Advertisement

ಹಾಲಿನ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಿ

08:53 PM Jun 28, 2019 | Lakshmi GovindaRaj |

ದೊಡ್ಡಬಳ್ಳಾಪುರ: ಹಾಲಿನ ಗುಣಮಟ್ಟದಲ್ಲಿ ತಾಲೂಕು 3ನೇ ಸ್ಥಾನದಲ್ಲಿ ಇದೆ. ಇದನ್ನು ಪ್ರಥಮ ಸ್ಥಾನಕ್ಕೆ ತರಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಕೆಎಂಎಫ್‌ ನಿರ್ದೇಶಕ ಬಿ.ಸಿ.ಆನಂದ್‌ ಕುಮಾರ್‌ ಹೇಳಿದರು.

Advertisement

ನಗರದ ಹಾಲು ಶೀತಲ ಕೇಂದ್ರದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಿಗೆ ನಡೆದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲೂಕಿನ ಎಂಪಿಸಿಎಸ್‌ ಅಧ್ಯಕ್ಷರುಗಳು ಬಮೂಲ್‌ ಆಡಳಿತದಲ್ಲಿ ಮಾಡಿದ ದೊಡ್ಡ ರೀತಿಯ ಬದಲಾವಣೆಯಂತೆಯೇ ಹಾಲಿನ ಗುಣಮಟ್ಟ ಉತ್ತಮಗೊಳಿಸುವ ಕಡೆಗೂ ಮನಸ್ಸು ಮಾಡಿದರೆ ಗುರಿಮುಟ್ಟಲು ಸಾಧ್ಯವಾಗಲಿದೆ.

ಸಹಕಾರ ಸಂಘಗಳಿಗೆ ಸಂಬಂಧಿಸಿದಂತೆ ಹಲವಾರು ಕಾನೂನುಗಳ ತಿದ್ದುಪಡಿ ಮಾಡಲಾಗಿದೆ. ಎಂಪಿಸಿಎಸ್‌ ಅಧ್ಯಕ್ಷರುಗಳಿಗೆ ಸಾಕಷ್ಟು ಅಧಿಕಾರವನ್ನು ನೀಡಲಾಗಿದೆ. ಹೊಸದಾಗಿ ಜಾರಿಗೆ ಬಂದಿರುವ ಕಾನೂನುಗಳ ಬಗ್ಗೆ ಅರಿವು ಇದ್ದರೆ ಮಾತ್ರ, ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಲು ಸುಲಭವಾಗಲಿದೆ.

ಈ ನಿಟ್ಟಿನಲ್ಲಿ ಕಾರ್ಯಾಗಾರ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರೈತರು, ಸಂಘದ ಕಾರ್ಯದರ್ಶಿಗಳಿಗು ಹೊಸ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರ ನಡೆಸಲಾಗುವುದು ಎಂದರು.

Advertisement

ತಳಗವಾರ ಟಿ.ವಿ.ಲಕ್ಷ್ಮೀನಾರಾಯಣ್‌ ಮಾತನಾಡಿ, ಹೈನುಗಾರಿಕೆಗೆ ಮುಖ್ಯವಾಗಿ ಮೇವು, ನೀರು ಅಗತ್ಯ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಜನರ ಸಹಭಾಗಿತ್ವದಲ್ಲಿ ಕೆರೆಗಳನ್ನು ಅಭಿವೃದ್ಧಿಗೊಳಿಸುತ್ತಿರುವುದು ಸಾರ್ಥಕದ ಕೆಲಸ.

ರಸ್ತೆಗಳನ್ನು ಅಭಿವೃದ್ಧಿಗೊಳಿಸಿದರೆ ಒಂದೆರಡು ವರ್ಷಗಳಲ್ಲಿಯೇ ಕಿತ್ತು ಹೋಗಲಿವೆ. ಆದರೆ ಕೆರೆಗಳನ್ನು ಅಭಿವೃದ್ಧಿಪಡಿಸಿದರೆ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ತಾಲೂಕಿನ ಬಹುತೇಕ ಕೆರೆಗಳಲ್ಲಿ ಜಾಲಿ ಮರಗಳು ಬೆಳೆದು ಕೆರೆ ಅಂಗಳಕ್ಕೆ ದನ, ಮೇಕೆ, ಕುರಿಗಳನ್ನು ಮೇಯಿಸಲು ಸಹ ಹೋಗಲು ಸಾಧ್ಯವಿಲ್ಲದಾಗಿದೆ.

ಕೆರೆಗೆ ಮಳೆ ನೀರು ಬಂದರು ಒಂದೆರಡು ತಿಂಗಳಲ್ಲೇ ಬರಿದಾಗುತ್ತಿವೆ. ಹೀಗಾಗಿ ಕೆರೆ ಅಂಗಳದಲ್ಲಿನ ಜಾಲಿಮರಗಳನ್ನು ತೆರವುಗೊಳಿಸಲು ಶಾಸಕರು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಹಾಲು ಉತ್ಪಾದಕರನ್ನು ಅಧ್ಯಯನಕ್ಕಾಗಿ ಗುಜರಾತ್‌ ರಾಜ್ಯಕ್ಕೆ ಕಳುಹಿಸಲಾಗುತಿತ್ತು.

ಮುಂದಿನ ದಿನಗಳಲ್ಲಿ ಇಸ್ರೇಲ್‌ ದೇಶಕ್ಕೆ ಕಳುಹಿಸಿ ಅಲ್ಲಿ ಬಳಸುವ ಮಿತ ನೀರು, ಮಿತ ನೀರಿನಲ್ಲಿ ಹುಲ್ಲು ಬೆಳೆಯುವುದು, ಹೈನುಗಾರಿಕೆ ಸೇರಿದಂತೆ ಸಮಗ್ರ ಕೃಷಿಗೆ ಬಗ್ಗೆ ಅಧ್ಯಯನ ಮಾಡಲು ಕೆಎಂಎಫ್‌ ವತಿಯಿಂದ ಅವಕಾಶ ಕಲ್ಪಿಸಬೇಕು ಎಂದರು.

ಹುದ್ದೆ ನೀಡಿ: ತಾಲೂಕಿನ ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಇರುವ ಕಾಂಗ್ರೆಸ್ನ ಹಿರಿಯ ಮುಖಂಡ ತಿ.ರಂಗರಾಜು ಅವರು ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ ಅವರಿಗೆ ಪಕ್ಷದಲ್ಲಿ ಅಧಿಕಾರ ಅಥವಾ ಹುದ್ದೆ ನೀಡಿಲ್ಲ. ಅನುಭವಿಗಳಿಗೆ ಅವಕಾಶ ನೀಡುವ ಮೂಲಕ ಅವರ ಸೇವೆ ಬಳಸಿಕೊಳ್ಳಬೇಕು ಎಂದು ತಳಗವಾರ ಟಿ.ವಿ.ಲಕ್ಷ್ಮೀನಾರಾಯಣ್‌ ಶಾಸಕರಲ್ಲಿ ಮನವಿ ಮಾಡಿದರು.

ಶಾಸಕ ಟಿ.ವೆಂಕಟರಮಣಯ್ಯ ಕಾರ್ಯಾಗಾರ ಉದ್ಘಾಟಿಸಿದರು. ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎ.ಸಿ.ನಾಗರಾಜ್, ಒಕ್ಕೂಟದ ನಿರ್ದೇಶಕ ಎಂ.ವಿ. ಜಯರಾಮು, ಆರ್‌. ಸುಬ್ಬರಾಯಪ್ಪ, ದೊಡ್ಡಬಳ್ಳಾಪುರ ಶಿಬಿರದ ಉಪವ್ಯವಸ್ಥಾಪಕ ಡಾ.ಎಂ.ಶ್ರೀನಿವಾಸ್‌, ಹಾಲು ಉತ್ಪಾದಕರ ಸಹಕಾರ ಸಂಘದ ನೌಕರರ ಒಕ್ಕೂಟದ ತಾಲೂಕು ಅಧ್ಯಕ್ಷ ಟಿ.ಎಸ್‌.ರುದ್ರಪ್ಪ, ಕಾರ್ಯದರ್ಶಿ ಎಚ್‌.ನಾರಾಯಣಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next