Advertisement
ಶಿರಾ ತಾಲೂಕಿನ ಪ್ರಸಿದ್ಧ ದೇವಾಲಯಗಳಲ್ಲಿ ಪುರಲೇಹಳ್ಳಿ ಭೂತಪ್ಪನೂ ಒಂದು. ದೊಡ್ಡ ಗುಡಿ, ಗೋಪುರ ಅಥವಾ ಯಾವುದೇ ಶಿಲ್ಪ ಕಲಾಕೃತಿಗಳನ್ನೂ ಹೊಂದಿರದ ಈ ದೇವರಿಗೆ ಬಯಲೇ ಆಲಯ. ಇಲ್ಲಿನ ದೇವರನ್ನು ಚಿನ್ನ, ಬೆಳ್ಳಿ ಅಥವಾ ಯಾವುದೋ ಅಮೃತ ಶಿಲೆಯಲ್ಲಿ ಕೆತ್ತನೆ ಮಾಡಿಲ್ಲ. ಇಲ್ಲಿ, ಗುಂಡುಕಲ್ಲುಗಳೇ(ಭೂತಪ್ಪನ ಬೆನವ) ದೇವರು. ಈ ದೇವರಿಗೆ ಯಾವುದೇ ಒಕ್ಕಲುತನವಿಲ್ಲ. ಯಾವುದೇ ಜಾತಿ ತಾರತಮ್ಯವಿಲ್ಲ. ಎಲ್ಲಾ ವರ್ಗದವರೂ ಬಂದು ಮುಕ್ತವಾಗಿ ಪೂಜೆ ಮಾಡಿಸಿಕೊಂಡು ಹೋಗಬಹುದು. ದೇವರು ಬಯಲಿನಲ್ಲೇ ಇರುವುದರಿಂದ ನೀವೇ ಹೂ ಹಾಕಿ, ತೆಂಗಿನಕಾಯಿಯನ್ನು ಒಡೆದು, ಅಗರಬತ್ತಿ, ಕರ್ಪೂರ ಹಚ್ಚಿ, ಆರತಿಯನ್ನೂ ಬೆಳಗಬಹುದು. ತೀರಾ ಹತ್ತಿರದಿಂದಲೇ ದೇವರಿಗೆ ನಮಸ್ಕರಿಸಬಹುದು. ಹಾಗಂತ ಇಲ್ಲಿ ಪೂಜಾರಪ್ಪ ಇಲ್ಲ ಅಂತಲ್ಲ. ರಂಗನಹಳ್ಳಿಯ ಕುಂಚಿಟಿಗ ಸಮುದಾಯದ ಜಲಧಿನವರು ಪೂಜಾರಿಕೆ ಮಾಡುತ್ತಾರೆ. ಒಂದು ವೇಳೆ ಸ್ಥಳದಲ್ಲಿ ಅವರಿಲ್ಲ ಅಂದುಕೊಳ್ಳಿ, ಆಗ ಭಕ್ತಾದಿಗಳೇ ಪೂಜೆ ಮಾಡುತ್ತಾರೆ. ಈ ದೇವಾಲಯದ ವಿಶೇಷವೇ ಇದು. ಈ ಭೂತಪ್ಪನ ಗುಡಿಯು, ಮೂಲತಃ ಶಿರಾ ತಾಲೂಕಿನ ರಂಗನಹಳ್ಳಿ ಗ್ರಾಮಕ್ಕೆ ಸೇರಿದ್ದರೂ ಪುರಲೇಹಳ್ಳಿ ಭೂತಪ್ಪನೆಂದೇ ಕರೆಯಲಾಗುತ್ತದೆ.
ಭೂತಪ್ಪ, ಜನರ ಮಧ್ಯೆ ಇರುವ ದೇವರು. ಇಲ್ಲಿ ಗ್ರಾಮೀಣ ಸೊಗಡು ಇರುವುದರಿಂದ ಹೆಚ್ಚು ಜನರು ಬರುತ್ತಾರೆ. ಕಡುಬಡವನಿಂದಿಡಿದು ಕೋಟ್ಯಧಿಪತಿಯವರೆಗೂ ಈ ದೇವರಿಗೆ ಭಕ್ತರಿದ್ದಾರೆ. ಭಕ್ತಿ, ನಂಬಿಕೆ ಉಳಿಸಿಕೊಂಡಿರುವ ಕಾರಣ, ಈಗಲೂ ಲಕ್ಷಾಂತರ ಭಕ್ತರು ಇಲ್ಲಿಗೆ ಬರುತ್ತಾರೆ. ದೇಗುಲದ ಹಿನ್ನೆಲೆ
ಪುರಾಣ ಪುರುಷ, ವೀರಗಾರ, ಜುಂಜಪ್ಪ ಈ ಭಾಗದಲ್ಲಿ ದನಕರುಗಳನ್ನು ಮೇಯಿಸಿಕೊಂಡು ಜೀವನ ಸಾಗಿಸುತ್ತಿದ್ದನಂತೆ. 7 ನಾಲಿಗೆಯ ದುರ್ಗಿ ಕಾವಲಿರುವ ಹುಲ್ಲುಗಾವಲಿನಲ್ಲಿ ಅದೊಮ್ಮೆ ಜುಂಜಪ್ಪ ದನ ಮೇಯಿಸುತ್ತಿದ್ದರಂತೆ. ಈ ವೇಳೆ, ತಮ್ಮ ಜಾಗದಲ್ಲಿ ದನ ಮೇಯುಸುತ್ತಿದ್ದೀಯೆ ಎಂಬ ವಿಚಾರವಾಗಿ ದುರ್ಗಿ ಹಾಗೂ ಜುಂಜಪ್ಪನ ನಡುವೆ ಯುದ್ಧ ನಡೆಯುತ್ತೆ. ಈ ಸಂದರ್ಭದಲ್ಲಿ ದುರ್ಗಿಯನ್ನು ಸೋಲಿಸಲು ಜುಂಜಪ್ಪನಿಗೆ ಗುಂಡುಕಲ್ಲಿನ ರೂಪದಲ್ಲಿರುವ ಭೂತಪ್ಪ ಸಹಾಯ ಮಾಡುತ್ತಾನೆ. ಹೀಗಾಗಿ ಜುಂಜಪ್ಪ ಈಗಿರುವ ಜಾಗದಲ್ಲಿ ಭೂತಪ್ಪನನ್ನು ಪ್ರತಿಷ್ಠಾಪಿಸಿ, ಪ್ರತಿದಿನ ನಿನಗೆ ಪೂಜೆ ನಡೆಯಲಿ, ವಾರಕ್ಕೆ ಒಂದು ದಿನ ನನಗೂ ಪೂಜೆ ನಡೆಯಲಿ ಎಂದು ಹಾರೈಸಿದನಂತೆ. ನಂತರ, ಈಗಿರುವ ಭೂತಪ್ಪನ ಗುಡಿಯ ಎರಡು ಕಿ.ಮೀ.ದೂರಲ್ಲಿ ಕಳುವರಳ್ಳಿ ಬಳಿ ಜುಂಜಪ್ಪ ನೆಲಗೊಂಡು, ಅಲ್ಲೇ ಸಮಾಧಿಯಾಗಿದ್ದಾನೆ ಎಂಬ ನಂಬಿಕೆಗಳು ಈಗಲೂ ಚಾಲ್ತಿಯಲ್ಲಿವೆ. ಪ್ರತಿ ಯುಗಾದಿಯ ಮಾರನೇ ದಿನ ವರ್ಷತೊಡಕಿನಂದು ಎರಡೂ ಗುಡಿಗೆ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಆದರೆ, ಭೂತಪ್ಪನ ಗುಡಿಗೆ ಅಂದು ಬೆಳಗ್ಗೆ ಭೇಟಿ ಕೊಡುವ ಭಕ್ತರು ರಾತ್ರಿಯ ನಂತರ ಯಾರೂ ಇರುವುದಿಲ್ಲ. ಏಕೆಂದರೆ, ಭೂತಪ್ಪ ಸಂಹಾರ ಮಾಡಿದ್ದ ದುರ್ಗಿಯರು ಇಲ್ಲಿಗೆ ಬಲಿಕೊಟ್ಟಿರುವ ಪ್ರಾಣಿಗಳ ರಕ್ತ ಕುಡಿಯಲು ಬರುತ್ತಾರೆ ಎಂಬ ನಂಬಿಕೆ ಇದೆ. ದುರ್ಗಿಯ ಕಣ್ಣಿಗೆ ಬಿದ್ದರೆ ಏನಾದರೂ ತೊಂದರೆಯಾಗುತ್ತದೆ ಎಂಬ ಕಾರಣದಿಂದಲೇ ರಾತ್ರಿಯ ವೇಳೆ ಅಲ್ಲಿರಲು ಜನ ಹೆದರುತ್ತಾರೆ.
Related Articles
ಭೂತಪ್ಪನಿಗೆ ಪ್ರತಿದಿನವೂ ಪೂಜೆ ನಡೆಯುತ್ತದೆ. ಆದರೆ, ಶನಿವಾರ, ಸೋಮವಾರ ವಿಶೇಷವಾಗಿರುತ್ತದೆ. ಈ ಎರಡೂ ದಿನಗಳಲ್ಲಿ ಭಕ್ತಾದಿಗಳ ಸಂಖ್ಯೆಯೂ ಹೆಚ್ಚಿರುತ್ತದೆ. ಹರಕೆ ಹೊತ್ತವರು ಶನಿವಾರ, ಭಾನುವಾರ ಬಂದು ದೇವರಿಗೆ ಪೂಜೆ ಮಾಡಿಸಿ, ಹರಕೆ ತೀರಿಸುತ್ತಾರೆ. ಯುಗಾದಿಯ ಮಾರನೇ ದಿನ, ಅಂದರೆ ವರ್ಷತೊಕಡಿನಂದು ಇಲ್ಲಿ ಜಾತ್ರೆಯೇ ನೆರೆಯುತ್ತದೆ. ಆದರೆ, ವರ್ಷತೊಡಕಿನ ರಾತ್ರಿ ಇಲ್ಲಿ ಯಾರೂ ಇರುವುದಿಲ್ಲ. ಅವತ್ತಿನ ರಾತ್ರಿ ಈ ಪ್ರದೇಶ ಸಂಪೂರ್ಣ ನಿರ್ಜನವಾಗಿರುತ್ತದೆ. ಇಲ್ಲಿಗೆ ಆಂಧ್ರ ಪ್ರದೇಶದ ಮಡಕಶಿರಾ, ಕಲ್ಯಾಣದುರ್ಗ, ಪಾವಗಡ, ಚಳ್ಳಕೆರೆ, ಹಿರಿಯೂರು, ಚಿತ್ರದುರ್ಗ, ಬೆಂಗಳೂರು ಸೇರಿದಂತೆ ವಿವಿಧೆಡೆಗಳಿಂದ ಲಕ್ಷಾಂತರ ಭಕ್ತರು ಬರುತ್ತಾರೆ.
Advertisement
ದರ್ಶನಕ್ಕೆ ಕಾಯಬೇಕಿಲ್ಲಇಲ್ಲಿಗೆ ಲಕ್ಷಾಂತರ ಭಕ್ತರು ಬಂದರೂ ನೂಕುನುಗ್ಗಲು ಇರುವುದಿಲ್ಲ. ಗಂಟೆಗಟ್ಟಲೇ ಸಾಲಿನಲ್ಲಿ ಕಾಯುವ ಅಗತ್ಯವೇ ಇಲ್ಲ. ದೇವರು ಬಯಲಿನಲ್ಲೇ ಇರುವುದರಿಂದ ನೇರವಾಗಿ ಪೂಜೆ ಮಾಡಿಸಿಕೊಂಡು ಹೋಗಬಹುದು. ರಕ್ತ ಶಾಂತಿ
ಮದುವೆ, ಸಂತಾನ ಭಾಗ್ಯ, ಕಾಯಿಲೆ ಮುಂತಾದ ಸಮಸ್ಯೆಗಳಿಂದ ಬಳಲುವವರು ಭೂತಪ್ಪನಿಗೆ ಹರಕೆ ಹೊರುತ್ತಾರೆ. ಸಮಸ್ಯೆಗೆ ಪರಿಹಾರ ದೊರಕಿದರೆ ಈಡೇರಿದರೆ ರಕ್ತಶಾಂತಿ ಮಾಡಿಸುತ್ತೇನೆ, ನಾಲ್ಕೈದು ಜನರಿಗೆ ಮಾಂಸದೂಟ ಹಾಕಿಸುತ್ತೇನೆ, ಮೂರು ಅಥವಾ ಏಳು ದಿನ ಮಂದೆ ಕಾಯುತ್ತೇನೆ ಎಂದು ಹರಕೆ ಹೊತ್ತುಕೊಳ್ಳುತ್ತಾರೆ. ಅದರಂತೆ ಪರಿಹಾರ ಕಂಡುಕೊಂಡಾಗ ಕುರಿ, ಮೇಕೆ, ಕೋಳಿಯನ್ನು ದೇವರ ಮುಂದೆ ಬಲಿಕೊಟ್ಟು, ವಿಶೇಷ ಪೂಜೆ ಮಾಡಿಸಿ, ನಾಲ್ಕೈದು ಮಂದಿಗೆ ಅಲ್ಲೇ ಅಡುಗೆ ಮಾಡಿಸಿ ಮಾಂಸದೂಟ ಹಾಕಿಸುತ್ತಾರೆ. ಇನ್ನು ಕೆಲವರು ದೇವರಿಗೆ ಪೂಜೆ ಮಾಡಿಸಿಕೊಂಡು ಮನೆಯಲ್ಲಿ ಪ್ರಾಣಿಗಳನ್ನು ಕೊಯ್ದು ಮಾಂಸದೂಟ ಮಾಡಿ, ಹರಕೆ ತೀರಿಸುತ್ತಾರೆ. ದೇಗುಲ ಕಟ್ಟಲು ದೇವರೇ ಅನುಮತಿ ಕೊಟ್ಟಿಲ್ಲ
ಶಿರಾ ತಾಲೂಕಿನಲ್ಲಿ ನೂರಾರು ಭೂತಪ್ಪನ ಗುಡಿಗಳು ಇವೆ. ಆದರೆ, ಅವ್ಯಾವುವೂ ಈ ಪುರಲೇಹಳ್ಳಿ ಭೂತಪ್ಪನಷ್ಟು ಪ್ರಸಿದ್ಧಿ ಪಡೆದಿಲ್ಲ. ಅಲ್ಲದೆ, ಈ ದೇವರಿಗೆ ದೇವಾಲಯ ಕಟ್ಟಲು ಭಕ್ತರು ಸಿದ್ಧರಿದ್ದರೂ ದೇವರೇ ಅನುಮತಿ ಕೊಟ್ಟಿಲ್ಲ ಎಂದು ಭಕ್ತರಾದ ಗೋಮಾರದಳ್ಳಿ ಮಂಜುನಾಥ್ ಹೇಳುತ್ತಾರೆ. ಭೂತಪ್ಪನಿಗೆ ಎಲ್ಲೂ ದೊಡ್ಡ ಮಟ್ಟದಲ್ಲಿ ದೇವಾಲಯಗಳನ್ನು ಕಟ್ಟಿಲ್ಲ. ಅದು ಬಯಲಿನಲ್ಲೇ ಇರಬೇಕು ಎಂಬುದು ಹಿರಿಯರ ಮಾತು. ಹೀಗಾಗಿ, ಮಳೆ ಗಾಳಿಯಿಂದ ರಕ್ಷಣೆ ನೀಡುವ ದೃಷ್ಟಿಯಿಂದ ಕೇವಲ ಚಪ್ಪಡಿ ಕಲ್ಲುಗಳನ್ನು ನಿಲ್ಲಿಸಿ ಸಣ್ಣದಾಗಿ ಗುಡಿಯನ್ನು ಕಟ್ಟಿರುತ್ತಾರೆ ಅಷ್ಟೇ. ಬ್ಯಾಟೆ ಸೊಪ್ಪು ಶ್ರೇಷ್ಠ
ಈ ದೇವರಿಗೆ ಬ್ಯಾಟೆ ಸೊಪ್ಪು, ಕನಗಲ ಹೂ ಶ್ರೇಷ್ಠವಾದದ್ದು. ಯಾವುದಾದರೂ ಮಹತ್ವದ ಕೆಲಸಕ್ಕೆ ಕೈಹಾಕುವ ಮೊದಲು ಭಕ್ತರು ದೇವರಲ್ಲಿ ಹೂ ಕೇಳಬೇಕಾದರೆ, ಕನಗಲ ಹೂವನ್ನು ದೇವರ ಮೇಲಿಟ್ಟು ಕೇಳುತ್ತಾರೆ. ಹೂ ಬಲಗಡೆ ಬಿದ್ರೆ ಕೆಲಸ ಆಗುತ್ತೆ, ಎಡಗಡೆ ಬಿದ್ರಿ ಆಗುವುದಿಲ್ಲ ಎಂಬ ನಂಬಿಕೆ ಈಗಲೂ ಇದೆ. ಈ ದೇವರಿಗೆ ಅರೆ ವಾದ್ಯವೇ ಪ್ರಮುಖವಾದದ್ದು. ದೇವರ ಉತ್ಸವ, ಕುರಿ ಬಲಿ ಕೊಡುವವರು ಅರೆ ವಾದ್ಯದವರನ್ನು ಕರೆಯಿಸಿ ಬಡಿಸುತ್ತಾರೆ.
ಶಿರಾ ತಾಲೂಕು ಕೇಂದ್ರದಿಂದ 16 ಕಿ.ಮೀ. ದೂರವಿರುವ ಈ ದೇಗುಲಕ್ಕೆ ಬೆಳಗ್ಗಿನಿಂದ ಸಂಜೆಯವರೆಗೂ ಖಾಸಗಿ, ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಇದೆ. ತಾವರೇಕೆರೆಗೆ ಬಂದರೆ ಅಲ್ಲಿಂದ ದೇವಸ್ಥಾನಕ್ಕೆ ಹೋಗಲು ಸಾಕಷ್ಟು ಆಟೋಗಳು ಸಿಗುತ್ತವೆ. ಮೂಲ ಸೌಲಭ್ಯ ಇಲ್ಲಿಗೆ ಬರುವ ಭಕ್ತರಿಗೆ ದೇಗುಲದ ಟ್ರಸ್ಟ್‌ನವರು, ಸ್ಥಳೀಯ ಆಡಳಿತದಿಂದ ಕುಡಿಯುವ ನೀರು, ಶೌಚಾಲಯ, ಉಳಿದುಕೊಳ್ಳಲು ಮಂಟಪಗಳನ್ನು ನಿರ್ಮಿಸಿದ್ದಾರೆ. ಮನೆಗಳು, ಸಾಕಷ್ಟು ಅಂಗಡಿ ಮುಂಗಟ್ಟುಗಳೂ ಇವೆ. ಇತ್ತೀಚೆಗೆ ಯಾತ್ರಿ ನಿವಾಸವನ್ನೂ ಕಟ್ಟಲಾಗಿದೆ. ಈ ದೇವಾಲಯದಲ್ಲಿ ದೇವರು, ಭಕ್ತರ ನಡುವೆ ಅರ್ಚಕರಿಲ್ಲ. ಭಕ್ತರೇ ಮಂಗಳಾರತಿ ಮಾಡವುದು. ಹೋಮ, ಹವನಗಳಲ್ಲಿ ಭಾಗಿಯಾಗಬಹುದು. ನಿರ್ಬಂಧವಿಲ್ಲ. ಹುಣ್ಣಿಮೆಯ ಬೆಳ್ಳಂಬೆಳಗ್ಗೆ ಭಕ್ತಾದಿಗಳೇ ದೇವರಿಗೆ ಅಭಿಷೇಕವನ್ನು ಮಾಡಬಹುದು. ಬಹುಶಃ ಈ ರೀತಿಯ ಅವಕಾಶವಿರುವುದು ಇದೊಂದೇ ದೇವಸ್ಥಾನದಲ್ಲಿ ಅನ್ನೋದು ವಿಶೇಷ. ಭೋಗೇಶ್ ಆರ್.ಮೇಲುಕುಂಟೆ