Advertisement

ಶಿಥಿಲಾವಸ್ಥೆಯಲ್ಲಿ ಪುತ್ತೂರು ಬಿಇಒ ಕಚೇರಿ ಕಟ್ಟಡ; ಶೀಘ್ರ ಸ್ಥಳಾಂತರಕ್ಕೆ ನಿರ್ಧಾರ

08:44 PM Nov 25, 2020 | mahesh |

ಪುತ್ತೂರು: ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕಾರ್ಯನಿರ್ವಹಿಸುತ್ತಿರುವ ಬ್ರಿಟಿಷ್‌ ಕಾಲದ ಕಟ್ಟಡ ಈಗ ಶಿಥಿಲಗೊಂಡು ಅಪಾಯ ಅಂಚಿನಲ್ಲಿದೆ. ಈ ಕಟ್ಟಡದಲ್ಲಿ ಕಾರ್ಯನಿರ್ವಹಣೆ ಕಷ್ಟ ಎಂಬ ಸ್ಥಿತಿ ಇದ್ದು, ಶೀಘ್ರ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಕಟ್ಟಡದ ಗೋಡೆ ಬಿರುಕು ಬಿಟ್ಟಿದ್ದು, ಮಾಡಿನ ಹೆಂಚು ಒಡೆದಿದೆ. ಮಳೆಗಾಲದಲ್ಲಂತೂ ಕಾರ್ಯ ನಿರ್ವಹಣೆ ಪಾಡು ಹೇಳ ತೀರದು.

Advertisement

ಕಟ್ಟಡದ ಇತಿಹಾಸ
ಬ್ರಿಟಿಷ್‌ ಕಾಲದಲ್ಲಿ ಈ ಕಟ್ಟಡವೂ ಸೇರಿ ಹಳೆ ತಾಲೂಕು ಕಚೇರಿ ಕಟ್ಟಡ (ಹಿಂದಿನ ಜೈಲು ಕಟ್ಟಡ), ಕೋರ್ಟ್‌ ಕಟ್ಟಡ, ಉಪ ನೋಂದಣಾಧಿಕಾರಿ ಕಟ್ಟಡ, ಸಹಾಯಕ ಆಯುಕ್ತರ ಕಚೇರಿ ಕಟ್ಟಡಗಳು ಸೇರಿವೆ. ಎ.ಸಿ. ಕಟ್ಟಡವನ್ನು ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ 10 ವರ್ಷಗಳ ಹಿಂದೆ ಕೆಡವಲಾಗಿತ್ತು. ಉಪ ನೋಂದಣಾಧಿಕಾರಿ ಕಚೇರಿಯನ್ನು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಗೊಳಿಸಿದ ಬಳಿಕ ಆ ಕಟ್ಟಡವನ್ನೂ ಕೆಡವಿ, ಆ ಜಾಗವನ್ನು ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಹಳೆ ತಾಲೂಕು ಕಚೇರಿ ಕಟ್ಟಡದಲ್ಲಿ ಮಹಿಳಾ ಕಾಲೇಜು ಕಾರ್ಯ ನಿರ್ವಹಿಸುತ್ತಿದೆ. 1938ರಲ್ಲಿ ನಿರ್ಮಿಸಲಾದ ಕಟ್ಟಡದಲ್ಲಿ ಪ್ರಸ್ತುತ ಬಿಇಒ ಕಚೇರಿ ಇದೆ.

ಬಿಇಒ ಕಚೇರಿ ಕಟ್ಟಡ ಸಂಪೂರ್ಣ ಶಿಥಿಲಗೊಂಡಿರುವುದು ಶಾಸಕ ಸಂಜೀವ ಮಠಂದೂರು ಅವರ ಗಮನಕ್ಕೂ ಬಂದಿದೆ. ಅವರು ಸದ್ಯಕ್ಕೆ ಕಚೇರಿಯನ್ನು ಸ್ಥಳಾಂ ತರಿಸಲು ಸೂಚಿಸಿದ್ದಾರೆ. ತಾ.ಪಂ. ಕಟ್ಟಡ ಇಲ್ಲವೇ ಗುರುಭವನಕ್ಕೆ ಸ್ಥಳಾಂತರಿಸುವ ಬಗ್ಗೆ ಚಿಂತನೆ ನಡೆದಿದೆ. ಎರಡೂ ಕಡೆ ಕೆಲವು ಮೂಲ ಸೌಕರ್ಯ ಕಲ್ಪಿಸಬೇಕಾಗಿದ್ದು, ನಮ್ಮ ಇಲಾಖೆಯಲ್ಲಿ ಸದ್ಯ ಅನುದಾನ ಲಭ್ಯವಿಲ್ಲ ಎಂದು ಬಿಇಒ ಲೋಕೇಶ್‌ ಹೇಳಿದ್ದಾರೆ.

ಹೊಸ ಕಟ್ಟಡ ಯೋಜನೆ
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ನೂತನ ಕಟ್ಟಡ ನಿರ್ಮಿಸುವ ಪ್ರಕ್ರಿಯೆ ಆರಂಭ‌ಗೊಂಡಿದೆ. ಈ ಮೊದಲು ಯೋಜನೆ ತಯಾರಿಸ ಲಾಗಿದ್ದು, ಇದು ಹಳೆಯದಾದ ಕಾರಣ ಹೊಸದಾಗಿ ನಕಾಶೆ ತಯಾರಿಸಲು ಶಾಸಕ ಸಂಜೀವ ಮಠಂದೂರು ಲೋಕೋಪಯೋಗಿ ಇಲಾಖೆಗೆ ಸೂಚಿಸಿದ್ದಾರೆ. ಅದರಂತೆ ಇಲಾಖೆ ವತಿಯಿಂದ ಬಿಇಒ ಕಚೇರಿಯಿಂದ ಮಾಹಿತಿ ಪಡೆಯಲಾಗಿದ್ದು, ಶೀಘ್ರ ಹೊಸ ಯೋಜನೆ ರೂಪಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಬಿ. ರಾಜಾರಾಂ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next