ಬೆಂಗಳೂರು: ವಿಜಯಪುರದಲ್ಲಿ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತ ಗತಿಯಲ್ಲಿ ತನಿಖೆ ನಡೆಸಿ 90 ದಿನಗಳಲ್ಲಿ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಮಾಡಬೇಕು ಎಂದು ಮಹಿಳೆಯರು ಹಾಗೂ ಮಕ್ಕಳ ಮೇಲಿನ ಅತ್ಯಾಚಾರ ತಡೆ ಸಮಿತಿಯ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಪ್ರಮುಖ ಆರೋಪಿ ದೀಪಕ್ ಮುಳಸಾವಳಗಿ ತಲೆ ಮರೆಸಿಕೊಂಡಿದ್ದಾನೆ. ಆರೋಪಿಗಳ ವಿರುದ್ಧ ಪೋಕ್ಸೋ ಹಾಗೂ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ನಿಗದಿತ ಅವಧಿಯೊಳಗೆ ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಮುಖ್ಯಮಂತ್ರಿಯವರು ಬುಧವಾರ ಬಾಲಕಿಯ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ್ದು, 8.25 ಲಕ್ಷ ರೂ.ಪರಿಹಾರ ಘೋಷಿಸಿ, ಸ್ಥಳದಲ್ಲೇ 4.15 ಲಕ್ಷ ರೂ.ಗಳನ್ನು ಸ್ಥಳದಲ್ಲೇ ನೀಡಿದ್ದಾರೆ. ಎಷ್ಟೇ ಪರಿಹಾರ ನೀಡಿದರೂ, ಕುಟುಂಬಕ್ಕಾಗಿರುವ ನೋವು ಹೋಗಲಾಡಿಸಲು ಸಾಧ್ಯವಿಲ್ಲ. ಬಾಲಕಿಯ ಸಾವಿನಿಂದ ಆಕೆಯ ಕುಟುಂಬಕ್ಕೆ ನ್ಯಾಯ ದೊರಕಿಸಬೇಕಾಗಿದ್ದು, ಸರ್ಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಉಗ್ರಪ್ಪ ಮನವಿ ಮಾಡಿದರು.
ಎಚ್‌ಡಿಕೆಗೆ ತಿರುಗೇಟು ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದರೂ “ಯಾವುದೋ ಒಂದು ಸಮಿತಿ ಇದೆಯಲ್ಲ’ ಅದೇನು ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಉಗ್ರಪ್ಪ, ಇದು ಯಾವುದೋ ಸಮಿತಿ ಅಲ್ಲ. ಸದನದಲ್ಲಿ ಚರ್ಚೆಯಾಗಿ ಸದನ ಮತ್ತು ಸರ್ಕಾರ ರಚಿಸಿರುವ ಸಮಿತಿ. ಅವರದೇ ಪಕ್ಷದ ನಾಣಯ್ಯ ಇದಕ್ಕೆ ಮುಖ್ಯಸ್ಥರಾಗಿದ್ದರು.
ಅವರು ನಿರಾಕರಿಸಿದಾಗ ನನ್ನ ಮೇಲೆ ಒತ್ತಾಯ ತಂದು ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಲಾಯಿತು. ಕಳೆದ ಆರೇಳು ತಿಂಗಳಿಂದ ಸಮಿತಿಯ ಸದಸ್ಯರಿಗೆ ಟಿಎ -ಡಿಎ (ಭತ್ಯೆ) ಕೊಟ್ಟಿಲ್ಲ. ಅಷ್ಟಾದರೂ ನಾವು ಕೆಲಸ ಮಾಡುತ್ತಿದ್ದೇವೆ. ಮಧ್ಯಂತರ ವರದಿಯಲ್ಲಿ ಹಲವು ಶಿಫಾರಸುಗಳನ್ನು ಮಾಡಿದ್ದೇನೆ. ಅದರಲ್ಲಿ ಕೆಲವು ಶಿಫಾರಸುಗಳನ್ನು ಸರ್ಕಾರ ಜಾರಿಗೆ ತಂದಿದೆ. ಮಾಹಿತಿ ಇಲ್ಲದೇ, ಮನಬಂದಂತೆ ಮಾತನಾಡುವುದು ಸರಿಯಲ್ಲ ಎಂದರು.