Advertisement

ಬೇಡವಾದ ಮಗು ಮಮತೆ ತೊಟ್ಟಿಲಿಗೆ ಹಾಕಿ

05:21 AM Jan 07, 2019 | Team Udayavani |

ಕಲಬುರಗಿ: ಬೇಡವಾದ ಮಕ್ಕಳನ್ನು ಮುಳ್ಳು ಕಂಟೆಗಳಲ್ಲಿಯೋ, ಕಸದ ತಿಪ್ಪೆಗಳಲ್ಲಿಯೋ, ಬಯಲು ಪ್ರದೇಶಗಳಲ್ಲಿಯೋ ಮುಂತಾದ ಅಸುರಕ್ಷಿತ ಪ್ರದೇಶಗಳಲ್ಲಿ ಬೀಸಾಕದೆ ಮಮತೆ ತೊಟ್ಟಿಲಿಗೆ ಹಾಕುವ ಮೂಲಕ ಆ ಮಗುವಿನ ಪಾಲನೆ, ಪೋಷಣೆಗೆ ಸಹಕರಿಸಬೇಕು ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಸ್‌.ಆರ್‌. ಮಾಣಿಕ್ಯ ಹೇಳಿದರು.

Advertisement

ನಗರದ ಹೊರವಲಯದ ನಾಗನಳ್ಳಿ ರಸ್ತೆಯಲ್ಲಿನ ಕೋರಂಟಿ ಹನುಮಾನ ದೇವಸ್ಥಾನದ ಬಳಿ ಇರುವ ಡಾನ್‌ ಭಾಸ್ಕೋ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಮತೆ ತೊಟ್ಟಿಲು ಉದ್ಘಾಟಿಸಿ ಮಾತನಾಡಿದ ಅವರು, ಮಗುವನ್ನು ಎಲ್ಲೆಂದರಲ್ಲಿ ಎಸೆದು ಹೋದ ಘಟನೆಗಳನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಇಂತಹ ಘಟನೆಗಳು ಕಳವಳಕಾರಿಯಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಮಗುವು ವಿವಿಧ ಕಾರಣಗಳಿಗಾಗಿ ಪಾಲಕರಿಗೆ ಬೇಡವಾದರೂ ಆ ಮಗುವಿನ ರಕ್ಷಣೆಗೆ ಮುಂದಾಗಬೇಕು. ಆ ಹಿನ್ನೆಲೆಯಲ್ಲಿ
ನಿಸ್ಸಂಕೋಚವಾಗಿ ಮಮತೆ ತೊಟ್ಟಿಲಿಗೆ ಹಾಕಿದರೆ ಅದರಿಂದ ಆ ಮಗು ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಭೀಮರಾಯ್‌ ಕಣ್ಣೂರ್‌ ಮಾತನಾಡಿ, ನಗರದ ರೈಲು ನಿಲ್ದಾಣ, ಆಳಂದ ರಸ್ತೆಯಲ್ಲಿರುವ ಅಮೂಲ್ಯ ಶಿಶುಗೃಹ, ಪ್ರಗತಿ ಕಾಲೋನಿಯಲ್ಲಿನ ಸರ್ಕಾರಿ ಬಾಲಕರ ಬಾಲ ಮಂದಿರದ ಎದುರು ಮಮತೆ ತೊಟ್ಟಿಲು ಹಾಕಲಾಗಿದೆ. ಅಗತ್ಯ ಇರುವ ಕಡೆ ಇಂತಹ ತೊಟ್ಟಿಲುಗಳನ್ನು ಹಾಕಲಾಗುವುದು.

ಜತೆಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆ, ತಾಲೂಕು ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮುಂದೆಯೂ ಮಮತೆ ತೊಟ್ಟಿಲು ಯೋಜನೆ ಜಾರಿಗೊಳಿಸಲಾಗುವುದು ಎಂದು ಹೇಳಿದರು.

Advertisement

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಸಿಸ್ಟರ್‌ ರೀನಾ ರಸ್ಮಿ ಡಿಸೋಜಾ, ಜಿಲ್ಲಾ ಬಾಲ ನ್ಯಾಯ ಮಂಡಳಿ ಸದಸ್ಯೆ ಗೀತಾ ಸಜ್ಜನಶೆಟ್ಟಿ, ಡಾನ್‌ ಭಾಸ್ಕೋ ಸಂಸ್ಥೆ ನಿರ್ದೇಶಕ ಫಾದರ್‌ ಸಜ್ಜಿತ್‌ ಜಾರ್ಜ್‌, ಸುಧಾ ಪಾಳಾ, ಕಾನೂನು ಸಲಹೆಗಾರ
ಭರತೇಶ ಶೀಲವಂತ, ಮಕ್ಕಳ ಸಹಾಯವಾಣಿ ನೋಡಲ್‌ ಅಧಿಕಾರಿ ಬಸವರಾಜ ಟೆಂಗಳಿ, ಮಾರ್ಗದರ್ಶಿ ಸಂಸ್ಥೆ ನಿರ್ದೇಶಕ ಆನಂದರಾಜ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next