Advertisement

ಮತ್ತಷ್ಟು  ರೆಮಿಡಿಸಿವಿರ್‌ ಖರೀದಿ

12:30 AM May 05, 2021 | Team Udayavani |

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರದ ವಶದಲ್ಲಿರುವ ಹಾಸಿಗೆಗಳ ದರ ಪರಿಷ್ಕರಿಸಿರುವುದಲ್ಲದೆ ಕೂಡಲೇ 5 ಲಕ್ಷ ರೆಮಿಡಿಸಿವಿರ್‌ ಖರೀದಿಗೆ ರಾಜ್ಯ ಕೋವಿಡ್‌ ಕಾರ್ಯಪಡೆ ನಿರ್ಧರಿಸಿದೆ.

Advertisement

ಕಾರ್ಯಪಡೆ ಅಧ್ಯಕ್ಷ ಮತ್ತು ಡಿಸಿಎಂ ಡಾ| ಅಶ್ವತ್ಥ ನಾರಾಯಣ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅಗತ್ಯದಷ್ಟು ರಾಟ್‌ಕಿಟ್‌ಗಳನ್ನು ತತ್‌ಕ್ಷಣವೇ ಖರೀದಿಸುವುದಕ್ಕೂ ನಿರ್ಧರಿಸಲಾಯಿತು.

ರಾಜ್ಯದಲ್ಲಿ ರೆಮಿಡಿಸಿವಿರ್‌ ಕೊರತೆ ಆಗದಿರಲು ಕೂಡಲೇ 5 ಲಕ್ಷ ಡೋಸ್‌ ಖರೀದಿಸಲು ಜಾಗತಿಕ ಟೆಂಡರ್‌ ಕರೆಯಬೇಕು. ದೇಶೀಯ ಅಥವಾ ವಿದೇಶದ ಯಾವುದೇ ಕಂಪೆನಿಯಾದರೂ ಪರವಾಗಿಲ್ಲ. ರೆಮಿಡಿಸಿವಿರ್‌ ಕೊರತೆಯಿಂದ ಜೀವ ಹೋಯಿತು ಎಂಬ ಮಾತು ಬರಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಲಾಯಿತು.

ಹಾಸಿಗೆ ದರ ಪರಿಷ್ಕರಣೆ :

ಗಂಭೀರವಲ್ಲದ ಕೋವಿಡ್‌ ಪೀಡಿತರ ಹಾಸಿಗೆ ದರ ಪ್ರತೀ ದಿನಕ್ಕೆ ಈಗ 5,200 ರೂ. ಇದ್ದು, ಹೆಚ್ಚಳ ಮಾಡಿಲ್ಲ. ಆಮ್ಲಜನಕಯುಕ್ತ ಹಾಸಿಗೆ ದರವನ್ನು ದಿನಕ್ಕೆ 7 ಸಾವಿರ ರೂ. ಗಳಿಂದ 8 ಸಾವಿರ ರೂ. ಗಳಿಗೆ ಹೆಚ್ಚಿಸಲಾಗಿದೆ. ಐಸಿಯುನಲ್ಲಿ ವೆಂಟಿಲೇಟರ್‌ ಹೊರತಾದ ಹಾಸಿಗೆ ದರವನ್ನು 8,500 ರೂ.ಗಳಿಂದ 9,750 ರೂ.ಗಳಿಗೆ ಮತ್ತು ಐಸಿಯುನಲ್ಲಿ ವೆಂಟಿಲೇಟರ್‌ ಸಹಿತ ಹಾಸಿಗೆ ದರವನ್ನು 10,000ದಿಂದ 11,500 ರೂ.ಗಳಿಗೆ ಏರಿಸಲಾಗಿದೆ. ಹೊಸ ದರಗಳ ಅನ್ವಯ ಕುರಿತು ಶೀಘ್ರವೇ ಆದೇಶ ಹೊರಡಿಸುವುದಾಗಿ ಡಾ| ಅಶ್ವತ್ಥ ನಾರಾಯಣ ತಿಳಿಸಿದರು.

Advertisement

ಗೂಂಡಾ ಕಾಯ್ದೆಯಡಿ ಕ್ರಮ :

ಖಾಸಗಿ ಆಸ್ಪತ್ರೆ ಬೆಡ್‌, ಔಷಧಿ, ಆಮ್ಲಜನಕ, ರೆಮಿಡಿಸಿವಿರ್‌ ಸಹಿತ ಸರಕಾರ ನಿಗದಿ ಮಾಡಿದ್ದಕ್ಕಿಂತ ಹೆಚ್ಚಿನ ಹಣ ಸುಲಿಗೆ ಮಾಡುವವರ ವಿರುದ್ಧ ಗೂಂಡಾ ಕಾಯ್ದೆ ಅಡಿ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು. ಖಾಸಗಿ ಆಸ್ಪತ್ರೆಗಳ ಬಿಲ್‌ ಬಾಕಿ ಇದ್ದರೆ ತತ್‌ಕ್ಷಣವೇ ಪಾವತಿಸಬೇಕು. ಕೋವಿಡ್‌ ಯೋಧರಾಗಿ ಕೆಲಸ ಮಾಡುತ್ತಿರುವವರ ವೇತನ ಪಾವತಿಯಲ್ಲೂ ತಡವಾಗ ಬಾರದು ಎಂದರು.  ವ್ಯಕ್ತಿಯ ಮಾದರಿ ಸ್ವೀಕರಿಸಿದ ಐದು ನಿಮಿಷಗಳಲ್ಲಿ ಫ‌ಲಿತಾಂಶ ಕೊಡುವ ರಾಟ್‌ ಕಿಟ್‌ಗಳನ್ನು ಅಗತ್ಯದಷ್ಟು ಕೂಡಲೇ ಖರೀದಿಸಬೇಕು. ವೈದ್ಯ ಸಿಬಂದಿ ಬಳಸುವ ಅಗತ್ಯ ವಸ್ತುಗಳ ಕೊರತೆ ಆಗಬಾರದು ಎಂದರು.

ತಂತ್ರ ಬದಲಿಸಬೇಕು  :

ರಾಜ್ಯದಲ್ಲಿ 18ರಿಂದ 44 ವರ್ಷ ವಯಸ್ಸಿನ 3.26 ಕೋಟಿ ಜನರಿಗೆ ಲಸಿಕೆ ನೀಡಬೇಕಿದ್ದು, ಇವರಿಗೆ ಎರಡು ಡೋಸ್‌ ಖರೀದಿಸಲು 6.52 ಕೋ. ರೂ. ಅಗತ್ಯವಿದೆ. ಕೇಂದ್ರದಿಂದ 3 ಲಕ್ಷ ಡೋಸ್‌ ಕೋವಿಶೀಲ್ಡ್‌ ಬಂದಿದ್ದು, ಮೇ ಎರಡನೇ ವಾರಕ್ಕೆ 15 ಲಕ್ಷ ಡೋಸ್‌ ಬರುತ್ತದೆ. ತತ್‌ಕ್ಷಣವೇ ಲಸಿಕೆ ಅಭಿಯಾನದ ಕಾರ್ಯತಂತ್ರವನ್ನು ಬದಲಿಸಿ, ಯಾರಿಗೆ ನೀಡಬೇಕೆಂಬ ಕುರಿತು ಹೊಸ ಮಾರ್ಗಸೂಚಿ ರೂಪಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಪಡೆ ಸದಸ್ಯ ಸಚಿವರಾದ ಡಾ| ಸುಧಾಕರ್‌, ಸುರೇಶ್‌ ಕುಮಾರ್‌, ಸಿ.ಸಿ.ಪಾಟೀಲ್‌ ಮತ್ತು ಮುಖ್ಯ ಕಾರ್ಯ ದರ್ಶಿ ರವಿಕುಮಾರ, ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next