ಹಿರಿಯೂರು: ಸಾರಿಗೆ ಇಲಾಖೆಯಲ್ಲಿ ಸಂಪೂರ್ಣ ಬದಲಾವಣೆ ತರಲು ಚಿಂತನೆ ನಡೆದಿದ್ದು, ಪರಿಸರ ಸ್ನೇಹಿ ವಿದ್ಯುತ್ ಚಾಲಿತ ಬಸ್ ಖರೀದಿಗೆ ಮುನ್ನುಡಿ ಬರೆಯಲಾಗಿದೆ. 2030ರ ವೇಳೆಗೆ ಹಳೆಯ 30 ಸಾವಿರ ಸಾರಿಗೆ ಬಸ್‌ಗಳಿಗೆ ಬದಲಾಗಿ ವಿದ್ಯುತ್ ಚಾಲಿತ ಬಸ್‌ಗಳನ್ನು ಖರೀದಿಸಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ನಗರದ ಹುಳಿಯಾರು ರಸ್ತೆಯ ತಾಲೂಕು ಕ್ರೀಡಾಂಗಣದ ಬಳಿ ನೂತನ ಬಸ್ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಜನವರಿ ಅಂತ್ಯದ ವೇಳೆಗೆ 50 ವಿದ್ಯುತ್ ಚಾಲಿತ ಹಾಗೂ 600 ಡೀಸೆಲ್ ಚಾಲಿತ, 60 ವೋಲ್ವೋ ಬಸ್ ಖರೀದಿಸಲಾಗುವುದು. ಕೇಂದ್ರ ಸರ್ಕಾರ ರಸ್ತೆ ಸುರಕ್ಷತೆಗಾಗಿ 250 ಕೋಟಿ ರೂ. ಅನುದಾನ ನೀಡಿದೆ. ರಾಜ್ಯಾದ್ಯಂತ ರಸ್ತೆ ಅಪಘಾತ ತಡೆಯಲು ಬ್ಲಾಕ್ ಸ್ಪಾಟ್ ಗುರುತಿಸಲಾಗುವುದು. ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್‌ಪಾಸ್ ನೀಡಲಾಗಿದೆ ಎಂದರು.
ವೇತನ ಪರಿಷ್ಕರಣೆ ಶೀಘ್ರ: ಸಾರಿಗೆ ನೌಕರರ ಬಹು ದಿನದ ಬೇಡಿಕೆಯಾದ ವೇತನ ಪರಿಷ್ಕರಣೆ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಜತೆ ಚರ್ಚಿಸಲಾಗಿದೆ. ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರವೇ ಸಾರಿಗೆ ಸಿಬ್ಬಂದಿ ವೇತನ ಪರಿಷ್ಕರಣೆ ಮಾಡಲಾಗುವುದು. ಈ ಹಿಂದೆ 2015-16ನೇ ಸಾಲಿನಲ್ಲಿ ವೇತನ ಪರಿಷ್ಕರಣೆಯಾಗಿತ್ತು. ಸಾರಿಗೆ ಸಿಬ್ಬಂದಿ ಯೂನಿಯನ್‌ಗಳು ಈ ಕುರಿತು ಗಮನ ಸೆಳೆದಿದ್ದು, ಸರ್ಕಾರ ಸಿಬ್ಬಂದಿ ವೇತನ ಪರಿಷ್ಕರಣೆಗೆ ಸಿದ್ಧವಿದೆ. ಸಾರಿಗೆ ಸಿಬ್ಬಂದಿಗೆ 1 ಕೋಟಿ ರೂ. ಮೊತ್ತದ ಜೀವ ವಿಮೆ ನೀಡಲಾಗಿದೆ. ನೌಕರರು ಕರ್ತವ್ಯದ ವೇಳೆ ಅಥವಾ ಅನ್ಯ ಸಂದರ್ಭದಲ್ಲಿ ಮೃತಪಟ್ಟರೆ ವಿಮೆ ಪಾವತಿಸಲಾಗುವುದು ಎಂದರು.
ಕಾಂಗ್ರೆಸ್ ಭ್ರಮೆ ನಿಜವಾಗಲ್ಲ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉತ್ತಮವಾಗಿ ಆಡಳಿತ ನಡೆಸುತ್ತಿದೆ. ಆದರೆ ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ಮತದಾರರು ಬೇರೆಯವರ ಮಾತನ್ನು ಕೇಳಬೇಡಿ. ರಾಹುಲ್ ಗಾಂಧಿ ಪಾದಯಾತ್ರೆಯಿಂದ ಕಾಂಗ್ರೆಸ್ ನಾಯಕರು 2023ರ ಚುನಾವಣೆಯಲ್ಲಿ ಗೆಲ್ಲುವ ಭ್ರಮೆಯಲ್ಲಿದ್ದಾರೆ. ರಾಹುಲ್ ಮೊದಲು ಡಿಕೆಶಿ ಮತ್ತು ಸಿದ್ದರಾಮಯ್ಯ ಅವರನ್ನು ಜೋಡಣೆ ಮಾಡಲಿ. ಆನಂತರ ಭಾರತ ಜೋಡಣೆ ಮಾಡುವ ಪ್ರಯತ್ನ ಮಾಡಲಿ ಎಂದರು.