Advertisement

ಪುಟಾಣಿ ಕಮೀಷನರ್‌ 1 2 3…

09:36 AM Sep 11, 2019 | Lakshmi GovindaRaju |

ಬೆಂಗಳೂರು: ಐವರು ಪುಟಾಣಿಗಳು ಖಾಕಿ ದಿರಿಸು, ತಲೆಯ ಮೇಲೆ ಪೊಲೀಸ್‌ ಕ್ಯಾಪ್‌, ಕೈಯಲ್ಲಿ ಲಾಠಿ, ಪಿಸ್ತೂಲ್‌ ಹಿಡಿದು ಪೊಲೀಸ್‌ ಕಮೀಷನರ್‌ ಆಗುವ ಕನಸು ಈಡೇರಿಸಿಕೊಂಡು ಸಂತಸ ಪಟ್ಟರು. ಮಕ್ಕಳ ಮೊಗದಲ್ಲಿ ಹೊಸ ಚೈತನ್ಯ ಕಂಡು ಪೋಷಕರ ಕಣ್ಣಾಲಿಗಳು ತೇವಗೊಂಡವು…

Advertisement

ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಐದು ಮಕ್ಕಳ ಆಸೆಯನ್ನು ನಗರ ಪೊಲೀಸ್‌ ವಿಭಾಗ ಹಾಗೂ “ಮೇಕ್‌ ಎ ವಿಶ್‌ ಫೌಂಡೇಶನ್‌’ ಸಹಯೋಗದಲ್ಲಿ ಈಡೇರಿಸಲಾಯಿತು. ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ಕುರ್ಚಿಯಲ್ಲಿ ಕುಳಿತ ಐದು ಮಕ್ಕಳು, ಕಡತ ಪರಿಶೀಲಿಸಿ ಅಹವಾಲು ಆಲಿಸಿದರು. ವಾಕಿಟಾಕಿ ಬಳಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಂಟ್ರೋಲ್‌ ರೂಂ ಪರಿಶೀಲಿಸಿದರು.

ಐವರು ಪುಟ್ಟ ಆಯುಕ್ತರ ಕಾರ್ಯನಿರ್ವಹಣೆಯನ್ನು ಕಂಡ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌, ಬೆನ್ನುತಟ್ಟಿ ಹುರಿದುಂಬಿಸಿದ ಹಾಗೂ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದ ಕ್ಷಣಗಳಿಗೆ ನಗರ ಪೊಲೀಸ್‌ ಆಯುಕ್ತರ ಕಚೇರಿ ಸೋಮವಾರ ಸಾಕ್ಷಿಯಾಗಿತ್ತು.

ಒಂದು ದಿನದ ಮಟ್ಟಿಗೆ ಸಾಂಕೇತಿಕವಾಗಿ ನಗರ ಪೊಲೀಸ್‌ ಆಯುಕ್ತರಾಗಿದ್ದ ರುತನ್‌ ಕುಮಾರ್‌ (8), ಅಪ್ರಾತ್‌ ಪಾಷ (7) ಮೊಹಮದ್‌ ಶಕೀಬ್‌ (10), ಶ್ರೀವಾಣಿ ಬಟ್ಟಲ (11), ಸೈಯದ್‌ ಇಮಾದ್‌ (5) ಅವರಿಗೆ ಇಲಾಖೆಯ ಶಿಷ್ಟಾಚಾರದಂತೆ ಗೌರವ ವಂದನೆ ನೀಡಲಾಯಿತು. ಈ ವೇಳೆ ಖುದ್ದು ಹಾಜರಿದ್ದ ಆಯುಕ್ತ ಭಾಸ್ಕರ್‌ ರಾವ್‌ ಕೂಡ ಸೆಲ್ಯೂಟ್‌ ಹೊಡೆದರು.

ಬಳಿಕ ಮಕ್ಕಳನ್ನು ತಮ್ಮ ಕಚೇರಿಗೆ ಕರೆದೊಯ್ದು, ತಮ್ಮ ಕುರ್ಚಿಯಲ್ಲಿ ಕುಳಿತುಕೊಂಡು ಅಧಿಕಾರ ಸ್ವೀಕರಿಸಲು ಮಕ್ಕಳಿಗೆ ಅವಕಾಶ ನೀಡಿದರು. ಅಧಿಕಾರ ಸ್ವೀಕರಿಸಿದ ಪುಟಾಣಿ ಆಯುಕ್ತರು ಕೆಲ ಕಾಲ ಕಡತಗಳ ಪರಿಶೀಲನೆ ನಡೆಸಿದರು. ನಂತರ ಕಂಟ್ರೋಲ್‌ ರೂಂಗೆ ತೆರಳಿ ಅಲ್ಲಿನ ಕಾರ್ಯನಿರ್ವಹಣೆ ಬಗ್ಗೆ ಸಿಬ್ಬಂದಿಯಿಂದ ಮಾಹಿತಿ ಪಡೆದು, ಸಿಬ್ಬಂದಿ ಜತೆ ಕೆಲಕಾಲ ಮಾತುಕತೆ ನಡೆಸಿದರು. ಪೊಲೀಸ್‌ ಅಧಿಕಾರಿಗಳು, ಅಲ್ಲಿನ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ವಿವರಿಸಿದರು.

Advertisement

ಐರಾವತ ಡೈಲಾಗ್‌ ಹೊಡೆದ ಪುಟಾಣಿ: ಅರಸೀಕೆರೆಯ ಮೋಹನ್‌ಕುಮಾರ್‌ ದಂಪತಿ ಪುತ್ರ ರುತನ್‌ಕುಮಾರ್‌ಗೆ ಸಿನಿಮಾಗಳಲ್ಲಿನ ಪೊಲೀಸ್‌ ಪಾತ್ರಗಳೆಂದರೆ ಅಚ್ಚುಮೆಚ್ಚು. ನಟ ದರ್ಶನ್‌ ಅವರ ಅಪಟ್ಟ ಅಭಿಮಾನಿಯಾಗಿರುವ ರುತನ್‌ಗೆ ಐರಾವತ ಚಿತ್ರದ ಡೈಲಾಗ್‌ ಕಂಠಪಾಠ ಆಗಿದೆ. ದೊಡ್ಡವನಾದ ಮೇಲೆ ಪೊಲೀಸ್‌ ಅಧಿಕಾರಿ ಆಗುವ ಕನಸು ಆತನಿತ್ತು. ಹೀಗಾಗಿ ಈ ಅವಕಾಶ ಕಲ್ಪಿಸಲಾಗಿತ್ತು. ಪಿಸ್ತೂಲ್‌ ಹಿಡಿದು ಐರಾವತ ಚಿತ್ರದ “ರಥ ಬಂದ್ರೆ ಗಾಳಿ ಬೀಸುತ್ತೆ, ಈ ಐರಾವತ ಬಂದ್ರೆ ಬಿರುಗಾಳಿ ಬೀಸುತ್ತೆ’ ಎಂಬ ಡೈಲಾಗ್‌ ಹೇಳಿದ ರುತನ್‌ಕುಮಾರ್‌ ಭೇಷ್‌ ಎನಿಸಿಕೊಂಡ.

ವಾಕಿಟಾಕಿ ಹಿಡಿದು ಸೂಚನೆ: ವಾಕಿ ಟಾಕಿ ಕರೆ ಸ್ವೀಕರಿಸಿದ ಪುಟಾಣಿ ಆಯುಕ್ತ “ಮೊಹಮದ್‌ ಶಕೀಬ್‌, ಅಧಿಕಾರಿಗಳಿಂದ ಮಾಹಿತಿ ಸ್ವೀಕರಿಸಿದ. ಬಳಿಕ, ಓಕೆ, ಆಲ್‌ ರೈಟ್‌, ಕಂಟಿನ್ಯೂ ಎಂದು’ ಹೇಳುತ್ತಿದ್ದಂತೆ ಪೋಷಕರು ಹಾಗೂ ಸಿಬ್ಬಂದಿ ಸಂತೋಷದಿಂದ ಚಪ್ಪಾಳೆ ತಟ್ಟಿದರು.

ಕಳ್ಳರನ್ನು ಸದೆಬಡಿವೆ: “ಹೆಣ್ಣುಮಕ್ಕಳ ಮೇಲೆ ಹಲ್ಲೆ ಸಹಿಸಲ್ಲ. ಗಲಾಟೆ ಮಾಡುವವರು, ಕಳ್ಳತನ ಮಾಡಿ ಓಡಿಹೋಗುವವರನ್ನು ಬಂಧಿಸಿ ಜೈಲಿಗೆ ಅಟ್ಟುತ್ತೇನೆ. ಯಾರಿಗೂ ಯಾರೂ ಮೋಸಮಾಡದಂತೆ ನೋಡಿಕೊಳ್ಳುತ್ತೇನೆ ಎಂದು ಖಡಕ್‌ ಎಚ್ಚರಿಕೆ ನೀಡಿದ್ದು ಪುಟ್ಟ ಲೇಡಿ ಕಮೀಷನರ್‌ ಶ್ರೀವಾಣಿ ಬಟ್ಟಲ.

ಆಂಧ್ರ ಮೂಲದ ಶ್ರಾವಣಿ ಅವರ ತಂದೆ ಮೆಕ್ಯಾನಿಕ್‌ ಆಗಿದ್ದಾರೆ. ಗಂಭೀರ ಸ್ವರೂಪದ ಕಾಯಿಲೆ ಎದುರಿಸುತ್ತಿರುವ ಮಗಳು ಶ್ರಾವಣಿ “ಹಂಗಾಮ’ ಎಂಬ ತೆಲುಗು ಟಿವಿ ಕಾರ್ಯಕ್ರಮದಲ್ಲಿ ಪೊಲೀಸ್‌ ಪಾತ್ರಧಾರಿಗಳ ಕಾರ್ಯಶೈಲಿ ಗಮನಿಸಿ ತಾನು ಕೂಡ ಪೊಲೀಸ್‌ ಆಗ್ತಿನಿ ಎಂದು ಹೇಳಿಕೊಂಡಿದ್ದಳು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಕೆಯ ಕನಸೀಗ ನನಸಾಗಿದೆ.

ಭಾವುಕರಾದ ಪೋಷಕರು: ಪೊಲೀಸ್‌ ಪೋಷಾಕಿನಲ್ಲಿ ಕಮೀಷನರ್‌ ಕುರ್ಚಿಯಲ್ಲಿ ಕುಳಿತು ನಗರ ಪೊಲೀಸ್‌ ಆಯುಕ್ತರಾಗಿದ್ದ ಅಪ್ರಾತ್‌ ಪಾಷನನ್ನು ಕಂಡು ಆತನ ತಾಯಿ ಆಯಿಷಾ ಶಾಹಿನ್‌ ಧನ್ಯತೆಯ ಭಾವದೊಂದಿಗೆ ಗದ್ಗದಿತರಾಗಿದ್ದರು.  ಮಗನ ಕನಸಿನ ಕುರಿತು “ಉದಯವಾಣಿ’ ಜತೆ ಮಾತನಾಡಿದ ಅವರು, “ಅತ್ಯಂತ ಚುರುಕು ಬುದ್ಧಿ, ತುಂಟತನದಿಂದ ಕುಟುಂಬಕ್ಕೆ ಬೆಳಕು ನೀಡಿದ್ದ ಮಗನಿಗೆ ಗಂಭೀರ ಸ್ವರೂಪದ ಕಾಯಿಲೆ ಇದೆ ಎಂದು ಗೊತ್ತಾದಾಗ ದಿಕ್ಕೇ ತೋಚದಂತಾಗಿತ್ತು.

ಎಲ್ಲ ರೀತಿಯ ಚಿಕಿತ್ಸೆ ಕೊಡಿಸಿದರೂ ಫ‌ಲವಿಲ್ಲ ಎಂದು ಗೊತ್ತಾಗಿತ್ತು. ಆದರೆ, ಮಗನಿಗೆ ಪೊಲೀಸ್‌ ಅಧಿಕಾರಿಗಳು ಎಂದರೆ ಇಷ್ಟ. ಆತನ ಇಚ್ಛೆಯಂತೆ ಇಂದು ಪೊಲೀಸ್‌ ಅಧಿಕಾರಿಯಾಗಿದ್ದಾನೆ. ಆತನ ಕನಸು ಈಡೇರಿದ ಸಂತೃಪ್ತಿ ಸಿಕ್ಕಿತು,’ ಎಂದು ಕಣ್ಣೀರು ಒರೆಸಿಕೊಂಡರು.

ಆಯುಕ್ತರ ಕಾರ್ಯಕ್ಕೆ ಮೆಚ್ಚುಗೆ ಮಹಾಪೂರ: ಐದು ಮಕ್ಕಳಿಗೆ ಒಂದು ದಿನದ ಮಟ್ಟಿಗೆ ನಗರ ಪೊಲೀಸ್‌ ಆಯುಕ್ತರಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿ ಅವರ ಜತೆ ಬೆರೆತ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅವರ ಕಾರ್ಯವೈಖರಿಗೆ ಪೊಲೀಸ್‌ ಇಲಾಖೆ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಗರ ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕರು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.

ಸಮಾಜಸ್ನೇಹಿ ಪೊಲೀಸ್‌ ವ್ಯವಸ್ಥೆ ಹೀಗಿರಬೇಕು. ಬೆಂಗಳೂರು ಪೊಲೀಸರ ಈ ನಡೆ ಅತ್ಯಂತ ಮಾನವೀಯ ಹಾಗೂ ಮಾದರಿ ಕಾರ್ಯವಾಗಿದೆ. ಇಂತಹ ನಡೆಗಳು ಪೊಲೀಸರ ಬಗೆಗಿನ ಸಾರ್ವಜನಿಕ ವಲಯದಲ್ಲಿ ಉತ್ತಮ ಅಭಿಪ್ರಾಯ ರೂಪುಗೊಳ್ಳಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ. ಇಲಾಖೆಯ ಅಧಿಕಾರಿಗಳಾದ ಎಡಿಜಿಪಿ ಚರಣ್‌ರೆಡ್ಡಿ, ಡಿಸಿಪಿ ಇಶಾ ಪಂಥ್‌, ಮಾಜಿ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next