Advertisement

ಪಾವತಿಯಾಗದ ತೊಗರಿ ಖರೀದಿ ಹಣ

11:57 AM Jun 01, 2018 | |

ವಿಜಯಪುರ: ತೊಗರಿ ಬೆಳೆಗೆ ಬೆಲೆ ಕುಸಿತದ ಕಾರಣ ಬೆಂಬಲ ಬೆಲೆ ನೀಡಿ ಜಿಲ್ಲೆಯ ರೈತರಿಂದ 8.48 ಲಕ್ಷ ಕ್ವಿಂಟಲ್‌ ತೊಗರಿ ಖರೀದಿಸಿ ಮೂರು ತಿಂಗಳಾಗಿದೆ.

Advertisement

ಖರೀದಿಸಿದ ತೊಗರಿ ಹಣ ಕೊಡಿ ಎಂದು ರೈತರು ಬೀದಿಗೆ ಇಳಿದು ಹೋರಾಟ ಮಾಡಿ, ಅತ್ತು-ಕರೆದು ಗೋಗರೆದರೂ ಸರ್ಕಾರ ಇನ್ನೂ 197 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಮತ್ತೆ ತೊಗರಿ ಬೆಳೆ ಬಿತ್ತನೆ ಕಾಲ ಸನ್ನಿಹಿತವಾದರೂ ಸರ್ಕಾರವೇ ಹಣ ಕೊಡದ ಕಾರಣ ಜಿಲ್ಲೆಯ ತೊಗರಿ ಬೆಳೆಗಾರ ಕಂಗಾಲಾಗಿದ್ದಾರೆ.

ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ ರಾಜ್ಯದ ಹಲವೆಡೆಯಂತೆ ಜಿಲ್ಲೆಯ ರೈತರು ನಿರೀಕ್ಷೆ ಮೀರಿ ಬಿತ್ತನೆ ಮಾಡಿದ್ದ ತೊಗರಿ ಬೆಳೆ ಅಧಿಕ ಪ್ರಮಾಣದಲ್ಲಿ ಏಕಕಾಲಕ್ಕೆ ಮಾರುಕಟ್ಟೆಗೆ ಬಂದಿತ್ತು. ಇದರಿಂದ ಇದ್ದಕ್ಕಿಂತೆ ಬೆಲೆ ಕುಸಿತವಾಗಿ ರೈತರು ಕಂಗಾಲಾಗಿದ್ದರು. 

ಈ ಹಂತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಸಹಕಾರಿ ಸಂಘಗಳ ಮೂಲಕ ಕರ್ನಾಟಕ ರಾಜ್ಯ  ಸಹಕಾರ ಮಾರಾಟ ಮಹಾ ಮಂಡಳದಿಂದ ಬೆಂಬಲ ಬೆಲೆ ನೀಡಿ ತೊಗರಿ ಬೆಳೆ ಖರೀದಿ ಮಾಡಲಾಗಿತ್ತು. ಅದರಂತೆ ವಿಜಯಪುರ ಜಿಲ್ಲೆಯ 92 ಖರೀದಿ ಕೇಂದ್ರಗಳಿಂದ 2017 ಡಿಸೆಂಬರ್‌ ನಿಂದ ಪ್ರಸಕ್ತ ವರ್ಷದ ಫೆಬ್ರವರಿ ಅಂತ್ಯದವರೆಗೆ 73,716 ರೈತರಿಂದ 8,48,635 ಕ್ವಿಂಟಲ್‌ ತೊಗರಿ ಖರೀದಿ ಮಾಡಲಾಗಿತ್ತು. ಖರೀದಿ ಹಂತದಲ್ಲಿ ರೈತರಿಗೆ ಸಮಸ್ಯೆ ಉಂಟಾದ ಕಾರಣ ರೈತರು ಬೀದಿಗೆ ಇಳಿದು ಹೋರಾಟ ನಡೆಸಿದರು. ಏನೆಲ್ಲ ಹೋರಾಟ ಮಾಡಿದ ಬಳಿಕ ರೈತರಿಂದ
ತೊಗರಿ ಖರೀದಿಸಿದ ಸರ್ಕಾರ ಇದೀಗ ಖರೀದಿಸಿದ್ದಕ್ಕೆ ಹಣವನ್ನು ನೀಡುತ್ತಿಲ್ಲ. ಇದರಿಂದ ಮತ್ತೆ ಬೀದಿಗೆ ಇಳಿದಿರುವ ರೈತರು ಹೋರಾಟಕ್ಕೆ ಅಣಿಯಾಗಿದ್ದಾರೆ. 

ಮುಂಗಾರು ಬಿತ್ತನೆ ಆರಂಭವಾಗುತ್ತಿದೆ, ಮಕ್ಕಳ ಶೈಕ್ಷಣಿಕ ವರ್ಷ ಆರಂಭಗೊಂಡಿದೆ, ಬೆಳೆದು ನಿಂತ ಮಕ್ಕಳ ಭವಿಷ್ಯ ರೂಪಿಸಲು ಹಣದ ಅಗತ್ಯಕ್ಕೆ ಹೀಗೆ ಹತ್ತು ಹಲವು ಸಂಕಷ್ಟದಲ್ಲಿರುವ ರೈತರಿಗೆ ಇದೀಗ ತುರ್ತಾಗಿ ಹಣದ ಅಗತ್ಯವಿದೆ. ವರ್ಷದ ಬೆಳೆ ಬೆಳೆದು ಕೈ ಸುಟ್ಟುಕೊಂಡಂತೆ ಕಂಗಾಲಾಗಿರುವ ರೈತರು, ಸರ್ಕಾರವೇ ಕೊಂಡ ತೊಗರಿಗೆ
ಹಣ ಕೊಡದೇ ಲಾಭದ ಪಿಪಾಸು ವ್ಯಾಪಾರಿಗಳಿಗಿಂತ ಹಿಂಸೆ ನೀಡುತ್ತಿದೆ ಎಂಬ ದೂರು ರೈತರಿಂದ ಕೇಳಿ ಬರುತ್ತಿದೆ.

Advertisement

ಮೂರು ದಿನದ ಹಿಂದೆ ಬಿಡುಗಡೆ ಮಾಡಿದ 70 ಕೋಟಿ ರೂ. ಸೇರಿ ಸರ್ಕಾರ ಈವರೆಗೆ ಹಂತ ಹಂತವಾಗಿ 40,495
ರೈತರಿಗೆ 312.44 ಕೋಟಿ ರೂ. ಹಣವನ್ನು ಮಾತ್ರ ಪಾವತಿಸಿದೆ. ಇನ್ನೂ 31,363 ರೈತರಿಗೆ 197.74 ಕೋಟಿ ರೂ. ಪಾವತಿ ಮಾಡಬೇಕಿದೆ. ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಹಣ ಪಾವತಿ ಆಗುವ ಕಾರಣ ಇದೀಗ 42 ಕೋಟಿ ರೂ. ಹಣ ಪಾತಿಗಾಗಿ 7,429ರೈತರ ಬ್ಯಾಂಕ್‌ ಖಾತೆ, ಐಎಫ್‌ ಎಸ್‌ಸಿ ಸಂಖ್ಯೆ, ಪಹಣಿ ಪತ್ರ ಸಂಖ್ಯೆ, ಖರೀದಿ ಮೊತ್ತ ಹೀಗೆ ಹಲವು ಸಂಗತಿಗಳ ದೃಢೀಕರಣಕ್ಕೆ ಸಹಕಾರಿ ಸಂಘಗಳಿಗೆ ಕಳಿಸಲಾಗಿದೆ.

ಅಧಿಕಾರಿಗಳು ಮಾತ್ರ ರೈತರ ಒತ್ತಡಕ್ಕೆ ಸಿಲುಕಿದ್ದಾರೆ. ಸಚಿವರು ಇಲ್ಲದ ಕಾರಣ ಹಣ ಬಿಡುಗಡೆ ಅಸಾಧ್ಯ ಎಂಬ ನೆಪ ಮುಂದಿಟ್ಟು ರೈತರನ್ನು ಸಾಗ ಹಾಕುತ್ತಿದ್ದಾರೆ. ಏಕೆಂದರೆ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಇನ್ನೂ ಸರ್ಕಾರ ಅಸ್ತಿತ್ವಕ್ಕೆ ಬಂದಿಲ್ಲ. ಕೃಷಿ, ಸಹಕಾರಿ, ಆರ್ಥಿಕ ಇಲಾಖೆ ಸೇರಿ ಹಲವು ಇಲಾಖೆಗಳ ಸಮನ್ವಯದ ಅಗತ್ಯ ಇದೆ. ಆದರೆ ಈ ಖಾತೆಗಳ ವಿಷಯದಲ್ಲಿ ನಿರ್ಧಾರ ಕೈಗೊಳ್ಳುವುದಕ್ಕೆ ಸಚಿವರೇ ಇಲ್ಲದ ಕಾರಣ ಅಧಿಕಾರಿಗಳು ಹೊಣೆಗಾರಿಕೆ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂಬುದು ವಾಸ್ತವ. ಆದರೆ ಅತಂತ್ರ ಸ್ಥಿತಿಯಲ್ಲಿರುವ ಮೈತ್ರಿ ಸರ್ಕಾರ ಇನ್ನೂ ಸಚಿವ ಸಂಪುಟ ಅಸ್ತಿತ್ವಕ್ಕೆ ಬಾರದ ಕಾರಣ ರೈತರು ಮಾತ್ರ ಬೆವರಿಗೆ ಫಲ ಪಡೆಯಲು ಅಲೆಯುವ ದುಃಸ್ಥಿತಿ ತಪ್ಪಿಲ್ಲ.

ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next