ಕುಡಿಯುವ ನೀರು ಪೂರೈಕೆ ಮತ್ತು ಆರೋಗ್ಯ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಸೂಚಿಸಿದರು.
Advertisement
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಾತ್ರೆ ಸಿದ್ಧತೆ ಕುರಿತು ನಡೆದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾ. 22 ರಿಂದ ಮೂರು ದಿನಗಳ ಕಾಲ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಗಳ ಜಾತ್ರೆ ವಿಜೃಂಭಣೆಯಿಂದ ನಡೆಯಲಿದ್ದು, ಲಕ್ಷಾಂತರ ಭಕ್ತಾದಿಗಳು ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಾರೆ.
Related Articles
Advertisement
ರಥ ಸುಗಮವಾಗಿ ಸಾಗಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ರಥ ಸಾಗುವ ಬೀದಿಯಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಬೇಕು. ತ್ಯಾಜ್ಯ ವಸ್ತುಗಳನ್ನು ಅಂಗಡಿ ಮಾಲೀಕರು ಎಲ್ಲೆಂದರಲ್ಲಿ ಎಸೆಯದೆ ಅಂಗಡಿಗಳ ಮುಂದೆ ಡಬ್ಬಗಳನ್ನಿಟ್ಟು ಹಾಕಬೇಕು. ಕಸದ ವಾಹನಗಳು ಬಂದಾಗ ಅದರಲ್ಲಿ ಹಾಕುವಂತೆ ಅವರಿಗೆ ಅಧಿಕಾರಿಗಳು ತಿಳಿವಳಿಕೆ ನೀಡಬೇಕು ಎಂದು ಹೇಳಿದರು.
ಜಾತ್ರೆ ಪ್ರದೇಶದ 2 ಕಿಮೀ ವ್ಯಾಪ್ತಿಯ ಸುತ್ತ ಪ್ರಾಣಿಬಲಿಯನ್ನು ನಿಷೇಧಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಿ ಪ್ರಾಣಿಗಳ ಸಾಗಣೆಯನ್ನು ತಡೆಯಬೇಕು. ಜಾತ್ರೆಯ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧಿಸಲಾಗಿದೆ. ಚುನಾವಣೆ ನೀತಿಸಂಹಿತೆಯಿಂದ ಖಾಸಗಿ ಬಸ್‌ಗಳು ಉಚಿತವಾಗಿ ಪ್ರಯಾಣದ ವ್ಯವಸ್ಥೆ ಮಾಡುವಂತಿಲ್ಲ. ಕೆಎಸ್‌ಆರ್‌ಟಿಸಿ ಬಸ್ವ್ಯವಸ್ಥೆ ಮಾಡಲಾಗಿದ್ದು, ಯಾವ ಕಡೆಯಿಂದ ಜಾತ್ರೆಗೆ ಎಷ್ಟು ಶುಲ್ಕ ಇದೆಯೋ ಅಷ್ಟನ್ನೇ ನಿಗದಿ ಪಡಿಸಬೇಕು ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಕೆ. ಸಂಗಪ್ಪ ಮಾತನಾಡಿ, ರಥ ಸಾಗುವ ಬೀದಿಯಲ್ಲಿ ರಸ್ತೆ ತಗ್ಗು, ಉಬ್ಬುಗಳಿಂದ ಕೂಡಿದ್ದು ಸಮತಟ್ಟು
ಮಾಡುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿತ್ತು. ಅದರೆ ಯಾವುದೇ ಕೆಲಸ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಜಿಲ್ಲಾಧಿಕಾರಿಗಳು, ಜಾತ್ರೆ ಕೇವಲ 8 ದಿನ ಬಾಕಿ ಇದ್ದು ಯಾವಾಗ ಮುಗಿಸಿಕೊಡುತ್ತೀರ, ಸೂಚಿಸಿದ ಕೆಲಸ ಮಾಡಲಿಲ್ಲ ಎಂದರೆ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗೆ ಎಚ್ಚರಿಕೆ ನೀಡಿದರು. ಅಧಿಕಾರಿಗಳು ತಮಗೆ ವಹಿಸಿದ ಕೆಲಸ ಕಾರ್ಯಗಳನ್ನು ಜವಾಬ್ದಾರಿಯುತವಾಗಿ ಮಾಡಬೇಕು. ಯಾವುದೇ ಕೆಲಸ ಆಗದೇ ಇದ್ದಲ್ಲಿ ದೇವಸ್ಥಾನದ ಅಧ್ಯಕ್ಷರು ಹಾಗೂ ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಇಲಾಖೆಗಳು ಹಾಕಿಸುವ ಬ್ಯಾನರ್‌ಗಳಲ್ಲಿ ಮತದಾರರಿಗೆ ಜಾಗೃತಿ ಮೂಡಿಸಲು ಏ. 18ಕ್ಕೆ ತಪ್ಪದೇ ಮತದಾನ ಮಾಡಿ ಎಂಬ ಸಂದೇಶ ಹಾಕಿಸುವಂತೆ ತಿಳಿಸಿದರು. ಕೆಎಸ್‌ಆರ್‌ಟಿಸಿ ಅಧಿಕಾರಿ ಶ್ರೀನಿವಾಸ ಮಾತನಾಡಿ, ಚಳ್ಳಕೆರೆ, ಪರಶುರಾಂಪುರ, ಹಿರಿಯೂರು ಸೇರಿದಂತೆ ವಿವಿಧೆಡೆಗಳಿಂದ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಹೆಚ್ಚುವರಿಯಾಗಿ 150 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಿಜಲಿಂಗಪ್ಪ ಮಾತನಾಡಿ, ಚಳ್ಳಕೆರೆ, ಮೊಳಕಾಲ್ಮೂರು ಹಾಗೂ ಸ್ಥಳೀಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಲೆಗಳನ್ನು ಪ್ರದರ್ಶಿಸಲಾಗುತ್ತದೆ ಎಂದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ವಿಜಯಕುಮಾರ್, ಇಇ ಸತೀಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. ನಾಯಕನಹಟ್ಟಿ ಜಾತ್ರೆಯಲ್ಲಿ ಭಕ್ತಾದಿಗಳು ಪ್ರಸಾದ ಹಂಚಬಾರದು. ಪ್ರಸಾದ ಹಂಚುವ ಭಕ್ತಾದಿಗಳು ಕಂಡುಬಂದಲ್ಲಿ ಅವರ ಗುರುತಿನ ಚೀಟಿ ಮತ್ತು ಅವರ ದೂರವಾಣಿ ಸಂಖ್ಯೆ ಪಡೆದುಕೊಳ್ಳಬೇಕು. ಮುಂಜಾಗ್ರತಾ ಕ್ರಮವಾಗಿ ಅಕ್ಕ ಪಕ್ಕದ ಗ್ರಾಮ ಪಂಚಾಯತ್ ಅಧಿಕಾರಿಗಳನ್ನು ನೇಮಕ ಮಾಡಿಕೊಂಡು ಪ್ರಸಾದ ಹಂಚುವವರ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು.
ವಿನೋತ್ ಪ್ರಿಯಾ, ಜಿಲ್ಲಾಧಿಕಾರಿ.