Advertisement
ಪ್ರಾತಃಕಾಲ ಪಟ್ಟದ ದೇವರಾದ ಶ್ರೀ ಉಪೇಂದ್ರವಿಠಲ ದೇವರಿಗೆ ಫಲನ್ಯಾಸಪೂರ್ವಕ ಪ್ರಾರ್ಥನೆ ಸಲ್ಲಿಸಲಾಯಿತು. ಅನಂತರ ಶ್ರೀ ಅನಂತೇಶ್ವರ ದೇಗುಲ, ಶ್ರೀ ಚಂದ್ರಮೌಳೀಶ್ವರ ದೇಗುಲ, ಭೋಜನ ಶಾಲೆಯ ಶ್ರೀ ಮುಖ್ಯಪ್ರಾಣ, ಗರುಡ ದೇವರು, ಶ್ರೀ ಕೃಷ್ಣಮಠಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲಾಯಿತು. ಮಧ್ವ ಸರೋವರ, ಗರುಡ ದೇವರು, ಮಧ್ವಾಚಾರ್ಯ ಸಾನ್ನಿಧ್ಯ, ಸರ್ವಜ್ಞ ಪೀಠ, ನಾಗದೇವರ ಸಾನ್ನಿಧ್ಯ, ಬೃಂದಾವನ, ಗೋಶಾಲೆಯಲ್ಲಿ ಪ್ರಾರ್ಥನೆ ಸಲ್ಲಿಸಿ, ರಥಬೀದಿಯಲ್ಲಿ ಪ್ರದಕ್ಷಿಣೆ ಬಂದು ಅಷ್ಟಮಠಗಳಿಗೆ ನವಗ್ರಹದಾನ ನಡೆಸಲಾಯಿತು. ರಥಬೀದಿಯಲ್ಲಿ ಚೆಂಡೆ, ವಾದ್ಯ ಸಹಿತ ಮಂತ್ರ ಘೋಷಗಳೊಂದಿಗೆ ಚಿನ್ನದ ಪಲ್ಲಕಿಯಲ್ಲಿ ಅಕ್ಕಿಮುಡಿ ಮೆರವಣಿಗೆ ನಡೆಯಿತು.
Related Articles
Advertisement
ತೋರ್ಪಡಿಕೆಯ ಪೂಜೆಗಿಂತ ಪ್ರತಿಯೊಬ್ಬರೂ ಆಂತರಿಕವಾಗಿ ಭಗವದ್ ಚಿಂತನೆ ನಡೆಸಬೇಕು. ಭಗವಂತನ ಸೇವೆಯನ್ನು ಯಾವ ರೀತಿ ಮಾಡಿದರೂ ಅದು ಪೂಜೆ ಎನಿಸಲ್ಪಡುತ್ತದೆ. ತಕ್ಕುದಾದ ಪುಣ್ಯ ಫಲವೂ ಲಭಿಸುತ್ತದೆ. ಪೂಜೆಯ ಸಂಕಲ್ಪ, ಆರಂಭ, ಪಾಲ್ಗೊಳ್ಳುವಿಕೆ, ಸಂಪೂರ್ಣಗೊಳಿಸಿದರೆ ಒಂದೊಂದು ಫಲ ದೊರಕುತ್ತದೆ. ಭಗವಂತನ ಅನುಗ್ರಹಕ್ಕಾಗಿ ಮಾಡಲ್ಪಡುವ ಪೂಜೆಯಿಂದ ಎಲ್ಲ ಕಾರ್ಯಗಳು ಸಾಂಗವಾಗಿ ನೆರವೇರುತ್ತದೆ ಎಂದು ಶ್ರೀ ಪುತ್ತಿಗೆ ಶ್ರೀಪಾದರು ನುಡಿದರು. ವಿಶ್ವ ಗೀತಾ ಪರ್ಯಾಯ
ಈ ಬಾರಿಯ “ವಿಶ್ವ ಗೀತಾ ಪರ್ಯಾಯ’ದ ಅಂಗವಾಗಿ 1 ಕೋಟಿ ಭಕ್ತರಿಂದ ಗೀತೆಯನ್ನು ಬರೆಸುವ ಸಂಕಲ್ಪ ಮಾಡಲಾಗಿದೆ. ಅದನ್ನು ಈಡೇರಿಸುವ ಹೊಣೆಗಾರಿಕೆ ಶ್ರೀಕೃಷ್ಣನಿಗೆ ಬಿಟ್ಟದ್ದು. ಜಗತ್ತಿನ ಮೂಲೆ ಮೂಲೆಯಲ್ಲೂ ಗೀತಾ ಪ್ರಚಾರ ಕೈಗೊಳ್ಳಲಾಗಿದೆ. ಗೀತೆಯನ್ನು ಓದುವುದರಿಂದ ಜೀವನದಲ್ಲಿ ಬರಬಹುದಾದ ಸವಾಲುಗಳನ್ನು ಲೀಲಾಜಾಲವಾಗಿ ಎದುರಿಸುವ ಶಕ್ತಿ ಲಭಿಸಲಿದೆ ಎಂದರು. ದೇವರು-ಭಕ್ತರ ಸೇವೆಗೆ ಅವಕಾಶ
ಈ ಬಾರಿಯ ಪರ್ಯಾಯದಲ್ಲಿ ದೇವರ ಸೇವೆಯ ಜತೆಗೆ ಭಕ್ತರ ಸೇವೆಯ ಅವಕಾಶ ಉಡುಪಿ ಜನರಿಗೆ ಒದಗಿ ಬಂದಿದೆ. ಜೀವನ ಕ್ಷಣಿಕ, ಹೀಗಾಗಿ ಅಮೆರಿಕದಲ್ಲಿ ತೆರೆದಿಟ್ಟ ಅಂಗಡಿಗಳನ್ನು ಬ್ಲ್ಯಾಕ್ ಫ್ರೈಡೇ ದಿನ ಸೂರೆ ಮಾಡುವಂತೆ (ಪರ್ಯಾಯ ಪೀಠದಿಂದ ಇಳಿಯುವ ಮಠದ ಕೊನೆಯ ದಿನವೂ ಸೂರೆ ಸಂಪ್ರದಾಯವಿದೆ) ಹೀಗಾಗಿ ದೇವರ ಸೇವೆ ಮಾಡಲು ಒದಗಿ ಬಂದ ಅವಕಾಶವನ್ನು ಬಿಡದೆ ಮಾಡಬೇಕು. 1 ಲಕ್ಷ ಭಕ್ತರಿಗೆ ಆಮಂತ್ರಣ ಪತ್ರಿಕೆ ವಿತರಿಸುವ ಗುರಿ ಹೊಂದಲಾಗಿದ್ದು, ಇದು ಶ್ರೀಕೃಷ್ಣನಿಂದ ಬಂದ ಅನುಗ್ರಹ ಪತ್ರ ಎನ್ನುವ ನೆಲೆಯಲ್ಲಿ ಎಲ್ಲರೂ ಪರ್ಯಾಯದಲ್ಲಿ ಭಾಗವಹಿಸಲು ತಿಳಿಸಿದರು. ಸಮೃದ್ಧಿ-ಸುಭೀಕ್ಷೆಯಾಗಲಿ
ಸ್ವಾಗತ ಸಮಿತಿ ಗೌರವಾಧ್ಯಕ್ಷ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಎರಡು ವರ್ಷಗಳ ಕಾಲ ಉಳಿಯಬಲ್ಲ ಧಾನ್ಯಗಳು, ಅಕ್ಕಿಯನ್ನು ಭಕ್ತರು ನೀಡುವ ಮೂಲಕ ಪರ್ಯಾಯವನ್ನು ಯಶಸ್ವಿಗೊಳಿಸಬೇಕಾಗಿದೆ. ರಾಜ್ಯ, ರಾಷ್ಟ್ರ ಸಮೃದ್ಧಿಯೊಂದಿಗೆ ಸುಭೀಕ್ಷೆಯಾಗಲಿ ಎಂಬ ಸಂಕಲ್ಪ ತೊಡಬೇಕಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸದಸ್ಯರು ಸಕ್ರಿಯರಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಅಧ್ಯಕ್ಷ ಡಾ| ಎಚ್.ಎಸ್. ಬಲ್ಲಾಳ್ ಅವರು, ಪರ್ಯಾಯವನ್ನು ಯಶಸ್ವಿಯಾಗಿ ನೆರವೇರಿಸಲು ಸಕಲ ಸಿದ್ಧತೆ ನಡೆಯುತ್ತಿದೆ ಎಂದರು. ಭಕ್ತರಿಗೆ ಮನೆ ಆತಿಥ್ಯ
ಕಾರ್ಯಾಧ್ಯಕ್ಷ ಮಾಜಿ ಶಾಸಕ ಕೆ. ರಘುಪತಿ ಭಟ್ ಪ್ರಾಸ್ತಾವಿಕ ಮಾತನಾಡಿ, ಪರ್ಯಾಯ ಮಹೋತ್ಸವವನ್ನು ನಾಡಹಬ್ಬವಾಗಿ ಆಚರಿಸುವ ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳ ಅಲಂಕಾರಕ್ಕೆ ಒತ್ತು ನೀಡಲಾಗುವುದು. ದೂರದೂರಿನಿಂದ ಬರುವ ಭಕ್ತರನ್ನು ತಮ್ಮ ಮನೆಗಳಲ್ಲಿ ಇರಿಸಿಕೊಂಡು ಅತಿಥಿ ಸತ್ಕಾರ ಮಾಡಲು ಮಠದ ಕಚೇರಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶವಿದೆ. ಜ.8ರಂದು ಶ್ರೀಗಳ ಪುರಪ್ರವೇಶ ಬಳಿಕದ ಪೌರ ಸಮ್ಮಾನವೂ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ತಿಳಿಸಿದರು. ಆನೆಗುಡ್ಡೆ ಶ್ರೀ ಸಿದ್ಧಿವಿನಾಯಕ ದೇಗುಲದ ಸೂರ್ಯನಾರಾಯಣ ಉಪಾಧ್ಯ, ಶ್ರೀರಮಣ ಉಪಾಧ್ಯ, ಕರ್ಣಾಟಕ ಬ್ಯಾಂಕ್‌ನ ನಿರ್ದೇಶಕ ಬಾಲಕೃಷ್ಣ ಅಲ್ಸೆ, ಭುವನೇಂದ್ರ ಕಿದಿಯೂರು, ಪುರುಷೋತ್ತಮ ಪಿ. ಶೆಟ್ಟಿ, ಉದ್ಯಮಿ ಪ್ರಸಾದರಾಜ್ ಕಾಂಚನ್, ಪೌರಾಯುಕ್ತ ರಾಯಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಪೂರ್ಣಿಮಾ ಸಹಿತ ಗಣ್ಯರು ಉಪಸ್ಥಿತರಿದ್ದರು. ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಅಷ್ಟಮಠದ ಪ್ರತಿನಿಧಿಗಳು, ವೈದಿಕರು, ಶ್ರೀಪಾದರ ಅಭಿಮಾನಿಗಳು, ಶಿಷ್ಯರು ಭಾಗವಹಿಸಿದ್ದರು. ಮಠದ ದಿವಾನ ನಾಗರಾಜ ಆಚಾರ್ಯ ಸ್ವಾಗತಿಸಿದರು. ರಮೇಶ್ ಭಟ್ ಕೆ. ನಿರೂಪಿಸಿದರು. ಡಾ| ಬೆಳಪು ದೇವಿಪ್ರಸಾದ ಶೆಟ್ಟಿ ವಂದಿಸಿದರು. ಆಮಂತ್ರಣ ಪತ್ರಿಕೆ ಅನಾವರಣ
ವಿಶ್ವ ಗೀತಾ ಪರ್ಯಾಯದ ಕನ್ನಡ ಆವೃತ್ತಿಯನ್ನು ಪುತ್ತಿಗೆ ಶ್ರೀಪಾದರು, ಆಂಗ್ಲ ಆವೃತ್ತಿಯನ್ನು ವೀರೇಂದ್ರ ಹೆಗ್ಗಡೆ ಅನಾವರಣಗೊಳಿಸಿದರು. ಡಾ| ಅರ್ಚನಾ ನಂದಕುಮಾರ್ ರಚಿತ ಕೃತಿಯನ್ನು ಯೂಟ್ಯೂಬ್ ಮೂಲಕ ಶ್ರೀಪಾದರು ಬಿಡುಗಡೆ ಮಾಡಿದರು. ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರೀ ದೇಗುಲದ ಅಧ್ಯಕ್ಷ ರಾಘವೇಂದ್ರ ಭಟ್ ಅವರಿಗೆ ಹಸುರು ಹೊರೆ ಕಾಣಿಕೆಯ ಬ್ಯಾನರ್ ಅನ್ನು ಶ್ರೀಪಾದರು ಹಸ್ತಾಂತರಿಸಿದರು. ಏನಿದು ಧಾನ್ಯ ಮುಹೂರ್ತ?
ಎರಡು ವರ್ಷಗಳ ಕಾಲ ನಡೆಯಲಿರುವ ಶ್ರೀ ಪುತ್ತಿಗೆ ಪರ್ಯಾಯ ಸಂದರ್ಭ ಮಠಕ್ಕೆ ಆಗಮಿಸಲಿರುವ ಭಕ್ತರಿಗೆ ನಿತ್ಯ ನಿರಂತರ ಅನ್ನದಾನ ನೆರವೇರಿಸುವ ನೆಲೆಯಲ್ಲಿ ಮಾಡಲ್ಪಡುವ ಧಾನ್ಯ ಸಂಗ್ರಹವೇ “ಧಾನ್ಯ ಮುಹೂರ್ತ’. ನವಧಾನ್ಯ ಸಮರ್ಪಣೆ
ಪುತ್ತಿಗೆ ಶ್ರೀಪಾದರು ಮತ್ತು ಡಿ. ವೀರೇಂದ್ರ ಹೆಗ್ಗಡೆಯವರು ನವಧಾನ್ಯಗಳ ಸಮರ್ಪಣೆಗೆ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಅನಂತರ ಧಾನ್ಯ ಮುಡಿಗಳ ನಡುವೆ ಪೀಠಾಸೀನರಾಗಿದ್ದ ಪುತ್ತಿಗೆ ಶ್ರೀಪಾದರ ಮಾರ್ಗದರ್ಶನದಲ್ಲಿ ನವಗ್ರಹ ಚಿಂತನೆಯಿಂದ ಅತಿಥಿಗಳು ತಟ್ಟೆಗೆ ನವಧಾನ್ಯ ಸಮರ್ಪಿಸಿ ನವಗ್ರಹ ಚಿಂತನೆಯೊಂದಿಗೆ ಶ್ರೀಕೃಷ್ಣ ಮುಖ್ಯಪ್ರಾಣರಿಗೆ ಸಮರ್ಪಿಸಲಾಯಿತು. ಶ್ರೀಧರ ಉಪಾಧ್ಯ ನವಗ್ರಹ ಸ್ತೋತ್ರ ಪಠಿಸಿದರು.