ಹುಣಸೂರು: ಜ್ಞಾನವಿಲ್ಲದ ಶಿಕ್ಷಣ ಸುವಾಸನೆ ಇಲ್ಲದ ಪುಷ್ಪದಂತೆ, ಹೀಗಾಗಿ ಬದುಕಿನ ಹಾದಿಯಲ್ಲಿ ಮುನ್ನಡೆಯುವಾಗ ನಿಮ್ಮೊಂದಿಗೆ ನೀವು ಗಳಿಸಿದ ಶಿಕ್ಷಣ, ಜ್ಞಾನವು ಜೊತೆಯಾಗಿ ಇರಬೇಕು ಎಂದು ಪಿರಿಯಾಪಟ್ಟಣ ಸರಕಾರಿ ಕಾಲೇಜಿನ ಕನ್ನಡ ಉಪನ್ಯಾಸಕ ಬಿ.ಎಂ.ಶಿವಸ್ವಾಮಿ ಹೇಳಿದರು.
ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಸಾಂಸ್ಕೃತಿಕ ಮತ್ತು ಕ್ರೀಡಾ ವಿಭಾಗದ ಸಮಾರೋಪದಲ್ಲಿ ಸಮಾರಂಭದಲ್ಲಿ ಮಾತನಾಡಿ, ಜ್ಞಾನವಿಲ್ಲದ ಬದುಕು ಎಂದಿಗೂ ಅತಂತ್ರವೇ ಆಗಿದೆ. ನಿಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಜ್ಞಾನಗಳಿಸಲು ಹೆಚ್ಚಿನ ಆಸಕ್ತಿವಹಿಸಿ, ಇದಕ್ಕಾಗಿ ನಿತ್ಯ ಪತ್ರಿಕೆ, ನಿಯತಕಾಲಿಕ ಹಾಗೂ ಪಠ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದುವ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲಿ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಹವ್ಯಾಸ ಬೆಳೆಸಿಕೊಳ್ಳಿ ಎಂದರು.
ವೃತ್ತ ನಿರೀಕ್ಷಕ ಧರ್ಮೇಂದ್ರ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಎಷ್ಟೇ ಎತ್ತರಕ್ಕೆ ಬೆಳೆದರೂ, ದೊಡ್ಡ ಸಾಧಕ ನಾಗಿದ್ದರೂ ವಿದ್ಯೆ ನೀಡಿದ ಗುರುಗಳನ್ನು ಮರೆಯಬಾರದು, ಇದು ಸ್ಪರ್ಧಾತ್ಮಕ ಯುಗ, ಸಣ್ಣಪುಟ್ಟ ಉದ್ಯೋಗಕ್ಕೂ ಪೈಪೋಟಿ ಇದೆ. ಇದರಿಂದಾಗಿ ಓದುವ ಜೊತೆಯಲ್ಲೇ ಸ್ಪರ್ಧಾತ್ಮಕ ವಿಷಯಗಳನ್ನು ಅಭ್ಯಸಿಸಿ ಎಂದು ಹೇಳಿದರು.
ವಿಶ್ರಾಂತ ಪ್ರಾಚಾರ್ಯ ಮೋದೂರು ಮಹೇಶಾರಾಧ್ಯ ಮಾತನಾಡಿ, ವಿದ್ಯಾರ್ಥಿಗಳು ಅಂಕ ಗಳಿಕೆಯ ಯಂತ್ರಗಳಾಗಬೇಡಿ, ಮೌಲ್ಯಯುತ ಶಿಕ್ಷಣದ ಕಡೆ ಗಮನ ನೀಡಿ, ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ, ಓದಿನ ಜೊತೆಗೆ ಇತರೆ ಚಟುವಟಿಕೆಗಳಲ್ಲೂ ಪಾಲ್ಗೊಂಡು ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ನಿಮ್ಮ ಜ್ಞಾನ ವೃದ್ಧಿಸಿಕೊಳ್ಳಿ ಎಂದರು.
ಪ್ರಾಂಶುಪಾಲ ಚೆಲುವಯ್ಯ, ಕಾಲೇಜು ಅಭಿವೃದ್ಧಿ ಸಮಿತಿಯ ಖಜಾಂಚಿ ನಾಗರಾಜರಾವ್, ರತ್ನಪುರಿ ಕಾಲೇಜಿನ ಪ್ರಾಚಾರ್ಯ ನಾಗರಾಜ್, ವಿಶ್ರಾಂತ ಪ್ರಾಂಶುಪಾಲ ಜವರಯ್ಯ ಮಾತನಾಡಿದರು. ನಗರಸಭಾ ಸದಸ್ಯೆ ಸೌರಭ ಸಿದ್ದರಾಜು, ಸಿಡಿಸಿಸದಸ್ಯ ಚಿನ್ನವೀರಯ್ಯ, ವಿವಿಧ ಕಾಲೇಜುಗಳ ಪ್ರಾಂಶುಪಾಲರಾದ ನಾಗರಾಜ್, ಗೀತಾ, ನಾಗಮಲ್ಲೇಶ್, ಸಾಂಸ್ಕೃತಿಕ ವೇದಿಕೆಯ ಅಧ್ಯಾಪಕ ಕಾರ್ಯದರ್ಶಿ ಪಿ.ಜೆ.ಕೃಷ್ಣ, ವಿದ್ಯಾರ್ಥಿ ಕಾರ್ಯದರ್ಶಿ ಪ್ರಕೃತಿ, ಘಟಕಗಳ ಸಂಚಾಲಕರು ಹಾಜರಿದ್ದರು.