Advertisement
ಅರುಣ್ ಕುಮಾರ್ ಪುತ್ತಿಲ ನೇತೃತ್ವದ ಪುತ್ತಿಲ ಪರಿವಾರ ಹಾಗೂ ಬಿಜೆಪಿ ಮುಖಂಡರ ನಡುವಿನ ಮಾತುಕತೆಗಳು ಫಲಪ್ರದವಾಗಿದೆ ಎನ್ನಲಾಗಿದೆ. ಮೂರ್‍ನಾಲ್ಕು ದಿನಗಳೊಳಗೆ ಬಿಜೆಪಿ ಸೇರ್ಪಡೆ ಸಾಧ್ಯತೆ ಇದ್ದು, ಒಂಬತ್ತು ತಿಂಗಳ ವಿರಸ ಕೊನೆಗೊಳ್ಳಲಿದೆ ಎನ್ನುತ್ತವೆ ಪುತ್ತಿಲ ಹಾಗೂ ಬಿಜೆಪಿ ಪಾಳಯದಲ್ಲಿನ ಮೂಲಗಳು.
ಈ ಹಿಂದಿನ ಎರಡು ಅವಧಿಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅರುಣ್ ಪುತ್ತಿಲ ಅವರಿಗೆ ಪಕ್ಷದ ಸ್ಥಾನಮಾನ ನೀಡುವ ಭರವಸೆ ನೀಡಿ ಸಮಾಧಾನಿಸಲಾಗಿತ್ತು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಕ್ರೋಶ ಬಹಿರಂಗವಾಗಿಯೇ ಭುಗಿಲೆದ್ದು, ಅರುಣ್ ಪುತ್ತಿಲ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಇದರಿಂದ ತನ್ನ ಭದ್ರಕೋಟೆಯಲ್ಲೇ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಅರುಣ್ ಪುತ್ತಿಲ 60 ಸಾವಿರಕ್ಕೂ ಅಧಿಕ ಮತ ಪಡೆದು ದಾಖಲೆ ಸೃಷ್ಟಿಸಿತ್ತು. ಬಳಿಕ ಬಿಜೆಪಿ, ಪುತ್ತಿಲ ಬಣದ ನಡುವಿನ ವಿರಸ ಹೆಚ್ಚಾಗಿತ್ತು. ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಗ್ರಾ.ಪಂ. ಉಪಚುನಾವಣೆಯಲ್ಲಿ ತನ್ನ ತೆಕ್ಕೆಯಲ್ಲಿದ್ದ ಎರಡು ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಂಡಿತ್ತು. ನಗರಸಭೆ ಉಪ ಚುನಾವಣೆಯಲ್ಲಿ ಪುತ್ತಿಲ ಪರಿವಾರಕ್ಕೆ ಸೋಲಾಗಿದ್ದರೂ ಬಿಜೆಪಿಗೆ ಲಾಭ ಆಗಿಲ್ಲ. ಬಿಜೆಪಿ ಒಂದು ಸ್ಥಾನ ಗೆದ್ದಿದೆ ಎಂದು ಸಮಾಧಾನ ಪಟ್ಟುಕೊಂಡರೂ ಮತ ಗಳಿಕೆಯ ಅಂಕಿ ಅಂಶ ಬಿಜೆಪಿಗೆ ಹಿನ್ನಡೆ ಆಗಿದೆ ಎಂದು ಹೇಳಿದೆ. ಹಲವು ಬಾರಿ ಮಾತುಕತೆ
ವಿಧಾನಸಭಾ ಚುನಾವಣೆಯ ಬಳಿಕ ಎರಡು ಬಣಗಳನ್ನು ಒಗ್ಗೂಡಿಸುವಲ್ಲಿ ಮಾತುಕತೆ, ರಾಷ್ಟ್ರೀಯ ನಾಯಕರ ಉಪಸ್ಥಿತಿಯಲ್ಲಿ ಚರ್ಚೆ ನಡೆದಿತ್ತು. ಈ ಮಧ್ಯೆ ಪುತ್ತಿಲ ಪರಿವಾರ ರಚನೆಯಾಗಿ ಬಿಜೆಪಿಯಿಂದ ಅಂತರ ಕಾಯ್ದುಕೊಂಡು ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಗ್ರಾ.ಪಂ.ಉಪಚುನಾವಣೆ ಸಂದರ್ಭದಲ್ಲಿ ಪುತ್ತಿಲ ಪರಿವಾರದಿಂದ ಕಣಕ್ಕಿಳಿಯದಂತೆ ಒಪ್ಪಂದ ಸೂತ್ರ ಹೆಣೆದರೂ ಬಹಳ ಪ್ರಯೋಜನವಾಗಿಲ್ಲ. ಸಹಕಾರ ಸಂಘಗಳ ಚುನಾವಣೆಯಲ್ಲಿ ಹೊಂದಾಣಿಕೆ ಇದ್ದರೂ, ನಗರಸಭೆ ಉಪ ಚುನಾವಣೆಯಲ್ಲಿ ಪ್ರತ್ಯೇಕವಾಗಿಯೇ ಸ್ಪರ್ಧಿಸಿದ್ದವು.
Related Articles
ನಗರಸಭಾ ಉಪ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಪ್ರಮುಖ ನಾಯಕ ಡಾ|ಸುರೇಶ್ ಪುತ್ತೂರಾಯ ದಿಢೀರ್ ಆಗಿ ಬಿಜೆಪಿ ಅಭ್ಯರ್ಥಿ ಪರ ಕಾಣಿಸಿಕೊಳ್ಳುವ ಜತೆಗೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆ ಪರ ವಿರೋಧ ಅಭಿಪ್ರಾಯಗಳೂ ವ್ಯಕ್ತವಾಗಿದ್ದವು. ಬಳಿಕ ಅವರು ಪುತ್ತಿಲ ಪರಿವಾರದ ಕಾರ್ಯಕ್ರಮದ ಜತೆಗೂ ಕಾಣಿಸಿಕೊಂಡಿದ್ದರು. ಪುತ್ತೂರಾಯ ಅವರ ಮೂಲಕ ಪುತ್ತಿಲ ಪರಿವಾರವನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳುವ ಪ್ರಯತ್ನ ನಡೆಯಿತು. ಈ ಹಿನ್ನೆಲೆಯಲ್ಲಿ ಸಂಘ ಪರಿವಾರ, ಬಿಜೆಪಿಯ ಉನ್ನತ ಮಟ್ಟದ ನಾಯಕರೂ ಮಧ್ಯ ಪ್ರವೇಶಿಸಿದ್ದರು.
Advertisement
ಮಂಡಲದ ಜವಾಬ್ದಾರಿ?ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷತೆಯ ಹುದ್ದೆಯನ್ನು ಅರುಣ್ ಕುಮಾರ್ ಪುತ್ತಿಲ ಅವರಿಗೆ ನೀಡುವುದೂ ಸೇರಿದಂತೆ ಇನ್ನಿತರ ಸಂಗತಿಗಳ ಕುರಿತೂ ಮಾತುಕತೆ ನಡೆದಿದೆ. ಮಾತುಕತೆ ಯಶಸ್ಸಾಗಿದ್ದು, ಪುತ್ತಿಲ ಪರಿವಾರ ಬಿಜೆಪಿ ಜತೆಗೆ ವಿಲೀನಗೊಳಿಸುವ ಸಂಭವವಿದೆ. ಈ ಹಿಂದೆ ಜಿಲ್ಲಾಧ್ಯಕ್ಷತೆಗೆ ಬೇಡಿಕೆ ಇರಿಸಿದ್ದ ಅರುಣ್ ಪುತ್ತಿಲರು ಮಂಡಲದ ಅಧ್ಯಕ್ಷತೆಗೆ ಸಹಮತ ಸೂಚಿಸಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ನಿರ್ಧಾರ
ಅರುಣ್ ಪುತ್ತಿಲ ಅವರನ್ನು ಬಿಜೆಪಿಗೆ ಸೇರಿಸಿಕೊಂಡು ಸ್ಥಾನಮಾನ ನೀಡಲು ಬಿಜೆಪಿ, ಸಂಘ ಪರಿವಾರದ ಕೆಲ ಮುಖಂಡರ ವಿರೋಧ ಇದೆ ಎನ್ನಲಾಗಿದೆ. ಲೋಕಸಭಾ ಚುನಾವಣ ಹಿನ್ನೆಲೆಯಲ್ಲಿ ಇವರನ್ನು ಸಮಾಧಾನಿಸುವ ಪ್ರಯತ್ನ ಚಾಲ್ತಿಯಲ್ಲಿದೆ. ಒಂದುವೇಳೆ ಸಮ್ಮತಿಸದಿದ್ದಲ್ಲಿ ಜಗದೀಶ್ ಶೆಟ್ಟರ್ ಸೇರ್ಪಡೆ ರೀತಿಯಲ್ಲೇ ನೇರವಾಗಿ ಹೈಕಮಾಂಡ್ ಮಟ್ಟದಲ್ಲಿ ಸೇರ್ಪಡೆ ಆಗುವ ಸಂಭವವಿದೆ. -ಕಿರಣ್ ಪ್ರಸಾದ್ ಕುಂಡಡ್ಕ