Advertisement

ಪುಟ್ಟಣ್ಣ: ಕನ್ನಡ ನಿರ್ದೇಶಕರ ದೊಡ್ಡಣ್ಣ

01:47 PM Jun 05, 2018 | |

33 ವರ್ಷಗಳಾಗಿ ಹೋದವು ಪುಟ್ಟಣ್ಣ ಕಣಗಾಲ್‌ ಚಿತ್ರರಸಿಕರನ್ನು ಅಗಲಿ. 1985ರ ಜೂನ್‌ ಐದರಂದು ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಅಲ್ಲಿಂದ ಈ ಜೂನ್‌ಗೆ ಸರಿಯಾಗಿ 33 ವರ್ಷಗಳು. ಈ ಮೂವತ್ತೆರೆಡು ವರ್ಷಗಳಲ್ಲಿ ಪುಟ್ಟಣ್ಣ ಅವರನ್ನು ಕನ್ನಡಿಗರು ಅದೆಷ್ಟು ಬಾರಿ ನೆನಪಿಸಿಕೊಂಡಿದ್ದಾರೋ ಗೊತ್ತಿಲ್ಲ.

Advertisement

ಚಿತ್ರರಂಗದ ವಿಷಯದಲ್ಲಿ ಹೇಳುವುದಾದರೆ, ಕನ್ನಡ ಚಿತ್ರರಂಗವಿರುವವರೆಗೂ ಪುಟ್ಟಣ್ಣನವರ ಹೆಸರಿರುವಷ್ಟು ಛಾಪನ್ನು ಅವರು ಒತ್ತಿಹೋಗಿದ್ದಾರೆ. ಇನ್ನು ಪ್ರೇಕ್ಷಕರಿಗೂ ಅಷ್ಟೇ. ಪುಟ್ಟಣ್ಣ ಕಣಗಾಲ್‌ ಅವರು ನಿರ್ದೇಶಿಸಿರುವ ಚಿತ್ರಗಳ, ತೆರೆಗೆ ತಂದ ಪಾತ್ರಗಳ, ಬೆಳಕಿಗೆ ತಂದ ಕಲಾವಿದರ, ಇಂದಿಗೂ ಜನಪ್ರಿಯವಾಗಿರುವ ಹಾಡುಗಳ ಬಗ್ಗೆ ಯಾವಾಗಲೂ ಮೆಲುಕು ಹಾಕುತ್ತಲೇ ಇರುತ್ತಾರೆ.

ಹೀಗೆ ಎಲ್ಲರ ಮನಸ್ಸಿನಲ್ಲಿ ಸದಾ ಹಸಿರಾಗಿರುವ ಪುಟ್ಟಣ್ಣ ಅವರನ್ನು ಕುರಿತು ಬರೆಯುವುದೇನು, ತಿಳಿಸುವುದೇನು ಎಂದು ಹುಡುಕಹೊರಟರೆ ಲೆಕ್ಕವಿಲ್ಲದಷ್ಟು ವಿಷಯ ಸಿಗುತ್ತವೆ. ದಿಗ್ಗಜ ನಿರ್ದೇಶಕ ಬಿ.ಆರ್‌. ಪಂತುಲು ಅವರ ಚಿತ್ರಗಳಲ್ಲಿ ಸಹಾಯಕನಾಗಿ ವೃತ್ತಿ ಜೀವನ ಶುರು ಮಾಡಿ, ಆ ನಂತರ ತಾವೇ ನಿರ್ದೇಶಕರಾಗಿ ಅವರು ಬೆಳೆದು ಬಂದ ರೀತಿ, ಆ ನಂತರ ಅವರ ಕಷ್ಟ-ಸುಖದ, ಸಾಧನೆ, ವೇದನೆ ಮತ್ತು ವಿವಾದದ ಜೀವನದ ಬಗ್ಗೆ ಸಾಕಷ್ಟು ಬರೆಯಬಹುದು.

ಆದರೆ, ಅದೆಲ್ಲಕ್ಕಿಂತ ಪ್ರಮುಖವಾಗಿ ಎದ್ದು ನಿಲ್ಲಬೇಕಾಗಿರುವುದು ಪುಟ್ಟಣ್ಣನವರ ಚಿತ್ರಗಳು ಹಾಗೂ ಸಾಧನೆಗಳು. ಹಾಗಾಗಿ ಈ ಲೇಖನದಲ್ಲಿ ಮಿಕ್ಕೆಲ್ಲಾ ವಿಷಯಗಳಿಗಿಂತ, ಪುಟ್ಟಣ್ಣನವರು ನಿರ್ದೇಶಿಸಿದ ಚಿತ್ರಗಳು, ಪರಿಚಯಿಸಿದ ಕಲಾವಿದರು ಮತ್ತು ಅದೆಲ್ಲಕ್ಕಿಂತ ಹೆಚ್ಚಾಗಿ ಅವರ ಚಿತ್ರಗಳಲ್ಲಿನ ಅಮರ ಹಾಡುಗಳ ಬಗ್ಗೆ ಗಮನಹರಿಸಲಾಗಿದೆ.

ನಿರ್ದೇಶಿಸಿದ್ದು 24 ಚಿತ್ರಗಳಲ್ಲ; 37 ಚಿತ್ರಗಳು: ಪುಟ್ಟಣ್ಣನವರು ತಮ್ಮ ಜೀವಿತಾವಧಿಯಲ್ಲಿ 24 ಚಿತ್ರಗಳನ್ನು ನಿರ್ದೇಶಿಸಿದ್ದಾರೆ ಎಂಬ ಮಾತಿದೆ. ಆದರೆ, ಅವರು ತಮ್ಮ ಎರಡು ದಶಕಗಳ ನಿರ್ದೇಶನದ ಜೀವದಲ್ಲಿ ನಿರ್ದೇಶಿಸಿದ್ದು ಒಟ್ಟು 37 ಚಿತ್ರಗಳು ಎಂದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಈ ಪೈಕಿ ಕನ್ನಡದಲ್ಲಿ 24 ಚಿತ್ರಗಳನ್ನು ನಿರ್ದೇಶಿಸಿದರೆ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂನಲ್ಲಿ ಒಟ್ಟು 13 ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಪಂಚಭಾಷಾ ನಿರ್ದೇಶಕರಾಗಿದ್ದಾರೆ.

Advertisement

ಕನ್ನಡದಲ್ಲಿ ಪುಟ್ಟಣ್ಣನವರ ನಿರ್ದೇಶನದ ಮೊದಲ ಚಿತ್ರ “ಬೆಳ್ಳಿ ಮೋಡ’ 1967ರಲ್ಲಿ ಬಿಡುಗಡೆಯಾದರೂ, ಅದಕ್ಕಿಂತ ಮೂರು ವರ್ಷಗಳ ಮುಂಚೆಯೇ ಅವರು ಮಲಯಾಳಂನಲ್ಲಿ “ಸ್ಕೂಲ್‌ ಮಾಸ್ಟರ್‌’ ಚಿತ್ರವನ್ನು ನಿರ್ದೇಶಿಸಿದ್ದರು. ಆ ನಂತರ ಕನ್ನಡಕ್ಕೆ ವಾಪಸ್ಸಾಗಿ, ಕಲ್ಪನಾ ಅಭಿನಯದ “ಬೆಳ್ಳಿ ಮೋಡ’ ಚಿತ್ರವನ್ನು ನಿರ್ದೇಶಿಸಿದರು. ಈ ಚಿತ್ರ 1967ರಲ್ಲಿ ಬಿಡುಗಡೆಯಾಯಿತು.

ಮರು ವರ್ಷ “ಸಾವಿರ ಮೆಟ್ಟಿಲು’ ಚಿತ್ರವನ್ನು ನಿರ್ದೇಶಿಸಿದರೂ, ಆ ಚಿತ್ರ ಕಾರಣಾಂತರಗಳಿಂದ ನಿಂತು, 30 ವರ್ಷಗಳ ನಂತರ ಬಿಡುಗಡೆಯಾಯಿತು. ಮತ್ತೆ 1969ರಲ್ಲಿ “ಮಲ್ಲಮ್ಮನ ಪವಾಡ’ ಚಿತ್ರದಿಂದ ಶುರುವಾದ ಅವರ ಪ್ರಯಾಣ, 1985ರಲ್ಲಿ ಬಿಡುಗಡೆಯಾದ “ಮಸಣದ ಹೂ’ ಚಿತ್ರದವರೆಗೂ ಮುಂದುವರೆಯಿತು. ಈ ಮಧ್ಯೆ, “ಕಪ್ಪು ಬಿಳುಪು’, “ಗೆಜ್ಜೆ ಪೂಜೆ’, “ಕರುಳಿನ ಕರೆ’, “ಶರಪಂಜರ’,

“ಸಾಕ್ಷಾತ್ಕಾರ’, “ನಾಗರಹಾವು’ “ಎಡಕಲ್ಲು ಗುಡ್ಡದ ಮೇಲೆ’, “ಉಪಾಸನೆ’, “ಶುಭಮಂಗಳ’, “ಬಿಳೀ ಹೆಂಡ್ತಿ’, “ಕಥಾ ಸಂಗಮ’, “ಕಾಲೇಜು ರಂಗ’, “ಫ‌ಲಿತಾಂಶ’, “ಪಡುವಾರಳ್ಳಿ ಪಾಂಡವರು’, “ಧರ್ಮಸೆರೆ’, “ರಂಗನಾಯಕಿ’, “ಮಾನಸ ಸರೋವರ’, “ಧರಣಿ ಮಂಡಲ ಮಧ್ಯದೊಳಗೆ’, “ಅಮೃತ ಘಳಿಗೆ’ ಮತ್ತು “ಋಣ ಮುಕ್ತಳು’ ಚಿತ್ರಗಳು ಅವರ ನಿರ್ದೇಶನದಿಂದ ಹೊರಬಂದಿವೆ.

ಇನ್ನು ಮಲಯಾಳಂನಲ್ಲಿ “ಸ್ಕೂಲ್‌ ಮಾಸ್ಟರ್‌’, “ಕಳಂಜು ಕಿಟ್ಯ ತಂಗಂ’, “ಚೇಟತ್ತಿ’, “ಪೂಚಿಕಣ್ಣಿ’, “ಮೇಯರ್‌ ನಾಯರ್‌’, “ಸ್ವಪ್ನಭೂಮಿ’ ಚಿತ್ರಗಳನ್ನು ನಿರ್ದೇಶಿಸಿದರೆ, ತೆಲುಗು ಮತ್ತು ತಮಿಳಿನಲ್ಲಿ ತಲಾ ಮೂರೂರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ತೆಲುಗಿನಲ್ಲಿ “ಪಕ್ಕಲೋಬಲ್ಲೆಂ’, “ಪಾಲ ಮನಸಲು’, “ಇದ್ದರು ಅಮ್ಮಾಯಿಲು’ ಚಿತ್ರಗಳಾದರೆ, ತಮಿಳಿನಲ್ಲಿ “ಟೀಚರಮ್ಮ’, ಜೆಮಿನಿ ಗಣೇಶನ್‌ ಅಭಿನಯದ “ಸುಡುರುಂ ಸುರಾವಳಿಯುಂ’, “ಇರುಳುಂ ವಳಿಯುಂ’ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕನ್ನಡದಲ್ಲಿ ತಾವೇ ನಿರ್ದೇಶಿಸಿದ “ನಾಗರಹಾವು’ ಚಿತ್ರವನ್ನು ಹಿಂದಿಯಲ್ಲಿ “ಝಹ್ರೀಲಾ ಇನ್ಸಾನ್‌’ ಹೆಸರಿನಲ್ಲಿ ನಿರ್ದೇಶಿಸಿದ್ದಾರೆ.

ನಿರ್ದೇಶಿಸಿದ್ದು ಬಹುಪಾಲು ಸಾಹಿತ್ಯಾಧರಿತ ಚಿತ್ರಗಳು: ಕನ್ನಡದಲ್ಲಿ ಇದುವರೆಗೂ ಅತೀ ಹೆಚ್ಚು ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶಿಸಿದ್ದು ಯಾರು ಎಂದರೆ, ಮೊದಲು ಬರುವ ಹೆಸರು ಪುಟ್ಟಣ್ಣ ಕಣಗಾಲ್‌. ಅವರು ಕನ್ನಡದಲ್ಲಿ ನಿರ್ದೇಶಿಸಿರುವ 24 ಚಿತ್ರಗಳ ಪೈಕಿ 18 ಚಿತ್ರಗಳು ಸಣ್ಣ ಕಥೆ ಮತ್ತು ಕಾದಂಬರಿ ಆಧಾರಿತ ಚಿತ್ರಗಳೆಂಬುದು ಗಮನಾರ್ಹ. ಅವರು ಕನ್ನಡದಲ್ಲಿ ನಿರ್ದೇಶಿಸಿದ ಮೊದಲ ಚಿತ್ರ “ಬೆಳ್ಳಿ ಮೋಡ’ವೂ ಕಾದಂಬರಿಯಾಧಾರಿತ ಚಿತ್ರ. ಕೊನೆಯ ಚಿತ್ರ “ಮಸಣದ ಹೂ’ ಸಹ ಕಾದಂಬರಿ ಆಧಾರಿತ ಚಿತ್ರವಾಗಿತ್ತು. ಈ ಮಧ್ಯೆ ಅವರ ಯಾವೆಲ್ಲಾ ಚಿತ್ರಗಳು ಕಾದಂಬರಿ ಆಧಾರಿತ ಚಿತ್ರಗಳಾಗಿದ್ದವು ಎಂಬುದನ್ನು ನೋಡಿಕೊಂಡು ಬರೋಣ ಬನ್ನಿ.

* ಬೆಳ್ಳಿ ಮೋಡ – ತ್ರಿವೇಣಿ ಅವರ “ಬೆಳ್ಳಿ ಮೋಡ’ ಕಾದಂಬರಿ
* ಮಲ್ಲಮ್ಮನ ಪವಾಡ – ಬಿ. ಪುಟ್ಟಸ್ವಾಮಯ್ಯನವರ “ಮಲ್ಲಮ್ಮನ ಪವಾಡ’ ಕಾದಂಬರಿ
* ಕಪ್ಪು ಬಿಳುಪು – ಆರ್ಯಾಂಭ ಪಟ್ಟಾಭಿ ಅವರ “ಕಪ್ಪು ಬಿಳುಪು’ ಕಾದಂಬರಿ
* ಗೆಜ್ಜೆ ಪೂಜೆ – ಎಂ.ಕೆ. ಇಂದಿರಾ ಅವರ “ಗೆಜ್ಜೆ ಪೂಜೆ’ ಕಾದಂಬರಿ
* ಶರಪಂಜರ – ತ್ರಿವೇಣಿ ಅವರ “ಶರಪಂಜರ’ ಕಾದಂಬರಿ
* ನಾಗರಹಾವು – ತ.ರಾ. ಸುಬ್ಬರಾವ್‌ ಅವರ “ಸರ್ಪ ಮತ್ಸರ’, “ಎರಡು ಹೆಣ್ಣು ಒಂದು ಗಂಡು’ ಮತ್ತು “ನಾಗರಹಾವು’ ಕಾದಂಬರಿಗಳು
* ಎಡಕಲ್ಲು ಗುಡ್ಡದ ಮೇಲೆ – ಭಾರತೀಸುತ ಅವರ “ಎಡಕಲ್ಲು ಗುಡ್ಡದ ಮೇಲೆ’ ಕಾದಂಬರಿ
* ಉಪಾಸನೆ – ದೇವಕೀ ಮೂರ್ತಿ ಅವರ “ಉಪಾಸನೆ’ ಕಾದಂಬರಿ
* ಶುಭಮಂಗಳ – ವಾಣಿ ಅವರ ಅದೇ ಹೆಸರಿನ ಕಾದಂಬರಿ
* ಬಿಳೀ ಹೆಂಡ್ತಿ – ಮ.ನ. ಮೂರ್ತಿ ಅವರ ಅದೇ ಹೆಸರಿನ ಕಾದಂಬರಿ
* ಕಥಾ ಸಂಗಮ – ಡಾ. ವೀಣಾ ಶಾಂತೇಶ್ವರ ಅವರ “ಅತಿಥಿ’, ಈಶ್ವರಚಂದ್ರ ಅವರ “ಮುನಿತಾಯಿ’ ಮತ್ತು ಡಾ ಗಿರಡ್ಡಿ ಗೋವಿಂದರಾಜು ಅವರ “ಹಂಗು’ * ಎಂಬ ಮೂರು ಸಣ್ಣ ಕಥೆಗಳನ್ನು ಸೇರಿಸಿ ಮಾಡಿದ ಚಿತ್ರಗಳು
* ಕಾಲೇಜು ರಂಗ – ಬಿ.ಜಿ.ಎಲ್‌. ಸ್ವಾಮಿ ಅವರ “ಕಾಲೇಜು ರಂಗ’ ಕಾದಂಬರಿ
* ಫ‌ಲಿತಾಂಶ – ಶ್ರೀನಿವಾಸ ಕುಲಕರ್ಣಿ ಅವರ “ಫ‌ಲಿತಾಂಶ’ ಎಂಬ ಸಣ್ಣ ಕಥೆ
* ಧರ್ಮಸೆರೆ – ಜಡಭರತ ಅವರ “ಧರ್ಮಸೆರೆ’ ಕಾದಂಬರಿ
* ರಂಗನಾಯಕಿ – ಅಶ್ವತ್ಥ ಅವರ “ರಂಗನಾಯಕಿ’ ಕಾದಂಬರಿ
* ಅಮೃತ ಘಳಿಗೆ –  ಡಾ. ದೊಡ್ಡೇರಿ ವೆಂಕಟರಾವ್‌ ಅವರ “ಅವಧಾನ’ ಕಾದಂಬರಿ
* ಋಣಮುಕ್ತಳು – ಡಾ. ಅನುಪಮಾ ನಿರಂಜನ ಅವರ “ಋಣ’ ಕಾದಂಬರಿ
* ಮಸಣದ ಹೂವು – ತ.ರಾ.ಸು ಅವರ ಅದೇ ಹೆಸರಿನ ಕಾದಂಬರಿ

ಪುಟ್ಟಣ್ಣನವರಿಂದ ಪರಿಚಯಿಸಲ್ಪಟ್ಟ ಕಲಾವಿದರು: ವಜ್ರಮುನಿ (ಸಾವಿರ ಮೆಟ್ಟಿಲು), ಆರತಿ (ಗೆಜ್ಜೆ ಪೂಜೆ), ಸುಂದರಕೃಷ್ಣ ಅರಸ್‌ (ಗೆಜ್ಜೆ ಪೂಜೆ), ಅಂಬರೀಶ್‌ (ನಾಗರಹಾವು), ಧೀರೇಂದ್ರ ಗೋಪಾಲ್‌ (ನಾಗರಹಾವು), ಸೀತಾರಾಂ (ಉಪಾಸನೆ), ರಜನಿಕಾಂತ್‌ (ಕಥಾ ಸಂಗಮ – ಮುನಿತಾಯಿ), ಜೈಜಗದೀಶ್‌ (ಫ‌ಲಿತಾಂಶ), ಪದ್ಮಾ ವಾಸಂತಿ (ಮಾನಸ ಸರೋವರ), ಶ್ರೀಧರ್‌ (ಅಮೃತ ಘಳಿಗೆ) ಮತ್ತು ಅಪರ್ಣ (ಮಸಣದ ಹೂವು). ಇಷ್ಟೇ ಜನರಲ್ಲ, ಚಿತ್ರರಂಗಕ್ಕೆ ಮುಂಚೆಯೇ ಬಂದು, ಪುಟ್ಟಣ್ಣನವರಿಂದ ದೊಡ್ಡ ಹೆಸರು ಮಾಡಿದ ಇನ್ನೂ ಹಲವು ಕಲಾವಿದರಿದ್ದಾರೆ. ವಿಷ್ಣುವರ್ಧನ್‌, ರಾಮಕೃಷ್ಣ, ಶ್ರೀನಾಥ್‌, ಚಂದ್ರಶೇಖರ್‌, ಅಶೋಕ್‌ ಮುಂತಾದ ಹಲವು ಕಲಾವಿದರನ್ನು ಇಲ್ಲಿ ಹೆಸರಿಸಬಹುದು.

ಹಿಟ್ಸ್‌ ಆಫ್ ಪುಟ್ಟಣ್ಣ ಕಣಗಾಲ್‌: ಬಹುಶಃ ಕನ್ನಡ ಚಿತ್ರರಂಗದಲ್ಲಿ ಪುಟ್ಟಣ್ಣನವರಷ್ಟು ಸಾಹಿತ್ಯ, ಸಂಗೀತ ಮತ್ತು ಹಾಡುಗಳಿಗೆ ಪ್ರಾಮುಖ್ಯತೆ ಕೊಟ್ಟ ನಿರ್ದೇಶಕರು ವಿರಳ ಎಂದೇ ಹೇಳಬೇಕು. “ಬೆಳ್ಳಿ ಮೋಡ’ ಚಿತ್ರದಿಂದ “ಮಸಣದ ಹೂವು’ವರೆಗೂ ಪುಟ್ಟಣ್ಣ ನಿರ್ದೇಶಿಸಿದ ಹಲವು ಚಿತ್ರಗಳಲ್ಲಿ ಹಲವು ಜನಪ್ರಿಯ ಹಾಡುಗಳು ಇವೆ. ಜನಪ್ರಿಯ ಹಾಡುಗಳ ಸಂಖ್ಯೆಯೇ 50 ಮೀರುತ್ತವೆ. ಈ ಪೈಕಿ ಯಾವುದು ಒನ್‌, ಯಾವುದು ಟೆನ್‌ ಎಂದು ವಿಂಗಡಿಸುವುದು ಕಷ್ಟ. ಅದರ ಬದಲು ಪುಟ್ಟಣ್ಣನವರ ಚಿತ್ರಗಳಲ್ಲಿನ ಕೆಲವು ಪ್ರಮುಖ ಜನಪ್ರಿಯ ಹಾಡುಗಳನ್ನು ಇಲ್ಲಿ ನೀಡಲಾಗಿದೆ.

* ಮೂಡಲ ಮನೆಯ – ಬೆಳ್ಳಿ ಮೋಡ
* ಗಗನವು ಎಲ್ಲೋ – ಗೆಜ್ಜೆ ಪೂಜೆ
* ಪಂಚಮ ವೇದ – ಗೆಜ್ಜೆ ಪೂಜೆ
* ಕೊಡಗಿನ ಕಾವೇರಿ – ಶರಪಂಜರ
* ಹದಿನಾಲ್ಕು ವರ್ಷ ವನವಾಸದಿಂದ – ಶರಪಂಜರ
* ಉತ್ತರ ಧ್ರುವದಿಂ ದಕ್ಷಿಣ ಧ್ರುವಕು – ಶರಪಂಜರ
* ಒಲವೆ ಜೀವನ ಸಾಕ್ಷಾತ್ಕಾರ – ಸಾಕ್ಷಾತ್ಕಾರ
* ವಿರಹ ನೂರು ತರಹ – ಎಡಕಲ್ಲು ಗುಡ್ಡದ ಮೇಲೆ
* ನಿಲ್ಲು ನಿಲ್ಲೇ ಪತಂಗ – ಎಡಕಲ್ಲು ಗುಡ್ಡದ ಮೇಲೆ
* ಸಂಗಮ ಸಂಗಮ – ನಾಗರಹಾವು
* ಹಾವಿನ ದ್ವೇಷ – ನಾಗರಹಾವು
* ಭಾರತ ಭೂಶಿರ ಮಂದಿರ ಸುಂದರಿ – ಉಪಾಸನೆ
* ಕನ್ನಡ ನಾಡಿನ ರಸಿಕರ ಮನವ – ರಂಗನಾಯಕಿ
* ಮಂದಾರ ಪುಷ್ಪವು ನೀನು – ರಂಗನಾಯಕಿ
* ಶ್ರೀಮಾತಾ ಲೋಕಮಾತಾ – ರಂಗನಾಯಕಿ
* ರಂಗೇನಹಳ್ಳಿಯಾಗೆ – ಬಿಳಿ ಹೆಂಡ್ತಿ
* ಓ ದ್ಯಾವ್ರೇ – ಕಥಾ ಸಂಗಮ
* ನಾಕೊಂದ್ಲ ನಾಕು – ಶುಭ ಮಂಗಳ
* ಸ್ನೇಹದ ಕಡಲಲ್ಲಿ – ಶುಭ ಮಂಗಳ
* ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು – ಶುಭ ಮಂಗಳ
* ಜನ್ಮ ನೀಡಿದ ಭೂತಾಯಿಯ – ಪಡುವಾರಳ್ಳಿ ಪಾಂಡವರು
* ಈ ಸಂಭಾಷಣೆ – ಧರ್ಮಸೆರೆ
* ಮಾನಸ ಸರೋವರ – ಮಾನಸ ಸರೋವರ
* ಹಾಡು ಹಳೆಯದಾದರೇನು – ಮಾನಸ ಸರೋವರ
* ಚೆಂದ ಚೆಂದ ಗುಲಾಬಿ ತೋಟವೆ ಚೆಂದ – ಮಾನಸ ಸರೋವರ
* ಗೆಳತಿ ಓ ಗೆಳತಿ – ಧರಣಿ ಮಂಡಲ ಮಧ್ಯದೊಳಗೆ

Advertisement

Udayavani is now on Telegram. Click here to join our channel and stay updated with the latest news.

Next