Advertisement
ಅರುಣ್ ಪುತ್ತಿಲ ಅವರಿಗೆ ಗೌರವಯುತ ಹುದ್ದೆ ನೀಡಲು ವರಿಷ್ಠರು ನಿರ್ಧರಿಸಿದ್ದು, ಈ ಕುರಿತ ಮಾಹಿತಿಯನ್ನು ಪುತ್ತಿಲ ಪರಿವಾರಕ್ಕೆ ರವಾನಿಸುವ ಮೂಲಕ ಒಂಭತ್ತು ತಿಂಗಳ ವಿರಸ ಶಮನಕ್ಕೆ ಮಂಗಳ ಹಾಡಲು ಮುಹೂರ್ತ ಇಟ್ಟಂತಾಗಿದೆ. ಇನ್ನು ದಿನ ನಿಗದಿಯಷ್ಟೇ ಬಾಕಿ ಇದೆ.
Related Articles
ಫೆ.5 ರಂದು ನಡೆದ ಪುತ್ತಿಲ ಪರಿವಾರದ ಸಮಾಲೋಚನ ಸಭೆಯಲ್ಲಿ ಗಡುವು ನೀಡಲಾಗಿತ್ತು. ಹೀಗಾಗಿ ಬಿಜೆಪಿ ನಡೆ ಏನಿರಬಹುದು ಅನ್ನುವ ಕುತೂಹಲ ಕಾರ್ಯಕರ್ತರಲ್ಲಿ ಉಳಿದಿತ್ತು. ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಅವರಿಗೆ ಮಂಡಲದ ಅಧ್ಯಕ್ಷ ಸ್ಥಾನ ನೀಡಬೇಕು ಅಥವಾ ಪುತ್ತಿಲ ಪರಿವಾರದ ಅಧ್ಯಕ್ಷ ಅಥವಾ ಕಾರ್ಯದರ್ಶಿಗೆ ಮಂಡಲದ ಹೊಣೆ ನೀಡಬೇಕು ಅನ್ನುವ ಬೇಡಿಕೆಯನ್ನು ಪುತ್ತಿಲ ಪರಿವಾರ ಮುಂದಿಟ್ಟಿತ್ತು. ಈ ಬೇಡಿಕೆಗೆ ಬಿಜೆಪಿ, ಸಂಘ ಪರಿವಾರದ ಕೆಲವು ನಾಯಕರು, ಅಧಿಕಾರದ ಸ್ಥಾನಮಾನ ಕೇಳಿಲ್ಲ. ಪಕ್ಷ ಸಂಘಟನೆಯ ಜವಾಬ್ದಾರಿ ಕೇಳಿದ್ದಾರೆ. ಹಾಗಾಗಿ ನೀಡಿ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರೆ, ಕೆಲವು ನಾಯಕರು ಈ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಹಿರಂಗ ಬೇಡಿಕೆಗಳಿಗೆ ಸ್ಪಂದಿಸಿದಲ್ಲಿ ತಪ್ಪು ಸಂದೇಶ ರವಾನಿಸಿದಂತಾದೀತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಹೀಗಾಗಿ ಜಿಲ್ಲಾ ಸಮಿತಿಯು ಪುತ್ತಿಲ ಪರಿವಾರದ ಸೇರ್ಪಡೆ ವಿಷಯವನ್ನು ವರಿಷ್ಠರ ಅಂಗಳದಲ್ಲಿ ಇರಿಸಲಾಗಿತ್ತು.
Advertisement
ಈ ಕುರಿತು ಪ್ರತಿಕ್ರಿಯಿಸಿದ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ, ಇಂದಿನ ಬೆಳವಣಿಗೆ ನಮ್ಮ ನಿರೀಕ್ಷೆಗೆ ತಕ್ಕಂತೆ ನಡೆದಿದೆ. ಹೀಗಾಗಿ ಉಭಯ ಕಾರ್ಯಕರ್ತರ ಅಪೇಕ್ಷೆ ಕೆಲವು ದಿನಗಳಲ್ಲಿ ಕೈಗೂಡಲಿದೆ ಎಂದರು.