Advertisement

ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿ: ಕಾರಜೋಳ

01:34 PM Jan 06, 2020 | Suhan S |

ಗದಗ: ಸ್ವಾತಂತ್ರ್ಯ ನಂತರ ಪರಿಶಿಷ್ಟ ವರ್ಗದ ನಿರೀಕ್ಷಿತ ಮಟ್ಟದಲ್ಲಿ ಸಾಮಾಜಿಕ, ಆರ್ಥಿಕ, ಏಳ್ಗೆ ಆಗದಿರುವುದಕ್ಕೆ ಶಿಕ್ಷಣದ ಕೊರತೆಯೇ ಮುಖ್ಯ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜನರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮಕ್ಕಳ ಶೈಕ್ಷಣಿ ಪ್ರಗತಿಗಾಗಿ ರಾಜ್ಯದ ನಾಲ್ಕು ವಿಭಾಗಗಳಲ್ಲಿ ತಲಾ 650 ಯುವತಿಯರ ವಸತಿ ಸಹಿತ ಪದವಿ ಕಾಲೇಜುಗಳನ್ನು ಸ್ಥಾಪಿಸಲು ಸರಕಾರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

Advertisement

ನಗರದ ಡಿಸಿಎಂ ರಸ್ತೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ 3.98 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಡಾ| ಬಾಬು ಜಗಜೀವನರಾಂ ಸಭಾ ಭವನ ಉದ್ಘಾಟಿಸಿ ಅವರು ಮಾತನಾಡಿದರು. ಗದಗ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ 46 ವಿದ್ಯಾರ್ಥಿ ನಿಲಯಗಳು, 12 ವಸತಿ ಶಾಲೆಗಳಿವೆ. 5500 ವಿದ್ಯಾರ್ಥಿಗಳಿಗೆ ಶಿಕ್ಷಣ ಸೌಲಭ್ಯ ಒದಗಿಸಲಾಗಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ 402 ವಿದ್ಯಾರ್ಥಿಗಳಿಗೆ, 87 ಲಕ್ಷ ರೂ. ನಗದು ಪುರಸ್ಕಾರ ನೀಡಿರುವುದು ಅಭಿನಂದನೀಯ.

ರಾಜ್ಯದಲ್ಲಿ ಈಗ 824 ವಸತಿ ಶಾಲೆಗಳಲ್ಲಿ 1.7 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿದ್ದಾರೆ. ರಾಜ್ಯದ ವಸತಿ ಶಾಲೆ ಮತ್ತು ವಸತಿ ನಿಲಯಗಳಲ್ಲಿ ಒಟ್ಟಾರೆ 1233 ವಿದ್ಯಾರ್ಥಿನಿಲಯಗಳಲ್ಲಿ 3.71 ಲಕ್ಷ ಪರಿಶಿಷ್ಟ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪರಿಶಿಷ್ಟ ಕಾಲೇಜು ಯುವತಿಯರ ಹಾಸ್ಟೆಲ್‌ ಗಳ ನಿರ್ಮಾಣಕ್ಕೆ ತಲಾ 50 ಕೋಟಿ ರೂ. ವೆಚ್ಚವಾಗಲಿದೆ. ಆ ಪೈಕಿ ರಾಜ್ಯ ಸರ್ಕಾರ 10 ಕೋಟಿ ರೂ. ನೀಡಲಿದ್ದು, ಇನ್ನುಳಿದ ಹಣವನ್ನು ಕೇಂದ್ರ ಸರ್ಕಾರ ಭರಸಲಿದೆ ಎಂದು ವಿವರಿಸಿದರು.

ಪ್ರಸಕ್ತ ರಾಜ್ಯ ಸರ್ಕಾರ ಪರಿಶಿಷ್ಟರ ಸಮುದಾಯದ ಅಭಿವೃದ್ಧಿಗಾಗಿ 30 ಸಾವಿರ ಕೋಟಿ ರೂ. ವಿಶೇಷ ಘಟಕ ಯೋಜನೆ ರೂಪಿಸಿದೆ. 1000 ಕೋಟಿ ರೂ. ವೆಚ್ಚದಲ್ಲಿ ಭೂ ಒಡೆತನ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಈಗಾಗಲೇ 247 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿ 25 ಸಾವಿರ ಪಂಪ್‌ಸೆಟ್‌ ಒದಗಿಸಲು ಕ್ರಮ ಕೈಕೊಳ್ಳಲಾಗಿದೆ. ಪರಿಶಿಷ್ಟರ ಸ್ವಯಂ ಉದ್ಯೋಗ, ಕೌಶಲ್ಯಾಭಿವೃದ್ಧಿ ಹಾಗೂ ಮನೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮೊದಲ ಆಧ್ಯತೆ ನೀಡಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಮಾತನಾಡಿ, ಬಡಜನರು, ರೈತರ, ಪರಿಶಿಷ್ಟರ, ಹಿಂದುಳಿದ, ಅಲ್ಪಸಂಖ್ಯಾತರ ಹೀಗೆ ವಿವಿಧ ವರ್ಗಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

Advertisement

ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಮಾತನಾಡಿ, ಗದಗ ಜಿಲ್ಲೆಯಲ್ಲಿ ಗದಗ- ಬೆಟಗೇರಿ ನಗರದಲ್ಲಿ 7 ಸೇರಿದಂತೆ ಜಿಲ್ಲೆಯಲ್ಲಿ 14 ಹೆಚ್ಚುವರಿ ವಿದ್ಯಾರ್ಥಿನಿಲಯಗಳಾಗಬೇಕು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 5 ವಿದ್ಯಾರ್ಥಿನಿಲಯಗಳಿಗೆ ಮಂಜೂರಾತಿ ನೀಡಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮಂಡಿಸುವ ಮುಂದಿನ ಬಜೆಟ್‌ನಲ್ಲಿ ಪ್ರಸ್ತಾಪಿಸುವಂತೆ ಸಚಿವರು ಪ್ರಸ್ತಾವನೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್‌.ಕೆ. ಪಾಟೀಲ ಮಾತನಾಡಿ, ಎಸ್‌ಸಿಪಿ, ಟಿಎಸ್‌ಪಿಯೋಜನೆಯಡಿ ಕೇವಲ ಚರಂಡಿ ಮತ್ತು ರಸ್ತೆಗಳು ಮಾತ್ರ ನಿರ್ಮಾಗೊಳ್ಳುತ್ತಿಲ್ಲ. ಜನರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರುವ ಉದ್ದೇಶದಿಂದ

ಇದೇ ಅನುದಾನದಡಿ ಬೆಟಗೇರಿಯಲ್ಲಿ 5 ಕೋಟಿ ರೂ. ಮೊತ್ತದಲ್ಲಿ ಹಾಕಿ ಕ್ರೀಡಾಂಗಣ, ಧೋಬಿಘಾಟ್‌ ಬಳಿ ಫುಟ್‌ಬಾಲ್‌ ಕ್ರೀಡಾಂಗಣ, ಐದು ಈಜು ಕೊಳಗಳ ನಿರ್ಮಾಣ ಸಾಧ್ಯವಾಗಿವೆ. ಅಲ್ಲದೇ, ಎಸ್‌ಸಿಪಿ, ಟಿಎಸ್‌ಪಿ ಅನುದಾನವನ್ನು ಆಯಾ ಆರ್ಥಿಕ ವರ್ಷದಲ್ಲೇ ಬಳಕೆ ಮಾಡಬೇಕು. ತಪ್ಪದ್ದಲ್ಲಿ ಸಂಬಂ ಧಿಸಿದ ಇಲಾಖೆ ಅಧಿ ಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂಬ ನಿಯಮ ಅನುದಾನ ಬಳಕೆ ವೇಗ ಹೆಚ್ಚಿಸಿದೆ. ಡಾ| ಬಾಬು ಜಗಜೀವನರಾಂ ಭವನ ಅತ್ಯಾಧುನಿಕವಾಗಿ ನಿರ್ಮಾಣವಾಗಿದೆ. ಅದನ್ನು ಸಂಪೂರ್ಣಹವಾನಿಯಂತ್ರಿತವನ್ನಾಗಿ ಮೇಲ್ದರ್ಜೆಗೇರಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ನಗರದಲ್ಲಿ ಭಾಗಶಃ ರಿಂಗ್‌ ರೋಡ್‌ ಪೂರ್ಣಗೊಂಡಿದ್ದು, ಕೊಪ್ಪಳ ಮಾರ್ಗದಿಂದ ರೋಣ ರಸ್ತೆಗೆ ಸಂಪರ್ಕ ಕಲ್ಪಿಸುವ ವರ್ತುಲ ರಸ್ತೆ ನೆನೆಗುದಿಗೆ ಬಿದ್ದಿದೆ. ಲೋಕೋಪಯೋಗಿ ಇಲಾಖೆಯಿಂದ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಎಚ್‌.ಕೆ.ಪಾಟೀಲ ಆಗ್ರಹಿಸಿದರು. ಜಿಪಂ ಅಧ್ಯಕ್ಷ ಸಿದ್ದು ಪಾಟೀಲ, ಉಪಾಧ್ಯಕ್ಷೆ ಮಲ್ಲವ್ವ ಬಿಚ್ಚಾರ, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಪೂಜಾರ, ತಾಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಆರ್‌.ಎಸ್‌. ಪೆದ್ದಪ್ಪಯ್ಯ, ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪರಶುರಾಮ ಶಿನ್ನಾಳಕರ, ಜಿಲ್ಲಾ ಧಿಕಾರಿ ಎಂ.ಜಿ. ಹಿರೇಮಠ , ಜಿಪಂ ಸಿಇಒ ಡಾ| ಆನಂದ ಕೆ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥಜೋಶಿ, ಪೌರಾಯುಕ್ತ ಮನ್ಸೂರ್‌ ಅಲಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಖಾಜಾ ಹುಸೇನ್‌ ಮುಧೋಳ, ನಗರಸಭೆ ಮಾಜಿ ಸದಸ್ಯ ಕೃಷ್ಣಾ ಪರಾಪುರ, ರಾಜು ಕುರಡಗಿ ಇದ್ದರು. ವಿವಿಧ ಕಾಮಗಾರಿ ಉದ್ಘಾಟನೆ ಸಮಾಜ ಕಲ್ಯಾಣ, ಲೋಕೋಪಯೋಗಿ ಇಲಾಖೆಗಳಿಂದ ನಿರ್ಮಾಣಗೊಂಡ ಅಭಿವೃದ್ಧಿ ಕಾರ್ಯಗಳನ್ನು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಲೋಕಾರ್ಪಣೆ ಮಾಡಿದರು.

ನಗರದ ಡಿಸಿ ಮಿಲ್‌ ರಸ್ತೆಯ ಡಾ| ಬಾಬು ಜಗಜೀವನ ರಾಮ ಸಮುದಾಯ ಭವನದಲ್ಲಿ ಒಂದೇ ವೇದಿಕೆಯಡಿ 232 ಕೋಟಿ ರೂ. ವೆಚ್ಚದಲ್ಲಿ ನಿಮಿಸಿದ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯ, ಮುಳಗುಂದ ಪಟ್ಟಣದಲ್ಲಿ 10.46 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜುಗಳನ್ನು ಉದ್ಘಾಟಿಸಿದರು. ಜತೆಗೆ ವಸತಿ ನಿಲಯಗಳ ನವೀಕರಣ, ದುರಸ್ತಿ ಹಾಗೂ ಕೊಠಡಿ ನಿರ್ಮಾಣದ 3.49 ಕೋಟಿ ರೂ. ಕಾಮಗಾರಿಗಳಿಗೆ

ಶಂಕುಸ್ಥಾಪನೆ ನೆರವೇರಿಸಿದರು. ವಸತಿ ಬಡಾವಣೆ ಲೋಕಾರ್ಪಣೆ: ಬೆಟಗೇರಿ ಭಾಗದಲ್ಲಿ ಹರಿಣಶಿಕಾರಿಗಳ ಸಮುದಾಯ ದವರಿಗಾಗಿ 2.20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 40 ಮನೆಗಳನ್ನು ಉದ್ಘಾಟಿಸಿದರು. ಬಳಿಕ ಹುಯಿಲಗೋಳ ರಸ್ತೆಯಲ್ಲಿ 3.38 ಕೋಟಿ ರೂ. ವೆಚ್ಚದಲ್ಲಿ ನಿಮೀಸಿದ ವೃತ್ತಿಪರ ಬಾಲಕಿಯರ ವಸತಿ ನಿಲಯ ಹಾಗೂ ರಾಜೀವ ಗಾಂ ಧಿ ನಗರದ ವಸತಿ ನಿಲಯದಲ್ಲಿ ಸ್ಥಾಪಿಸಲಾದ ಕಂಪ್ಯೂಟರ್‌ ಲ್ಯಾಬ್‌ ಅನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಉದ್ಘಾಟಿಸಿದರು. ನಂತರ ಬೆಟಗೇರಿ ಮುಕ್ತಿಧಾಮಕ್ಕೆ ಭೇಟಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next