Advertisement

ಪುತ್ತೂರು ನಗರ ಪ್ರಾ.ಆ. ಕೇಂದ್ರಕ್ಕಿಲ್ಲ ಸ್ವಂತ ಕಟ್ಟಡ

09:16 AM Aug 22, 2022 | Team Udayavani |

ಪುತ್ತೂರು: ನಗರದ ಕೇಂದ್ರ ಸ್ಥಾನದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ವಂತ ಕಟ್ಟಡವೇ ಇಲ್ಲ.

Advertisement

ಹೀಗಾಗಿ ಜನರಿಗೆ ಆರೋಗ್ಯ ಭಾಗ್ಯ ಒದಗಿಸುವ ಇಲಾಖೆಯೇ ಕಟ್ಟಡ ಇಲ್ಲದೆ ಪರದಾಡುತ್ತಿದ್ದು ಹೊಸ ಕಟ್ಟಡ ವ್ಯವಸ್ಥೆ ಶೀಘ್ರ ಆಗಬೇಕು ಎನ್ನುವ ಬೇಡಿಕೆ ಕೇಳಿ ಬಂದಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಂಜಿನಿಯರಿಂಗ್‌ ಘಟಕ, ತಾಲೂಕು ಆರೋಗ್ಯ ಕೇಂದ್ರ ಪುತ್ತೂರು ಹಾಗೂ ನಗರಸಭೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಆರು ವರ್ಷಗಳ ಹಿಂದೆ ನೆಲ್ಲಿಕಟ್ಟೆಯಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲಾಯಿತು. ಆರೋಗ್ಯ ಕೇಂದ್ರವು ತಾತ್ಕಾಲಿಕ ನೆಲೆಯಲ್ಲಿ ನಗರದ ನೆಲ್ಲಿಕಟ್ಟೆಯಲ್ಲಿನ ಬಿಆರ್‌ಸಿಗೆ ಸೇರಿದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು.

40ರಿಂದ 60 ಹೊರ ರೋಗಿಗಳು

ನಗರದಲ್ಲಿ 31 ವಾರ್ಡ್‌ ವ್ಯಾಪ್ತಿ ಒಳಗೊಂಡಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿನಂಪ್ರತಿ 40 ರಿಂದ 60 ರ ತನಕ ಹೊರ ರೋಗಿಗಳು ಬಂದು ಚಿಕ್ಸಿತೆ ಪಡೆಯುತ್ತಾರೆ. ಬಸ್‌ ನಿಲ್ದಾಣದ ಸನಿಹದಲ್ಲೇ ಇರುವ ಕಾರಣ ಸಂಚಾರಕ್ಕೂ ಅನುಕೂಲಕರ ಎಂದೇ ಹೆಚ್ಚಿನವರು ಈ ಕೇಂದ್ರವನ್ನು ಆಶ್ರಯಿಸುತ್ತಾರೆ. ಕೋವಿಡ್‌ ಕಾಲದಲ್ಲಿ ಲಸಿಕೆ ನೀಡುವಲ್ಲಿ ಈ ಕೇಂದ್ರ ಸಹಕಾರಿ ಆಗಿತ್ತು.

Advertisement

ಬಾಡಿಗೆ ಕಟ್ಟಡದಲ್ಲಿ ಇಲ್ಲ ಅವಕಾಶ

ಆರೋಗ್ಯ ಕೇಂದ್ರಕ್ಕೆ ಬಾಡಿಗೆ ರೂಪದಲ್ಲಿ ಕಟ್ಟಡ ನೀಡುವ ವ್ಯವಸ್ಥೆ ಇಲ್ಲ. ಹೀಗಾಗಿ ಯಾವುದಾದರೂ ಸರಕಾರಿ ಕಟ್ಟಡವೇ ಆಗಬೇಕಿದೆ. ಸರಕಾರಿ ಕಟ್ಟಡ ಇದ್ದರೆ ಮಾತ್ರ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಾಲೂಕು ಸರಕಾರಿ ಆಸ್ಪತ್ರೆಯಿಂದ ಕನಿಷ್ಠ 1 ಕಿ.ಮೀ ದೂರದಲ್ಲಿ ಕಟ್ಟಡ ದೊರೆತರೆ ಉತ್ತಮ ಎನ್ನು ವುದು ಆರೋಗ್ಯ ಇಲಾಖೆಯ ಅಭಿಮತ.

3 ಕಡೆ ಸ್ಥಳ ಪರಿಶೀಲನೆ

ಈಗಾಗಲೇ ಮೂರು ಕಡೆಗಳಲ್ಲಿ ಕಟ್ಟಡ ಪರಿಶೀಲನೆ ಮಾಡಲಾಗಿದೆ. ಸಿಂಗಾಣಿ, ಫ್ಲವರ್‌ ಮಾರ್ಕೆಟ್‌ ಬಳಿ ನೋಡಿರುವ ಕಟ್ಟಡ ಸೂಕ್ತವಾಗಿಲ್ಲ ಎಂದು ಆರೋಗ್ಯ ಇಲಾಖೆ ಅಭಿಪ್ರಾಯ ಪಟ್ಟಿದೆ. ಶಕ್ತಿನಗರ, ಬೆದ್ರಾಳದಲ್ಲಿ ಪರಿಶೀಲನೆ ಬಾಕಿ ಇದೆ. ಕಟ್ಟಡ ನೀಡುವಂತೆ ತಾ.ಪಂ. ಸಾಮಾನ್ಯ ಸಭೆಯಲ್ಲಿಯು ಬೇಡಿಕೆ ವ್ಯಕ್ತವಾಗಿತ್ತು. ತುರ್ತಾಗಿ ಬೇರೆ ಕಟ್ಟಡ ಒದಗಿಸುವುದು ಕಷ್ಟ. ಆದರೂ ಕಟ್ಟಡಕ್ಕಾಗಿ ನಗರಸಭೆಗೆ ಪತ್ರ ಬರೆಯುವಂತೆ ಇಒ ಸೂಚನೆ ನೀಡಿದ್ದಾರೆ.

ಶಿಕ್ಷಣ ಇಲಾಖೆಗೆ ನೀಡಲು ಸೂಚನೆ

ಹಾಲಿ ಕಾರ್ಯ ನಿರ್ವಹಿಸುತ್ತಿರುವ ಕಟ್ಟಡವನ್ನು ಶಿಕ್ಷಣ ಇಲಾಖೆಗೆ ಬಿಟ್ಟು ಕೊಡುವಂತೆ ಆರೋಗ್ಯ ಇಲಾಖೆಗೆ ಸೂಚನೆ ಬಂದಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಸಹಾಯಕ ಕಮಿಷನರ್‌ ಮೂಲಕ ಈ ಬೇಡಿಕೆ ಸಲ್ಲಿಕೆ ಆಗಿದೆ. ಬಿಇಒ ಕಚೇರಿ ದುಸ್ಥಿತಿಯಲ್ಲಿದ್ದು ಹೀಗಾಗಿ ಇಲಾಖೆಗೆ ಸೇರಿದ ಕಟ್ಟಡವನ್ನು ಒದಗಿಸಬೇಕು ಎನ್ನುವ ಬೇಡಿಕೆ ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದರಿಂದ ಆರೋಗ್ಯ ಕೇಂದ್ರಕ್ಕೆ ಸಂಕಷ್ಟ ಎದುರಾಗಿದೆ.

ಜಾಗ ಪರಿಶೀಲನೆ: ನೆಲ್ಲಿಕಟ್ಟೆಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ಶಿಕ್ಷಣ ಇಲಾಖೆಗೆ ಬಿಟ್ಟು ಕೊಡುವಂತೆ ಬಿಇಒ ಕಚೇರಿಯಿಂದ ಪತ್ರ ಬಂದಿದೆ. ಹಾಗಾಗಿ ಬದಲಿ ವ್ಯವಸ್ಥೆ ಆಗಬೇಕಿದ್ದು ಮೂರು ಕಡೆ ಜಾಗ ಪರಿಶೀಲನೆಯ ಹಂತದಲ್ಲಿ ಇದೆ. –ಡಾ| ದೀಪಕ್‌ ರೈ, ಆರೋಗ್ಯಾಧಿಕಾರಿ, ಪುತ್ತೂರು ತಾಲೂಕು.

ಮನವಿ ಮಾಡಲಾಗಿದೆ: ಶಾಲಾ ಕಟ್ಟಡವನ್ನು ತುರ್ತಾಗಿ ಬಿಟ್ಟು ಕೊಡಬೇಕು ಎಂದು ಹೇಳಿಲ್ಲ. ಆದರೆ ಈಗ ಕಟ್ಟಡದ ಅಗತ್ಯ ಇದ್ದು ಪತ್ರ ಮೂಲಕ ಮನವಿ ಮಾಡಲಾಗಿದೆ. -ಲೋಕೇಶ್‌ ಎಸ್‌.ಆರ್‌., ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು.

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next