Advertisement

ಪುತ್ತಿಗೆ ಪರ್ಯಾಯ-2024: ವಿಶಾಲ ವೇದಿಕೆ, ಹೊರೆಕಾಣಿಕೆ ಆವರಣ, ವಸ್ತು ಪ್ರದರ್ಶನ ಮಳಿಗೆ

02:49 PM Jan 08, 2024 | Team Udayavani |

ಉಡುಪಿ: ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಪರ್ಯಾಯೋತ್ಸವಕ್ಕೆ ಕೃಷ್ಣನಗರಿ ಸಜ್ಜಾಗುತ್ತಿದ್ದು, ವಿದ್ಯುದ್ದೀಪಾಲಂಕಾರ, ಸ್ವಚ್ಛತಾ ಕಾರ್ಯ ಸಹಿತ ಹಲವು ಕೆಲಸ ಭರದಿಂದ ಸಾಗುತ್ತಿದೆ. ಪರ್ಯಾಯದ ಪ್ರಮುಖ ಕಾರ್ಯ
ಕ್ರಮ ನಡೆಸುವ ವೇದಿಕೆ ಕೆಲಸ ಅಂತಿಮ ಹಂತಕ್ಕೆ ತಲುಪಿದೆ. ಕೃಷ್ಣಮಠ ಪಾರ್ಕಿಂಗ್‌ ಸಮೀಪದ 4 ಎಕ್ರೆ ಜಾಗದಲ್ಲಿ ಹೊರೆ ಕಾಣಿಕೆ ಆವರಣ, 40 ಅಡಿ ಅಗಲದ ಬೃಹತ್‌ ವೇದಿಕೆ, ವಸ್ತು ಪ್ರದರ್ಶನ ಮಳಿಗೆ ಇರಲಿದೆ.ಕಳೆದ 15 ದಿನಗಳಿಂದ 100ಕ್ಕೂ ಅಧಿಕ ಮಂದಿ
ಕಾರ್ಮಿಕರು ರಾತ್ರಿ ಹಗಲು ಶ್ರಮಿಸಿದ್ದಾರೆ.

Advertisement

ಆರಂಭದಲ್ಲಿ ಭೂಮಿಯನ್ನು ಸಮತಟ್ಟು ಮಾಡಿ, ಎಲ್ಲ ಕಡೆಗೆ ಮ್ಯಾಟ್‌ ಹೊದೆಸಿ ವ್ಯವಸ್ಥಿತವಾಗಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ವೇದಿಕೆಗೆ ಕನಕದಾಸ ಮಂಟಪ ಎಂದು ಹೆಸರಿಡಲಾಗಿದ್ದು, ಸಾಂಪ್ರದಾಯಿಕ ಶೈಲಿಯಲ್ಲಿ ವಿದ್ಯುತ್‌ ಅಲಂಕಾರದಿಂದ ವೇದಿಕೆ ಕಂಗೊಳಿಸಲಿದೆ.

ಇಲ್ಲಿ ಜ. 9ರ ಸಂಜೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಳ್ಳಲಿದೆ. ವೇದಿಕೆ ಮುಂಭಾಗ ಒಂದು ಸಾವಿರ ಮಂದಿ ಕುಳಿತು ಕಾರ್ಯಕ್ರಮ ವೀಕ್ಷಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಇದೇ ಸ್ಥಳದಲ್ಲಿ ಪರ್ಯಾಯ ದಿನದಂದು ಅನ್ನಸಂತರ್ಪಣೆ ನಡೆಯಲಿದ್ದು, ಬಫೆ ಮತ್ತು ಕುಳಿತುಕೊಂಡು ಊಟ ಮಾಡುವ ವ್ಯವಸ್ಥೆಯನ್ನು ಮಾಡಲಾಗುತ್ತದೆ.

ವಸ್ತು ಪ್ರದರ್ಶನ ಮಳಿಗೆ ಆಕರ್ಷಣೆ
ಈ ಬಾರಿ ಪರ್ಯಾಯದಲ್ಲಿ ವಿಶೇಷ ಎಂಬಂತೆ ವಸ್ತು ಪ್ರದರ್ಶನ ಮಳಿಗೆ ಆಕರ್ಷಣೆಯ ಕೇಂದ್ರವಾಗಲಿದೆ. 30ಕ್ಕೂ ಅಧಿಕ ಮಳಿಗೆಗಳು ಇಲ್ಲಿದ್ದು, ಕೃಷಿ, ತೋಟಗಾರಿಕೆ, ಗೋವಿನ ಉತ್ಪನ್ನ, ಗೃಹಉತ್ಪನ್ನ, ಉಡುಪಿ ಸೀರೆ, ಸಾಂಪ್ರದಾಯಿಕ ಕರಕುಶಲ ಮಾರಾಟಗಳು ಸೇರಿದಂತೆ ಹಲವಾರು ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇಲ್ಲಿರಲಿದೆ.

ಹೊರೆ ಕಾಣಿಕೆ ಸಂಗ್ರಹಕ್ಕೆ ಸಕಲ ಸಿದ್ಧತೆ
ಊರ , ಪರ ಊರಿನಿಂದ ಆಗಮಿಸುವ ಹೊರೆ ಕಾಣಿಕೆ ಸಂಗ್ರಹಕ್ಕೆ ಸಕಲ ಸಿದ್ಧತೆ ನಡೆದಿದೆ. ಇದೇ ಜಾಗದಲ್ಲಿ ಅಚ್ಚುಕಟ್ಟಾಗಿ
ಹೊರೆಕಾಣಿಕೆ ರೂಪದಲ್ಲಿ ಬರುವ ಅಕ್ಕಿ, ಬೇಳೆ, ಧಾನ್ಯ, ಎಣ್ಣೆ, ಬೆಲ್ಲ, ತುಪ್ಪ, ಹಣ್ಣು, ತರಕಾರಿ ಮತ್ತಿತರ ವಸ್ತುಗಳ ಸಂಗ್ರಹಕ್ಕೆ
ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ. ಸಾರ್ವಜನಿಕರಿಗೆ ಹೊರೆ ಕಾಣಿಕೆ ವೀಕ್ಷಿಸಲು ಪ್ರದರ್ಶನ ಮಾದರಿಯಲ್ಲಿ ವ್ಯವಸ್ಥೆ
ಮಾಡಲಾಗುತ್ತದೆ ಎಂದು ಪುತ್ತಿಗೆ ಮಠದ ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next