ಮಾಗಡಿ: ಭಾನುವಾರ ಹಾಗೂ ರಜಾದಿನಗಳಲ್ಲೂ ರಾಗಿ ಕೇಂದ್ರ ತೆರೆದು ಬೆಂಬಲ ಬೆಲೆಗೆ ರೈತರ ರಾಗಿ ಖರೀದಿಗೆ ಅಧಿಕಾರಿಗಳು ಸಹಕರಿಸಬೇಕೆಂದು ಶಾಸಕ ಎ.ಮಂಜುನಾಥ್ ತಿಳಿಸಿದರು.
ರೈತರಿಂದ ದೂರು ಬಂದ ಹಿನ್ನೆಲೆ ತಾಲೂಕಿನ ಸೋಲೂರು ಹೋಬಳಿ ಗದ್ದುಗೆ ಮಠದ ಬಳಿ ಇರುವ ರಾಗಿ ಖರೀದಿ ಕೇಂದ್ರಕ್ಕೆ ಶಾಸಕಮಂಜುನಾಥ್ ದಿಢೀರ್ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ಖುದ್ದು ಪರಿಶೀಲಿಸಿದರು.
ರೈತರ ಸಮಸ್ಯೆ ಆಲಿಸಿದ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ರಾಗಿ ಮಾರಾಟ ಮಾಡಲು ಖರೀದಿ ಕೇಂದ್ರಕ್ಕೆ ಹತ್ತಾರು ಟ್ರ್ಯಾಕ್ಟರ್‌ಗಳಲ್ಲಿ ಹೆಚ್ಚುರೈತರು ರಾಗಿ ಬ್ಯಾಗ್‌ಗಳನ್ನು ತುಂಬಿಕೊಂಡು ಬರುತ್ತಿದ್ದು, ಭಾನುವಾರವೂ ಸಹ ರಾಗಿ ಖರೀದಿ ಮಾಡಲು ಅಗತ್ಯ ಕ್ರಮ ವಹಿಸಬೇಕು. ಜತೆಗೆ ರೈತರೊಂದಿಗೆ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಬೇಕು. ವಾಹನ ಗಳನ್ನು ಬಾಡಿಗೆಗೆ ಪಡೆದುಕೊಂಡು ರೈತರು ರಾಗಿಯನ್ನು ತರುತ್ತಿದ್ದು, ಕೇಂದ್ರದ ಬಳಿ 3-4 ದಿನ ಕಾಯುವುದರಿಂದ ಬಾಡಿಗೆ ಹೆಚ್ಚಾಗಿ ರೈತರಿಗೆ ಹೊರೆಯಾಗು ತ್ತಿದೆ. ಆದ್ದರಿಂದ ದಿನನಿತ್ಯ ಸಮಯ, ವೇಳೆ ನಿಗದಿ ಪಡಿಸಿ ಟೋಕನ್ ನೀಡಿದರೆ ಅಷ್ಟು ರೈತರು ಮಾತ್ರ ಆಗಮಿಸುತ್ತಾರೆ ಎಂದು ಸಲಹೆ ನೀಡಿದರು.
ತೂಕದಲ್ಲಿ ದೋಷವಿದ್ದರೆ ಸರಿಪಡಿಸಿ: ರಾಗಿ ಮಾರಾಟ ಮಾಡಲು ಆಗಮಿಸುವ ರೈತರಿಗೆ ಯಾವುದೇ ಸಮಸ್ಯೆ ಉಂಟಾಗದ ರೀತಿ ನೋಡಿಕೊಳ್ಳಬೇಕು. ತೂಕದಲ್ಲಿಯೂ ವ್ಯತ್ಯಾಸವಾಗ ಬಾರದು.ತೂಕದಲ್ಲಿ ದೋಷವಿದ್ದರೆ ಅದನ್ನು ಸರಿಪಡಿಸಬೇಕು.ಎಂದು ಅಹಾರ ಇಲಾಖೆಯ ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದ ಅವರು, ಮಾಗಡಿ ಪಟ್ಟಣದ ಬಳಿ ನಿರ್ಮಿಸಲು ಉದ್ದೇಶಿಸಿರುವ ಎಪಿಎಂಸಿ ಮಾರುಕಟ್ಟೆಬಳಿ ರಾಗಿ ಸಂಗ್ರಹಕ್ಕೆ ಶೀಘ್ರದಲ್ಲಿಯೇ ಗೋದಾಮುನಿರ್ಮಿಸಿ ಪ್ರಾರಂಭಿಸಲು ಸರ್ಕಾರಕ್ಕೆ ಮನವಿ ಮಾಡಿ ಒತ್ತಡ ಹಾಕಲಾಗುವುದು ಎಂದು ತಿಳಿಸಿದರು.
ಮೂಲ ಸೌಕರ್ಯಗಳಿಲ್ಲ: ರೈತರ ದೂರುಗಳಿಗೆ ಸ್ಪಂದಿಸುವ ಕೆಲಸ ಮಾಡಿದ ಶಾಸಕ ಎ.ಮಂಜುನಾಥ್ ಕಾರ್ಯ ವೈಖರಿಯನ್ನು ಪ್ರಶಂಸೆ ಮಾಡಿದ ರೈತರು,ರಾಗಿ ಖರೀದಿ ಕೇಂದ್ರದ ಬಳಿ ರಾಗಿ ಮಾರಾಟ ಮಾಡಲು ಆಗಮಿಸುವ ರೈತರು ದಿನಗಟ್ಟಲೆ ಕಾಯುತ್ತಿದ್ದು, ಕೇಂದ್ರದ ಬಳಿ ಮೂಲಸೌಕರ್ಯಗಳಿಲ್ಲದೆ ತೊಂದರೆಯಾಗುತ್ತಿದೆ. ಜೊತೆಗೆ ಬೇರೆ ಕಡೆ ತೂಕಮಾಡಿಸಿಕೊಂಡು 52 ಕೆ.ಜಿ. ರಾಗಿಯನ್ನು ತಂದರೆಖರೀದಿ ಕೇಂದ್ರದಲ್ಲಿರುವ ಮಾಪನದಲ್ಲಿ 51 ಕೆ.ಜಿ.ತೋರಿಸುತ್ತದೆ ಎಂದು ಶಾಸಕರ ಬಳಿ ರೈತರು ತಮ್ಮ ನೋವನ್ನು ತೋಡಿಕೊಂಡರು.
ಈ ಸಂಬಂಧ ಅಧಿಕಾರಿಗಳು ಪ್ರತಿಕ್ರಿಯಿಸಿ, ತೂಕದಲ್ಲಿ ಯಾವುದೇ ವ್ಯತ್ಯಾಸವಾಗುತ್ತಿಲ್ಲ ಸರಿಯಾಗಿದೆ. ಬಹುತೇಕ ರೈತರು ಕಳಪೆ ದರ್ಜೆಯ ರಾಗಿ ಬ್ಯಾಗ್‌ಗಳು ಬಳಸುತ್ತಿರುವುದರಿಂದ ವಾಹನಗಳಲ್ಲಿ ತರಬೇಕಾ ದರೆ ಸೋರಿಕೆ ಯಾಗುತ್ತದೆ. ಈ ಸಂಬಂಧ ಯಾರಿಂದಲೂ ದೂರುಗಳಿಲ್ಲ ಎಂದರು.
ಜಿಪಂ ಸದಸ್ಯೆ ನಾಜಿಯಾ ಖಾನ್ ಜವಾಹರ್,ತಾಪಂ ಸದಸ್ಯ ಎಂ.ಜಿ ನರಸಿಂಹಮೂರ್ತಿ, ಹನುಮೇಗೌಡ, ಕುದೂರು ಪುರುಷೋತ್ತಮ್, ಕೆಡಿಪಿ ಸದಸ್ಯ ನಾಗರಾಜು, ಗ್ರಾಪಂ ಮಾಜಿ ಅಧ್ಯಕ್ಷ ರಾಘವೇಂದ್ರ, ಗ್ರಾಪಂ ಸದಸ್ಯ ತಿಪ್ಪಸಂದ್ರ ರಘು, ಸಾಗರ್‌ಗೌಡ, ಸೋಲೂರು ರಾಘಣ್ಣ, ನಾರಸಂದ್ರ ವಿನಯ್, ಶಬೀರ್ ಪಾಷಾ ಇದ್ದರು.