ಪುತ್ತೂರು: ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತುಳುನಾಡಿನ ಕಾರಣಿಕ ಶಕ್ತಿಗಳಾದ ಕೋಟಿ-ಚೆನ್ನಯರ ಹೆಸರನ್ನಿಡುವ ಕುರಿತು ಸರಕಾರ ಆದೇಶ ಹೊರಡಿಸಿ ಐದು ತಿಂಗಳು ಸಮೀಪಿಸುತ್ತಿದ್ದರೂ ನಾಮಫಲಕ ಅಳವಡಿಕೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ. ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ. ಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುತ್ತೂರು ಬಸ್ ನಿಲ್ದಾಣಕ್ಕೆ “ಕೋಟಿ ಚೆನ್ನಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪುತ್ತೂರು” ಎಂದು ನಾಮಕರಣ ಮಾಡಲು ನಿರ್ಣಯ ಕೈಗೊಳ್ಳಲಾಗಿತ್ತು. ಈ ನಿರ್ಣಯವನ್ನು ಡೆಪ್ಯುಟಿ ಕಮಿಷನರ್‌ಗೆ ಕಳುಹಿಸಲಾಗಿತ್ತು. ಅಲ್ಲಿಂದ ಸರಕಾರಕ್ಕೆ ಸಲ್ಲಿಕೆಯಾಗಿ ಸರಕಾರದ ಹಂತದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಒಪ್ಪಿಗೆ ಸಿಕ್ಕಿ ಅಧಿಕೃತ ಆದೇಶ ಕೂಡ ಪ್ರಕಟವಾಗಿದೆ.
ವಿಳಂಬ ಏಕೆ ?
ಮುಖ್ಯಮಂತ್ರಿಗಳನ್ನು ಪುತ್ತೂರಿಗೆ ಕರೆಯಿಸಿ ನಾಮಫಲಕ ಅನಾವರಣ ಮಾಡಬೇಕು ಎನ್ನುವ ಯೋಚನೆ ಸ್ಥಳೀಯ ಶಾಸಕ ಸಂಜೀವ ಮಠಂದೂರು ಅವರದ್ದು. ಕಳೆದ ನವೆಂಬರ್‌ನಲ್ಲಿ ಮುಖ್ಯಮಂತ್ರಿಯನ್ನು ಕರೆಯಿಸುವ ಪ್ರಯತ್ನ ನಡೆಸಿದ್ದರೂ ಸಾಧ್ಯವಾಗಲಿಲ್ಲ. ಈ ಮಧ್ಯೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ವೇಳೆ ಪುತ್ತೂರಿಗೆ ಕರೆ ತರುವ ಪ್ರಯತ್ನ ನಡೆಸಲಾಗಿತ್ತು. ಇದೇ ತಿಂಗಳಲ್ಲಿ ಮುಖ್ಯಮಂತ್ರಿ ಬೆಳ್ತಂಗಡಿಗೆ ಭೇಟಿ ನೀಡುವವರಿದ್ದರೂ ಪುತ್ತೂರು ಭೇಟಿಯ ಉಲ್ಲೇಖ ಇಲ್ಲ. ಹೀಗಾಗಿ ಮುಖ್ಯಮಂತ್ರಿ ಆಗಮನಕ್ಕೆ ಹೊಸ ದಿನಾಂಕ ನಿಗದಿಪಡಿಸಲು ನಿರ್ಧರಿಸಲಾಗಿದೆ.
ಹಲವರ ಬೇಡಿಕೆ
ನಗರಸಭೆ 2020ರಲ್ಲಿ ಕೋಟಿ ಚೆನ್ನಯರ ಹೆಸರನ್ನು ಬಸ್ ನಿಲ್ದಾಣಕ್ಕೆ ಇಡುವ ಬಗ್ಗೆ ನಿರ್ಣಯ ಅಂಗೀಕರಿಸಿ ಸರಕಾರಕ್ಕೆ ಕಳುಹಿಸಿತ್ತು. ಶಾಸಕ ಸಂಜೀವ ಮಠಂದೂರು ಅವರು ಸರಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ ನಗರಸಭೆ ನಿರ್ಣಯದ ಪ್ರತಿಯನ್ನು ತಮ್ಮ ಶಿಫಾರಸು ಪತ್ರದ ಮೂಲಕ ಕೆಎಸ್‌ಆರ್‌ಟಿಸಿಗೆ ಸಲ್ಲಿಸಿದ್ದರು. ಕೆಎಸ್‌ಆರ್‌ಟಿಸಿ ಅಧ್ಯಕ್ಷ ಚಂದ್ರಪ್ಪ ಜತೆ ಈ ಬಗ್ಗೆ ಮಾತುಕತೆ ನಡೆಸಿದ್ದರು. ಸಂಸದ ನಳಿನ್ ಕುಮಾರ್ ಕಟೀಲು, ಸಚಿವರಾದ ವಿ. ಸುನಿಲ್ ಕುಮಾರ್, ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ ಮತ್ತಿತರರು ಇದಕ್ಕೆ ಸಹಕಾರ ನೀಡಿದ್ದರು. ಕೋಟಿ-ಚೆನ್ನಯ ಜನ್ಮಸ್ಥಳ ಪಡುಮಲೆಯ ಕೋಟಿ ಚೆನ್ನಯ ಜನ್ಮಸ್ಥಳ ಸಂಚಲನ ಸಮಿತಿ, ಯುವವಾಹಿನಿ ಪುತ್ತೂರು ಘಟಕ, ದೇಯಿ ಬೈದ್ಯೆತಿ- ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ನಂದನ ಬಿತ್ತಿಲ್ ವತಿಯಿಂದ ನಗರಸಭೆ, ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು. ಸತತ ಮನವಿಗಳ ಹಿನ್ನೆಲೆ ಮತ್ತು ಶಾಸಕರ ಪ್ರಯತ್ನದ ಪರಿಣಾಮ ಕೆಎಸ್ ಆರ್‌ಟಿಸಿ ಬೋರ್ಡ್ ಸಮ್ಮತಿಸಿತು.
ಸುಸಜ್ಜಿತ ಬಸ್ ನಿಲ್ದಾಣ
ಹಿಂದುಸ್ಥಾನ್ ಪ್ರೊಮೋಟರ್ಸ್ ಮತ್ತು ಡೆವಲಪರ್ಸ್ ಸಂಸ್ಥೆ ಬಸ್ ಟರ್ಮಿನಲ್ ಹಾಗೂ ವಾಣಿಜ್ಯ ಮಳಿಗೆ ನಿರ್ಮಿಸಿದೆ. 33 ವರ್ಷಗಳ ಕಾಲ ಇದರ ನಿರ್ವಹಣೆ ಈ ಸಂಸ್ಥೆಗೆ ಸೇರಿದೆ. 2016ರ ಜನವರಿ 9ರಂದು ಅಂದಿನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಸ್ ಟರ್ಮಿನಲ್ ಉದ್ಘಾಟಿಸಿದ್ದರು. ಇದು ಜಿಲ್ಲೆಯಲ್ಲಿ ಸರಕಾರಿ ಖಾಸಗಿ ಸಹಭಾಗಿತ್ವದ(ಪಿಪಿಪಿ) ಅತಿದೊಡ್ಡ ಬಸ್ ನಿಲ್ದಾಣ ಆಗಿದೆ.