Advertisement
ಅದೊಂದು ದಿನ ಐವರು ಹುಡುಗರು, ರಮೇಶ್ ಅರವಿಂದ್ ಅವರ ಅಪಾಯಿಂಟ್‌ಮೆಂಟ್ ಪಡೆದು ಅವರ ಮನೆಗೆ ಬಂದಿದ್ದರಂತೆ. “ಅದೇ ಸೋಫಾದಲ್ಲಿ ಕುಳಿತಿದ್ದರು ಅವರು. ತುಂಬಾ ನರ್ವಸ್ ಆಗಿದ್ದರು. ಎಲ್ಲರೂ ಹೊಸಬರೇ. ಸೋಫಾ ಎಡ್ಜ್ನಲ್ಲಿ ಕೂತಿದ್ದರು. ಒಂದು ಕಥೆ ಇದೆ ಎಂದರು. ಮಧ್ಯೆಮಧ್ಯೆ ಏನೇನೋ ಪೀಠಿಕೆ ಹಾಕುತ್ತಿದ್ದರು. ಮೊದಲು ಕಥೆ ಹೇಳಿ, ಇಷ್ಟ ಆದರೆ ಮುಂದೆ ನೋಡೋಣ ಅಂತ ಹೇಳಿದೆ. ಅದರಲ್ಲಿ ಒಬ್ಬರು ಕಥೆ ಹೇಳಿದರು.
Related Articles
Advertisement
“ಅದೊಂದು ದಿನ ಟ್ರೇಲರ್ ಶೂಟ್ ಅಂತಾಯ್ತು. ಹೊಸಬರಲ್ಲಿ ಟೆನ್ಶನ್ ಎದ್ದು ಕಾಣುತಿತ್ತು. ಸೆಟ್ ಇನ್ನೂ ತಯಾರಾಗಿರಲಿಲ್ಲ. ಬೇರೆ ಏನಾದರೂ ಮಾಡಬೇಕು ಎಂದು ಅಲ್ಲಿಂದ ಇಲ್ಲಿಯವರೆಗೂ ಮಾರ್ಚ್ ಫಾಸ್ಟ್ ಮಾಡಿಕೊಂಡು ಬನ್ನಿ ಎಂದರು. ಬಂದೆ, ಅದೇ ಐಕಾನಿಕ್ ಆಗಿ ಹೋಯ್ತು. ಅಲ್ಲಿಂದ ಒಂದೊಂದೇ ಶಾಟ್ ತೆಗೆಯುತ್ತಾ ಹೋದರು. ಪ್ರತಿಯೊಂದು ದೃಶ್ಯ ಸಹ ಚೆನ್ನಾಗಿ ಬರುತಿತ್ತು. ಶೂಬಿಂದ ಮೀನು ಬೀಳುವ ದೃಶ್ಯ ಇತ್ತಲ್ಲ, ಅದು ಮುಂಚೆ ಬೇರೆ ಇತ್ತು.
ಬೇರೆ ಏನಾದರೂ ಮಾಡೋನ, ಒಂದು ಮೀನು ಸಿಗುತ್ತಾ ಎಂದೆ. ಹತ್ತು ನಿಮಿಷದಲ್ಲಿ ಕೈಲಿ ಮೀನಿತ್ತು. ಸಾಮಾನ್ಯವಾಗಿ ಏನಾದರೂ ಕೇಳಿದರೆ, ಆಗಲ್ಲಾ ಅಂತಾರೆ. ಏನೇನೋ ಸಬೂಬುಗಳು ಬರುತ್ತವೆ. ಆದರೆ, ಈ ತಂಡದವರು ಮಾತ್ರ ಸೀನ್ ಬ್ಯೂಟಿಗೆ ಏನು ಬೇಕಾದರೂ ಮಾಡುವುದಕ್ಕೆ ತಯಾರಾಗುತ್ತಿದ್ದರು. ಜೈಲು ದೃಶ್ಯಗಳಿವೆಯಲ್ಲಾ, ಅದಕ್ಕಾಗಿ ಒಂದು ದೊಡ್ಡ ಸೆಟ್ ಹಾಕಿಸಿಬಿಟ್ಟಿದ್ದರು …’ ತಂಡದ ಬಗ್ಗೆ ಖುಷಿಯಿಂದ ಹೇಳುತ್ತಾ ಹೋದರು ರಮೇಶ್. “ಹೋಗಿ ನೋಡಿದರೆ ಫುಲ್ ಸೆಟ್ ಹಾಕಿಸಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಅಲ್ಲೇ ನಡೆಯಿತು.
ಒಟ್ಟು 40 ದಿನಗಳ ಕಾಲ ಚಿತ್ರಕ್ಕೆ ಚಿತ್ರೀಕರಣ ಮಾಡಿದ್ದೇವೆ. ಎಲ್ಲವನ್ನೂ ಚೆನ್ನಾಗಿ ಮಾಡಬೇಕು ಎಂಬ ಆಸೆಯಿಂದ ಚಿತ್ರ ಮಾಡಿದ್ದಾರೆ. ಅಲ್ಲಿದ್ದವರೆಲ್ಲಾ ಫಾರಿನ್ ಸಿನಿಮಾ ನೋಡಿಕೊಂಡವರು. ಬೇರೆಬೇರೆ ಚಿತ್ರಗಳ ಫ್ರೆಮ್ಸ್, ಲೈಟಿಂಗ್, ಕಲರ್‌ಗಳನ್ನ ರೆಫೆರೆನ್ಸ್ ಆಗಿ ತೋರಿಸಬಲ್ಲವರು. ಹಾಗಾಗಿ ಪ್ರತಿಯೊಂದು ದೃಶ್ಯಕ್ಕೂ ಒಂದೊಂದು ವಿಷಯವನ್ನು ಆ್ಯಡ್ ಮಾಡುತ್ತಾ ಮಾಡುತ್ತಾ ಇವತ್ತು ಈ ಚಿತ್ರ ರೂಪುಗೊಂಡಿದೆ. ನನಗೆ ನಿಜವಾಗಲೂ ಈ ಚಿತ್ರದ ಬಗ್ಗೆ ಹೆಮ್ಮೆ ಇದೆ. ಚಿತ್ರದಲ್ಲಿ ಸಂಗೀತ, ಅಭಿನಯ, ಛಾಯಾಗ್ರಹಣ ಎಲ್ಲವೂ ಚೆನ್ನಾಗಿದೆ’ ಎನ್ನುತ್ತಾರೆ ರಮೇಶ್.
ಅವರು ಹೇಳುವಂತೆ ಇದೊಂದು ಸಂಬಂಧಗಳ ಸಂಭ್ರಮಿಸುವ ಕಥೆಯಂತೆ. “ಪ್ರತಿ ಚಿತ್ರ ಹೀರೋ ಮತ್ತು ಹೀರೋಯಿನ್ ಸಂಬಂಧದ ಕಥೆ ಹೇಳಿದರೆ, ಇಲ್ಲಿ ತಂದೆ-ಮಗಳ ಸಂಬಂಧದ ಕಥೆ ಇದೆ. ಇದೊಂದು ಹೃದಯ ಮುಟ್ಟುವ ಚಿತ್ರ. ನಿಮ್ಮಲ್ಲಿರುವ ನವಿರಾದ ಭಾವನೆಯನ್ನು ತಟ್ಟುವ ವಿಷಯ ಈ ಚಿತ್ರದಲ್ಲಿದೆ. ಇಲ್ಲಿ ಅನಂತರಾಮಯ್ಯ ಎಂಬ ಪಾತ್ರ ಮಾಡಿದ್ದೀನಿ. ಕಪಟ ಗೊತ್ತಿರದ, ಪರಿಶುದ್ಧ ಮನಸ್ಸಿನ ಪಾತ್ರವಾದು. ಅವನ ಮುಗ್ಧ ಪ್ರಪಂಚಕ್ಕೆ ಸಿಡಿಲು ಹೊಡೆದರೆ ಏನಾಗತ್ತೆ ಎನ್ನುವುದು ಚಿತ್ರದ ಕಥೆ’ ಎನ್ನುತ್ತಾರೆ ರಮೇಶ್. ಅದರ ಜೊತೆಗೆ ಇಂಥದ್ದೊಂದು ಚಿತ್ರವನ್ನು ನೋಡಿ, ಪ್ರೋತ್ಸಾಹಿಸಬೇಕು ಎನ್ನುತ್ತಾರೆ.