ಪುಂಜಾಲಕಟ್ಟೆ: ಯಕ್ಷಗಾನದ ಮೂಲ ಸಂಸ್ಕೃತಿ, ಸಂಪ್ರದಾಯವನ್ನು ಬಿಟ್ಟು ಅನ್ಯದಾರಿಯಲ್ಲಿ ಯಕ್ಷಗಾನ ನಡೆಯಬಾರದು. ಮೂಲ ಸಂಪ್ರದಾಯಕ್ಕೆ ಧಕ್ಕೆಯಾಗಬಾರದು ಎಂದು ಹಿರಿಯ ಯಕ್ಷಗಾನ ಕಲಾವಿದ ನಾರಾಯಣ ಶೆಟ್ಟಿ ಪೆರುವಾಯಿ ಅವರು ಹೇಳಿದರು.
ಸಹಕಾರಿ ಧುರೀಣ ದಿ| ಎನ್. ಸುಬ್ಬಣ್ಣ ಶೆಟ್ಟಿ ಸರಪಾಡಿ ಅವರ ಸ್ಮರಣಾರ್ಥವಾಗಿ ಸರಪಾಡಿ ಶ್ರೀ ಶರಭೇಶ್ವರ ಯಕ್ಷಗಾನ ಮಂಡಳಿ ಮತ್ತು ರಾಜಯೋಗ ಸರಪಾಡಿ ಹಾಗೂ ಸರಪಾಡಿ ಫ್ರೆಂಡ್ಸ್ ಸರಪಾಡಿ ಇದರ ಆಶ್ರಯದಲ್ಲಿ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ವಠಾರದಲ್ಲಿ ನ. 10ರವರೆಗೆ ನಡೆಯಲಿರುವ ಸರಪಾಡಿ ಯಕ್ಷೋತ್ಸವ ಸಪ್ತಾಹ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಸಾಮಾಜಿಕ ಕಳಕಳಿಯ ಸುಬ್ಬಣ್ಣ ಶೆಟ್ಟಿ ಅವರು ಇತರ ಕ್ಷೇತ್ರಗಳ ಜತೆ ಯಕ್ಷಗಾನಕ್ಕೂ ಅಮೂಲ್ಯ ಕೊಡುಗೆ ನೀಡಿದವರಾಗಿದ್ದಾರೆ. ಅವರ ಸಂಸ್ಮರಣೆಯ ತಾಳಮದ್ದಳೆ ಸಪ್ತಾಹ ಅರ್ಥಪೂರ್ಣವಾಗಿದೆ. ಇದು ನಿರಂತರವಾಗಿ ಮುಂದುವರಿಯಲಿ ಎಂದು ಹೇಳಿದರು.
ಕಲಾವಿದರ ನೆಲೆ ಗಟ್ಟಿಯಾದರೆ ಕಲೆಯ ಬೆಳವಣಿಗೆಯಾಗುವುದು. ಕಲಾವಿದರಿಗೆ ಪ್ರೋತ್ಸಾಹ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು. ವಾಸ್ತು ತಜ್ಞ, ಜೋತಿಷ ವಿದ್ವಾನ್ ರತ್ನಾಕರ ಭಟ್ ಸರಪಾಡಿ ಆಶೀರ್ವಚನ ನೀಡಿ ಶುಭ ಹಾರೈಸಿದರು. ಸರಪಾಡಿ ಗ್ರಾ.ಪಂ. ಸದಸ್ಯ ಧನಂಜಯ ಶೆಟ್ಟಿ ನಾಡಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಸರಪಾಡಿ ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ, ಶ್ರೀ ಶರಭೇಶ್ವರ ದೇವಸ್ಥಾನದ ಉಪಾಧ್ಯಕ್ಷ, ಕೂರ್ಯಾಳ ದುರ್ಗಾ ಸೇವಾ ಸಮಿತಿ ಅಧ್ಯಕ್ಷ ಕುಸುಮಾಕರ ಶೆಟ್ಟಿ ಕೂರ್ಯಾಳ, ಶ್ರೀ ಶರಭೇಶ್ವರ ದೇವಸ್ಥಾನದ ನವರಾತ್ರಿ ಉತ್ಸವ ಸಮಿತಿ ಅಧ್ಯಕ್ಷ ಶಶಿಕಾಂತ ಶೆಟ್ಟಿ ಆರುಮುಡಿ, ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನ ಮೊಕ್ತೇಸರ ವಿಠಲ ಎಂ., ಸರಪಾಡಿ ಪ್ರಗತಿಪರ ಕೃಷಿಕ, ಉದ್ಯಮಿ ರಿಚಾರ್ಡ್ ಡಿ’ಸೋಜಾ ಮತ್ತಿತರರು ಉಪಸ್ಥಿತರಿದ್ದರು. ಯಕ್ಷಗಾನ ಕಲಾವಿದ, ಕಾರ್ಯಕ್ರಮದ ಸಂಘಟಕ ಯೋಗೀಶ ಶೆಟ್ಟಿ ಆರುಮುಡಿ ಸ್ವಾಗತಿಸಿ, ವಂದಿಸಿದರು.
ಸರಪಾಡಿ ಸ.ಪ್ರೌ.ಶಾಲಾ ಮುಖ್ಯ ಶಿಕ್ಷಕ ಉದಯ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಮಂಡಳಿ ನಾಳ, ಗೇರುಕಟ್ಟೆ ಇವರಿಂದ ಶ್ರೀ ಕೃಷ್ಣ ಸಂಧಾನ ತಾಳಮದ್ದಳೆ ಜರಗಿತು. ನ.5ರಂದು ವಿಶ್ವ ಭಾರತಿ ಮುಡಿಪು ಇವರಿಂದ ಶ್ರೀ ರಾಮ ನಿರ್ಯಾಣ ತಾಳಮದ್ದಳೆ ನಡೆಯಲಿದೆ.
ಜೀವನಕ್ಕೆ ಪಾಠ
ಯಕ್ಷಗಾನದಿಂದ ಜನರಿಗೆ ನೈತಿಕ, ಧಾರ್ಮಿಕ ನಡೆ-ನುಡಿಯ, ಉತ್ತಮ ಆಚಾರ ವಿಚಾರದ ಸಂದೇಶ ದೊರಕುವುದು. ಸುಸಂಸ್ಕೃತ ಜೀವನಕ್ಕೆ ಬೇಕಾದ ಉತ್ತಮ ಪಾಠ ಯಕ್ಷಗಾನದಿಂದ ಲಭಿಸುವುದು.
–
ನಾರಾಯಣ ಶೆಟ್ಟಿ ಪೆರುವಾಯಿ
ಹಿರಿಯ ಯಕ್ಷಗಾನ ಕಲಾವಿದ