ತಿರುಮಲ:(ಆಂಧ್ರಪ್ರದೇಶ) : ಉಡುಪಿ ಶ್ರೀ ಕೃಷ್ಣ ಮಠದ ಭಾವಿ ಪರ್ಯಾಯ ಶ್ರೀಗಳಾದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಅವರು ಪರ್ಯಾಯ ಸಂಚಾರದ ನಿಮಿತ್ತ ವಿವಿಧ ಕ್ಷೇತ್ರಗಳನ್ನು ಸಂದರ್ಶಿಸುತ್ತಿದ್ದು, ಬುಧವಾರ ತಿರುಪತಿ ಶ್ರೀ ವೆಂಕಟೇಶ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಶ್ರೀಗಳೊಂದಿಗೆ ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸೇರಿ ಹಲವು ಭಕ್ತರಿದ್ದರು.
ಬೆಳಗ್ಗೆ ತಿರುಮಲದ ಸೋಸಲೆ ವ್ಯಾಸರಾಜ ಶಾಖಾ ಮಠದಲ್ಲಿ ಸಂಸ್ಥಾನ ಪೂಜೆ ನಡೆಸಿದ ಬಳಿಕ ಶ್ರೀಗಳು ಅನುಗ್ರಹ ಸಂದೇಶ ನೀಡಿದರು. ನಂತರ ನೂರಾರು ಭಕ್ತರೊಂದಿಗೆ ವೆಂಕಟೇಶನ ದರ್ಶನ ಪಡೆದರು. ಬಳಿಕ ತಿರುಮಲ ದೇವಸ್ಥಾನದ ವತಿಯಿಂದ ಗೌರವ ಸಮರ್ಪಣೆಯನ್ನು ಸ್ವೀಕರಿಸಿದರು.
ಜನವರಿ 8ರಂದು ಶ್ರೀಗಳು ಪುರಪ್ರವೇಶ ಮಾಡಲಿದ್ದು ಆ ಬಳಿಕ ಜ.9ರಿಂದ 17 ರ ವರೆಗೆ ವಿವಿಧ ಊರುಗಳಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ಜ18 ರಂದು ಶ್ರೀಪಾದರು ಸರ್ವಜ್ಞ ಪೀಠಾರೋಹಣ ಮಾಡಿ ಪರ್ಯಾಯ ದೀಕ್ಷಿತರಾಗಲಿದ್ದಾರೆ. ಜ.22 ರ ವರೆಗೆ ಧಾರ್ಮಿಕ -ಸಾಂಸ್ಕೃತಿಕ ಕಾರ್ಯಕ್ರಮಗಳು ಉಡುಪಿಯಲ್ಲಿ ವಿಜೃಂಭಣೆಯಿಂದ ನಡೆಯಲಿವೆ.
ವಿವಿಧ ವಿದೇಶಗಳಿಗೆ ಭೇಟಿ ನೀಡಿ ಅಲ್ಲಿ ಗೀತೆಯ ಸಾರವನ್ನು ಪ್ರಚುರಪಡಿಸಿ, ಶ್ರೀಕೃಷ್ಣನ ಸನ್ನಿಧಿಯನ್ನು ಪ್ರತಿಷ್ಠಾಪಿಸಿದ ಹೆಗ್ಗಳಿಕೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರದ್ದಾಗಿದ್ದು, ಇದು ನಾಲ್ಕನೆಯ ಬಾರಿಯ ಪರ್ಯಾಯವಾಗಿದ್ದು, ಕೋಟಿ ಭಕ್ತರಿಂದ ಗೀತೆಯನ್ನು ಬರೆಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ವಿದೇಶಗಳಲ್ಲಿ ಒಟ್ಟು 15 ಶ್ರೀಕೃಷ್ಣ ವೃಂದಾವನ ಶಾಖೆಗಳನ್ನು ತೆರೆದ ಸಾಧನೆ ಇವರದ್ದಾಗಿದೆ, ಒಟ್ಟು 108 ಶಾಖೆಗಳನ್ನು ತೆರೆಯುವ ಗುರಿ ಇದೆ.