Advertisement

ಪುಟ್ಟರಾಜರ ದೊಡ್ಡ ಸಕ್ಸಸ್‌

06:00 AM Dec 17, 2018 | |

ಸಣ್ಣ ನೀರಾವರಿ ಸಚಿವ ಸಿ.ಎಸ್‌. ಪುಟ್ಟರಾಜು ಅವರು ಎಷ್ಟೇ ಬ್ಯುಸಿ ಇದ್ದರೂ  ತೋಟವನ್ನು ಮರೆಯುವುದಿಲ್ಲ. ಬಿಡುವು ಸಿಕ್ಕಾಗೆಲ್ಲಾ ಸಾಧಾರಣ ಅಂಗಿ, ಪಂಚೆ ತೊಟ್ಟು ರೈತನಂತೆ ತೋಟದಲ್ಲೆಲ್ಲಾ ಓಡಾಡುತ್ತಾರೆ.  ಬೆಳೆಗಳಿಗೆ ನೀರನ್ನೂ ಹರಿಸುತ್ತಾರೆ. ತಮ್ಮ ಭೂಮಿಯನ್ನು ರಾಸಾಯನಿಕ ಮುಕ್ತಗೊಳಿಸುವ ಸಲುವಾಗಿ ಕಾಂಪೋಸ್ಟ್‌ ಗೊಬ್ಬರವನ್ನು ತಾವೇ ತಯಾರಿಸಿಕೊಳ್ಳುತ್ತಾರೆ

Advertisement

ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಅವರ ತೋಟದಲ್ಲಿ ಬೆಳೆದಿರುವ ಬೆಳೆಗಳನ್ನು ನೋಡುವುದೇ ಒಂದು ಖುಷಿಯ ಅನುಭವ. ಪಾಂಡವಪುರ ತಾಲೂಕಿನ ಚಿನುಕುರಳಿಯಲ್ಲಿ ಅವರಿಗೆ 15 ಎಕರೆ ಕೃಷಿ ಭೂಮಿಯಿದೆ. ಅಲ್ಲಿ 3,500 ಬಾಳೆ ಗಿಡಗಳು, 2,500 ಅಡಿಕೆ, 250 ತೆಂಗು ಬೆಳೆ ಇದೆ. ಎಸ್‌ಟಿಜೆ ಇಂಟರ್‌ನ್ಯಾಷನಲ್‌ ಶಾಲಾ ಆವರಣದ ಸುತ್ತ ಇರುವ 10 ಎಕರೆ ಪ್ರದೇಶದಲ್ಲಿ 3,500 ಅಡಿಕೆ, 200 ತೆಂಗು ಬೆಳೆ ಜೊತೆಗೆ ಕಾಫೀ ಹಾಗೂ ಕಾಳು ಮೆಣಸನ್ನು ಬೆಳೆಯುತ್ತಿದ್ದಾರೆ. 

ಇದಕ್ಕೆಲ್ಲಾ ಕಾರಣ ಇಸ್ರೇಲ್‌ ತಂತ್ರಜ್ಞಾನ.

ಹೌದು, ಸಣ್ಣ ನೀರಾವರಿ ಸಚಿವರಿಗೆ ನೀರಿನ ದೊಡ್ಡ”ವರಿ’ಗಳಿಲ್ಲ.  ಹಿಂದೆ ಐದು ಕೊಳವೆ ಬಾವಿಗಳು ಚಾಲನೆಯಾಗುತ್ತಿದ್ದವು. ಈಗ ಕೇವಲ ಎರಡು ಬೋರ್‌ವೆಲ್‌ಗ‌ಳನ್ನಷ್ಟೇ ಬಳಸಿ ಅಷ್ಟೂ ಜಮೀನಿಗೆ ನೀರು ಉಣಿಸುತ್ತಿದ್ದಾರೆ. ದಿನಕ್ಕೆ ಮೂರು ಗಂಟೆಗಳ ಕಾಲ ನೀರು ಹರಿಸಿದರೆ ಸಾಕು; ಇಡೀ ತೋಟದಲ್ಲಿರುವ ಬೆಳೆಗಳು ನಳನಳಿಸುತ್ತವೆ.

ಇಸ್ರೇಲ್‌ ಮಾದರಿ ಹನಿ ನೀರಾವರಿ:
ಪ್ರತಿ ಬೆಳೆಯ ಬುಡದಲ್ಲಿ ಎರಡು ಅಡಿ ಆಳಕ್ಕೆ ಪೈಪ್‌ ಅಳವಡಿಸಿ ನೀರು ಸೇರುವಂತೆ ಮಾಡುವುದೇ ಇಸ್ರೇಲ್‌ ಮಾದರಿ ಹನಿ ನೀರಾವರಿ.  ಪುಟ್ಟರಾಜು ಅವರ ತೋಟದಲ್ಲಿ ಕೊಳವೆ ಬಾವಿ ಬಳಿಯಿಂದ ಕೇಬಲ್‌ ಮಾದರಿಯ ರಬ್ಬರ್‌ ಪೈಪುಗಳನ್ನು ಬೆಳೆಯ ಪ್ರತಿ ಸಾಲುಗಳಲ್ಲೂ ಎಳೆಯಲಾಗಿದೆ. ಪ್ರತಿ ಬೆಳೆಯ ಬುಡದ ಬಳಿ ಪೈಪ್‌ನಲ್ಲಿ (ಪಂಚಿಂಗ್‌) ರಂಧ್ರ ಮಾಡಿ ಎರಡು ಅಡಿ ಆಳಕ್ಕೆ ಲಿಂಕ್‌ ಪೈಪ್‌ ಜೋಡಿಸಿರುವುದರಿಂದ ಬುಡಕ್ಕೆ ನೀರು ಸೇರುವಂತಾಗಿದೆ. ಇದರಿಂದ ಜಮೀನುಗಳ ಮೇಲೆ ನೀರು ನಿಲ್ಲುವುದೂ ಇಲ್ಲ. ಒಳಗೆ ತೇವಾಂಶವಿರುವ ಕಾರಣ ಭೂಮಿ ಸದಾ ಕಾಲ ತಂಪಾಗಿರುತ್ತದೆ. ಬೆಳೆಗಳಿಗೆ ಎಷ್ಟು ಪ್ರಮಾಣದಲ್ಲಿ ನೀರಿನ ಅವಶ್ಯಕತೆ ಇದೆಯೋ ಅಷ್ಟನ್ನೇ ಹರಿಸುವುದರಿಂದ ನೀರು ಪೋಲಾಗುವುದಕ್ಕೆ ಇಲ್ಲಿ ಅವಕಾಶವೇ ಇಲ್ಲದಂತಾಗಿದೆ.  ಭೂಮಿಯನ್ನು ಉಳುಮೆ ಮಾಡುವ ಸಮಯದಲ್ಲೂ ಎಲ್ಲಾ ಕೇಬಲ್‌ ಮಾದರಿಯ ರಬ್ಬರ್‌ ಪೈಪುಗಳನ್ನು ಎತ್ತಿ ಪಕ್ಕಕ್ಕೆ ಇಡಬಹುದು.  ನಂತರ ಮತ್ತೆ ಅವುಗಳನ್ನು ಯಥಾಸ್ಥಿತಿಗೆ ತರಬಹುದು. 

Advertisement

ಇವರ ತೋಟದಲ್ಲಿ  ವರ್ಷದ ಹಿಂದೆ ನೀರಿಲ್ಲದೆ ಸೊರಗಿದ್ದ ತೆಂಗು, ಬಾಳೆ, ಅಡಿಕೆ ಇದೀಗ ಫ‌ಸಲನ್ನು ಒಡಲಿನಲ್ಲಿ ತುಂಬಿಕೊಂಡಿವೆ. ಖರ್ಚು ಮಾಡಿದ್ದಕ್ಕಿಂತಲೂ ಹೆಚ್ಚಿನ ಆದಾಯ ಎಲ್ಲಾ ಬೆಳೆಗಳಿಂದಲೂ ಬರುತ್ತಿರುವುದನ್ನು ಕಂಡು ಅವರು ಖುಷಿಯಾಗಿದ್ದಾರೆ. ಇಸ್ರೇಲ್‌ ಮಾದರಿ ಅಳವಡಿಕೆಗೆ ಪುಟ್ಟರಾಜು ಅವರಿಗೆ 3 ರಿಂದ 4 ಲಕ್ಷ ರೂ. ಖರ್ಚಾಗಿದೆ. ಇದನ್ನು ಎಲ್ಲಾ ರೈತರಿಗೆ ಪರಿಚಯಿಸುವ ದೃಷ್ಟಿಯಿಂದ ಮೊದಲು ತಮ್ಮ ತೋಟದಲ್ಲಿ ಅಳವಡಿಸಿಕೊಂಡು ಪ್ರಯೋಗಕ್ಕೆ ಮುಂದಾಗಿದ್ದಾರೆ. ಹನಿ ನೀರಾವರಿ ವ್ಯವಸ್ಥೆಗೆ ರೈತರಿಗೆ ಸಹಾಯಧನ ಸೌಲಭ್ಯವಿದೆ.  ಅದರ ಪ್ರಯೋಜನ ಪಡೆದುಕೊಂಡು, ಕೃಷಿಯಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿಕೊಂಡಲ್ಲಿ ಪೋಲಾಗುತ್ತಿರುವ ನೀರನ್ನು ಉಳಿಸಿಕೊಳ್ಳಬಹುದು. ಭತ್ತ, ಕಬ್ಬು ಬೆಳೆಯುವ ಜಾಗದಲ್ಲಿ ಬಹು ಬೆಳೆಗಳನ್ನು ಬೆಳೆದು ಆರ್ಥಿಕ ಸದೃಢತೆಯನ್ನು ಸಾಧಿಸಲು ಸಾಧ್ಯವಿದೆ. 

ಸಿ.ಎಸ್‌.ಪುಟ್ಟರಾಜು ಅವರ ತೋಟದೊಳಗೆ ಅವರ ತಂದೆ ಕಟ್ಟಿಸಿದ ತೆರೆದ ಬಾವಿಯೂ ಇದೆ. ಸಚಿವರು ಅದರ ಸ್ವತ್ಛತೆಗೂ ವಿಶೇಷ ಕಾಳಜಿ ವಹಿಸಿ, ಪಾಳು ಬೀಳದಂತೆ ನೋಡಿಕೊಂಡಿದ್ದಾರೆ. 

– ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next