Advertisement
ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ನಿರ್ಮಿತಿ ಕೇಂದ್ರದ ಮೂಲಕ ಕಟ್ಟಡ ನಿರ್ಮಾಣ ನಡೆಯುತ್ತಿದೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವ್ಯಸ್ತರಾದ ಕಾರಣ ಕಾಮಗಾರಿಗೆ ಮಂಜೂರಾದ ಅನುದಾನ ಬಿಡುಗಡೆಗೆ ವಿಳಂಬವಾಯಿತು. ವಿಧಾನಸಭೆ ಚುನಾವಣೆ ಬೆನ್ನಲ್ಲೇ ವಿಧಾನ ಪರಿಷತ್ ಚುನಾವಣೆಯೂ ನಡೆಯಿತು. ಇದೀಗ ಚುನಾವಣೆಗಳ ತರಾತುರಿ ಮುಗಿದಿದೆ. ಇನ್ನು ಮುಂದೆ ಉಳಿದ ಕಾಮಗಾರಿಗಳು ವೇಗ ಪಡೆಯುವ ಸಾಧ್ಯತೆ ಇದೆ.
ಪುತ್ತೂರು ಪಶು ಸಂಗೋಪನ ಇಲಾಖೆ, ಪಶು ಆಸ್ಪತ್ರೆಯೂ ಹೌದು. ಇಲಾಖೆಯ ಮಾಹಿತಿ, ಸೌಲಭ್ಯ ಪಡೆಯಲಷ್ಟೇ ಜನರು ಇಲ್ಲಿಗೆ ಆಗಮಿಸುತ್ತಿಲ್ಲ. ದನ, ನಾಯಿ ಮೊದಲಾದ ಪ್ರಾಣಿಗಳ ಚಿಕಿತ್ಸೆಗೂ ಕರೆದು ಕೊಂಡು ಬರುವವರಿದ್ದಾರೆ. ಆದ್ದರಿಂದ ಸೌಲಭ್ಯ ದೃಷ್ಟಿಯಿಂದ ಸಾಕಷ್ಟು ಸುಸಜ್ಜಿತ ಕಟ್ಟಡ ಇಲ್ಲಿ ಆವಶ್ಯಕತೆ ಇದೆ. ಇದೀಗ ಬ್ರಿಟಿಷರ ಕಾಲದ ಕಟ್ಟಡದಲ್ಲಿ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. 1932 ರಲ್ಲಿ ಈ ಕಟ್ಟಡ ನಿರ್ಮಿಸಲಾಗಿದೆ ಎಂಬ ಉಲ್ಲೇಖ ಇದೆ. ಪುತ್ತೂರು ಮೀನು ಮಾರುಕಟ್ಟೆಗೆ ಒತ್ತಿಕೊಂಡಂತೆ, ಮೊಳಹಳ್ಳಿ ಶಿವರಾಯ ಮೂರ್ತಿ ಪಕ್ಕದಲ್ಲೇ ಪಶು ಸಂಗೋಪನ ಇಲಾಖೆ ಕಟ್ಟಡವಿದ್ದು, ಇದೀಗ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲು ಸಿದ್ಧವಾಗಿದೆ. ತಾತ್ಕಾಲಿಕ ವ್ಯವಸ್ಥೆ
ಹೊಸ ಕಚೇರಿ ಕಟ್ಟಡ ನಿರ್ಮಾಣವಾದರೂ ಹಿಂದಿನ ಕಟ್ಟಡವನ್ನು ಆಸ್ಪತ್ರೆಗೆ ಬಳಸಿಕೊಳ್ಳುವ ಇರಾದೆ ಇಲಾಖೆ ಮುಖ್ಯಸ್ಥರದ್ದು. ಒಂದಷ್ಟು ಹೆಂಚು ರಿಪೇರಿ ಇದೆ. ಮಿಕ್ಕಂತೆ ಕಟ್ಟಡದ ಸ್ಥಿತಿಗತಿ ಉತ್ತಮವಾಗಿಯೇ ಇದೆ. ಹಂಚಿನ ಕಟ್ಟಡ ಆಗಿದ್ದ ಕಾರಣ, ಇಲಿಗಳ ಕಾಟ ಹೆಚ್ಚೇ ಇದೆ. ಇದಕ್ಕೆಲ್ಲ ವ್ಯವಸ್ಥೆ ಮಾಡಿಕೊಂಡರೆ, ಬ್ರಿಟಿಷರ ಕಾಲದ ಕಟ್ಟಡವನ್ನು ಇತರ ಕೆಲಸಗಳಿಗೆ ಬಳಸಿಕೊಳ್ಳಬಹುದು. ಕಟ್ಟಡದ ಹಿಂದಿರುವ ಇಕ್ಕಟ್ಟಾದ ಕೋಳಿ ಶೆಡ್‌ನಲ್ಲಿ ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಸೂಕ್ತ ವ್ಯವಸ್ಥೆಗಳಿಲ್ಲದೆ, ದಟ್ಟಣೆ ಹೆಚ್ಚು. ಇದೀಗ ಕಚೇರಿಗೆ ಸುಸಜ್ಜಿತ ಕಟ್ಟಡ ಸಿಗುತ್ತಿದೆ. ಬಳಿಕ ಪ್ರಾಣಿಗಳಿಗೂ ಯೋಗ್ಯ ರೀತಿಯಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಆಗುತ್ತದೆ.
Related Articles
ಪುತ್ತೂರು ಪಶು ಸಂಗೋಪನ ಇಲಾಖೆ ಅಡಿಯಲ್ಲಿ ಒಟ್ಟು 17 ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ನಾಲ್ಕು ಪಶು ಆಸ್ಪತ್ರೆಗಳು- ಉಪ್ಪಿನಂಗಡಿ, ಪುತ್ತೂರು, ಪಾಣಾಜೆ, ಕಡಬ ಪಶು ಆಸ್ಪತ್ರೆ. 4 ಪಶು ಚಿಕಿತ್ಸಾಲಯಗಳೂ- ಕೊಳ್ತಿಗೆ, ನರಿಮೊಗರು, ಕೌಕ್ರಾಡಿ, ಕಲ್ಲುಗುಡ್ಡೆ. 9 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು- ಈಶ್ವರಮಂಗಲ, ಕೌಡಿಚ್ಚಾರು, ಕೆದಂಬಾಡಿ, ಬೆಳಂದೂರು, ಬಲ್ನಾಡು, ಕೋಡಿಂಬಾಡಿ, ಶಿರಾಡಿ, ನೆಲ್ಯಾಡಿ, ಕುಂತೂರುಪದವು. ಇಷ್ಟು ದೊಡ್ಡ ವ್ಯಾಪ್ತಿ ಹೊಂದಿರುವ ಪುತ್ತೂರು ಪಶು ಆಸ್ಪತ್ರೆಗೆ ಸಾಕಷ್ಟು ಔಷಧಗಳು ಬರುತ್ತವೆ. ಇದನ್ನು ದಾಸ್ತಾನು ಇಡಲು ವ್ಯವಸ್ಥೆಯೂ ಬೇಕಿತ್ತು. ಅದು ಹೊಸ ಕಟ್ಟಡದಲ್ಲಿ ಇರಲಿದೆ.
Advertisement
ಸಿಬಂದಿ ಹೆಚ್ಚು ಬೇಕುಪುತ್ತೂರು ಪಶು ಆಸ್ಪತ್ರೆಯ ಇಷ್ಟೆಲ್ಲ ಸೌಕರ್ಯಗಳನ್ನು ನಿಭಾಯಿಸಲು ಒಟ್ಟು 12 ಮಂದಿ ಅಧಿಕಾರಿ, ಸಿಬಂದಿ ಬೇಕು. ಈಗ ಓರ್ವ ಸಹಾಯಕ ನಿರ್ದೇಶಕ, ಇಬ್ಬರು ಪಶು ವೈದ್ಯಾಧಿಕಾರಿ, ತಲಾ ಒಬ್ಬರಂತೆ ಜಾನುವಾರು ಅಧಿಕಾರಿ, ದ್ವಿತೀಯ ದರ್ಜೆ ಸಹಾಯಕ, ಪಶು ವೈದ್ಯ ಸಹಾಯಕರು ಇದ್ದಾರೆ. ಇಬ್ಬರು ಡಿ ದರ್ಜೆ ಸಹಾಯಕರು, ವಾಹನ ಚಾಲಕ, ಇಬ್ಬರು ಪಶು ವೈದ್ಯ ಸಹಾಯಕರ ಹುದ್ದೆ ಖಾಲಿ ಇದೆ. ಹೊಸ ಕಟ್ಟಡ ಉದ್ಘಾಟನೆ ಆದಾಗ, ಇಷ್ಟೆಲ್ಲ ಸಿಬಂದಿ ಆಗಮಿಸಿದರೆ, ಹಳೆ ಕಟ್ಟಡವನ್ನು ರಿಪೇರಿ ಮಾಡಿ ಬಳಸಿಕೊಳ್ಳಲಾಗುವುದು ಎನ್ನುತ್ತಾರೆ ಆಸ್ಪತ್ರೆಯ ಉಪನಿರ್ದೇಶಕ ಸುರೇಶ್ ಭಟ್. ಕಟ್ಟಡದಲ್ಲಿ ಏನೇನಿದೆ?
ಉಪನಿರ್ದೇಶಕರ ಕಚೇರಿ, ವೈದ್ಯರ ಕೊಠಡಿ, ಸಭಾಂಗಣ, ಪ್ರಯೋಗಾಲಯ, ಔಷಧ ವಿತರಣೆ ಕೌಂಟರ್, ದಾಸ್ತಾನು ಕೊಠಡಿ ಹೊಸ ಪಶು ಆಸ್ಪತ್ರೆಯಲ್ಲಿ ಇರಲಿದೆ. ಇದುವರೆಗೆ ಸಣ್ಣ ಕಟ್ಟಡದಲ್ಲಿ ಈ ಎಲ್ಲ ಕೆಲಸಗಳನ್ನು ನಿರ್ವಹಿಸಬೇಕಿತ್ತು. ಇದುವರೆಗೆ ಪ್ರಯೋಗಾಲಯವೂ ಇರಲಿಲ್ಲ. ಇನ್ನು ಮುಂದೆ ಪಶು ಆಸ್ಪತ್ರೆಯಲ್ಲೇ ಪುಟ್ಟ ಪ್ರಯೋಗಾಲಯವೂ ಇರಲಿದ್ದು, ಪ್ರಾಣಿಗಳ ಚಿಕಿತ್ಸೆಗೆ ಸಹಕಾರಿ ಆಗಲಿದೆ. ಹೊರಮೈಯಲ್ಲಿ ಸಾರಣೆ ಬದಲು, ಗೋಡೆಗೆ ಪಾಲಿಶ್ ಮಾಡಲಾಗುವುದು. ಶೀಘ್ರದಲ್ಲಿ ಲಭ್ಯ
ಚುನಾವಣೆ ಹಿನ್ನೆಲೆಯಲ್ಲಿ ಹೊಸ ಕಟ್ಟಡದ ಕೆಲಸ ಸ್ವಲ್ಪ ನಿಧಾನವಾಯಿತು. ಇದೀಗ ಚುನಾವಣೆ ಮುಗಿದಿದೆ. ಮುಂದಿನ ಒಂದೆರಡು ತಿಂಗಳಲ್ಲಿ ಪಶು ಆಸ್ಪತ್ರೆಗೆ ಹೊಸ ಕಟ್ಟಡ ಸಿಗಲಿದೆ. ಇದಕ್ಕೆ ತಕ್ಕಂತೆ ಸಿಬಂದಿಯೂ ಬಂದರೆ, ಆಸ್ಪತ್ರೆ ಸುಸಜ್ಜಿತವಾಗಿಯೇ ಕಾರ್ಯ ನಿರ್ವಹಿಸಲಿದೆ.
– ಡಾ| ಸುರೇಶ್ ಭಟ್,
ಇಲಾಖೆ, ಉಪನಿರ್ದೇಶಕ, ಪಶು ಸಂಗೋಪನ ಇಲಾಖೆ, ಪುತ್ತೂರು ಗಣೇಶ್ ಎನ್. ಕಲ್ಲರ್ಪೆ