“ಆ ಕರಾಳ ರಾತ್ರಿ’ ಚಿತ್ರವನ್ನು ಯಶಸ್ವಿಯಾಗಿ ಪ್ರೇಕ್ಷಕರ ಮುಂದೆ ತಂದಿದ್ದ ನಿರ್ದೇಶಕ ದಯಾಳ್ ಪದ್ಮನಾಭನ್, ಈಗ “ಪುಟ 109′ ಚಿತ್ರವನ್ನು ಪ್ರೇಕ್ಷಕರ ಮುಂದೆ ತೆರೆದಿಡುವ ತಯಾರಿಯಲ್ಲಿದ್ದಾರೆ. ಸದ್ಯ “ಪುಟ 109′ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ಅಂತಿಮ ಹಂತದ ಪ್ರಚಾರ ಕಾರ್ಯಗಳಲ್ಲಿ ಚಿತ್ರತಂಡ ನಿರತವಾಗಿದೆ. ಇದೇ ನ. 16ರಂದು ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.
ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ದಯಾಳ್ ಪದ್ಮನಾಭವ್ “ಪುಟ 109’ರಲ್ಲಿ ಅಡಗಿರುವ ಒಂದಷ್ಟು ಕೌತುಕ ಸಂಗತಿಗಳನ್ನು ತೆರೆದಿಟ್ಟಿದ್ದಾರೆ. ಏಕಕಾಲಕ್ಕೆ “ಆ ಕರಾಳ ರಾತ್ರಿ’ ಮತ್ತು “ಪುಟ 109′ ಚಿತ್ರವನ್ನು ಆರಂಭಿಸಲಾಗಿತ್ತು. ನಮ್ಮ ಯೋಜನೆಯಂತೆ “ಆ ಕರಾಳ ರಾತ್ರಿ’ ಚಿತ್ರವನ್ನು ಮೊದಲು ಬಿಡುಗಡೆ ಮಾಡಿದ್ದೇವು. ಆ ಚಿತ್ರಕ್ಕೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿತು.
ಈಗ “ಪುಟ 109′ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ. ಇದೊಂದು ಸಸ್ಪೆನ್ಸ್ ಚಿತ್ರವಾಗಿದ್ದು, ಪ್ರೇಕ್ಷಕನಿಗೆ ಖಂಡಿತ ಇಷ್ಟವಾಗುತ್ತೆ ಎನ್ನುತ್ತಾರೆ ನಿರ್ದೇಶಕ ದಯಾಳ್. ಸಾಮಾನ್ಯವಾಗಿ ನಾವೆಲ್ಲ ಪೊಲೀಸ್ ತನಿಖೆಯ ಬಗ್ಗೆ ಕೇಳಿರುತ್ತೇವೆ. ಅದನ್ನು ನೇರವಾಗಿ ನೋಡಿರುವ ಸಾಧ್ಯತೆ ತುಂಬ ಕಡಿಮೆ. ಆದರೆ “ಪುಟ 109′ ಅಂತಹ ಪೊಲೀಸ್ ತನಿಖೆಯೊಂದನ್ನು ರೋಚಕವಾಗಿ ನಿಮ್ಮ ಮುಂದೆ ತೆರೆದಿಡುತ್ತದೆ.
ಕೇವಲ ಮೂರ್‍ನಾಲ್ಕು ಪಾತ್ರಗಳು, ಮೂರ್‍ನಾಲ್ಕು ಲೊಕೇಷನ್‌ಗಳ ಸುತ್ತವೇ ಇಡೀ ಚಿತ್ರದ ಕಥೆ ನಡೆಯುತ್ತದೆ. ಆರಂಭದಿಂದ ಕೊನೆಯವರೆಗೂ ನೋಡುಗರನ್ನ ಸೀಟ್‌ನ ತುದಿಯಲ್ಲಿ ಕೂರಿಸುತ್ತದೆ ಎನ್ನುವುದು ದಯಾಳ್ ಅವರ ಭರವಸೆಯ ಮಾತು. ಕನ್ನಡದ ಪ್ರೇಕ್ಷಕರು ಇತ್ತೀಚೆಗೆ ಹೊಸಥರದ ಚಿತ್ರಗಳತ್ತ ಆಸಕ್ತರಾಗುತ್ತಿದ್ದಾರೆ. ಚಿತ್ರಗಳಲ್ಲಿ ಪ್ರೇಕ್ಷಕರನ್ನು ಬೇರೆ ಬೇರೆ ರೀತಿಯಲ್ಲಿ ರಂಜಿಸಬಹುದು. ಅದಕ್ಕೆ “ಆ ಕರಾಳ ರಾತ್ರಿ’ ಚಿತ್ರವೇ ಉತ್ತಮ ಉದಾಹರಣೆ.
ಈ ಚಿತ್ರ ಕೂಡ ಪ್ರೇಕ್ಷಕರಿಗೆ ಹೊಸ ಅನುಭವ ಕೊಡುವುದರಲ್ಲಿ ಅನುಮಾನವಿಲ್ಲ ಎಂಬ ವಿಶ್ವಾಸ ದಯಾಳ್ ಅವರದ್ದು. “ಪುಟ 109′ ಚಿತ್ರದಲ್ಲಿ ಜೆ.ಕೆ ಹಾಗೂ ನವೀನ್ ಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ನಾಯಕಿಯಾಗಿ ವೈಷ್ಣವಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ದಯಾಳ್ ಪದ್ಮನಾಭನ್ ನಿರ್ದೇಶನದ ಜತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ನಿರ್ಮಾಪಕ ಮತ್ತು ವಿತರಕ ಜಾಕ್ ಮಂಜು ಚಿತ್ರದ ವಿತರಣೆ ಹಕ್ಕುಗಳನ್ನು ಪಡೆದಿದ್ದಾರೆ.