Advertisement

ಶಾಂತಿಯುತವಾಗಿ ನಡೆದ ಕಾಪು ಪುರಸಭೆ ಚುನಾವಣೆ : ಶೇ. 73.95 ಮತದಾನ

07:00 PM Dec 27, 2021 | Team Udayavani |

ಕಾಪು  : ಕಾಪು ಪುರಸಭಾ ಚುನಾವಣೆಯು ಅತ್ಯಂತ ಶಾಂತಿಯುತವಾಗಿ ನಡೆದಿದ್ದು, 23 ವಾರ್ಡ್‌ಗಳಲ್ಲಿ ಶೇ. 73.95 ರಷ್ಟು ಮತದಾನ ನಡೆದಿದೆ.

Advertisement

ಕಾಪು ಪುರಸಭೆ ವ್ಯಾಪ್ತಿಯ ಕೈಪುಂಜಾಲು ಸರಕಾರಿ ಶಾಲೆಯ ಮತಗಟ್ಟೆಯಲ್ಲಿ ಕೈಪುಂಜಾಲು ಮತ್ತು ಕರಾವಳಿ ವಾರ್ಡ್, ದಂಡತೀರ್ಥ ವಿದ್ಯಾಸಂಸ್ಥೆಯ ಮತಗಟ್ಟೆಯಲ್ಲಿ ಕೋತಲಕಟ್ಟೆ, ಕಲ್ಯಾ, ಭಾರತ ನಗರ, ದಂಡತೀರ್ಥ, ಪೊಲಿಪುಗುಡ್ಡೆ ವಾರ್ಡ್, ಪೊಲಿಪು ಶಾಲೆ ಮತಗಟ್ಟೆಯಲ್ಲಿ ಪೊಲಿಪು ವಾರ್ಡ್, ಕಾಪು ಪಡು ಶಾಲೆ ಮತಗಟ್ಟೆಯಲ್ಲಿ ಲೈಟ್ ಹೌಸ್, ಕಾಪು ಮಾದರಿ ಶಾಲೆ ವಠಾರದ ಮತಗಟ್ಟೆಯಲ್ಲಿ ಬೀಡು ಬದಿ, ಕಾಪು ಪೇಟೆ, ಕೊಪ್ಪಲಂಗಡಿ ವಾರ್ಡ್, ವಿದ್ಯಾನಿಕೇತನ ಶಾಲೆ ಮತಗಟ್ಟೆಯಲ್ಲಿ ಜನಾರ್ದನ ದೇವಸ್ಥಾನ ವಾರ್ಡ್, ಮೂಳೂರು ಸಿಎಸ್‌ಐ ಶಾಲೆಯ ಮತಗಟ್ಟೆಯಲ್ಲಿ ಮಂಗಳಪೇಟೆ ಮತ್ತು ದುಗ್ಗನ್ ತೋಟ ವಾರ್ಡ್, ಮೂಳೂರು ಸರಕಾರಿ ಶಾಲೆಯಲ್ಲಿ ತೊಟ್ಟಂ ವಾರ್ಡ್, ಮಲ್ಲಾರು ಗ್ರಾಮ ಪಂಚಾಯತ್ ಮತಗಟ್ಟೆಯಲ್ಲಿ ಕೊಂಬಗುಡ್ಡೆ, ಬಡಕರಗುತ್ತು ವಾರ್ಡ್, ಮಲ್ಲಾರು ಜನರಲ್ ಶಾಲೆ ಮತಗಟ್ಟೆಯಲ್ಲಿ ಜನರಲ್, ಗುಜ್ಜಿ ವಾರ್ಡ್, ಉರ್ದು ಶಾಲೆ ಮತಗಟ್ಟೆಯಲ್ಲಿ ಅಹಮದಿ ಮೊಹಲ್ಲಾ ಮತ್ತು ಕುಡ್ತಿಮಾರು ವಾರ್ಡ್ ಹಾಗೂ ಗರಡಿ ಬಳಿಯ ಅಂಗನವಾಡಿ ಮತಗಟ್ಟೆಯಲ್ಲಿ ಗರಡಿ ವಾರ್ಡ್‌ನ ಮತದಾನ ನಡೆಯಿತು.

ಪುರಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 23 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಜೆಡಿಎಸ್ 7, ಎಸ್‌ಡಿಪಿಐ 9, ವೆಲ್ಪೇರ್ ಪಾರ್ಟಿ ಇಂಡಿಯಾ 2 ಮತ್ತು ಪಕ್ಷೇತರ 3 ಮಂದಿಯೂ ಸೇರಿದಂತೆ 67 ಮಂದಿ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.

ಇದನ್ನೂ ಓದಿ : ಕರ್ಫ್ಯೂ ಉಲ್ಲಂಘಿಸಿದರೆ ಕೇಸ್ : ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ

ದಂಡತೀರ್ಥ ಶಾಲೆಯ ಮತಗಟ್ಟೆಯೊಂದರಲ್ಲಿ ಮತ ಚಲಾಯಿಸಲು ಬಂದ ಅಜ್ಜಿಗೆ ಆಸರೆಯಾಗುವ ಮೂಲಕ ಮಹಿಳಾ ಪೊಲೀಸ್ ಸಿಬಂದಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಭಾರತ್ ನಗರ ವಾರ್ಡ್ ಹಿರಿಯ ಮಹಿಳಾ ಮತದಾರೆ 82 ವರ್ಷ ಪ್ರಾಯದ ಗಿರಿಜಾ ದೇವಾಡಿಗ ಅವರನ್ನು ಮತಗಟ್ಟೆ ಕೇಂದ್ರದಿಂದ ರಿಕ್ಷಾದವರೆಗೆ ಎತ್ತಿಕೊಂಡು ಹೋಗುವ ಮೂಲಕ ಪೊಲೀಸ್ ಸಿಬಂದಿ ಅಶ್ವಿನಿ ಬೀಳಗಿ ಅವರು ಮತದಾರರು, ಮತಗಟ್ಟೆ ಅಧಿಕಾರಿಗಳು ಮತ್ತು ಸ್ಥಳೀಯರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

Advertisement

ಎಲ್ಲಾ ಮತಗಟ್ಟೆಗಳಲ್ಲೂ ಬಿರುಸಿನಿಂದ ಮತದಾನ ನಡೆದಿದ್ದು ವಯೋವೃದ್ಧರು ಮತ್ತು ಅಂಗವಿಕಲರು ಇತರರ ಸಹಾಯದೊಂದಿಗೆ ಮತಗಟ್ಟೆಗೆ ಆಗಮಿಸಿ, ಮತ ಚಲಾಯಿಸಿದರು. ಯುವಕರನ್ನೂ ನಾಚಿಸುವಂತೆ ವಯೋವೃದ್ಧರು ಮತದಾನ ಮಾಡಲು ಆಗಮಿಸಿದ್ದು, ತಮ್ಮ ಕಾಲದ ಪರಿಚಯಸ್ಥರೊಂದಿಗೆ ಹರಟೆ ಮತ್ತು ಉಭಯ ಕುಶಲೋಪಚಾರಿ ಚರ್ಚೆ ನಡೆಸಿದರು.

ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಕೆ. ಅವರು ಕೆಲವು ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆಗಳನ್ನು ವೀಕ್ಷಿಸಿದರು. ಚುನಾವಣಾ ವೀಕ್ಷಕ ಮಹಮ್ಮದ್ ಇಸಾಕ್ ಮತ್ತು ಕಾಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ಹಾಗೂ ವಿವಿಧ ಅಧಿಕಾರಿಗಳು ಪ್ರತೀ ಮತಗಟ್ಟೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕ ಕುಮಾರ ಚಂದ್ರ ಹಾಗೂ ಕಾಪು ವೃತ್ತ ನಿರೀಕ್ಷಕ ಪ್ರಕಾಶ್, ಕಾರ್ಕಳ ವೃತ್ತ ನಿರೀಕ್ಷಕ ಸಂಪತ್ ಕುಮಾರ್ ನೇತೃತ್ವದಲ್ಲಿ ಕಾಪು, ಪಡುಬಿದ್ರಿ, ಶಿರ್ವ ಪಿಎಸ್‌ಐ, ಕ್ರೈಂ ಎಸ್‌ಐಗಳ ಸಹಿತವಾಗಿ ಪೊಲೀಸ್ ಸಿಬಂದಿಗಳು ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next