ಪುರಾಣದಲ್ಲಿ ಭಗೀರಥನ ಕಥೆಗೆ ವಿಶೇಷ ಪ್ರಾಮುಖ್ಯತೆಯುಂಟು. ಅವನು ದೇವಲೋಕದ ಗಂಗೆಯನ್ನು ಭೂಮಿಗೆ ತಂದ ಧೀರ. ಭಗೀರಥನ ಹಿಂದೆಯೇ ಹರಿದು ಬಂದಿದ್ದರಿಂದ ಗಂಗೆಗೆ ಭಾಗೀರಥಿ ಎಂಬ ಹೆಸರೂ ಬಂತು. ಭಗೀರಥ ಗಂಗೆಗಾಗಿ ಹಂಬಲಿಸಿದ್ದು ಏಕೆ ? ಈ ಕಥೆಗೆ ಇರುವ ಹಿನ್ನೆಲೆಯಾದರೂ ಏನು ಅಂದಿರಾ?
ಸಗರ ಎಂಬ ಚಕ್ರವರ್ತಿಯಿದ್ದ. ಅವನಿಗೆ 60 ಸಾವಿರ ಮಕ್ಕಳು. ಚಕ್ರವರ್ತಿಗೆ ನೂರು ಅಶ್ವಮೇಧಯಾಗ ಮಾಡುವ ಆಸೆಯಾಯಿತು.ಅದಕ್ಕೆ ಎಲ್ಲ ಸಿದ್ಧತೆಗಳೂ ನಡೆದವು. ನೂರು ಅಶ್ವಮೇಧ ಯಾಗ ಮಾಡಿದವನಿಗೆ ಇಂದ್ರ ಪದವಿ ದಕ್ಕುತ್ತದೆ. ಈ ವಿಷಯ ತಿಳಿದಿದ್ದ ದೇವೇಂದ್ರ, ಸಗರನ ಯಾಗದ ಕುದುರೆಯನ್ನೇ ಅಪಹರಿಸಿಬಿಟ್ಟ.
ಸಗರನ ಮಕ್ಕಳು ಯಾಗದ ಕುದುರೆಯನ್ನು ಹುಡುಕಿಕೊಂಡು ಪಾತಾಳಕ್ಕೆ ಬಂದರು. ಅಲ್ಲಿ ಕಪಿಲ ಮಹರ್ಷಿ ತಪ್ಪಸ್ಸು ಮಾಡುತ್ತಿದ್ದ, ಇದೇನೂ ಗೊತ್ತಿಲ್ಲದ ಸಗರನ ಮಕ್ಕಳು ಯಾಗದ ಕುದುರೆ ಕದ್ದವನೇ ಈತ ಎಂದುಕೊಂಡು ಋಷಿಯ ಮೇಲೆ ಏರಿಹೋದರು. ಕಪಿಲ ಮಹರ್ಷಿ ಕಣ್ತೆರೆದಾಗ ಅವರೆಲ್ಲಾ ಸುಟ್ಟು ಭಸ್ಮವಾದರು.
ಇತ್ತ ನಾಪತ್ತೆಯಾದ ತನ್ನ ಬಂಧುಗಳನ್ನು ಹುಡುಕಿಕೊಂಡು ಸಗರನ ಮೊಮ್ಮಗ ಅಂಶುಮಂತ ಹೊರಟ . ಆಗ ಎದುರಾದ ಕಪಿಲ ಮಹರ್ಷಿ , ನಡೆದುದನ್ನೆಲ್ಲಾ ವಿವರಿಸಿ ನಿನ್ನ ಬಂಧುಗಳು ಈ ಬೂದಿಯ ಮೇಲೆ ದೇವಗಂಗೆ ಹರಿದರೆ ಅವರಿಗೆ ಸದ್ಗತಿ ದೊರೆಯುತ್ತದೆ ಎಂದ.ಗಂಗೆಯನ್ನು ಭೂಲೋಕಕ್ಕೆ ತರುವುದು ಹೇಗೆ ಎಂದು ಅಂಶುಮಂತನಿಗೆ ತಿಳಿಯಲಿಲ್ಲ.
ಅವನು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಅವನ ಮಗ ದಿಲೀಪ. ಅವನೂ ಹಾಗೆಯೇ ಚಿಂತಿಸುತ್ತಲೇ ಬದುಕನ್ನು ಮುಗಿಸಿದ. ದಿಲೀಪನ ಮಗ ಭಗೀರಥ. ಅವನು ಕಾರ್ಯೋನ್ಮುಖನಾದ. ಅವನು ದೇವಗಂಗೆಯನ್ನು ಕುರಿತು ಭಕ್ತಿಯಿಂದ ತಪಸ್ಸು ಮಾಡಿದ. ಭಗೀರಥನ ತಪಸ್ಸಿಗೆ ಮೆಚ್ಚಿದ ಗಂಗೆ, ಕಡೆಗೆ ಅವಳು ಪ್ರತ್ಯಕ್ಷಳಾದಳು . ಅವನು ಅವಳಿಗೆ , ‘ತಾಯಿ,ನನ್ನ ಚಿಕ್ಕಪ್ಪಂದಿರಿಗೆ ಸದ್ಗತಿಯಾಗುವಂತೆ ಅನುಗ್ರಹ ಮಾಡು ಎಂದು ಬೇಡಿದ’ . ಗಂಗಾ ದೇವಿ ಇದಕ್ಕೆ ಒಪ್ಪಿದಳು. ಆದರೆ ಇದು ಕಾರ್ಯಗತವಾಗುವ ಮಾರ್ಗವು ಕಠಿಣ ಎಂದು ವಿವರಿಸಿದಳು . ಅವಳು ಆಕಾಶದಿಂದ ಪಾತಾಳಕ್ಕೆ ಧುಮುಕುವಾಗ ಅವಳ ರಭಸವನ್ನು ಯಾರು ತಡೆಯುವರು? ಇಲ್ಲವಾದರೆ ಭೂಮಂಡಲವೇ ಕೊಚ್ಚಿ ಹೋಗುತ್ತದೆ. ಅವಳ ಬರುವಿನ ರಭಸವನ್ನು ತಡೆಬಲ್ಲವನು ಪರಮೇಶ್ವರನೊಬ್ಬನೇ ಅವನನ್ನು ಒಪ್ಪಿಸಬೇಕು.ಮತ್ತೂಂದು ಕಷ್ಟವನ್ನು ಅವಳು ಕೇಳಿಕೊಡಳು. ಗಂಗೆಯಲ್ಲಿ ಸ್ನಾನ ಮಾಡಿದವರು ಪಾಪಗಳನ್ನು ಕಳೆದುಕೊಳ್ಳುತ್ತಾರೆ. ಪಾಪಗಳನ್ನು ಗಂಗೆಯು ಹೇಗೆ ತೊಳೆದು ಕೊಳ್ಳಬೇಕು ? ಭಗೀರಥ ಅವಳಿಗೆ ತಾಯಿ , ಪಾಪಿಗಳಂತೆಯೇ ಪುಣ್ಯವಂತರೂ, ಜ್ಞಾನಿಗಳೂ ನಿನ್ನಲ್ಲಿ ಸ್ನಾನಮಾಡುವರು. ಆದುದರಿಂದ ಪಾಪಗಳು ಹೊರಟುಹೋಗುತ್ತವೆ ಎಂದ.
ಈಗ ಶಿವನ ಒಪ್ಪಿಗೆಯನ್ನು ಪಡೆಯುವುದು ಭಗೀರಥನ ಕರ್ತವ್ಯವಾಯಿತು. ಮತ್ತೆ ಬಹು ಕಾಲ ಶಿವನನ್ನು ಕುರಿತು ಉಗ್ರ ತಪಸ್ಸು ಮಾಡಿದ . ಕಡೆಗೆ ಶಿವನು ಪ್ರತ್ಯಕ್ಷನಾದಾಗಾ ‘ದೇವಾ, ಗಂಗೆಯು ಪಾತಾಳಕ್ಕೆ ಧುಮುಕುವಾಗ ಅವಳ ರಭಸವನ್ನು ತಾವು ತಡೆಯಬೇಕು ”ಎಂದು ಬೇಡಿದ. ಶಿವನು ಒಪ್ಪಿದ.
ಒಂದು ಶುಭ ಮುಹೂರ್ತದ ದಿನ ಗಂಗಾದೇವಿಯು ದೇವಲೋಕದಿಂದ ಧುಮುಕಿದಳು .ಶಿವನು ಆಕೆಯನ್ನು ತನ್ನ ಜಟೆಯಲ್ಲಿ ಧರಿಸಿದ . ಅವಳ ರಭಸವನ್ನು ತಡೆಯಲು ಪರಶಿವನು ತನ್ನ ಜಟೆಯನ್ನು ಬಿಚ್ಚಿಕೊಂಡು ನಿಂತ .
ರಭಸದಿಂದ ಧುಮುಕಿದ ಗಂಗೆ ಶಿವನ ಜಟೆಯಲ್ಲಿ ಬಂದಿಯಾದಳು. ಕೆಳಕ್ಕೆ ನೀರು ಬರಲಿಲ್ಲ. ಆಗ ಭಗೀರಥನು ಮತ್ತೆ ಶಿವನನ್ನು ಕುರಿತು ತಪ್ಪಸ್ಸು ಮಾಡಿ ಒಲಿಸಿಕೊಂಡ. ಆನಂತರದಲ್ಲಿ ದೇವಗಂಗೆಯು ಕೆಳಕ್ಕಿಳಿದಳು. ಅವಳಿಗೆ ದಾರಿಯನ್ನು ತೋರಿಸುತ್ತ ಭಗೀರಥನು ಮುಂದೆ ನಡೆದ .ಅವನ ಹಿಂದೆ ಗಂಗೆಯು ಹರಿದಳು. ಅವಳ ಸ್ಪರ್ಶವಾದ ಕಡೆ ಎಲ್ಲ ಪವಿತ್ರವಾಯಿತು. ಅವಳು ಸಗರನ ಮಕ್ಕಳ ಬೂದಿಯ ಮೇಲೆ ಹರಿದಳು. ಅವರಿಗೆ ಸದ್ಗತಿಯಾಯಿತು. ಭಗೀರಥನ ಪ್ರಯತ್ನವು ಸಾರ್ಥಕವಾಯಿತು.
– ಪ್ರೊ. ಎಲ್. ಎನ್ ಶೇಷಗಿರಿರಾವ್ ಅವರ “ಕಿರಿಯರ ಭಾಗವತ’ ಪುಸ್ತಕದಿಂದ