Advertisement

ಕಲ್ಕಿ ಕುಣಿದ ಕ್ಷಣ

09:55 AM Oct 27, 2018 | |

“ಕಾರಣಮಹಂ’! ಇದು ಭೂತಾಯಿಯ ಕತೆ ಸಾರುವ ನೃತ್ಯರೂಪಕ. ಮನುಷ್ಯನನ್ನೇ ಕಲ್ಕಿ ಎಂದು ಬಿಂಬಿಸಲಾಗಿದೆ. ಭೂಮಿ ಹಾಳಾಗುತ್ತಿರುವುದು ಮನುಷ್ಯನಿಂದ, ಭೂಮಿಯನ್ನು ಕಾಪಾಡಬೇಕಾದವನೂ ಮನುಷ್ಯನೇ ಎಂಬ ಜಾಗೃತಿ ಮೂಡಿಸುವುದು ಈ ನೃತ್ಯದ ಉದ್ದೇಶ…

Advertisement

ಪುರಾಣ ಕಾಲದಲ್ಲಿ ಭೂತಾಯಿಗೆ ಕಷ್ಟಗಳು ಎದುರಾದಾಗ, ಭೂಮಿಯಲ್ಲಿ ದೌರ್ಜನ್ಯಗಳು ಹೆಚ್ಚಾದಾಗ ಶ್ರೀಮನ್ನಾರಾಯಣ ಅವತಾರವನ್ನೆತ್ತಿ ಬಂದಿದ್ದಾನೆ. ಮತ್ಸé, ಕೂರ್ಮ, ವರಾಹ, ರಾಮ, ಕೃಷ್ಣಾವತಾರ ತಳೆದು ಭೂತಾಯಿಯನ್ನು ಕಾಪಾಡಿದ್ದಾನೆ. ಹಾಗೆಯೇ, ಕಲಿಯುಗದಲ್ಲಿ ಕಲ್ಕಿಯಾಗಿ ಅವತರಿಸಿ ನಮ್ಮನ್ನು ರಕ್ಷಿಸಲಿದ್ದಾನೆ ಎಂಬ ನಂಬಿಕೆಯಿದೆ. ಹಾಗಾದರೆ, ಕಲ್ಕಿ ಎಂದರೆ ಯಾರು, ಆತ ಬರುವುದು ಯಾವಾಗ ಎಂಬ ಪ್ರಶ್ನೆಗಳಿಗೆ ಉತ್ತರಿಸುವ, “ಕಾರಣಮಹಂ’ ಎಂಬ ಭರತನಾಟ್ಯ ಕಾರ್ಯಕ್ರಮವೊಂದು ನಡೆಯುತ್ತಿದೆ. 

ನಾನೇ ಕಾರಣ, ನಾನೇ ಉತ್ತರ!
ಬೆಂಗಳೂರಿನ “ನಾಟ್ಯ ಲಹರಿ’ ನೃತ್ಯಶಾಲೆಯ ವಿದುಷಿ ಮಮತಾ ಕಾರಂತ್‌ ಮತ್ತು ತಂಡ, “ಕಾರಣಮಹಂ’ ಅನ್ನು ನಡೆಸುತ್ತಿದೆ. ಕಾರಣ, ಅಹಂ; ಅಂದರೆ “ನಾನೇ ಕಾರಣ’ ಎಂಬರ್ಥದ ಈ ನೃತ್ಯರೂಪಕದಲ್ಲಿ, ಮನುಷ್ಯನನ್ನೇ ಕಲ್ಕಿ ಎಂದು ಬಿಂಬಿಸಲಾಗಿದೆ. ಭೂಮಿ ಹಾಳಾಗುತ್ತಿರುವುದು ಮನುಷ್ಯನಿಂದ, ಭೂಮಿಯನ್ನು ಕಾಪಾಡಬೇಕಾದವನೂ ಮನುಷ್ಯನೇ ಎಂಬ ಜಾಗೃತಿ ಮೂಡಿಸುವುದು ಈ ನೃತ್ಯದ ಉದ್ದೇಶ.

ಇದು ಭೂತಾಯಿಯ ಮಾತು…
45 ನಿಮಿಷಗಳ ಈ ನೃತ್ಯದಲ್ಲಿ, ಭೂತಾಯಿಯೇ ತನ್ನ ಕತೆ ಹೇಳುತ್ತಾಳೆ. ತಾನು ಹೇಗೆ ಹುಟ್ಟಿದೆ, ತನ್ನಲ್ಲಿ ಜೀವರಾಶಿ ಹುಟ್ಟಿದ ಬಗೆ ಹೇಗೆ, ಮನುಷ್ಯನ ವಿಕಾಸ ಹೇಗಾಯಿತು, ನಾಗರಿಕತೆ ಹೇಗೆ ಬೆಳೆದು ಬಂತು? ಬೆಂಕಿ, ಬೇಟೆ, ವ್ಯವಸಾಯ, ಯಂತ್ರಗಳ ಮೂಲಕ ಮನುಷ್ಯ ಹೇಗೆ ಬೆಳೆದು ಬಂದ ಎಂಬುದನ್ನು ಭೂತಾಯಿ, ಕತೆಯ ಮೂಲಕ ಹೇಳುತ್ತಾಳೆ. ಮನುಷ್ಯ ದುರಾಸೆಯಿಂದ ಹೇಗೆ ತನ್ನ ಮೇಲೆ ದೌರ್ಜನ್ಯ ಎಸಗುತ್ತಿದ್ದಾನೆ ಎಂದು ವಿವರಿಸುತ್ತಾ ಕಣ್ಣೀರಾಗುತ್ತಾಳೆ. ನಂತರ, ಪುರಾಣ ಕತೆಯ ಮೂಲಕ ನೃತ್ಯ ಮುಂದುವರಿಯುತ್ತದೆ. ಹಿಂದೆ ತನಗೆ ಕಷ್ಟಗಳು ಎದುರಾದಾಗ, ದೇವರು ಬೇರೆ ಬೇರೆ ಅವತಾರಗಳನ್ನೆತ್ತಿ ಬಂದಿದ್ದನ್ನು ನೆನೆಯುತ್ತಾಳೆ. ಈಗ ಕಲ್ಕಿಯಾಗಿ ಬಂದು ತನ್ನ ಮಕ್ಕಳನ್ನು ರಕ್ಷಿಸುತ್ತಾನಾ ಎಂಬ ಪ್ರಶ್ನೆಯನ್ನು ಮುಂದಿಡುತ್ತಾಳೆ.

  ನೃತ್ಯದ ಮುಂದಿನ ಭಾಗದಲ್ಲಿ, ಮನುಷ್ಯರೇ ಒಬ್ಬೊಬ್ಬರಾಗಿ ಭೂಮಿಯ ರಕ್ಷಣೆಗೆ ಬರುತ್ತಾರೆ. ಎಲ್ಲರೂ ಒಂದಾಗಿ ಬಂದು, ಗಿಡ ನೆಡುತ್ತಾರೆ, ಮಾಲಿನ್ಯ ತಡೆಯುತ್ತಾರೆ. ಕಾರಣಮಹಂ ಅಂದರೆ, ನಾನೇ ಕಾರಣ ಎಂದರ್ಥ. ಭೂಮಿಯ ಈ ಸ್ಥಿತಿಗೂ ನಾವೇ ಕಾರಣ, ಭೂಮಿಯ ರಕ್ಷಣೆಗೂ ನಾವೇ ಕಾರಣ. ಕಲ್ಕಿಗೋಸ್ಕರ ಕಾಯುವುದು ಬೇಡ, ನಾವೇ ಕಲ್ಕಿಗಳಾಗೋಣ ಎಂಬ ಸಂದೇಶದೊಂದಿಗೆ ನೃತ್ಯ ಮುಕ್ತಾಯವಾಗುತ್ತದೆ.

Advertisement

ವಿಜ್ಞಾನ, ಪುರಾಣ, ಕಲೆಯ ಸಂಗಮ
“ಭೂಮಿಯ ಹುಟ್ಟಿನ ಕುರಿತು ವಿಜ್ಞಾನ ಏನು ಹೇಳುತ್ತದೋ, ಅದನ್ನು ಇಲ್ಲಿ ಕಲೆಯ ಮೂಲಕ ತೋರಿಸಲಾಗಿದೆ. ಮನುಷ್ಯ ನಾಗರಿಕತೆ ಸಾಗಿ ಬಂದ ದಾರಿ, ಯಂತ್ರಗಳ ಬಳಕೆ ಮುಂತಾದ ವಿಷಯಗಳನ್ನು, ಭರತನಾಟ್ಯದ ಜತಿ, ತಾಳ, ಹಸ್ತ, ಹಾಡುಗಳನ್ನೇ ಇಟ್ಟುಕೊಂಡು ಅಭಿನಯಿಸುತ್ತಿರುವುದು ವಿಶೇಷ. ಜನರಿಗೆ ಸರಳವಾಗಿ ಅರ್ಥವಾಗುವಂತೆ, ಒಂದೊಂದು ದೃಶ್ಯದ ಮೊದಲಿಗೂ, ಇಂಗ್ಲಿಷ್‌ನ ಹಿನ್ನೆಲೆ ಧ್ವನಿಯಲ್ಲಿ ಭೂಮಿಯೇ ಮಾತಾಡಿದ ಹಾಗೆ ರಚಿಸಲಾಗಿದೆ. ದೇಶ, ವಿದೇಶಗಳ ವೇದಿಕೆಯಲ್ಲೂ ಇದನ್ನು ಅಭಿನಯಿಸುವ ಉದ್ದೇಶದಿಂದ ಈ ರೀತಿ ನೃತ್ಯ ಸಂಯೋಜಿಸಿದ್ದೇವೆ’ ಎನ್ನುತ್ತಾರೆ ವಿದುಷಿ ಮಮತಾ ಕಾರಂತ್‌. 

“ನಾಟ್ಯ ಲಹರಿ’ಯ ಪ್ರಯತ್ನ
38 ವರ್ಷಗಳಿಂದ ನೃತ್ಯದೊಂದಿಗೆ ನಂಟು ಹೊಂದಿರುವ ಮಮತಾ ಕಾರಂತ್‌, ಚಂದ್ರಶೇಖರ ನಾವಡ ಹಾಗೂ ಗುರು ಬಿ. ಭಾನುಮತಿ ಅವರ ಶಿಷ್ಯೆ. 20 ವರ್ಷಗಳಿಂದ “ನಾಟ್ಯಲಹರಿ’ ನೃತ್ಯಶಾಲೆ ನಡೆಸುತ್ತಿದ್ದು, 11 ಜನರ ತಂಡದೊಂದಿಗೆ ಈ ನೃತ್ಯ ರೂಪಕ ರೂಪಿಸಿದ್ದಾರೆ. ಮಯೂರಿ ಕಾರಂತ್‌, ನವ್ಯಾಲಯ, ಜಗತಿøàತ, ಮನೀಷ, ನಿಖೀತಾ, ಮನೋಜ್ಞ, ಅಶ್ಮಿತ ಮೆನನ್‌, ಅದಿತಿ, ಜಾಹ್ನವಿ, ಅಶ್ವಿ‌ನಿ ಹಾಗೂ ಹಿನ್ನೆಲೆಯಲ್ಲಿ ಶ್ರೀವತ್ಸ ಹಾಗೂ ಪ್ರಸನ್ನ ತಂಡದಲ್ಲಿದ್ದಾರೆ. 

ನಮ್ಮ ದುರಾಸೆಯಿಂದ ಭೂಮಿ ಹಾಳಾಗುತ್ತಿದೆ. ಇತ್ತೀಚೆಗೆ ಕೇರಳ, ಕೊಡಗಿನಲ್ಲಿ ಆದ ಪ್ರಕೃತಿ ವಿಕೋಪಗಳೇ ಅದಕ್ಕೆ ಉದಾಹರಣೆ. ಭೂಮಿ ಹಾಳಾಗಲು ನಾವೇ ಕಾರಣ. ಈಗ ಅದನ್ನು ರಕ್ಷಿಸಬೇಕಾದವರೂ ನಾವೇ ಎಂಬುದನ್ನು ನೃತ್ಯದ ಮೂಲಕ ಪ್ರಸ್ತುತ ಪಡಿಸುತ್ತಿದ್ದೇವೆ.
– ವಿದುಷಿ ಮಮತಾ ಕಾರಂತ್‌, ನೃತ್ಯ ಗುರು

ಪ್ರಿಯಾಂಕ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next