– ಕೇಂದ್ರ ಜಲಶಕ್ತಿ ಮಂತ್ರಾಲಯದ ಹರ್ ಘರ್ ನಲ್ ಸೆ ಜಲ್ ಕಾರ್ಯಕ್ರಮ ಜಾರಿ
– ನೀರಿನ ಪುನರ್ ಬಳಕೆ ಮಾಡುವ ವಿಧಾನ, ನೈರ್ಮಲ್ಯ ಕುರಿತು ವ್ಯಾಪಕ ಅರಿವು
– ತಾಲೂಕಿನ ಸಚ್ಚಿದಾನಂದ ನಗರ, ಮಸಳಿಕಟ್ಟಿ, ಪರಸಾಪೂರ, ಕಲಕುಂಡಿ ಮುಂತಾದ ಗ್ರಾಮಗಳಲ್ಲಿ ಮೇಲ್ಮಟ್ಟದ ಜಲಾಗಾರಗಳನ್ನು ನಿರ್ಮಿಸಲಾಗಿದೆ.
ಕಲಘಟಗಿ: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜಲಜೀವನ ಯೋಜನೆಯಡಿಯಲ್ಲಿ ನಳ ಸಂಪರ್ಕ ಮೂಲಕ ತಾಲೂಕಿನಾದ್ಯಂತ ಎಲ್ಲ ಜನವಸತಿ ಪ್ರದೇಶದಲ್ಲಿನ ಪ್ರತಿ ಕುಟುಂಬಕ್ಕೂ ಶುದ್ಧ ಕುಡಿಯುವ ನೀರು ಒದಗಿಸುವ ಕಾರ್ಯ ಬಹುತೇಕ ಮುಗಿಯುವ ಹಂತದಲ್ಲಿದೆ.
ಭಾರತ ಸರ್ಕಾರ ಕೇಂದ್ರ ಜಲಶಕ್ತಿ ಮಂತ್ರಾಲಯದ ಮುಖೇನ ಹರ್ ಘರ್ ನಲ್ ಸೆ ಜಲ್ ಕಾರ್ಯಕ್ರಮ ಜಾರಿಗೆ ತಂದಿದೆ. ರಾಜ್ಯ ಸರ್ಕಾರ ಜಿಲ್ಲಾ ಪಂಚಾಯಿತಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮುಖೇನ ಅದರ ಗುರಿ ತಲುಪಲು ಮುಂದಾಗಿದೆ.
ಸಾರ್ವಜನಿಕರಲ್ಲಿ ಕುಡಿಯುವ ನೀರಿನ ಸದುಪಯೋಗ, ಗೃಹ ಬಳಕೆಯಲ್ಲಿ ಉತ್ಪತ್ತಿಯಾದ ನೀರಿನ ಪುನರ್ ಬಳಕೆ ಮಾಡುವ ವಿಧಾನ, ನೈರ್ಮಲ್ಯ ಕುರಿತು ವ್ಯಾಪಕವಾಗಿ ಅರಿವು ಮೂಡಿಸಲಾಗಿದ್ದು, ಯೋಜನೆ ಅನುಷ್ಠಾನ ಕುರಿತು ಸಾರ್ವಜನಿಕರಲ್ಲಿ ವಿಸ್ತೃತವಾಗಿ ತಿಳಿ ಹೇಳಲಾಗಿದೆ.
ಜೆಜೆಎಂ ಅಡಿಯಲ್ಲಿ ಪ್ರತಿ ವ್ಯಕ್ತಿಗೂ ಒಂದು ದಿನಕ್ಕೆ 55 ಲೀಟರ್, ಜಾನುವಾರುಗಳಿಗೆ 30 ಲೀಟರ್ ನೀರು ಒದಗಿಸಲಾಗುತ್ತಿದೆ. ನೀರು ಪೋಲಾಗದಿರಲು ಮೀಟರ್ ಅಳವಡಿಸಲಾಗುವುದು. ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಸಹಕರಿಸಿದಾಗ ಮಾತ್ರ ಈ ಯೋಜನೆ ಸಾಕಾರಗೊಳಿಸಲು ಸಾಧ್ಯ.
ಬೇಸಿಗೆಯಲ್ಲಿ ಉಂಟಾಗುತ್ತಿರುವ ನೀರಿನ ಬವಣೆ ತಪ್ಪಿಸಲು ಈ ಯೋಜನೆ ಸಹಕಾರಿಯಾಗಲಿದೆ. ಕಲುಷಿತ ನೀರಿನಿಂದ ಸಾಂಕ್ರಾಮಿಕ ರೋಗಗಳು ಉಲ್ಬಣಿಸುತ್ತವೆ. ಅದನ್ನು ತಡೆಗಟ್ಟಿ ಪ್ರತಿ ಮನೆ ಮನೆಗೆ ಪರಿಶುದ್ಧ ಗಂಗೆಯನ್ನು ತಲುಪಿಸುವ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ.
ಪ್ರಸ್ತುತ ಸ್ಥಳೀಯವಾಗಿ ಲಭ್ಯವಿರುವ ನೀರು ಬಳಸಿ ಮುಂಬರುವ ದಿನಗಳಲ್ಲಿ ಡಿಬಿಓಟಿ ಕುಡಿಯುವ ನೀರಿನ ಯೋಜನೆಯನ್ವಯ ನವಿಲುತೀರ್ಥ ಡ್ಯಾಂ ಮೂಲಕ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲಾಗುವುದು.
ತಾಲೂಕಿನಾದ್ಯಂತ 99 ಜನವಸತಿ ಸ್ಥಳಗಳಿದ್ದು, 86 ಹಳ್ಳಿಗಳಿವೆ. ಅವುಗಳಲ್ಲಿ ತಾಂತ್ರಿಕ, ಆರ್ಥಿಕ, ಸಾಮಾಜಿಕ ಅಂಶಗಳನ್ನು ಪರಿಗಣಿಸಿ ಹಂತ ಹಂತವಾಗಿ ಆಯ್ಕೆ ಮಾಡಿಕೊಂಡು ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ. ಈಗಾಗಲೇ ಸಣ್ಣ ಪುಟ್ಟ ದುರಸ್ತಿ ಕೆಲಸ ಹೊರತು ಪಡಿಸಿದರೆ 54 ಗ್ರಾಮಗಳಲ್ಲಿ ಸಂಪೂರ್ಣ ಕಾಮಗಾರಿ ಮುಗಿದಿದೆ.
24 ಜನವಸತಿಗಳಲ್ಲಿನ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಇನ್ನುಳಿದವುಗಳಲ್ಲಿನ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಲಘಟಗಿ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಶಿವಪುತ್ರ ಮಠಪತಿ ತಿಳಿಸಿದ್ದಾರೆ.
ಕುಡಿಯುವ ನೀರಿನ ಸದುಪಯೋಗ, ಗೃಹ ಬಳಕೆಯಲ್ಲಿ ಉತ್ಪತ್ತಿಯಾದ ನೀರಿನ ಪುನರ್ ಬಳಕೆ ಮಾಡುವ ವಿಧಾನ ಹಾಗೂ ನೈರ್ಮಲ್ಯ ಕುರಿತು ವ್ಯಾಪಕವಾಗಿ ಅರಿವು ಮೂಡಿಸಿಕೊಳ್ಳಲು ಸಾರ್ವಜನಿಕರಿಗೆ ಮನನ ಮಾಡಿಕೊಡಲು ಇಲಾಖೆಯೊಂದಿಗೆ ಜಲಜೀವನ ಮಿಷನ್, ಅನೇಕ ಸಂಘ-ಸಂಸ್ಥೆಗಳವರು, ಮಹಿಳಾ ವಿವಿಧೋದ್ದೇಶ ಸ್ವ-ಸಹಾಯ ಸಂಘಗಳವರು ಸಹಕರಿಸುತ್ತಿದ್ದಾರೆ. ಅಲ್ಲದೇ ಈ ನಿಟ್ಟಿನಲ್ಲಿ ಸರಕಾರದಿಂದ ಸೂಕ್ತ ತರಬೇತಿಗಳನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿ ಗಳಿಗೆ ಒದಗಿಸಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ತಾಲೂಕಿನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ತಿಳಿಸಿದರು.