Advertisement

ಖರೀದಿ ಕೇಂದ್ರ ಬಂದ್‌; ಅಡಿಕೆ ಬೆಳೆಗಾರರಿಗೂ ತಟ್ಟಿದ ಬಿಸಿ

06:29 PM Apr 03, 2020 | Sriram |

ಸುಳ್ಯ/ಮಂಗಳೂರು: ಕೋವಿಡ್ 19 ಬಿಸಿ ಅಡಿಕೆ ಬೆಳೆಗಾರರಿಗೂ ತಟ್ಟಲಾರಂಭಿಸಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಖರೀದಿ ಕೇಂದ್ರಗಳು ಬಾಗಿಲೆಳೆದಿರುವುದೇ ಇದಕ್ಕೆ ಕಾರಣ. ಧಾರಣೆ ಇದ್ದರೂ ಸುಲಿದ ಅಡಿಕೆಯ ಮಾರಾಟಕ್ಕೆ ಮಾರುಕಟ್ಟೆ ಸೌಲಭ್ಯ ಇಲ್ಲವಾಗಿದೆ. ಇದರಿಂದ ಕೃಷಿಕರು ದೈನಂದಿನ ಖರ್ಚಿಗೆ ಹಣವಿಲ್ಲದೆ ಸಂಕಷ್ಟ ಎದುರಿಸುವಂತಾಗಿದೆ.

Advertisement

ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಕಾಸರಗೋಡು ಸೇರಿ ದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಅಡಿಕೆ ಕೃಷಿಯೇ ಪ್ರಧಾನ ವಾಣಿಜ್ಯ ಬೆಳೆ. ಈಗ ಕೊಯ್ಲ ಮುಗಿದು ಒಣಗಿ ಅಟ್ಟದಲ್ಲಿ ದಾಸ್ತಾನು ಇರಿಸಿ ಅಗತ್ಯಕ್ಕೆ ತಕ್ಕಂತೆ ಮಾರಾಟ ಮಾಡುವುದು ಪರಿಪಾಠ. ಕ್ಯಾಂಪ್ಕೋ, ಎಪಿಎಂಸಿ ಅಥವಾ ಇತರ ಅಡಿಕೆ ಖರೀದಿ ಅಂಗಡಿಗಳಿಗೆ ಮಾರಾಟ ಮಾಡಿ ದಿನ ನಿತ್ಯದ ವ್ಯವಹಾರ ಸರಿದೂಗಿಸಿಕೊಳ್ಳುವ ಬೆಳೆಗಾರರು ಪ್ರಮಾಣ ಶೇ. 65ಕ್ಕಿಂತಲೂ ಹೆಚ್ಚಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಅಗತ್ಯ ವಸ್ತುಗಳ ಖರೀದಿಗೂ ತತ್ವಾರ ಪಡಬೇಕಿದೆ ಎನ್ನುವ ಆತಂಕ ಬೆಳೆ ಗಾರರದ್ದು.

ಈಗ ಬಹಳಷ್ಟು ಸಣ್ಣ ರೈತರ ಕೈಯಲ್ಲಿ ಹಣವಿಲ್ಲ. ಅಡಿಕೆ ಕೃಷಿ ಮತ್ತು ವ್ಯವಹಾರ ಸಂಬಂಧಿತ ಯಾವ ಕೆಲಸಗಳೂ ನಡೆಯುತ್ತಿಲ್ಲ ಎನ್ನುತ್ತಾರೆ ಅಖೀಲ ಭಾರತ ಅಡಿಕೆ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ್‌ ಪುಚ್ಚಪಾಡಿ.

ಧಾರಣೆ ತಗ್ಗಿಸಿ ವಂಚನೆ!
ಕೆಲವೆಡೆ ಮನೆ- ಮನೆಗೆ ಬಂದು ಅಡಿಕೆ ಖರೀದಿಸು ವವರು ಈ ಸಂದರ್ಭವನ್ನು ದುರ್ಬಳಕೆ ಮಾಡಿ ಕೊಂಡು ಕಡಿಮೆ ಧಾರಣೆಗೆ ಅಡಿಕೆ ಖರೀದಿ ಮಾಡುತ್ತಿರುವುದು ಬೆಳಕಿಗೆ ಬರುತ್ತಿದೆ. 300 ರೂ. ಗಡಿ ದಾಟಿರುವ ಸಿಂಗಲ್‌ ಚೋಲ್‌, 250 ರೂ. ಗಡಿಯಲ್ಲಿರುವ ಹೊಸ ಅಡಿಕೆಯ ಧಾರಣೆ ಕುಗ್ಗಲಿದೆ ಎಂದು ಹೆದರಿಸಿ ಕಡಿಮೆ ಮೊತ್ತಕ್ಕೆ ಖರೀದಿಸಲಾಗುತ್ತಿದೆ ಎಂದು ಕೆಲವು ಬೆಳೆಗಾರರು ದೂರಿದ್ದಾರೆ. ಅಂತಹ ಮೋಸದ ಬಲೆಗೆ ಯಾವುದೇ ಕೃಷಿಕರು ಬಲಿಯಾಗ ಬಾರದು ಎಂದು ಅಡಿಕೆ ಬೆಳೆ ಗಾರರ ಪರವಾದ ಸಂಘಟನೆಗಳು ಮನವಿ ಮಾಡಿವೆ.

ಸಹಕಾರ ಸಂಘಗಳ ನೆರವು ಅಗತ್ಯ
ಬಿಳಿ ಚೀಟಿ ವ್ಯಾಪಾರಿಗಳು ಈಗ ಅಡಿಕೆ ಖರೀದಿಗೆ ಆರ್ಥಿಕ ಸಮಸ್ಯೆ ಹಾಗೂ ಖರೀದಿಸಿದ ಅಡಿಕೆಯನ್ನು ಬೇರೆ ರಾಜ್ಯಕ್ಕೆ ಕೊಂಡುಹೋಗಲು ವ್ಯವಸ್ಥೆ ಇಲ್ಲ ಎಂಬ ನೆಪ ಒಡ್ಡುತ್ತಿದ್ದಾರೆ. ಆದ್ದರಿಂದ ಅಡಿಕೆ ಖರೀದಿ ಸಹಕಾರ ಸಂಸ್ಥೆಗಳು ರೈತರ ನೆರವಿಗೆ ಧಾವಿಸಬೇಕಿದೆ. ಕ್ಯಾಂಪ್ಕೋ, ಎಪಿಎಂಸಿ, ಮೊದಲಾದ ಸಂಸ್ಥೆಗಳು ಗ್ರಾಮ ಮಟ್ಟದಲ್ಲಿ 15 ದಿನಗಳಿಗೊಮ್ಮೆ ನಿಗದಿತ ಪ್ರಮಾಣದಲ್ಲಿ ಅಡಿಕೆ ಖರೀದಿಸಿ ಬೆಳೆಗಾರರಿಗೆ ನೆರವಾಗಬೇಕಿದೆ. ಇದರಿಂದ ತುರ್ತು ಸಂದರ್ಭದಲ್ಲಿ ಬೆಳೆಗಾರರಿಗೆ ಆರ್ಥಿಕವಾಗಿ ಸಹಾಯವಾಗಲಿದೆ ಎನ್ನುತ್ತಾರೆ ಸಣ್ಣ ಅಡಿಕೆ ಕೃಷಿಕ ಚಂದ್ರಶೇಖರ ಸುಳ್ಯ.

Advertisement

ಕ್ಯಾಂಪ್ಕೋ, ಮಾಸ್‌ ಮೂಲಕ ಖರೀದಿ‌
ಅಡಿಕೆ ಸೇರಿದಂತೆ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ ಕೃಷಿಕರಿಗೆ ತೊಂದರೆಯಾಗಿರುವುದ ಗಮನಕ್ಕೆ ಬಂದಿದೆ. ಈ ಬಗ್ಗೆ ಕ್ಯಾಂಪ್ಕೋ ಮತ್ತು ಮಾಸ್‌ ಜತೆಗೆ ಚರ್ಚಿಸಿ ಖರೀದಿಗೆ ಕ್ರಮ ಕೈಗೊಳ್ಳಲಾಗುವುದು.
ಕೋಟ ಶ್ರೀನಿವಾಸ ಪೂಜಾರಿ,
ದ.ಕ. ಜಿಲ್ಲಾ ಉಸ್ತುವಾರಿ ಸಚಿವ

ಆತಂಕ ಬೇಡ
ನಗದು ಆವಶ್ಯಕತೆ ಇರುವ ಅಡಿಕೆ ಬೆಳೆಗಾರರಿಗೆ ಅಡಿಕೆಯನ್ನು ಗಿರವಿ ಇಟ್ಟು ಹಣ ಒದಗಿಸುವಂತೆ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳಿಗೆ ಸೂಚನೆ ನೀಡಲಾಗಿದೆ. ಆದ್ದರಿಂದ ಬೆಳೆಗಾರರಲ್ಲಿ ಆತಂಕ ಬೇಡ. ಅಲ್ಲದೆ ಕಳೆದ ವರ್ಷ ಅಡಿಕೆ ಉತ್ಪಾದನೆ ಕಡಿಮೆಯಾಗಿದ್ದರಿಂದ ದಾಸ್ತಾನು ಶೇ. 30ರಷ್ಟು ಕಡಿಮೆ ಇದೆ. ಹಾಗಾಗಿ ಮುಂದೆ ಅಡಿಕೆಗೆ ಉತ್ತಮ ಬೆಲೆಯನ್ನು ನಿರೀಕ್ಷಿಸಲಾಗಿದೆ.
-ಎಸ್‌. ಆರ್‌. ಸತೀಶ್ಚಂದ್ರ,
ಕ್ಯಾಂಪ್ಕೊ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next