Advertisement

ಪುತ್ತೂರು: ಕಲ್ಲೇರಿ ಪರಿಸರದಲ್ಲಿ ಹೆಚ್ಚುವರಿ ನಿಗಾ

11:25 PM Mar 28, 2020 | Sriram |

ಪುತ್ತೂರು: ಕಲ್ಲೇರಿ ನಿವಾಸಿಯಲ್ಲಿ ಕೋವಿಡ್‌ 19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪರಿಸರದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಸೋಂಕಿತನನ್ನು ಮಂಗಳೂರು ವೆನ್ಲಾಕ್ ಗೆ ಸ್ಥಳಾಂತರಿಸಲಾಗಿದೆ. ಯುವಕನ ತಂದೆ ಸರಕಾರಿ ಆಸ್ಪತ್ರೆಯ ಐಸೋಲೇಶನ್‌ ವಾರ್ಡ್‌ನಲ್ಲಿದ್ದಾರೆ. ಮನೆಯವರನ್ನು ಹೋಂ ಕ್ವಾರಂಟೈನಲ್ಲಿರಿಸಲಾಗಿದೆ.

Advertisement

ಮಾ. 21ರಂದು ದುಬಾೖಯಿಂದ ಬೆಂಗಳೂರಿಗೆ ವಿಮಾನದಲ್ಲಿ ಆಗಮಿಸಿದ್ದ ಯುವಕ ಅಲ್ಲಿನ ಆಸ್ಪತ್ರೆಯಲ್ಲಿ ತಪಾಸಣೆಯ ಬಳಿಕ ಬಿಎಂಟಿಸಿ ಬಸ್‌ನಲ್ಲಿ ಮೆಜೆಸ್ಟಿಕ್‌ ತಲುಪಿದ್ದ. ಹೊಟೇಲ್‌ನಲ್ಲಿ ಉಪಾಹಾರ ಸೇವಿಸಿ, ಸ್ನೇಹಿತನನ್ನು ಭೇಟಿ ಮಾಡಿ ಸಂಜೆ ಕರ್ನಾಟಕ ಸುವರ್ಣ ಸಾರಿಗೆ ಬಸ್ಸೇರಿ ರಾತ್ರಿ 2.30ಕ್ಕೆ ಉಪ್ಪಿನಂಗಡಿಯಲ್ಲಿ ಇಳಿದು, ರಿಕ್ಷಾದಲ್ಲಿ ಮನೆ ಸೇರಿದ್ದ. ದಾರಿ ಮಧ್ಯೆ ಎರಡು ಕಡೆ ಊಟ, ಚಹಾ ಸೇವಿಸಿದ್ದಾನೆ. ಬಳಿಕ ತನ್ನ ಐವರು ಸ್ನೇಹಿತರನ್ನು ಭೇಟಿ ಮಾಡಿದ್ದಾನೆ. ಅಧಿಕಾರಿಗಳು ಕಾಂಟ್ಯಾಕ್ಟ್ ಟ್ರೇಸಿಂಗ್‌ ಮೂಲಕ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಸಹಾಯಕ ಕಮಿಷನರ್‌ ಡಾ| ಯತೀಶ್‌ ಉಳ್ಳಾಲ ನೇತೃತ್ವದಲ್ಲಿ ಕಲ್ಲೇರಿ ಪರಿಸರದ ಜನತಾ ಕಾಲನಿಯ 150 ಮನೆಗಳನ್ನು ನಿರ್ಬಂಧಕ್ಕೆ ಒಳಪಡಿಸಲಾಗಿದೆ. ಪರಿಸರದ ಮಡಂತ್ಯಾರು-ಉಪ್ಪಿನಂಗಡಿ ರಸ್ತೆಯ ಅಳಕೆ, ಉಪ್ಪಿನಂಗಡಿ-ಧರ್ಮಸ್ಥಳ ರಸ್ತೆಯ ಜಾರಿಗೆಬೈಲು ಮತ್ತು ಕರಾಯದಲ್ಲಿ ಜನಸಂಚಾರ ನಿರ್ಬಂಧಿಸಲಾಗಿದೆ.

ವೃದ್ಧರ ಪರ ಕಾಳಜಿ
ಎಸ್‌ಪಿ ಕಚೇರಿಯಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿರುವ ವೃದ್ಧರ ಕುರಿತು ಕಾಳಜಿ ವಹಿಸಲಾಗುತ್ತಿದೆ. ಜಿಲ್ಲೆಯ ವೃದ್ಧರೆಲ್ಲರ ಮಾಹಿತಿ ಎಸ್‌ಪಿ ಕಚೇರಿಯಲ್ಲಿದ್ದು, ದೂರವಾಣಿ ಮೂಲಕ ಅವರ ಆರೋಗ್ಯ ವಿಚಾರಿಸುತ್ತಿರುವುದು ಶ್ಲಾಘನೆಗೆ ಪಾತ್ರವಾಗಿದೆ.

ಪಡಿತರ ವಿತರಣೆ
ಪುತ್ತೂರು ನಗರದಲ್ಲಿ ದಿನಸಿ ಅಂಗಡಿಗಳ ಸಹಿತ ಎಲ್ಲ ವ್ಯಾಪಾರ ಬಂದ್‌ ಆಗಿತ್ತು. ಗ್ರಾಮೀಣ ಭಾಗದ ಕೆಲವು ನ್ಯಾಯಬೆಲೆ ಅಂಗಡಿಗಳನ್ನು ಸುರಕ್ಷಾ ಕ್ರಮಗಳೊಂದಿಗೆ ತೆರೆದು ಪಡಿತರ ವಿತರಿಸಲಾಯಿತು. ಆ್ಯಂಬುಲೆನ್ಸ್‌ ಸಹಿತ ತುರ್ತು ಅಗತ್ಯಗಳ ವಾಹನಗಳಿಗೆ ದರ್ಬೆ ಸರ್ಕಲ್‌ ಬಳಿಯ ಬಂಕ್‌ನಲ್ಲಿ ಇಂಧನ ಒದಗಿಸಲಾಗಿತ್ತು.

ಪತ್ರಿಕೆ, ಹಾಲು ವಿತರಣೆಗೂ ಅಡ್ಡಿ
ಪುತ್ತೂರು ಜಿಲ್ಲೆ ಸಂಪೂರ್ಣ ಬಂದ್‌ ಕರೆಗೆ ಪುತ್ತೂರು ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಜನರು ಬೆಳಗ್ಗೆ ನಗರಕ್ಕೆ ಬರಲು ಯತ್ನಿಸಿದರೂ ಪೊಲೀಸರು ಅವಕಾಶ ನೀಡಲಿಲ್ಲ. ಗ್ರಾಮಾಂತರ ಭಾಗಗಳಲ್ಲೂ ಅಂಗಡಿಗಳನ್ನು ತೆರೆಯಲು ಬಿಡಲಿಲ್ಲ. ಸಂಪೂರ್ಣ ಬಂದ್‌ ಕುರಿತು ಶುಕ್ರವಾರ ರಾತ್ರಿ, ಶನಿವಾರ ಮುಂಜಾನೆಯಿಂದಲೇ ನಗರದಲ್ಲಿ ಮೈಕ್‌ ಮೂಲಕ ಪ್ರಚಾರ ನಡೆಸಲಾಯಿತು. ಅಗತ್ಯ ವಸ್ತುಗಳಾದ ಹಾಲು, ಪತ್ರಿಕೆಗಳ ವಿತರಣೆಗೂ ಸಮಸ್ಯೆಯಾಯಿತು. ಹೈವೇ ಪೆಟ್ರೋಲಿಂಗ್‌ನವರು ವಿತರಕರನ್ನು ಬೆದರಿಸಿದ ಕುರಿತು ವರದಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next