Advertisement

ಬಂಟ್ವಾಳ ತಾ|: 28 ಸೇತುವೆ ನಿರ್ಮಾಣ

03:50 PM May 29, 2019 | Naveen |

ಪುಂಜಾಲಕಟ್ಟೆ: ಮಳೆಗಾಲದಲ್ಲಿ ಶಾಲಾ ಮಕ್ಕಳು ಸರಿಯಾದ ಸೇತುವೆ ಇಲ್ಲದ ಕಾರಣಕ್ಕೆ ಶಾಲೆಗೆ ಹೋಗಲು ಅನನುಕೂಲವಾಗದಿರಲು, ಶಾಲಾ ಮಕ್ಕಳ ಸುರಕ್ಷತೆಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕನಸಿನ ಶಾಲಾ ಸಂಪರ್ಕ ಸೇತು ಯೋಜನೆ ಪ್ರಕಾರ ಬಂಟ್ವಾಳ ತಾಲೂಕಿನಲ್ಲಿ 28 ಕಿರು ಸೇತುವೆಗಳು ನಿರ್ಮಾಣಗೊಳ್ಳುತ್ತಿವೆ.

Advertisement

ಮಳೆಗಾಲದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಜನತೆ, ಮುಖ್ಯ ವಾಗಿ ಶಾಲಾ ಮಕ್ಕಳು ಅಪಾಯಕಾರಿ ಹಳ್ಳ ಕೊಳ್ಳಗಳನ್ನು ದಾಟುವ ತೊಂದರೆ ಅನುಭ ವಿಸುವುದನ್ನು ತಪ್ಪಿಸುವುದು ಇದರ ಉದ್ದೇಶವಾಗಿದೆ. ಪ್ರಸ್ತುತ ಬಂಟ್ವಾಳ ತಾಲೂಕಿನಲ್ಲಿ 37 ಸೇತುವೆಗಳನ್ನು ಗುರುತಿಸಲಾಗಿದ್ದು, 191.27ಲಕ್ಷ ರೂ. ವೆಚ್ಚದಲ್ಲಿ 28 ಸೇತುವೆಗಳ ನಿರ್ಮಾಣ ಕಾರ್ಯ ನಡೆದಿದೆ.

ಹಳ್ಳ – ಕೊಳ್ಳ, ಸುತ್ತು ಬಳಸಿನ ಹಾದಿ
ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳು ಶಾಲೆಗೆ ತೆರಳಲು ಗದ್ದೆ, ತೋಟಗಳ ದಾರಿಯಲ್ಲಿ ಸುತ್ತು ಬಳಸಿ ಸಾಗ ಬೇಕಾಗುತ್ತದೆ. ಇದರ ಜತೆ ಹಳ್ಳ- ಕೊಳ್ಳಗಳನ್ನು ದಾಟಿ ಹೋಗುವ ಪರಿಸ್ಥಿತಿ ಇರುತ್ತದೆ. ಆದರೆ ಈ ಹಳ್ಳ- ಕೊಳ್ಳಗಳಿಗೆ ಸರಿಯಾದ ಸೇತುವೆ ಇರುವುದಿಲ್ಲ. ಬದಲಾಗಿ ಅಡಿಕೆ ಮರ ಅಥವಾ ಇತರ ಮರಗಳಿಂದ ನಿರ್ಮಿಸಿದ ತಾತ್ಕಾಲಿಕ ಸೇತುವೆಗಳ ಮೇಲೆ ಸಾಗಬೇಕು. ಇದು ಬಹಳ ಅಪಾಯಕಾರಿಯೂ ಹೌದು. ಇದನ್ನು ಮನಗಂಡ ರಾಜ್ಯ ಸರಕಾರ ಕಳೆದ ನವಂಬರ್‌ ತಿಂಗಳಲ್ಲಿ ಶಾಲಾ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಆದೇಶಿಸಿ, ಅನುದಾನ ನೀಡಿದೆ. ಲೋಕೋಪಯೋಗಿ ಇಲಾಖೆ ಮೂಲಕ ಸೇತುವೆ ನಿರ್ಮಿ ಸಲಾಗುತ್ತಿದೆ.

ಮಾರ್ಗಸೂಚಿ
ಸೇತುವೆ ನಿರ್ಮಾಣಕ್ಕೆ ಆಯಾ ಭಾಗದ ಶಾಲಾ ಮುಖ್ಯಸ್ಥರು ಸ್ಥಳೀಯ ಜನರು ಹಾಗೂ ಪ್ರಮುಖರೊಟ್ಟಿಗೆ ಚರ್ಚಿಸಿ ಬೇಡಿಕೆ ನೀಡಿದ್ದಾರೆ. ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಸೇತುವೆಗಳ ಪಟ್ಟಿ ತಯಾರಿಸಿ ಲೋಕೋಪಯೋಗಿ ಇಲಾಖೆಗೆ ಸಲ್ಲಿಸಿದ್ದಾರೆ. ಲೋಕೋಪಯೋಗಿ ಇಲಾಖೆಯ ಕಟ್ಟಡ ಮತ್ತು ಸಂಪರ್ಕ ವಿಭಾಗದ ಎಂಜಿನಿಯರ್‌ ಕಿರುಸೇತುವೆಗಳ ವಿನ್ಯಾಸ ಹಾಗೂ ಅಂದಾಜುಪಟ್ಟಿ ಸಿದ್ದಪಡಿಸಿದ್ದಾರೆ. ಇಲಾಖೆಯ ಮಾರ್ಗಸೂಚಿ ಪ್ರಕಾರ ಸೇತುವೆಗಳ ಸ್ಥಳ ಗುರುತಿಸುವಿಕೆ, ವಿನ್ಯಾಸ, ಯೋಜನಾ ವರದಿ ತಯಾರಿಸಿ, ತಾಂತ್ರಿಕ ಮಂಜೂರು ಪ್ರಕ್ರಿಯೆ ನಡೆಸಲಾಗಿದ್ದು, ತಲಾ 15 ಲಕ್ಷ ರೂ. ವೆಚ್ಚದಲ್ಲಿ 1 ರಿಂದ 3 ಮೀ. ಅಗಲದ ಕಿರು ಸೇತುವೆ ನಿರ್ಮಿಸಲಾಗುತ್ತಿದೆ. ಇದು ಶಾಶ್ವತ ಯೋಜನೆಯಾಗಿದ್ದು, ಬೇಡಿಕೆಯನ್ವಯ ಪರಿಶೀಲಿಸಿ ನಿರಂತರ ಸೇತುವೆ ನಿರ್ಮಾಣ ಪ್ರಕ್ರಿಯೆ ನಡೆಯಲಿದೆ ಎಂದು ಲೋಕೋಪಯೋಗಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ನಿರ್ಧಾರ
ಕಳೆದ ಮಳೆಗಾಲದಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಶಾಲಾ ವಿದ್ಯಾರ್ಥಿನಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರಿಂದ ಎರಡು ದಿನಗಳ ಕಾಲ ಆ ಭಾಗದಲ್ಲಿ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಶಾಲಾ ಸಂಪರ್ಕ ಸೇತು ಯೋಜನೆ ಜಾರಿಗೆ ತರಲು ನಿರ್ಧರಿಸಿದ್ದರು.

ಮಕ್ಕಳ ಸುರಕ್ಷತೆ
ಶಾಲಾ ಸಂಪರ್ಕ ಸೇತು ಯೋಜನೆಯಲ್ಲಿ ಬಂಟ್ವಾಳ ತಾಲೂಕಿನಲ್ಲಿ ಸೇತುವೆ ನಿರ್ಮಿಸಲು 37 ಸೇತುವೆಗಳಿಗೆ ಬೇಡಿಕೆ ಪಟ್ಟಿ ಸಲ್ಲಿಸಲಾಗಿದೆ. ಪ್ರಸ್ತುತ 28 ಸೇತುವೆಗಳು ನಿರ್ಮಾಣಗೊಳ್ಳುತ್ತಿದ್ದು, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಇದು ಪ್ರಮುಖವಾಗಿದ್ದು, ಅನುಕೂಲವಾಗಲಿದೆ.
ಶಿವಪ್ರಕಾಶ್‌ ಎನ್‌.

ಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ
Advertisement
Advertisement

Udayavani is now on Telegram. Click here to join our channel and stay updated with the latest news.

Next