Advertisement

ಹತ್ತೂರಲ್ಲಿ ಪುತ್ತೂರಿನ ಪುಟ್ಟಗೌರಿ ಮೋಡಿ !

10:59 AM Jun 03, 2017 | Harsha Rao |

ಮಂಗಳೂರು: ಒಂದು ವರ್ಷ 6 ತಿಂಗಳ ಈ ಪುಟ್ಟ ಕರು ಕಳೆದ ನಾಲ್ಕೈದು ದಿನಗಳಲ್ಲಿ ದೇಶ-ವಿದೇಶದ ಮೂಲೆ ಮೂಲೆಗೂ ಸುತ್ತಿ ಬಂದಿದೆ! ಸಾಮಾಜಿಕ ತಾಣದಲ್ಲಿ ಒಂದು ಲಕ್ಷಕ್ಕೂ ಮಿಕ್ಕಿ ಶೇರ್‌ ಆಗಿ, ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದೆ. ಅಷ್ಟಕ್ಕೂ ಸೆಲೆಬ್ರಿಟಿ ಪಟ್ಟಕ್ಕೇರಿರುವ ಈ ಕರು ಎಲ್ಲಿಯದು ಎಂಬುದು ಸದ್ಯದ ಕುತೂಹಲ.

Advertisement

ಈಕೆ ಹೆಸರು ಗೌರಿ. ಪುತ್ತೂರು ತಾಲೂಕಿನ ಉರಿಮಜಲೆಂಬ ಹಳ್ಳಿಯ ಪುಟ್ಟ ಹಟ್ಟಿಯಲ್ಲಿ ಆಕೆ ವಾಸ. ಹವ್ಯಾಸಿ ಛಾಯಾಗ್ರಾಹಕರಾಗಿರುವ ಎಸ್‌. ಜಿ. ದತ್ತ ಉರಿಮಜಲು ಅವರು ತನ್ನ ಮನೆಯ ಕರುವಿಗೆ ನಾಲ್ಕು ತಿಂಗಳಾಗಿರುವಾಗ ತೆಗೆದ ಫೋಟೋವಿದು. ಈಗಿದಕ್ಕೆ 1 ವರ್ಷ 6 ತಿಂಗಳಾಗಿವೆ. ಫೋಟೋ ಸೆರೆ ಹಿಡಿದದ್ದು ಕಳೆದ ವರ್ಷವಾದರೂ ಸಾಮಾಜಿಕ ತಾಣದಲ್ಲಿ ವೈರಲ್‌ ಆದದ್ದು ಕಳೆದ ನಾಲ್ಕೈದು ದಿನಗಳಿಂದ. ಕಾರಣ ಕೇಂದ್ರ ಸರಕಾರದ ಗೋವುಗಳ ಮಾರಾಟ ನಿಷೇಧ ಕಾಯ್ದೆ.

ದತ್ತ ಅವರು ಕಳೆದ ವರ್ಷವೇ ಈ ಕರುವಿನ ಫೋಟೋ ವನ್ನು ತನ್ನ ಫೇಸುºಕ್‌ ವಾಲ್‌ನಲ್ಲಿ ಹಾಕಿ ದ್ದರು. ಆಗಲೇ ಸುಮಾರು ಒಂದು ಸಾವಿರಕ್ಕೂ ಅಧಿಕ ಲೈಕ್ಸ್‌ ಮತ್ತು 30ರಷ್ಟು ಶೇರ್‌ ಆಗಿತ್ತು. ಆದರೆ ಗೋವು ಮಾರಾಟ ನಿಷೇಧ ಕಾಯ್ದೆಯಿಂದಾಗಿ ಒಂದು ವರ್ಷದ ಹಿಂದಿನ ಹಳೆಯ ಫೋಟೋ ಈಗ ದೇಶ-ವಿದೇಶದಲ್ಲಿಯೂ ಸುದ್ದಿ ಮಾಡುತ್ತಿದೆ ಎಂಬುದು ಸ್ವತಃ ದತ್ತ ಅವರಿಗೂ ಗೊತ್ತಿರಲಿಲ್ಲ. ಈಗಂತೂ ಕರು ಗೌರಿ ಭಾರತೀಯ ಗೋವು ಪ್ರಿಯರ ಪಾಲಿನ ಸೆಲೆಬ್ರಿಟಿ ಎನಿಸಿಕೊಂಡಿದೆ. ದೇಶ ಮಾತ್ರವಲ್ಲದೇ ವಿದೇಶದಲ್ಲಿರುವ ಭಾರತೀಯರ ವಾಟ್ಸಾಪ್‌, ಫೇಸುºಕ್‌ನಲ್ಲಿಯೂ ಇದರದ್ದೇ ಚಿತ್ರ ಹರಿದಾಡುತ್ತಿದ್ದು ಸುಮಾರು ಒಂದು ಲಕ್ಷಕ್ಕೂ ಮಿಕ್ಕಿ ಶೇರ್‌ ಆಗಿದೆ. 

ಶೇರ್‌ ಆಗುತ್ತಲೇ ಇದೆ !
ಕಳೆದ ಕೆಲವು ದಿನಗಳಿಂದ “ಈ ಗೋವಿನ ಚಿತ್ರವನ್ನು ವಾಟ್ಸಾಪ್‌ ಡಿಪಿ ಮಾಡಿಕೊಂಡು ಗೋಮಾತೆಯನ್ನು ಪ್ರೀತಿಸಿ’ ಎಂಬ ಒಕ್ಕಣೆ ಹೊತ್ತ ಸಾಲುಗಳೊಂದಿಗೆ ಈ ಕರುವಿನ ಚಿತ್ರ ಗ್ರೂಪ್‌ನಿಂದ ಗ್ರೂಪ್‌ಗ್ೂ ಶೇರ್‌ ಆಗುತ್ತಲೇ ಇದೆ. ಒಟ್ಟಿನಲ್ಲಿ ಹಳ್ಳಿಯ ಪುಟ್ಟ ಹಟ್ಟಿಯಲ್ಲಿ ಆಟವಾಡಿಕೊಂಡು ಇದ್ದ ಈ ಕರು ರಾತೋರಾತ್ರಿ ಫೇಮಸ್‌ ಆಗಿದೆ. ಆದರೆ ತಾನು ಇಷ್ಟೆಲ್ಲ ಜನರ ಗಮನ ಸೆಳೆದಿರುವುದು, ತನ್ನ ಚಿತ್ರ ವಿಶ್ವಾದ್ಯಂತ ಸುತ್ತುತ್ತಿರುವುದು ಈ ಮೂಕಪ್ರಾಣಿಗೆ ಮಾತ್ರ ಗೊತ್ತಿಲ್ಲ.

ಫೋಟೋ ತೆಗೆದವರು ಪುತ್ತೂರಿನವರು
ಎಸ್‌.ಜಿ. ದತ್ತ ಉರಿಮಜಲು (ಶಿವಗುರುದತ್ತ) ಅವರು ಮಾಜಿ ಶಾಸಕ, ಸಾಮಾ ಜಿಕ ಮುಖಂಡ ಉರಿಮಜಲು ರಾಮ್‌ ಭಟ್‌ ಅವರ ಸಂಬಂಧಿ. ರಾಮ್‌ ಭಟ್‌ ಅವರಿಗೆ ಮೊಮ್ಮಗ. ಎಂಬಿಎ ಪದವೀಧರರಾಗಿರುವ ಅವರು ನಾಲ್ಕು ವರ್ಷ ಗಳಿಂದ ಹವ್ಯಾಸಿ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದಾರೆ. ತಾನು ತೆಗೆದ ಕರುವಿನ ಚಿತ್ರ ವೈರಲ್‌ ಆಗಿರುವ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಅವರು, ಫೇಸುºಕ್‌ ಗೆಳೆಯರೊಬ್ಬರು ನನ್ನ ಅಕೌಂಟ್‌ನಿಂದ ತೆಗೆದು ಈ ಫೋಟೋವನ್ನು ಶೇರ್‌ ಮಾಡಿದ್ದಾರೆ. ಲಕ್ಷಕ್ಕೂ ಮಿಕ್ಕಿ ಶೇರ್‌ ಆಗಿದ್ದು, ನಮ್ಮ ದೇಶ ಮಾತ್ರವಲ್ಲ; ಅಬುಧಾಬಿ ಸೇರಿದಂತೆ ವಿದೇಶಗಳಿಂದಲೂ ಕರೆ, ಸಂದೇಶಗಳು ಬರುತ್ತಿವೆ. ಈ ಫೋಟೋ ಇಷ್ಟೆಲ್ಲ ಹವಾ ಸೃಷ್ಟಿಸುತ್ತದೆ ಎಂದು ನನಗೇ ಗೊತ್ತಿರಲಿಲ್ಲ.ಆದರೆ, ಈಗ ಖುಷಿಯಾಗುತ್ತಿದೆ’ ಎನ್ನುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next