Advertisement

ಕೇರಳ ಅಖಾಡ: ಸೋಲಿಲ್ಲದ ಸರದಾರ…12ನೇ ಬಾರಿಯೂ ಚಾಂಡಿ ದಾಖಲೆಯ ಜಯ ಸಾಧಿಸುತ್ತಾರಾ?

05:48 PM Mar 25, 2021 | Team Udayavani |

ಮಣಿಪಾಲ: ಸೆಂಟ್ರಲ್ ಕೇರಳದ ರಬ್ಬರ್ ಬೆಳೆಯ ಕೇಂದ್ರ ಸ್ಥಾನ ಪುತುಪಲ್ಲಿಯಲ್ಲಿ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ಮುಖಂಡ ಉಮ್ಮನ್ ಚಾಂಡಿ(77ವರ್ಷ) ಪುಟ್ಟ ಕಚೇರಿಯೊಂದನ್ನು ಹೊಂದಿದ್ದು, ಇಲ್ಲಿ ಬೆಳಗ್ಗೆಯಿಂದಲೇ ಜನ ಗುಂಪು, ಗುಂಪಾಗಿ ನಿಂತುಕೊಳ್ಳುವುದು ಸಾಮಾನ್ಯ ದೃಶ್ಯವಾಗಿದೆ. ಅಪಾರ ಜನಪ್ರಿಯತೆ ಗಳಿಸಿರುವ ಚಾಂಡಿ ಅವರ ಈ ಬಾರಿಯ ವಿಧಾನಸಭಾ ಚುನಾವಣೆಯ ಸ್ಪರ್ಧೆ ತೀವ್ರ ಪೈಪೋಟಿಗೆ ತಳ್ಳಿದೆ.

Advertisement

ಇದನ್ನೂ ಓದಿ:ಇಲ್ಲಿ ಸಿಗುತ್ತೆ ಒಂದು ರೂಪಾಯಿಗೆ ಇಡ್ಲಿ, 5 ರೂ.ಗೆ ಊಟ!

ಹಾಲಿ ಆಡಳಿತಾರೂಢ ಎಲ್ ಡಿಎಫ್ ಸರ್ಕಾರದ ವಿರುದ್ಧ ಉಮ್ಮನ್ ಚಾಂಡಿ ಸ್ಪರ್ಧೆಗಿಳಿದಿದ್ದರೆ, ಮತ್ತೊಂದೆಡೆ ಅರಳುತ್ತಿರುವ ಕಮಲ ಪಡೆಯನ್ನು ಎದುರಿಸಬೇಕಾಗಿದೆ. ಇವೆಲ್ಲದರ ಜತೆಗೆ ಕೇರಳ ಕಾಂಗ್ರೆಸ್ ಈಗ ಒಡೆದ ಮನೆಯಾಗಿರುವುದು ಉಮ್ಮನ್ ಚಾಂಡಿ ಅವರ ಗೆಲುವಿಗೆ ಯಾವ ರೀತಿಯ ನೆರವು ನೀಡಬಲ್ಲದು ಎಂಬುದೇ ಚರ್ಚಾ ವಿಷಯವಾಗಿದೆ.

ಸೋಲಿಲ್ಲದ ಸರದಾರ….ಚಾಂಡಿಗೆ ಸತತ 12ನೇ ಬಾರಿ ಗೆಲುವು ಸಾಧ್ಯವೇ?

1970ರಿಂದ ಪುತುಪಲ್ಲಿ ವಿಧಾನಸಭಾ ಕ್ಷೇತ್ರದ ಜನತೆ ಸತತ 11 ಬಾರಿ ಉಮ್ಮನ್ ಚಾಂಡಿ ಅವರನ್ನು ಗೆಲ್ಲಿಸಿದ್ದು, ಇದೀಗ 12 ಬಾರಿ ದಾಖಲೆಯ ಜಯ ಗಳಿಸುವ ಮೂಲಕ ದಿವಂಗತ ಕೆಕೆ ಮಣಿ ಅವರ ದಾಖಲೆಯನ್ನು ಸರಿಗಟ್ಟಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Advertisement

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪುತುಪಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಹುರಿಯಾಳು ಉಮ್ಮನ ಚಾಂಡಿ ವಿರುದ್ಧ ಸಿಪಿಎಂ ವಿದ್ಯಾರ್ಥಿ ಘಟಕ ಎಸ್ ಎಫ್ ಐ ನ ಮಾಜಿ ರಾಜ್ಯಾಧ್ಯಕ್ಷ ಜಾಕ್ ಸಿ ಥೋಮಸ್(31ವರ್ಷ) ಹಾಗೂ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಎನ್. ಹರಿ ಸ್ಪರ್ಧಿಸುತ್ತಿದ್ದಾರೆ.

2016ರಲ್ಲಿ ಅಧಿಕಾರದ ಗದ್ದುಗೆ ಏರಿದ ಎಲ್ ಡಿಎಫ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿರುವ ಉಮ್ಮನ್ ಚಾಂಡಿ, ಐದು ವರ್ಷಗಳಲ್ಲಿ ಎಲ್ ಡಿಎಫ್ ಸರ್ಕಾರ ಏನೂ ಸಾಧಿಸಿಲ್ಲ. ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ಅಭಿವೃದ್ಧಿ ಶೂನ್ಯ ಎಂದು ದೂರಿದ್ದಾರೆ.

ಇದನ್ನೂ ಓದಿ:ಅಲ್ಪ ಸಂಖ್ಯಾತರ ಮತ ಒಡೆಯಲು ಬಿಜೆಪಿ ಬೆಂಬಲಿತ ಹೊಸ ಪಕ್ಷ ಹುಟ್ಟಿಕೊಂಡಿದೆ : ಮಮತಾ

ಕೇರಳದಲ್ಲಿ ಈ ಹಿಂದೆ ಅಧಿಕಾರಕ್ಕೇರಿದ್ದ ಕೆ ಕರುಣಾಕರನ್ ಸರ್ಕಾರದ ಅವಧಿಯಲ್ಲಿ ನೆಡುಂಬಶ್ಶೇರಿ ವಿಮಾನ ನಿಲ್ದಾಣ ಮತ್ತು ಸ್ಟೇಡಿಯಂ ನಿರ್ಮಾಣವಾಗಿತ್ತು. ಎ.ಕೆ.ಆ್ಯಂಟನಿ ಅವಧಿಯಲ್ಲಿ ತಿರುವನಂತಪುರಂ ಅಭಿವೃದ್ಧಿಯಾಗಿತ್ತು. ಕೊನೆಯ ಯುಡಿಎಫ್ ಸರ್ಕಾರದ ಅವಧಿಯಲ್ಲಿ ವಿಜಿಂಜಮ್ ಬಂದರು, ಕಣ್ಣೂರು ವಿಮಾನ ನಿಲ್ದಾಣ, ಕೊಚ್ಚಿ ಮೆಟ್ರೋ ಕಾಮಗಾರಿ ನಡೆದಿರುವುದಾಗಿ ಚಾಂಡಿ ಹೇಳಿದ್ದಾರೆ.

ಗೆಲುವಿನ ವಿಶ್ವಾಸದಲ್ಲಿ ಸಿಪಿಎಂ:

ಪುತುಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಪಿಣರಾಯಿ ವಿಜಯನ್ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ಸಿಪಿಎಂ ಅಭ್ಯರ್ಥಿ ಥೋಮಸ್ ಅವರಲ್ಲಿ ಗೆಲುವಿನ ವಿಶ್ವಾಸ ಮೂಡಿಸಿದೆ. ಅಷ್ಟೇ ಅಲ್ಲ ಪುತುಪಲ್ಲಿಯ ಸ್ಥಳೀಯ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ 8 ಪಂಚಾಯತ್ ಗಳ್ಲಿ ಆರು ಪಂಚಾಯತ್ ಸಿಪಿಎಂ ತೆಕ್ಕೆಗೆ ಬಿದ್ದಿದೆ.

2016ರ ವಿಧಾನಸಭಾ ಚುನಾವಣೆಯಲ್ಲಿ ಪುತುಪಲ್ಲಿ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷ ಶೇ.11ರಷ್ಟು ಮತಗಳಿಸಿದ್ದು, ಈ ಬಾರಿ ತೃತೀಯ ಸ್ಥಾನ ಪಡೆಯಬಹುದು ಎಂದು ಬಿಜೆಪಿ ಅಭ್ಯರ್ಥಿ ಹರಿ ವಿಶ್ವಾಸವ್ಯಕ್ತಪಡಿಸಿದ್ದಾರೆ.

ಆದರೆ ಎಲ್ ಡಿಎಫ್ ಯಾವಾಗಲೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೇಲುಗೈ ಸಾಧಿಸುತ್ತದೆ. ಯಾಕೆಂದರೆ ಯುಡಿಎಫ್ ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂಡಾಯ ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವುದು ಎಲ್ ಡಿಎಫ್ ಗೆ ವರದಾನವಾಗುತ್ತಿದೆ ಎಂದು ಚಾಂಡಿ ಸಮಜಾಯಿಷಿ ನೀಡಿದ್ದಾರೆ.

ಆಡಳಿತಾರೂಢ ಎಲ್ ಡಿಎಫ್ ನ ಜನಪ್ರಿಯತೆ ನಡುವೆಯೂ ಉಮ್ಮನ್ ಚಾಂಡಿ ಪುತುಪಲ್ಲಿಯಲ್ಲಿ ಹೆಚ್ಚು ಪ್ರಭಾವಶಾಲಿ ಮತ್ತು ವರ್ಚಸ್ವಿ ನಾಯಕರಾಗಿದ್ದಾರೆ, ಅದಕ್ಕೆ ಮುಖ್ಯ ಕಾರಣ ಚಾಂಡಿ ಯಾವುದೇ ಸಮಯದಲ್ಲೂ ಜನರಿಗೆ ಲಭ್ಯವಾಗುತ್ತಿರುವುದು.

ನೀವು ಯಾವುದೇ ಸಮಯದಲ್ಲೂ ಬೇಕಾದರೂ ಚಾಂಡಿ ಅವರ ಮನೆಗೆ ಹೋಗಬಹುದು. ಅವರು ಯಾವುದೇ ಕಾರಣಕ್ಕೂ ಸಹಾಯ ಮಾಡಲ್ಲ ಎಂದು ಹೇಳಲ್ಲ. ಈ ಕಾರಣಕ್ಕಾಗಿಯೇ ಅವರನ್ನು ಜನರು ಹೆಚ್ಚು ಇಷ್ಟಪಡುತ್ತಿದ್ದಾರೆ ಎಂದು ರೇಷನ್ ಅಂಗಡಿ ಮಾಲೀಕ ಕುರಿಯನ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಆರೋಪ, ಪ್ರತ್ಯಾರೋಪಗಳ ನಡುವೆ ಈ ಬಾರಿ ಪುತುಪಲ್ಲಿ ವಿಧಾನಸಭಾ ಕ್ಷೇತ್ರ ಕೇರಳ ರಾಜ್ಯರಾಜಕಾರಣದಲ್ಲಿ ಹೆಚ್ಚು ಗಮನ ಸೆಳೆದಿದ್ದು, 12ನೇ ಬಾರಿಯೂ ಉಮ್ಮನ್ ಚಾಂಡಿ ಅವರಿಗೆ ವಿಜಯಲಕ್ಷ್ಮೀ ಒಲಿಯಲಿದ್ದಾಳೆಯೇ ಅಥವಾ ಸಿಪಿಎಂನ ಥೋಮಸ್ ಚಾಂಡಿ ಅವರ ಗೆಲುವಿನ ಓಟಕ್ಕೆ ಕಡಿವಾಣ ಹಾಕಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next