Advertisement
ಕಾರ್ಕಳ ಪುರಸಭೆ ವ್ಯಾಪ್ತಿಯ ಖಾಸಗಿ ಬಸ್ ನಿಲ್ದಾಣದ ಸಮೀಪ, ಅನಂತಶಯನದ ಬಳಿ, ಆನೆಕೆರೆ, ಗೊಮ್ಮಟಬೆಟ್ಟ ಮೊದಲಾದ ಕಡೆಗಳಲ್ಲಿ ಬೀದಿ ಬದಿ ಸಣ್ಣ ವ್ಯಾಪಾರಿಗಳು ಗೂಡಂಗಡಿಗಳನ್ನು ತೆರೆದು ವ್ಯಾಪಾರ ನಡೆಸುತ್ತಿದ್ದಾರೆ. ಸಂಜೆ ವೇಳೆ ಶಾಲಾ ಮಕ್ಕಳು ಸಹಿತ ಗುಂಪಾಗಿ ಇಂತಹ ಅಂಗಡಿಗಳ ಮುಂದೆ ಆಹಾರಕ್ಕೆ ಮುಗಿ ಬೀಳುತ್ತಿರುತ್ತಾರೆ. ಇಲ್ಲಿ ಸಿದ್ಧಪಡಿಸುವ ಗೋಬಿ ಮಂಚೂರಿ, ನೂಡಲ್ಸ್ ಮೊದಲಾದ ತಿನಿಸುಗಳನ್ನು ಸಿದ್ಧಪಡಿಸುವಾಗ ಟೇಸ್ಟಿಂಗ್ ಪೌಡರ್ ಬಳಸುತ್ತಿದ್ದು, ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ವೇಳೆ ಆಹಾರಗಳಿಗೆ ರುಚಿಕರ (ಅಜಿನ ಮೊಟೋ) ಪೌಡರ್ ಬಳಸುತ್ತಿರುವುದು ಕಂಡು ಬಂದಿದೆ. ಅಂಗಡಿಯವರಿಗೆ ಎಚ್ಚರಿಕೆ ನೀಡಿ ಪೌಡರ್‌ಗಳನ್ನು ವಶಕ್ಕೆ ಪಡೆಯಲಾಯಿತು. ಬೀದಿ ಬದಿ ವ್ಯಾಪಾರಿಗಳು ಸ್ಥಳದಲ್ಲಿ ಸ್ವತ್ಛತೆ ಕಾಪಾಡಿಕೊಳ್ಳದೆ ಇರುವುದು ಕಂಡುಬಂದಿದೆ. ತಿಂಡಿಗೆ ಬಳಸುವ ಎಣ್ಣೆ ಬದಲಾಯಿಸದೆ ಇರುವುದು. ಪರಿಸರದಲ್ಲಿ ಸ್ವತ್ಛತೆ ಕಾಪಾಡಿಕೊಳ್ಳದೆ ಇರುವುದಕ್ಕೆ ಅಧಿಕಾರಿಗಳು ವ್ಯಾಪಾರಸ್ಥ ರನ್ನು ತರಾಟೆಗೆ ತೆಗೆದುಕೊಂಡರು. ಮುಂದೆಯೂ ಇದೇ ರೀತಿ ಕಂಡುಬಂದರೆ ವ್ಯಾಪಾರ ಪರವಾನಿಗೆ ರದ್ದುಪಡಿಸುವ ಎಚ್ಚರಿಕೆ ನೀಡಿದರು. ಈ ಸಂದರ್ಭ ಆರೋಗ್ಯ ನಿರೀಕ್ಷಕಿ ಲೈಲಾ ಥೋಮಸ್, ಮ್ಯಾನೇಜರ್ ಸೂರ್ಯಕಾಂತ ಖಾರ್ವಿ, ನಾಗೇಶ್, ಶೈಲೇಶ್ ಮತ್ತಿತರರು ಉಪಸ್ಥಿತರಿದ್ದರು.