Advertisement

ಪಂ|ರಘುನಾಥ ನಾಕೋಡಗೆ ಪುಟ್ಟರಾಜ ಸಮ್ಮಾನ

05:54 PM Mar 04, 2022 | Team Udayavani |

ಧಾರವಾಡ: ಪದ್ಮಭೂಷಣ ಡಾ| ಪುಟ್ಟರಾಜ ಗವಾಯಿಗಳ 109ನೇ ಜನ್ಮದಿನ ಅಂಗವಾಗಿ ನಗರದ ಸೃಜನಾ ರಂಗಮಂದಿರದಲ್ಲಿ ಗುರುವಾರ ನಡೆದ ಸಂಗೀತೋತ್ಸವದಲ್ಲಿ ಪ್ರಸಿದ್ಧ ತಬಲಾ ವಾದಕ ಪಂ|ರಘುನಾಥ ನಾಕೋಡ ಅವರಿಗೆ ಡಾ|ಪುಟ್ಟರಾಜ ಗವಾಯಿ ಪ್ರತಿಷ್ಠಾನ ಕೊಡಮಾಡುವ 1ಲಕ್ಷ ನಗದು, ಫಲಕ ಒಳಗೊಂಡ 2022ರ ಪುಟ್ಟರಾಜ ಸಮ್ಮಾನ ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement

ಪ್ರಶಸ್ತಿ ಪ್ರದಾನ ಮಾಡಿದ ಬೆಂಗಳೂರಿನ ಹಿಂದೂಸ್ತಾನಿ ಗಾಯಕ ಪಂ|ವಿನಾಯಕ ತೊರವಿ ಮಾತನಾಡಿ, ಪುಣ್ಯಾಶ್ರಮದಲ್ಲಿ ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜ ಗವಾಯಿ ಅವರು ತಮ್ಮಲ್ಲಿ ಬಂದ ಪ್ರತಿ ವಿದ್ಯಾರ್ಥಿಗೂ ವಿದ್ಯೆ, ಅನ್ನ, ಆಶ್ರಯ ನೀಡಿ ಬೆಳೆಸಿದ್ದಾರೆ. ಇಂತಹ ಆಶ್ರಮ ಇರುವುದು ದೇಶದಲ್ಲೇ ಏಕೈಕ. ಹೀಗಾಗಿ ಗವಾಯಿಗಳು ನಿಜಕ್ಕೂ ಭಾರತರತ್ನರೇ. ಕಲೆ-ಆಧ್ಯಾತ್ಮ ಎರಡೂ ಇಂದಿಗೂ ಇರುವುದು ಅವರ ಆಶೀರ್ವಾದವೇ ಸರಿ ಎಂದರು.

ಪ್ರತಿ ಸಂಗೀತಗಾರನ ಯಶಸ್ಸಿನ ಅರ್ಧದಷ್ಟು ಶ್ರೇಯ ತಬಲಾ ಸಾಥ್‌ ನೀಡುವವರಿಗೆ ಸಲ್ಲಬೇಕು. ಪ್ರತಿ ಸಂಗೀತಗಾರರ ಕೂಸಿಗೆ ಕೂಸಾಗುವ ಗುಣ ರಘುನಾಥ ನಾಕೋಡ ಅವರಿಗೆ ಸಲ್ಲುತ್ತದೆ. ತಬಲಾವನ್ನು ನಿರ್ಲಕ್ಷಿಸಿದರೆ ಸಂಗೀತ ಪ್ರಿಯರ ಮನ ತಣಿಸಲು ಸಾಧ್ಯವಿಲ್ಲ ಎಂದರು.

ಸಂಗೀತ ಎಂಬುದು ಯಾರ ಮನೆ ಆಸ್ತಿಯೂ ಅಲ್ಲ. ಗುರುವನ್ನು ಅನು ಸರಿಸಿ, ಕಠಿಣ ಅಭ್ಯಾಸ ಮಾಡುವವರಿಗೆ ಸಂಗೀತ ಒಲಿಯುತ್ತದೆ. ಎಂಜಿನಿಯರ್‌, ವೈದ್ಯರು-ವಕೀಲರ ಮಕ್ಕಳು ಅದೇ ವೃತ್ತಿ ಅನುಸರಿಸಬಹುದು. ಆದರೆ ಸಂಗೀತವನ್ನು ಪಾಲಕರಿಂದ ಪಡೆಯಲು ಸಾಧ್ಯವಿಲ್ಲ. ಅದಕ್ಕೆ ಪೂರ್ವಜನ್ಮ ಸಂಸ್ಕಾರ ಅಗತ್ಯ. ಆದರೆ ತಂದೆಯನ್ನೇ ಗುರುವೆಂದು ಸ್ವೀಕರಿಸಿದ ನಾಕೋಡ ಕುಟುಂಬ ಸಂಗೀತದ ಎಲ್ಲಾ ಪ್ರಕಾರಗಳಲ್ಲೂ ಇದೆ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಂ|ರಘುನಾಥ ನಾಕೋಡ, ತಬಲಾ ಕಲಾವಿದರಿಗೆ ಇಂತಹ ಪ್ರಶಸ್ತಿ ದೊರೆತಿರುವುದೇ ದೊಡ್ಡ ಸಂಗತಿ. ಅಜ್ಜಾರ ಆಶೀರ್ವಾದ ಹಾಗೂ ನಮ್ಮ ಕಾಯಕ ನಮ್ಮನ್ನು ಸದಾ ಕೈ ಹಿಡಿದಿದೆ. ಎಲ್ಲಾ ರೀತಿಯ ಸಂಗೀತಕ್ಕೂ ಅಗತ್ಯವಿರುವ ತಬಲ್‌ಜೀಗಳನ್ನು ಯಾರೂ ನಿರ್ಲಕ್ಷಿಸಬೇಡಿ ಎಂದು ಮನವಿ ಮಾಡಿದರು.

Advertisement

ಪ್ರತಿಷ್ಠಾನ ಉಪಾಧ್ಯಕ್ಷ ಶಂಕರ ಕುಂಬಿ ಮಾತನಾಡಿ, ಪಂಚಾಕ್ಷರಿ ಗವಾಯಿ ಅವರ ಹೆಸರಿನಲ್ಲಿ ರಾಜ್ಯ ಸರ್ಕಾರ ಪ್ರಶಸ್ತಿ ನೀಡಬೇಕೆಂಬ ಹಲವು ವರ್ಷಗಳ ಬೇಡಿಕೆ ಇಂದಿಗೂ ಈಡೇರಿಲ್ಲ. ಈಗಲಾದರೂ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕೆಂದು ಒತ್ತಾಯಿಸಿದರು. ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಡಾ|ಪುಟ್ಟರಾಜ ಗವಾಯಿ ಪ್ರತಿಷ್ಠಾನ ಅಧ್ಯಕ್ಷ ಮಹಾಬಲೇಶ್ವರ ಹಾಸಿನಾಳ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ಪದ್ಮಶ್ರೀ ಡಾ|ಎಮ್‌. ವೆಂಕಟೇಶಕುಮಾರ ಸೇರಿದಂತೆ ಹಲವರು ಇದ್ದರು. ನಂತರ ಜರುಗಿದ ಸಂಗೀತೋ ತ್ಸವದಲ್ಲಿ ಜಮಖಂಡಿಯ ಮಾರುತಿ ನಾವಲಗಿ ಅವರ ಶಹನಾಯಿ ವಾದನಕ್ಕೆ ನಿಸಾರ್‌ ಅಹಮ್ಮದರ ತಬಲಾ ಸಾಥ್‌ ಸಂಗತ್‌, ಪಂ|ರಘುನಾಥ ನಾಕೋಡ ಅವರ ತಬಲಾ ಸೋಲೋ ವಾದನಕ್ಕೆ ಲೆಹೆರಾದಲ್ಲಿ ಪಂ|ಶಂಕರ ಕಬಾಡಿ
ಸಾಥ್‌ ಸಂಗತ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next