ಕನ್ನಡ ಚಿತ್ರರಂಗದಲ್ಲಿ ಒಂದರ ಹಿಂದೊಂದು ಚಿತ್ರಗಳನ್ನು ನಿರ್ಮಾಣ ಮಾಡುತ್ತ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಿರ್ಮಾಪಕರ ಪುಷ್ಕರ್ ಮಲ್ಲಿಕಾರ್ಜುನಯ್ಯ ಸದ್ಯ ಕೋವಿಡ್ 19 ಲಾಕ್ ಡೌನ್ ನಿಂದಾಗಿ ಈಗ ಕೃಷಿ ಕ್ಷೇತ್ರದಲ್ಲೂ ಒಂದಷ್ಟು ಪ್ರಯೋಗಕ್ಕೆ ಮುಂದಾಗಿದ್ದಾರೆ. ರೈತರಿಗೆ ನೆರವಾಗುವುದರ ಸಲುವಾಗಿ ವೈಜ್ಞಾನಿಕ ವಿಧಾನದ ಕೃಷಿಯಲ್ಲಿ ರೈತರಿಗೆ ಸಹಾಯ ಮಾಡಲು ತಮ್ಮದೇಯಾದ ತಂಡವೊಂದನ್ನು ಕಟ್ಟಿಕೊಂಡು ಪುಷ್ಕರ್ ಒಂದಷ್ಟು ಕೆಲಸ ಶುರು ಮಾಡಿದ್ದಾರೆ.
ತಮ್ಮ ಕೃಷಿ ಪ್ರಯೋಗದ ಬಗ್ಗೆ ಪುಷ್ಕರ್ ಹೇಳುವುದು ಹೀಗೆ, ನನ್ನ ತಂದೆ ಹೈಸ್ಕೂಲ್ ಟೀಚರ್. ತಾತ ಕೂಡ ಕೃಷಿ ಮಾಡುತ್ತಿದ್ದರು. ಆದರೆ ನಾನು ಬೇರೆ ಕಡೆ ತೊಡಗಿಸಿಕೊಂಡಿದ್ದರಿಂದ ಕೃಷಿಯಲ್ಲಿ ಸಕ್ರಿಯವಾಗಿರಲು ಆಗಿರಲಿಲ್ಲ. ಆದರೆ ಈಗ ನನಗೆ ಕೃಷಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅನಿಸಲು ಶುರುವಾಗಿದೆ. ಹಾಗಂತ ಸಿನಿಮಾ ಇಂಡಸ್ಟ್ರಿ ಬಿಡೋದಿಲ್ಲ. ಮುಂದೆ ಕೃಷಿ ಉತ್ತಮ ಬೇಡಿಕೆ ಪಡೆದುಕೊಂಡು ಒಳ್ಳೆಯ ಉದ್ಯಮವಾಗಲಿದೆ. ಈಗಾಗಲೇ ನನ್ನ ಸಮಾನ ಮನಸ್ಕ 10 ಮಂದಿ ಸ್ನೇಹಿತರ ಜೊತೆ ಸೇರಿಕೊಂಡು ಕೃಷಿ ಕ್ಷೇತ್ರದಲ್ಲಿ ಏನನ್ನಾದರೂ ಅಭಿವೃದ್ಧಿ ಮಾಡಬೇಕು ಎಂದುಕೊಂಡಿದ್ದೇವೆ ಎನ್ನುತ್ತಾರೆ.
ಇಂದು ಎಲ್ಲಾ ಕ್ಷೇತ್ರಗಳು ಡಿಜಿಟಲೈಸ್ ಆಗಿ ಅಭಿವೃದ್ಧಿ ಹೊಂದುತ್ತಿವೆ. ಆದರೆ, ರೈತನಿಗೆ ಆ ಸೌಲಭ್ಯ ಇಲ್ಲ. ಹಾಗಾಗಿ ಗ್ರಾಹಕರಿಗೆ ರೈತರಿಂದ ನೇರವಾಗಿ ಸಂಪರ್ಕ ಕಲ್ಪಿಸಲು ಒಂದು ವೈಜ್ಞಾನಿಕ ವಿಧಾನದಲ್ಲಿ ವೇದಿಕೆ ಕಲ್ಪಿಸಲು ಆಲೋಚಿಸುತ್ತಿದ್ದೇವೆ. ರೈತರು ಯಾರು ಎಷ್ಟು ಏನನ್ನು ಬೆಳೆಯುತ್ತಿದ್ದಾರೆ ಎಂಬ ಡೇಟಾ ಒಂದು ಕಡೆ ಸಿಗುವಂತಿರಬೇಕು. ಸಾವಯವ ಕೃಷಿ ವಿಧಾನ ಅಳವಡಿಕೆ, ಕೋಲ್ಡ್ ಸ್ಟೋರೇಜ್ ವ್ಯವಸ್ಥೆ, ಕಟಾವಿನ ಮೊದಲು ಗ್ರಾಹಕರನ್ನು ಗುರುತಿಸುವುದು, ವರ್ಷಪೂರ್ತಿ ಹಣ್ಣು ತರಕಾರಿಗೆ ಒಂದೇ ಬೆಲೆ ನಿಗದಿ ಇತ್ಯಾದಿ ವಿಷಯದಲ್ಲಿ ಕಾರ್ಯಪ್ರವೃತ್ತರಾಗಲಿದ್ದೇವೆ. ಇದಕ್ಕಾಗಿ ಒಂದು ಆ್ಯಪ್ ಕೂಡ ಡೆವಲಪ್ ಮಾಡುತ್ತಿದ್ದೇವೆ ಎಂದಿದ್ದಾರೆ ಪುಷ್ಕರ್.
ಇನ್ನು ಇಸ್ರೇಲ್ ಮಾದರಿ ಕೃಷಿ ಪುಷ್ಕರ್ ಅವರ ಗಮನ ಸೆಳೆದಿದೆಯಂತೆ. ಈ ಬಗ್ಗೆ ಮಾತನಾಡುವ ಪುಷ್ಕರ್, ಇಸ್ರೇಲ್ ಮಾದರಿ ಕೃಷಿ ಅಧ್ಯಯನ ಮಾಡಿದ್ದೇವೆ. ಅಲ್ಲಿ ಬಹಳ ಬಿಸಿಲು. ಕೃಷಿ ಭೂಮಿಯೂ ಕಡಿಮೆ. ಆದರೂ ಕೃಷಿಯಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ನಮ್ಮ ದೇಶದಲ್ಲಿ ಹವಾಮಾನ, ನೀರು ಎಲ್ಲ ಬಹಳ ಚೆನ್ನಾಗಿದೆ. ಇದನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ. ನಮ್ಮ ಹಿರಿಯರು ಅನುಸರಿಸಿದ ವಿಧಾನ ಬಳಸಿಕೊಂಡರೂ ಸಾಕು ಪರಿಸ್ಥಿತಿ ಸುಧಾರಿಸುತ್ತೆ. ಇಲ್ಲಿನ ಕೃಷಿ ಅಧಿಕಾರಿಗಳು, ಕೃಷಿ ತಜ್ಞರು, ಪರಿಣಿತ ರೈತರನ್ನೂ ಭೇಟಿ ಮಾಡಿ ಈ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎನ್ನುತ್ತಾರೆ.
ಕೃಷಿಯಿಂದಲೇ ಕೋಟಿಗಟ್ಟಲೆ ಸಂಪಾದಿಸುವವರೂ ಇದ್ದಾರೆ ಎನ್ನುವ ಪುಷ್ಕರ್, ಕೃಷಿಯ ವಾಣಿಜ್ಯ ಬೆಳೆಗಳನ್ನು ವಿದೇಶಗಳಿಗೆ ರಫ್ತು ಮಾಡುವ ಸಾಕಷ್ಟು ಅವಕಾಶಗಳು ನಮ್ಮಲ್ಲಿದೆ. ಈ ನಿಟ್ಟಿನಲ್ಲಿ ರೈತರನ್ನು ಮುಖ್ಯವಾಹಿನಿಗೆ ತರಬೇಕು ಅನ್ನೋದು ನಮ್ಮ ಉದ್ದೇಶ. ಇದನ್ನು ಹಂತಹಂತವಾಗಿ ಮಾಡಬೇಕು ಎನ್ನುತ್ತಾರೆ.