Advertisement

Purushothamana Prasanga ಖುಷಿ ಕೊಡುವ ಪ್ರಸಂಗವಿದು: ಮೊದಲ ಚಿತ್ರದ ಬಗ್ಗೆ ಕಾಪಿಕಾಡ್ ಮಾತು

02:48 PM Feb 11, 2024 | Team Udayavani |

ದೇವದಾಸ್‌ ಕಾಪಿಕಾಡ್‌- ತುಳು ಸಿನಿಮಾ, ನಾಟಕ ಪ್ರೇಮಿಗಳಿಗೆ ಈ ಹೆಸರು ಚಿರಪರಿಚಿತ. ತಮ್ಮ ಅದ್ಭುತ ಕಾಮಿಡಿ ಟೈಮಿಂಗ್‌ ಮೂಲಕ ತುಳು ಸಿನಿಪ್ರೇಮಿಗಳನ್ನು ನಗಿಸಿ, ತೆಲಿಕೆದ ಬೊಳ್ಳಿ ಎಂಬ ಬಿರುದು ಪಡೆದಿರುವ ದೇವದಾಸ್‌ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದನ್ನು ನಿರ್ದೇಶಿಸಿದ್ದಾರೆ. ಅದು “ಪುರುಷೋತ್ತಮನ ಪ್ರಸಂಗ’. ಈ ಚಿತ್ರ ಮಾರ್ಚ್‌ 1 ರಂದು ತೆರೆಕಾಣುತ್ತಿದೆ. ರಾಷ್ಟ್ರಕೂಟ ಪಿಕ್ಚರ್ ಬ್ಯಾನರ್‌ನಡಿ ನಿರ್ಮಾಣವಾಗಿರುವ ಈ ಚಿತ್ರದ ಮೇಲೆ ದೇವದಾಸ್‌ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ತಮ್ಮ ನಿರ್ದೇಶನದ ಚೊಚ್ಚಲ ಕನ್ನಡ ಸಿನಿಮಾ ಕುರಿತು ದೇವದಾಸ್‌ ಕಾಪಿಕಾಡ್‌ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Advertisement

ಮೊದಲ ಬಾರಿಗೆ ಕನ್ನಡ ಸಿನಿಮಾ ನಿರ್ದೇಶಿಸಿದ್ದೀರಿ. ಹೇಗಿತ್ತು ಅನುಭವ?

ಇದು ಬಯಸದೇ ಬಂದ ಭಾಗ್ಯ ಎನ್ನಬಹುದು. ನಿರ್ಮಾಪಕರಾದ ರವಿಕುಮಾರ್‌ ಹಾಗೂ ಸಂಶುದ್ದೀನ್‌ ಅದೊಂದು ದಿನ ಕರೆ ಮಾಡಿ, “ಸಿನಿಮಾ ಮಾಡಿಕೊಡಿ’ ಎಂದರು. ನಾನು ತುಂಬಾ ಆಲೋಚಿಸಿದೆ. ಏಕೆಂದರೆ ನನ್ನದೇ ಆದ ಕಮಿಟ್‌ಮೆಂಟ್‌ ಜಾಸ್ತಿ ಇತ್ತು. ಆ ನಂತರ ಸಿನಿಮಾ ಮಾಡಲು ನಿರ್ಧರಿಸಿ, ಕಥೆ ಬಗ್ಗೆ ಹೇಳಿದೆ. ತುಂಬಾ ಖುಷಿಯಿಂದ ಒಪ್ಪಿಕೊಂಡರು. ಅಲ್ಲಿಂದ ನನ್ನ ಮೊದಲ ಕನ್ನಡ ಸಿನಿಮಾದ ಜರ್ನಿ ಶುರುವಾಯಿತು. ಈ ಜರ್ನಿಯಲ್ಲಿ ನಿರ್ಮಾಪಕರು ನೀಡಿದ ಪ್ರೋತ್ಸಾಹವನ್ನು ಮರೆಯುವಂತಿಲ್ಲ. ತುಂಬಾ ಒಳ್ಳೆಯ ನಿರ್ಮಾಣ ಸಂಸ್ಥೆ.

ಪುರುಷೋತ್ತಮನ ಪ್ರಸಂಗದ ಕಥೆ ಬಗ್ಗೆ ಹೇಳಿ?

ಇದೊಂದು ಪಕ್ಕಾ ಫ್ಯಾಮಿಲಿ ಸ್ಟೋರಿ. ಸಿಂಪಲ್ಲಾಗಿ ಎಲ್ಲರಿಗೂ ಇಷ್ಟವಾಗುವ ಕಥೆ. ಮಕ್ಕಳ ಹಾಗೂ ಪಾಲಕರ ವಿದೇಶ ಮೋಹ ಹಾಗೂ ನಮ್ಮ ದೇಶದ ಹಿರಿಮೆ ಸೇರಿದಂತೆ ಹಲವು ಅಂಶಗಳ ಜೊತೆ ಸಿನಿಮಾ ಸಾಗುತ್ತದೆ. ಚಿತ್ರದಲ್ಲಿ ಕಾಮಿಡಿ ಜೊತೆಗೆ ಯೋಚಿಸುವ ಅಂಶಗಳೂ ಇವೆ.

Advertisement

ತುಳು ಕಾಮಿಡಿಯಲ್ಲಿ ನಿಮ್ಮದು ದೊಡ್ಡ ಹೆಸರು. ಇಲ್ಲಿ ಕಾಮಿಡಿಗೆ ಎಷ್ಟು ಪ್ರಾಮುಖ್ಯತೆ ಇದೆ?

ಚಿತ್ರದಲ್ಲಿ ಕಾಮಿಡಿ ಇದೆ. ಆದರೆ ಅದು ಸೆಟಲ್ಡ್‌ ಕಾಮಿಡಿ. ಕಾಮಿಡಿ ಮಾಡಬೇಕೆಂಬ ಕಾರಣಕ್ಕೆ ಎಲ್ಲೂ ತುರುಕಿಲ್ಲ. ಸನ್ನಿವೇಶಕ್ಕನುಗುಣವಾಗಿ ಕಾಮಿಡಿ

ಸಾಗಿಬಂದಿದೆ. ಕಥೆಯಲ್ಲಿ ಬರುವ ಪಾತ್ರಗಳ ಸಂಭಾಷಣೆಗಳು ಅಲ್ಲಲ್ಲಿ ನಗು ತರಿಸುತ್ತವೆ. ಇದು ಮಂಗಳೂರು ಕನ್ನಡದಲ್ಲಿ ಮೂಡಿಬಂದ ಚಿತ್ರ. ಚಿತ್ರದಲ್ಲಿ ಸೆಂಟಿಮೆಂಟ್‌ಗೂ ಮಹತ್ವವಿದೆ.

ನವನಟ ಅಜಯ್‌ ಬಗ್ಗೆ ಹೇಳಿ?

ತುಂಬಾ ಸಿಂಪಲ್‌ ಹುಡುಗ. ವಿದೇಶದಲ್ಲಿ ನಟನಾ ತರಬೇತಿ ಪಡೆದು ಬಂದಿದ್ದಾನೆ. ಯಾವುದೇ ಅಹಂ ಇಲ್ಲದ, ಏನೇ ಹೇಳಿದರೂ ಆಸಕ್ತಿಯಿಂದ ಮಾಡುವ ಗುಣ ಅಜಯ್‌ ಗಿದೆ. ಆತನಿಗೆ ಚಿತ್ರರಂಗದಲ್ಲಿ ಭವಿಷ್ಯವಿದೆ. ಪಾತ್ರಕ್ಕೆ ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದಾನೆ.

ತುಳುವಿನಲ್ಲಿ 9 ಸಿನಿಮಾ ನಿರ್ದೇಶಿಸಿರುವ ನಿಮಗೆ ಕನ್ನಡದ ಮೊದಲ ಸಿನಿಮಾ ಸವಾಲೆನಿಸಿತೆ?

ಸವಾಲು ಇದ್ದಿದ್ದು ನಿಜ. ಆದರೆ ಪೂರ್ವತಯಾರಿ ಹಾಗೂ ತಂಡ ನೀಡಿದ ಬೆಂಬಲದಿಂದ ಎಲ್ಲವೂ ಅಚ್ಚುಕಟ್ಟಾಗಿ ಮೂಡಿಬಂದಿದೆ. ಚಿತ್ರದ ಕಥೆಗೆ ಪೂರಕವಾಗಿರು ವುದರಿಂದ ತುಳು ಚಿತ್ರರಂಗದ ಅನೇಕ ಕಲಾವಿದರು ನಟಿಸಿದ್ದಾರೆ. ಮಂಗಳೂರು ಸುತ್ತಮುತ್ತ ಹಾಗೂ ದುಬೈನಲ್ಲಿ ಚಿತ್ರೀಕರಣ ಮಾಡಿದ್ದೇವೆ.

ಹಾಡುಗಳ ಬಗ್ಗೆ ಹೇಳಿ?

ಚಿತ್ರದಲ್ಲಿ 4 ಹಾಡುಗಳಿವೆ. ಜಯಂತ್‌ ಕಾಯ್ಕಿಣಿ, ದೊಡ್ಡ ರಂಗೇ ಗೌಡ, ನಾಗೇಂದ್ರ ಪ್ರಸಾದ್‌ ಹಾಗೂ ನಾನು ಹಾಡು ಬರೆದಿದ್ದೇವೆ. ಚಿತ್ರದಲ್ಲಿ ಹಿನ್ನೆಲೆ ಸಂಗೀತ ತುಂಬಾ ಚೆನ್ನಾಗಿ ಮೂಡಿ ಬಂದಿದೆ

ಮಾರ್ಚ್‌ ಮೊದಲ ವಾರ ತೆರೆಕಾಣುತ್ತಿರುವ ಚಿತ್ರದ ಮೇಲೆ ನಿಮ್ಮ ನಿರೀಕ್ಷೆ ಎಷ್ಟು?

ಒಂದು ಕಡೆ ಭಯ ಇನ್ನೊಂದು ಕಡೆ ಖುಷಿ. ಜನ ಸಿನಿಮಾವನ್ನು ಹೇಗೆ ಸ್ವೀಕರಿಸುತ್ತಾರೋ ಎಂಬ ಕಾತರವಿದೆ. ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರಿಗೆ ಈ ಚಿತ್ರ ಮೋಸ ಮಾಡುವುದಿಲ್ಲ ಎಂಬ ಗ್ಯಾರಂಟಿಯಂತೂ ನೀಡುತ್ತೇನೆ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next