Advertisement
ಇದು ಮಳೆಗಾಲ. ಆದರೆ, ಮಳೆ ಬರೋದು ಆಗೊಮ್ಮೆ ಈಗೊಮ್ಮೆ ಮಾತ್ರ. ಹಾಗಂತ ಛತ್ರಿ, ರೇನ್‌ಕೋಟ್ ಇಲ್ಲದೆ ಮನೆಯಿಂದ ಹೊರಡುವ ಹಾಗಿಲ್ಲ. ಬೆಳಗ್ಗೆ ಇದ್ದ ಬಿಸಿಲನ್ನು ಮರೆಸಿ ಬಿಡುವಂತೆ ಸಂಜೆ ಮಳೆ ಸುರಿಯಬಹುದು. ಹಾಗಾಗಿ ಛತ್ರಿಯನ್ನು ಜೊತೆಯಲ್ಲಿಯೇ ಒಯ್ಯುವುದು ಜಾಣತನ.
ಮೊದಲೆಲ್ಲ ಛತ್ರಿ ಎಂದ ಕೂಡಲೇ ಕಣ್ಮುಂದೆ ಬರುತ್ತಿದ್ದುದು, ಕಪ್ಪು ಬಣ್ಣದ, ಮಾರುದ್ದದ ಕೊಡೆಗಳು. ಚೀಲದಲ್ಲಿ ಇಡಲಾಗದ ಉದ್ದದ ಕೊಡೆಗಳನ್ನು, ಕೈಯಲ್ಲೇ ಹಿಡಿದುಕೊಳ್ಳಬೇಕಿತ್ತು. ಆದರೆ ಕಪ್ಪು ಬಣ್ಣದ ಅಂಥ ಛತ್ರಿಗಳನ್ನು ಬಣ್ಣ-ಬಣ್ಣದ ಕೊಡೆಗಳು ಯಾವಾಗಲೋ ರಿಪ್ಲೇಸ್ ಮಾಡಿಬಿಟ್ಟಿವೆ. ಅದರಲ್ಲೂ ಫ್ಯಾಷನ್ ಪ್ರಿಯರು, ಬೋರಿಂಗ್ ಬ್ಲಾಕ್ ಬದಲಿಗೆ ಬಣ್ಣದ ಛತ್ರಿಗಳನ್ನೇ ಹೆಚ್ಚು ಇಷ್ಟ ಪಡುತ್ತಾರೆ. ಕಾಮನಬಿಲ್ಲಿನ ಬಣ್ಣದ ಛತ್ರಿಗಳು, ಪಾರದರ್ಶಕ ಛತ್ರಿಗಳು, ಲೇಸ್‌ವರ್ಕ್ ಉಳ್ಳ ಕೊಡೆಗಳು, ನ್ಯೂಸ್ ಪೇಪರ್ (ದಿನ ಪತ್ರಿಕೆ) ಪ್ರಿಂಟ್ ಇರುವ ಛತ್ರಿಗಳು, ಎಲ್.ಇ. ಡಿ ಲೈಟ್‌ಗಳಿರುವ ಛತ್ರಿಗಳು…ಹೀಗೆ ಅನೇಕ ಪ್ರಕಾರದ ಛತ್ರಿಗಳು ಮಾರುಕಟ್ಟೆಯಲ್ಲಿವೆ. ಚಿತ್ತಾರದ ಛತ್ರಿಗಳು
ಬೇಡಿಕೆ ಹೆಚ್ಚಾದಂತೆ ಛತ್ರಿಗಳ ಮೇಲೆ ಕ್ರಿಯಾಶೀಲತೆಯ ಪ್ರಯೋಗಗಳೂ ನಡೆದವು. ಪಾರದರ್ಶಕ ಛತ್ರಿಗಳ ಕೆಳಬದಿ, ಲೇಸ್‌ವರ್ಕ್, ಬಣ್ಣ ಬಣ್ಣದ ಬಟ್ಟೆ, ಉಣ್ಣೆ, ವೆಲ್ವೆಟ್ (ಮಖಲ…), ಮಸ್ಲಿನ್ ಬಟ್ಟೆ (ತೆಳು ಹತ್ತಿಬಟ್ಟೆ), ಕ್ರೋಶ (ಕೊಕ್ಕೆ ಸೂಜಿಯಿಂದ ಮಾಡಿದ ದಾರದ ಹೆಣಿಗೆ ಕೆಲಸ) ಹಾಗೂ ಸ್ಯಾಟಿನ್ ಬಟ್ಟೆ ಉಳ್ಳ ಪಾರದರ್ಶಕ ಛತ್ರಿಗಳೂ ಸಿಗುತ್ತವೆ. ಪ್ಲಾಸ್ಟಿಕ್‌ನ ಪದರ ಇರುವ ಕಾರಣ, ಕೆಳಗಿರುವ ಬಟ್ಟೆ ಒದ್ದೆ ಆಗುವುದಿಲ್ಲ. ಹೂವು, ಹಕ್ಕಿ, ಎಲೆ, ಪೋಲ್ಕಾ ಡಾಟ್ಸ್, ಚಿಟ್ಟೆ, ತಾರೆ, ಹೃದಯಾಕಾರ, ಕ್ಯಾಂಡಿ, ನೀರಿನ ಗುಳ್ಳೆ, ಮೀನು, ಪುಗ್ಗ, ಮಿಂಚು, ಮೋಡ, ರಾಕೆಟ್, ಚಂದ್ರ, ಸೂರ್ಯ, ನಾಯಿ – ಬೆಕ್ಕಿನ ಹೆಜ್ಜೆ ಗುರುತುಗಳ ಚಿತ್ರಗಳು ಪಾರದರ್ಶಕ ಛತ್ರಿಗಳ ಮೇಲೆ ಈಗಾಗಲೇ ಮೂಡಿಬಂದಿವೆ. 3 ಫೋಲ್ಡ… ಅಥವಾ 4 ಫೋಲ್ಡ… ಛತ್ರಿಗಳಲ್ಲೂ ಪಾರದರ್ಶಕ ಛತ್ರಿಗಳು ಇವೆ!
Related Articles
ಒದ್ದೆಯಾದ ಈ ಛತ್ರಿಗಳನ್ನು ಮತ್ತೆ ಬ್ಯಾಗಿನಲ್ಲಿ ಇಟ್ಟುಕೊಳ್ಳುವುದು ದೊಡ್ಡ ತಲೆನೋವು. ಅದರಿಂದ ಬ್ಯಾಗ್ ಕೂಡಾ ಒದ್ದೆಯಾಗುತ್ತದೆ. ಆದರೆ, ಇನ್ಮುಂದೆ ಆ ತೊಂದರೆ ಅನುಭವಿಸಬೇಕಿಲ್ಲ. ಚಿಕ್ಕ ಛತ್ರಿಗಳನ್ನಿಡಲು, ಕೇಸ್‌ಗಳು ಸಿಕ್ಕುತ್ತಿವೆ. ಕನ್ನಡಕ, ಲೆನ್ಸ್‌ಗಳನ್ನು ಇಡಲು ಕೇಸ್‌ಗಳು ಇರುವಂತೆ ಛತ್ರಿಗಳಿಗೂ ಕೇಸ್‌ಗಳಿವೆ. ನೋಡಲು ಕ್ಯಾಪ್ಸೂಲ್‌ನಂತಿರುವ ಈ ಗೂಡಿನೊಳಗೆ ಒದ್ದೆ ಕೊಡೆಯನ್ನು ಇಟ್ಟು, ಚಿಂತೆ ಇಲ್ಲದೆ ಬ್ಯಾಗಿನಲ್ಲಿಡಬಹುದು. ಈ ಮಳೆಗಾಲದಲ್ಲಿ ಟ್ರೆಂಡಿಂಗ್‌ನಲ್ಲಿದೆ ಈ ಕ್ಯಾಪ್ಸೂಲ್ ಕೇಸ್ ಪಾಕೆಟ್ ಅಂಬ್ರೆಲಾ, ಅಂದರೆ 3 ಫೋಲ್ಡ… ಅಥವಾ 4 ಫೋಲ್ಡ… ಛತ್ರಿಗಳ ಗೂಡು! ಇವು ಬಹುತೇಕ ಎಲ್ಲಾ ಕೊಡೆ ಅಂಗಡಿಯಲ್ಲಿ ಮತ್ತು ಆನ್‌ಲೈನ್ ತಾಣಗಳಲ್ಲಿ ದೊರಕುತ್ತವೆ.
Advertisement
ಬಹುಬಗೆ ವಿನ್ಯಾಸಕ್ಯಾಪ್ಸೂಲ್ ಕೇಸ್‌ಗಳು ಕೇವಲ ಅದೊಂದು ವಿನ್ಯಾಸದಲ್ಲಷ್ಟೇ ಅಲ್ಲ, ಬಾಳೆ ಹಣ್ಣು, ಸೌತೆಕಾಯಿ, ಶೂ, ಬಿದಿರಿನ ತುಂಡು, ಮಿನಿಯನ್ ಗೊಂಬೆ, ಪರ್ಫ್ಯೂಮ್ ಬಾಟಲ್, ಕನ್ನಡಕದ ಬಾಕ್ಸ್ ಮುಂತಾದ ವಿನ್ಯಾಸಗಳಲ್ಲೂ ಲಭ್ಯ. ಇದೆಲ್ಲಾ ಓದಿ ಮುಗೀತಿದ್ದಂತೆಯೇ, ಒಂದು ಕ್ಯಾಪ್ಸೂಲ್ ಕೇಸ್ ತಗೋಬೇಕು ಅಂತ ನಿರ್ಧಾರ ಮಾಡಿದ್ದೀರಾ? ಹಾಗಾದ್ರೆ, ಮಳೆ ನಿಂತು ಹೋದ ಮೇಲೆ…ಕೊಡೆಗೊಂದು ಗೂಡು ರೆಡಿ ಇರುತ್ತೆ ಅಲ್ವಾ? ಟಿಪ್ ಟಿಪ್ ಮಳೆಗೆ ಟಿಪ್ಸ್
1. ಹೆಚ್ಚು ಚಿತ್ತಾರಗಳಿರುವ, ಬಣ್ಣಬಣ್ಣದ ಛತ್ರಿಗಳು ಎಲ್ಲ ದಿರಿಸಿಗೂ ಒಪ್ಪುವುದಿಲ್ಲ.
2. ನ್ಯೂಟ್ರಲ್ ಕಲರ್‌ನ ಛತ್ರಿಗಳು ಬಹುತೇಕ ಎಲ್ಲ ಬಣ್ಣದ ಬಟ್ಟೆಗಳಿಗೂ ಮ್ಯಾಚ್ ಆಗುತ್ತವೆ. ಅಂದರೆ, ನಿಮ್ಮ ಛತ್ರಿ ಬೂದು, ಕಂದು, ಕಪ್ಪು, ಬಿಳಿ, ಗಾಢ ನೀಲಿ ಬಣ್ಣದಲ್ಲಿರಲಿ.
3. ನಿಮ್ಮ ಡ್ರೆಸ್‌ನ ಬಣ್ಣ ಮತ್ತು ಚಿತ್ತಾರವುಳ್ಳ ಛತ್ರಿಯನ್ನು ಖರೀದಿಸಿ, ಬಟ್ಟೆ-ಛತ್ರಿಯನ್ನು ಅವಳಿಗಳಂತೆ ಮ್ಯಾಚ್ ಮಾಡಬಹುದು
4. 3-4 ಫೋಲ್ಡ್‌ನ ಛತ್ರಿಗಳನ್ನು ಹಿಡಿದುಕೊಳ್ಳಲು, ಬ್ಯಾಗ್‌ನಲ್ಲಿಡಲು ಸುಲಭ
5. ಹೂವು, ಗೊಂಬೆ, ಪೋಲ್ಕಾ ಡಾಟ್ಸ್‌ನಂಥ ಚಿತ್ತಾರಗಳು ಮಕ್ಕಳಿಗೆ ಹೆಚ್ಚು ಸೂಕ್ತ. ಹಾಗಾಗಿ, ಅಡ್ಡ, ಉದ್ದ ಪಟ್ಟೆಗಳ ಅಥವಾ ಪಾರದರ್ಶಕ ಛತ್ರಿಗಳು ಪ್ರೌಢರಿಗೆ ಹೊಂದುತ್ತದೆ. – ಅದಿತಿಮಾನಸ ಟಿ.ಎಸ್.