Advertisement

ಅಗತ್ಯ ವಸ್ತು-ದಿನಬಳಕೆ ಸಾಮಗ್ರಿ ಮುಗಿಬಿದ್ದು ಖರೀದಿ

04:43 PM Apr 28, 2021 | Team Udayavani |

ಹಾವೇರಿ: ತೀವ್ರಗತಿಯಲ್ಲಿ ಹರಡುತ್ತಿರುವ ಕೊರೊನಾ ಎರಡನೇ ಅಲೆ ನಿಯಂತ್ರಿಸಲು ಸರ್ಕಾರ 14 ದಿನಗಳ ಕಾಲ ಕೊರೊನಾ ಕರ್ಫ್ಯೂ ಜಾರಿಗೊಳಿಸಿರುವುದರಿಂದ ಆತಂಕಕ್ಕೆ ಒಳಗಾಗಿರುವ ಜನತೆ ಮಂಗಳವಾರ ಅಗತ್ಯ ವಸ್ತು, ದಿನಬಳಕೆ ಸಾಮಗ್ರಿಗಳನ್ನು ಮುಗಿಬಿದ್ದು ಖರೀದಿಸಿದರು.

Advertisement

ಬೆಳಗ್ಗೆ 10ರ ವರೆಗೆ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶವಿದ್ದರೂ ಜನರ ಓಡಾಟ ಎಂದಿಗಿಂತ ಹೆಚ್ಚಿತ್ತು. ಇನ್ನು 14 ದಿನಗಳ ಕಾಲ ನಿತ್ಯವೂ ಬೆಳಗ್ಗೆ 4ಕ್ಕೆ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಿದ್ದರೂ ಜನರು ಅದನ್ನು ಲೆಕ್ಕಿಸದೇ, ಕೊರೊನಾ ಹರಡುತ್ತಿರುವುದನ್ನೂ ಲೆಕ್ಕಿಸದೇ ನಗರಕ್ಕೆ ಆಗಮಿಸಿ ಖರೀದಿಯಲ್ಲಿ ತೊಡಗಿದ ದೃಶ್ಯ ಕಂಡುಬಂತು.

ಮದುವೆ, ಗೃಹಪ್ರವೇಶ ಇನ್ನಿತರ ಸಮಾರಂಭ ನಿಗದಿ ಮಾಡಿಕೊಂಡಿರುವವರು ಇನ್ನು ಮೇಲೆ ಖರೀದಿಗೆ ಅವಕಾಶ ಸಿಗುವುದಿಲ್ಲ ಎಂಬ ಕಾರಣಕ್ಕೆ ದಿನಸಿ, ಕಾಳುಕಡಿ ಖರೀದಿ ನಡೆಸಿದರು. ಬಟ್ಟೆ ಅಂಗಡಿಗಳಲ್ಲಿ ಬಾಗಿಲು ಹಾಕಿಕೊಂಡೇ ಜವಳಿ ವ್ಯಾಪಾರ ನಡೆಸಿದರು. ಜ್ಯುವೆಲ್ಲರಿ ಅಂಗಡಿಗಳಲ್ಲೂ ಬಾಗಿಲು ಹಾಕಿಕೊಂಡು ವ್ಯವಹಾರ ನಡೆಸಲಾಯಿತು.

ಮದುವೆ ನಿಗದಿ ಮಾಡಿಕೊಂಡವರು ಹಿಂದೆ ಮುಂದೆ ನೋಡದೇ ರೆಡಿ ಇರುವ ಚಿನ್ನಾಭರಣಗಳನ್ನೇ ಖರೀದಿಸಿದರು. ಮದ್ಯದ ಅಂಗಡಿಗಳಲ್ಲೂ ತುಸು ಹೆಚ್ಚೇ ವ್ಯಾಪಾರ ನಡೆಯಿತು. ಇಲ್ಲೆಲ್ಲಾ ಸಾಮಾಜಿಕ ಅಂತರವೇ ಮಾಯವಾಗಿತ್ತು. ವ್ಯಾಪಾರಸ್ಥರು ಕೋವಿಡ್‌ ಮಾರ್ಗಸೂಚಿ ಅನುಸರಿಸದೇ ವ್ಯಾಪಾರದಲ್ಲೇ ಮುಳುಗಿದ್ದರು. ಇದರಿಂದ ನಗರ ಪ್ರದೇಶದಲ್ಲಿ ಕರ್ಫ್ಯೂ ಇದ್ದರೂ ಲೆಕ್ಕಿಸದೇ ಜನರ ಓಡಾಟ ಕಂಡು ಬಂದಿತು.

ಕೋವಿಡ್‌ ನಿಯಮ ಪಾಲನೆಯಲ್ಲಿ ನಿರ್ಲಕ್ಷ್ಯ: ಮಂಗಳವಾರ ರಾತ್ರಿಯಿಂದಲೇ ಕೊರೊನಾ ಕರ್ಫ್ಯೂ ಆರಂಭಗೊಳ್ಳುತ್ತಿರುವುದರಿಂದ ಅಗತ್ಯ ವಸ್ತುಗಳನ್ನು ಕೊಳ್ಳಲು ಬಸ್‌ ಮೂಲಕ ಆಗಮಿಸಿದ್ದರು. ಅಲ್ಲದೇ ಬೇರೆ ಊರುಗಳಲ್ಲಿ ಕೆಲಸ ಮಾಡುತ್ತಿದ್ದವರು ಧಾವಂತದಲ್ಲೇ ಊರಿಗೆ ವಾಪಸ್ಸಾಗಲು ವಿವಿಧೆಡೆಯಿಂದ ಬಸ್‌ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದರು. ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿನ ತಾತ್ಕಾಲಿಕ ತರಕಾರಿ ಮಾರುಕಟ್ಟೆಯಲ್ಲೂ ಜನರು ಮುಗಿಬಿದ್ದು ಕಾಯಿಪಲ್ಲೆ ಖರೀದಿಸಿದರು.

Advertisement

ಮಹಾನಗರಗಳಿಂದ ಬರುತ್ತಿದ್ದಾರೆ ಜನ: ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಮಹಾನಗರಗಳಿಗೆ ದುಡಿಯಲು ಹೋಗಿದ್ದವರು ಮರಳಿ ತಮ್ಮ ಗ್ರಾಮಗಳಿಗೆ ಆಗಮಿಸುತ್ತಿರುವುದು ಕಂಡು ಬರುತ್ತಿದೆ. ಬೆಂಗಳೂರು ಕಡೆಯಿಂದ ಬರುವ ರೈಲ್‌ನಲ್ಲಿ ಗಂಟು ಮೂಟೆ ಕಟ್ಟಿಕೊಂಡು ನೂರಾರು ಜನರು ಆಗಮಿಸಿದರು. ನಂತರ ಬಸ್‌ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ತಮ್ಮೂರ ಕಡೆ ತೆರಳಿದರು. ಖಾಸಗಿ ವಾಹನಗಳ ಓಡಾಟವೂ ತುಸು ಹೆಚ್ಚೇ ಇತ್ತು.

ಕೃಷಿ ಪರಿಕರಗಳ ಖರೀದಿ, ಬೀಜ ಗೊಬ್ಬರ ಖರೀದಿ, ಮಳೆಗಾಲಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಜನತೆ, ಕಟ್ಟಡ ಇನ್ನಿತರ ನಿರ್ಮಾಣ ಕಾಮಗಾರಿಗೆ ಬೇಕಾದ ಸಿಮೆಂಟ್‌, ಕಬ್ಬಿಣ ಖರೀದಿಯೂ ಜೋರಾಗಿತ್ತು. ಇನ್ನು ಎರಡು ವಾರ ಏನೂ ಸಿಗಲ್ಲ ಎಂಬ ಆತಂಕ ಎಲ್ಲರಲ್ಲಿ ಕಂಡು ಬಂದಿತು.

Advertisement

Udayavani is now on Telegram. Click here to join our channel and stay updated with the latest news.

Next