ಯಳಂದೂರು: ತಾಲೂಕಿನ ಯರಿಯೂರು ಗ್ರಾಮದ ಉಪ್ಪಾರ ಬಡಾವಣೆಯ 2ನೇ ವಾರ್ಡ್ ವ್ಯಾಪ್ತಿಯಲ್ಲಿರುವ ಜಿಪಂ ಗ್ರಾಮೀಣ ಕುಡಿಯು ಹಾಗೂ ನೈರ್ಮಲ್ಯ ಇಲಾಖೆಯಿಂದ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟುನಿಂತು ಹಲವು ತಿಂಗಳು ಕಳೆದರೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಿಪೇರಿಯಾಗದೆ ಇದು ನಿರುಪಯುಕ್ತವಾಗಿದೆ! 2021-22ನೇ ಸಾಲಿನಲ್ಲಿ 12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಘಟಕ ಇದಾಗಿದೆ.
ಇದು ಆರಂಭಗೊಂಡು ಕೆಲವು ತಿಂಗಳು ಕಳೆದ ನಂತರ ಕೆಟ್ಟು ನಿಂತಿದೆ. ಆದರೆ ಇದಾಗಿ ಹಲವು ತಿಂಗಳು ಕಳೆದರೂ ದುರಸ್ತಿ ಕಂಡಿಲ್ಲ. ಇದರಿಂದ ಸ್ಥಳೀಯರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಗ್ರಾಮದ ಈ ಬಡಾವಣೆ ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ.
ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ: ಗ್ರಾಮಸ್ಥರು ಶುದ್ಧ ಕುಡಿಯುವ ನೀರಿಗಾಗಿ ಈ ಘಟಕವನ್ನೇ ಆಶ್ರಯಿಸಿದ್ದಾರೆ. ಆದರೆ, ಘಟಕ ಬಂದ್ ದೂರದ ಯಳಂದೂರು ಪಟ್ಟಣದಲ್ಲಿರುವ ಘಟಕದಿಂದ ಶುದ್ಧ ನೀರು ತಂದು ಕುಡಿಯುತ್ತಿದ್ದಾರೆ. ಘಟಕ ದುರಸ್ತಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೆ ತತ್ವಾರ: ಗ್ರಾಮ ಪಂಚಾಯಿತಿ ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ನೀರಿನ ಘಟಕದಿಂದ ಒಂದು ಹನಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಸರಿಯಾಗಿ ನಿರ್ವಹಣೆ ಮಾಡದೇ ಇರುವ ಕಾರಣ, ಗ್ರಾಮಸ್ಥರು ಕಲುಷಿತ ನೀರು ಬಳಸಬೇಕಾದ ಪರಿಸ್ಥಿತಿ ಎದುರಾ ಗಿದೆ. ಈಗ ಬೇಸಿಗೆ ಸಮೀಪಿಸುತ್ತಿದೆ. ಗ್ರಾಮಕ್ಕೆ ಕೊಳವೆ ಬಾವಿಯ ಮೂಲಕ ನೀರು ಪೂರೈಕೆಯಾ ಗುತ್ತದೆ. ಆದರೆ ಇದು ಕುಡಿಯಲು ಯೋಗ್ಯವಾಗಿಲ್ಲ. ಇಲ್ಲಿಗೆ ಕಾವೇರಿ ಕುಡಿಯುವ ನೀರೂ ಬರುವುದಿಲ್ಲ. ಹಾಗಾಗಿ ಕೂಡಲೇ ಇದನ್ನು ದುರಸ್ತಿಗೊಳಿಸಿ ಇಲ್ಲಿನ ನಾಗರೀಕರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಸ್ಥಳೀಯರ ಬೇಡಿಕೆಯಾಗಿದೆ.
ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡ ಲಾಗಿದೆ. ಆದರೆ, ಸರಿಯಾಗಿ ನಿರ್ವಹಣೆ ಮಾಡದೇ ಇರುವ ಕಾರಣ, ಇದು ಕೆಟ್ಟು ನಿಂತಿದೆ. ಗ್ರಾಮಸ್ಥರು ತೊಂಬೆಗಳಲ್ಲಿ ಕಲುಷಿತ ನೀರು ಬಳಸಬೇಕಾದ ಪರಿಸ್ಥಿತಿ ಎದುರಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ.ಈ ಬಗ್ಗೆ ಕ್ರಮ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
●ಕಾಮರಾಜು, ಯರಿಯೂರು ನಿವಾಸಿ
ಯರಿಯೂರು ಗ್ರಾಮದ ಉಪ್ಪಾರ ಬಡವಾಣೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡುವ ಗುತ್ತಿಗೆದಾರನಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ತಕ್ಷಣ ರಿಪೇರಿ ಮಾಡಿಸಿ ಜನರಿಗೆ ನೀರಿನ ಪೂರೈಕೆ ಮಾಡುವ ಬಗ್ಗೆ ಗಮನಹರಿಸಲಾಗುವುದು.
●ಪ್ರವೀಣ್, ಅಧ್ಯಕ್ಷ ಯರಿಯೂರು ಗ್ರಾಮ ಪಂಚಾಯ್ತಿ
ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದು, ಈ ಬಗ್ಗೆ ಸಂಬಂಧಪಟ್ಟ ಘಟಕ ನಿರ್ವಹಣೆ ಮಾಡುವ ಗುತ್ತಿಗೆದಾರ ಹಾಗೂ ಇಲಾಖೆಗೆ ಪತ್ರವನ್ನು ಬರೆದು ಕ್ರಮವಹಿಸಲಾಗುವುದು.
● ಮಮತಾ, ಪಿಡಿಒ, ಯರಿಯೂರು ಗ್ರಾಪಂ
-ಫೈರೋಜ್ ಖಾನ್