ನಿರ್ದೇಶಕ ಪುಟ್ಟಣ್ಣ ಕಣಗಾಲ್ ಕನ್ನಡ ಚಿತ್ರರಂಗ ಕಂಡ ಅತ್ಯಂತ ಯಶಸ್ವಿ ನಿರ್ದೇಶಕರು. ಎಲ್ಲರಿಗೂ ಅವರ ಸಿನಿಮಾಗಳ ಬಗ್ಗೆ ಗೊತ್ತು. ಆದರೆ, ಅವರ ಬಗ್ಗೆ ಎಷ್ಟು ಗೊತ್ತು? ಅಂತಹ ವಿಚಾರಧಾರೆಗಳನ್ನೊಳಗೊಂಡ ಸಿನಿಮಾವೊಂದು ತೆರೆಯ ಮೇಲೆ ಬರಲು ಸಿದ್ಧತೆ ನಡೆಯುತ್ತಿದೆ. ಹೌದು, ಪ್ರಸನ್ನಶೆಟ್ಟಿ ಅಂಥದ್ದೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಪುಟ್ಟಣ್ಣ ಕಣಗಾಲ್ ಅವರ ಜೀವನ ಚರಿತ್ರೆಯನ್ನು ಸಿನಿಮಾದೊಳಗೆ ಸೆರೆಹಿಡಿದು ಅದನ್ನು ತೋರಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಪ್ರಸನ್ನ ಶೆಟ್ಟಿ. ಈಗಾಗಲೇ ಪುಟ್ಟಣ್ಣ ಕಣಗಾಲ್ ಅವರ ಕುಟುಂಬದಿಂದ ಅನುಮತಿ ಪಡೆದಿದ್ದು, ಚಿತ್ರ ಮಾಡಲು ಒಪ್ಪಿಗೆಯೂ ಸಿಕ್ಕಿದೆ ಎಂಬುದು ನಿರ್ದೇಶಕ ಪ್ರಸನ್ನ ಶೆಟ್ಟಿ ಅವರ ಮಾತು.
ಪುಟ್ಟಣ್ಣ ಕಣಗಾಲ್ ಕುರಿತು ಮಾಡುತ್ತಿರುವ ಚಿತ್ರಕ್ಕೆ “ಚಿತ್ರ ಬ್ರಹ್ಮ’ ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರಕ್ಕಾಗಿ ಕಳೆದ ಎರಡು ವರ್ಷಗಳಿಂದಲೂ ಪುಟ್ಟಣ್ಣ ಕಣಗಾಲ್ ಅವರ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಲಾಗಿದೆ. ಪುಟ್ಟಣ್ಣ ಅವರ ಈ ಹುಟ್ಟುಹಬ್ಬಕ್ಕೆ ಫಸ್ಟ್‌ಲುಕ್ ಬಿಡುಗಡೆ ಮಾಡುವ ಯೋಚನೆ ಇತ್ತು. ಆದರೆ, ಆಗಲಿಲ್ಲ. ಮುಂದಿನ ಹುಟ್ಟಹಬ್ಬದ ದಿನ “ಚಿತ್ರಬ್ರಹ್ಮ’ ಚಿತ್ರದ ಫಸ್ಟ್‌ಲುಕ್ ಬಿಡುಗಡೆ ಮಾಡಲಾಗುವುದು.
ಅಂದು ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ವಿವರ ಕೊಡುತ್ತಾರೆ ಪ್ರಸನ್ನ ಶೆಟ್ಟಿ. ಪುಟ್ಟಣ್ಣ ಕಣಗಾಲ್ ಕುರಿತು ಸಿನಿಮಾ ಮಾಡುತ್ತಿರುವುದರಿಂದ ಸಾಕಷ್ಟು ವಿಷಯ ಕಲೆ ಹಾಕಲಾಗಿದೆ. ಅವರ ಚಿತ್ರಗಳಲ್ಲಿ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರು ಸೇರಿದಂತೆ ಅವರ ಆಪ್ತರ ಬಳಿ ಚರ್ಚಿಸಿ ಮಾಹಿತಿ ಪಡೆಯಲಾಗಿದೆ. ಬಹಳಷ್ಟು ಮಂದಿಗೆ ಪುಟ್ಟಣ್ಣ ಕಣಗಾಲ್ ಅವರ ಯಶಸ್ವಿ ಸಿನಿಮಾಗಳಷ್ಟೇ ಗೊತ್ತು.
ಆದರೆ, ಅವರ ತೆರೆಯ ಹಿಂದಿನ ಕಥೆ ಬಗ್ಗೆ ಯಾರಿಗೂ ಅಷ್ಟಾಗಿ ತಿಳಿದಿಲ್ಲ. ಅದು ಈ ಚಿತ್ರದ ಮೂಲಕ ಹೇಳಲಾಗುತ್ತಿದೆ. ಅವರು ತೆರೆಯ ಹಿಂದೆ ಹೇಗಿರುತ್ತಿದ್ದರು. ಅವರ ಕೆಲಸ ಹೇಗಿತ್ತು. ಹೇಗೆಲ್ಲಾ ಸಿನಿಮಾ ಮಾಡಲು ಯೋಚನೆ ಮಾಡುತ್ತಿದ್ದರು. ಎಷ್ಟೆಲ್ಲಾ ಹೊಸ ಯೋಜನೆಗಳನ್ನು ತಂದರು ಎಂಬ ಬಗ್ಗೆ ಚಿತ್ರದಲ್ಲಿ ಹೇಳಲಾಗುತ್ತದೆ.
ಅವರ ಹುಟ್ಟೂರಿನಿಂದ ಶುರುವಾಗುವ ಚಿತ್ರೀಕರಣ, ಅವರು ಬದುಕಿದ ಕೊನೆಯ ಕ್ಷಣದವರೆಗೂ ಸಾಗಲಿದೆ. ಅವರು ಯಶಸ್ಸಿನಲ್ಲಿದ್ದಾಗ ಹೇಗಿದ್ದರು. ಆ ನಂತರ ಅವರ ಜೀವನ ಹೇಗಿತ್ತು ಎಂಬ ಅಪರೂಪದ ಸಂಗತಿಗಳು ಚಿತ್ರದಲ್ಲಿರಲಿವೆ. ಇನ್ನು ಮುಖ್ಯವಾಗಿ ಅವರು ತಮ್ಮ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ವಿಷ್ಣುವರ್ಧನ್, ಅಂಬರೀಷ್, ಶ್ರೀನಾಥ್ ಸೇರಿದಂತೆ ಇತರೆ ನಟ,ನಟಿಯರ ಪಾತ್ರಗಳೆಲ್ಲವೂ ಬರಲಿವೆ.
ಆ ಪಾತ್ರಗಳನ್ನು ಇಂದಿನ ಸೆಲೆಬ್ರೆಟಿಗಳ ಮೂಲಕ ತೋರಿಸುವ ಆಲೋಚನೆಯೂ ಇದೆ. ಡಿಸೆಂಬರ್, 1, 2018 ರಂದು “ಚಿತ್ರ ಬ್ರಹ್ಮ’ದಲ್ಲಿ ಯಾರ್ಯಾರು ಇರುತ್ತಾರೆ, ಏನೆಲ್ಲಾ ಇರುತ್ತೆ ಎಂಬ ಮಾಹಿತಿ ಸಿಗಲಿದೆ. ಒಳ್ಳೆಯ ಕಂಪೆನಿಯೊಂದು ಈ ಚಿತ್ರ ನಿರ್ಮಾಣಕ್ಕೆ ಮುಂದಾಗಿದೆ. ಮುಖ್ಯ ಪಾತ್ರಗಳನ್ನು ಸ್ಟಾರ್‌ನಟರಿಂದಲೇ ಮಾಡಿಸುವ ಉದ್ದೇಶವಿದೆ. ಆ ಕುರಿತು ಮಾತುಕತೆ ನಡೆಯುತ್ತಿದೆ. ಎಲ್ಲವೂ ಮುಂದಿನ ಡಿಸೆಂಬರ್ 1 ರಂದು ತಿಳಿಯಲಿದೆ ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ ನಿರ್ದೇಶಕ ಪ್ರಸನ್ನ ಶೆಟ್ಟಿ.