ಬಳಸುವ ಮೂಲಕ ನಿಯಂತ್ರಿಸಬಹುದು. ಒಟ್ಟಾಗಿ ಗುಡಿಸಿ, ಬೆಂಕಿ ಹಾಕಿಯೂ ಸುಡಬಹುದು.
-ಡಾ| ಪ್ರತಿಭಾ, ಎಂಟಮಾಲಜಿಸ್ಟ್‌, ಸಿಪಿಸಿಆರ್‌ಐ, ಕಾಸರಗೋಡು

-ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next