ಮಾಸ್ಕೋ: ಪ್ರಧಾನಿ ನರೇಂದ್ರ ಮೋದಿ ಅವರು ನಿಜವಾದ ದೇಶ ಭಕ್ತ. ಅವರು ಸ್ವತಂತ್ರ ವಿದೇಶಿ ನೀತಿ ಪಾಲಿಸುತ್ತಾರೆ. ಅವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯು ಅದ್ಭುತವಾಗಿ ಕಾರ್ಯಗತಗೊಳ್ಳುತ್ತಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶ್ಲಾಘಿಸಿದ್ದಾರೆ.
ಮಾಸ್ಕೋ ಮೂಲದ ಚಿಂತಕರ ಚಾವಡಿಯಾದ ವಾಲ್ಡೈ ಚರ್ಚಾ ಕ್ಲಬ್‌ನಲ್ಲಿ ಗುರುವಾರ ವಾರ್ಷಿಕ ಭಾಷಣ ಮಾಡಿದ ಅವರು, “ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತದಲ್ಲಿ ಮಹತ್ವದ ಕಾರ್ಯಗಳಾಗಿವೆ. ಅವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯು ಆರ್ಥಿಕವಾಗಿ ಪ್ರಮುಖ್ಯತೆ ಪಡೆದಿದೆ. ಮುಂದಿನ ಭವಿಷ್ಯವು ಭಾರತದ್ದೇ ಆಗಿರಲಿದೆ,’ ಎಂದು ಪ್ರಶಂಸಿಸಿದರು.
“ಭಾರತ-ರಷ್ಯಾ ನಡುವೆ ಹಲವು ದಶಕಗಳಿಂದ ನಿಕಟ ಮೈತ್ರಿ ಇದೆ. ಇದು ಭವಿಷ್ಯದಲ್ಲೂ ಮುಂದುವರಿಯಲಿದೆ. ರಸಗೊಬ್ಬರಗಳ ಪೂರೈಕೆಯನ್ನು ಹೆಚ್ಚಿಸುವಂತೆ ಪ್ರಧಾನಿ ಮೋದಿ ನನ್ನನ್ನು ಕೇಳಿದ್ದರು. ಪೂರೈಕೆಯನ್ನು ನಾವು 7.6 ಪಟ್ಟು ಹೆಚ್ಚಿಸಿದ್ದೇವೆ,’ ಎಂದು ಪುಟಿನ್ ಹೇಳಿದರು.
“ರಷ್ಯಾ-ಉಕ್ರೇನ್ ಯುದ್ಧದ ಕುರಿತಾದ ಮೋದಿ ಅವರ ಕಾಳಜಿ ಬಗ್ಗೆ ನನಗೆ ಅರಿವಿದೆ. ಇವೆಲ್ಲವೂ ಆದಷ್ಟು ಬೇಗ ಕೊನೆಗೊಳ್ಳಲಿ ಎಂದು ನಾವು ಕೂಡ ಬಯಸುತ್ತೇವೆ. ಅಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಿಮಗೆ ಆಗಿಂದಾಗ್ಗೆ ಮಾಹಿತಿ ನೀಡುತ್ತೇವೆ,’ ಎಂದು ರಷ್ಯಾ ಅಧ್ಯಕ್ಷರು ಹೇಳಿದರು.
“ಇದು ಯುದ್ಧದ ಸಮಯವಲ್ಲ’ ಎಂದು ಮೋದಿ ಅವರು ರಷ್ಯಾ-ಉಕ್ರೇನ್ ಯುದ್ಧದ ಕುರಿತು ಪುಟಿನ್‌ಗೆ ಈ ಹಿಂದೆ ಕಿವಿಮಾತು ಹೇಳಿದ್ದರು.