ಮಾಸ್ಕೋ :”ವ್ಯಾಗ್ನರ್ ಖಾಸಗಿ ಮಿಲಿಟರಿ ಕಂಪನಿಯು ಕಾನೂನಾತ್ಮಕವಾಗಿ ಅಸ್ತಿತ್ವದಲ್ಲಿಯೇ ಇಲ್ಲ” ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಹೇಳಿಕೆ ನೀಡಿದ್ದಾರೆ.
ಕಳೆದ ತಿಂಗಳು ಉಕ್ರೇನ್ ನೊಂದಿಗಿನ ಯುದ್ಧದ ಮಧ್ಯೆ ಪುಟಿನ್‌ರ 23 ವರ್ಷಗಳ ಆಡಳಿತಕ್ಕೆ ಅತ್ಯಂತ ಗಂಭೀರವಾದ ಬೆದರಿಕೆ ಎಂಬಂತೆ ವ್ಯಾಗ್ನರ್ ಗುಂಪಿನ ಯೆವ್ಗೆನಿ ಪ್ರಿಗೋಷಿನ್ ಅವರ ವಿಫಲ ದಂಗೆ, ಆ ಬಳಿಕದ ವಿಲಕ್ಷಣ ತಿರುವುಗಳ ಸರಣಿಗೆ ಪುಟಿನ್ ಅವರ ಈ ಪ್ರತಿಕ್ರಿಯೆ ಸೇರಿದೆ.
ವ್ಯಾಗ್ನರ್ ಗುಂಪನ್ನು ಉಲ್ಲೇಖಿಸಿ “ಖಾಸಗಿ ಮಿಲಿಟರಿ ಸಂಸ್ಥೆಗಳ ಮೇಲೆ ಯಾವುದೇ ಕಾನೂನು ಇಲ್ಲ.ಇದು ಅಸ್ತಿತ್ವದಲ್ಲಿಲ್ಲ” ಎಂದು ಪುಟಿನ್ ಗುರುವಾರ ತಡರಾತ್ರಿ ರಷ್ಯಾದ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ.
ಯೆವ್ಗೆನಿ ಪ್ರಿಗೋಷಿನ್ ಸತ್ತಿರಬಹುದು ಅಥವಾ ಜೈಲಿನಲ್ಲಿದ್ದಾರೆ ಎಂದು ಯುಎಸ್ ಮಾಜಿ ಮಿಲಿಟರಿ ಅಧಿಕಾರಿಯೊಬ್ಬರು ಹೇಳಿದ್ದರು. ಈ ಕುರಿತು ವ್ಯಾಪಕ ಚರ್ಚೆಯೂ ನಡೆದಿತ್ತು.
ಜೂನ್ 29 ರಂದು ಗುಂಪಿನ ಮುಖ್ಯಸ್ಥ ಯೆವ್ಗೆನಿ ಪ್ರಿಗೋಷಿನ್ ಸೇರಿದಂತೆ 35 ವ್ಯಾಗ್ನರ್ ಕಮಾಂಡರ್‌ಗಳು ಭಾಗವಹಿಸಿದ್ದ ಕ್ರೆಮ್ಲಿನ್ ಕಾರ್ಯಕ್ರಮದ ತನ್ನದೇ ಆದ ಆವೃತ್ತಿಯನ್ನು ಕೊಮ್ಮರ್‌ಸಾಂಟ್‌ಗೆ ಪುಟಿನ್ ವಿವರಿಸಿದ್ದರು. ಮಾಸ್ಕೋ ವಿರುದ್ಧ ಪ್ರಿಗೋಷಿನ್ ಮತ್ತು ಅವರ ಪಡೆಗಳು ಬೆರಗುಗೊಳಿಸಿದ್ದ ಅಲ್ಪಾವಧಿಯ ದಂಗೆ ನಡೆಸಿದ ಕೇವಲ ಐದು ದಿನಗಳ ನಂತರ ಆ ಸಭೆ ನಡೆದಿರುವ ಕುರಿತು ರಷ್ಯಾ ಅಧಿಕಾರಿಗಳು ಈ ವಾರದ ಆರಂಭದಲ್ಲಿ ಬಹಿರಂಗಪಡಿಸಿದ್ದರು.