ಪುತ್ತೂರು: ಬಿಜೆಪಿ ಮುಖಂಡರ ಭಾವಚಿತ್ರವುಳ್ಳ ಬ್ಯಾನರ್‌ಗೆ ಚಪ್ಪಲಿ ಹಾರ ಹಾಕಿದ ಆರೋಪದಲ್ಲಿ ಬಂಧಿತರಾದ 9 ಮಂದಿಯ ಮೇಲೆ ಪೊಲೀಸರು ಎಸಗಿರುವ ದೌರ್ಜನ್ಯದ ಬಗ್ಗೆ ಬಂಟ್ವಾಳ ಡಿವೈಎಸ್ಪಿ ನೇತೃತ್ವದಲ್ಲಿ ನಡೆದ ಇಲಾಖಾ ವಿಚಾರಣೆಯ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಲಾಗಿದೆ.
ಈಗಾಗಲೇ ಹೆಚ್ಚುವರಿ ಪೊಲೀಸ್ ಅಧೀಕ್ಷರ ವಿಚಾರಣೆ ವರದಿ ಆಧರಿಸಿ ಸಂಪ್ಯ ಪೊಲೀಸ್ ಠಾಣೆಯ ಪಿಎಸ್‌ಐ ಶ್ರೀನಾಥ್ ರೆಡ್ಡಿ, ಪೇದೆ ಹರ್ಷಿತ್ ಅವರನ್ನು ಅಮಾನತುಗೊಳಿಸಿ ಸ್ಥಳ ಸೂಚಿಸದೆ ವರ್ಗಾಯಿಸಲಾಗಿದೆ. ಪುತ್ತೂರು ಉಪವಿಭಾಗ ಡಿವೈಎಸ್ಪಿ ವೀರಯ್ಯ ಹಿರೇಮಠ್ ಅವರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಿದ್ದು, ಪುತ್ತೂರಿನಿಂದ ವರ್ಗಾಯಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಘಟನೆಯ ಸಂಪೂರ್ಣ ತನಿಖೆ ನಡೆಸುವ ಜವಾಬ್ದಾರಿಯನ್ನು ಬಂಟ್ವಾಳ ಡಿವೈಎಸ್ಪಿಗೆ ವಹಿಸಿದ್ದು ಅವರು ತನಿಖೆಯನ್ನು ಪೂರ್ಣಗೊಳಿಸಿ ವರದಿಯನ್ನು ರಾಜ್ಯ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗೆ ಸಲ್ಲಿಸಿದ್ದಾರೆ. ಅದರ ಅಧಾರದಲ್ಲಿ ಮುಂದಿನ ಶಿಸ್ತಿನ ಕ್ರಮ ಜಾರಿಯಾಗಲಿದೆ ಎನ್ನುವ ಮಾಹಿತಿ ಪೊಲೀಸ್ ಮೂಲಗಳಿಂದ ದೊರೆದಿದೆ.
ಆಸ್ಪತ್ರೆಗೆ ಗಣ್ಯರ ಭೇಟಿ
ಹಿಂದೂ ಸಂಘಟನೆಯ ಕಾರ್ಯಕರ್ತರ ಆರೋಗ್ಯ ವಿಚಾರಿಸಲು ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಸಹಿತ ಶನಿವಾರವೂ ಹಲವು ಮಂದಿ ಗಣ್ಯರು, ಜಿಲ್ಲೆಯ ವಿವಿಧ ಭಾಗದ ಹಿಂದೂ ಸಂಘಟನೆಯ ಕಾರ್ಯಕರ್ತರು, ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಕ್ಷೇಮ ವಿಚಾರಿಸಿದರು.
ಈ ಸಂದರ್ಭದಲ್ಲಿ ಹರೀಶ್ ಅಧಿಕಾರಿ, ಚಿತ್ತರಂಜನ್ ಶೆಟ್ಟಿ, ರೂಪಾ ಶೆಟ್ಟಿ, ಸಂತೋಷ್ ಪುರೋಹಿತ್, ಸುಬ್ರಹ್ಮಣ್ಯ ಎಸ್. ನಟ್ಟೋಜ ಉಪಸ್ಥಿತರಿದ್ದರು.