Advertisement

ಸಲ್ವಾರ್‌ ಕಮೀಜ್‌-ಕುರ್ತಾ

07:36 PM Jun 27, 2019 | mahesh |

ಪಂಜಾಬ್‌- ತನ್ನ ರಂಗುರಂಗಿನ ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಭಾರತದಲ್ಲಿ ಮಾತ್ರವಲ್ಲ ವಿಶ್ವದ ಎಲ್ಲೆಡೆ ಜನಪ್ರಿಯವಾಗಿದೆ. ಅಂತೆಯೇ ಪಂಜಾಬಿ ಮಹಿಳೆಯರ ಸಾಂಪ್ರದಾಯಿಕ ಉಡುಗೆಯೂ ವಿಶ್ವಾದ್ಯಂತ ಜನಪ್ರಿಯವಾಗಿದೆ.

Advertisement

19ನೇ ಶತಮಾನ ಹಾಗೂ 20ನೇ ಶತಮಾನದ ಆರಂಭದಲ್ಲಿ ಭಾರತದ ಎಲ್ಲೆಡೆ ಹತ್ತಿಯ ತಿಳಿಬಣ್ಣದ ಉಡುಗೆಗಳೇ ಜನಪ್ರಿಯವಾಗಿದ್ದವು. ಆದರೆ, ಬಣ್ಣ ಬಣ್ಣದ ಆಕರ್ಷಕ ಸಾಂಪ್ರದಾಯಿಕ ಉಡುಗೆಯಿಂದ ಜನಾಕರ್ಷಣೆ ಪಡೆದದ್ದು ಪಂಜಾಬ್‌.

ಫ‌ುಲ್‌ಕರಿ
15ನೇ ಶತಮಾನದ ಆರಂಭದಲ್ಲೆ ಬಣ್ಣ ಬಣ್ಣದ ಆಕರ್ಷಕ ಕಸೂತಿ ವಿನ್ಯಾಸಗಳಿಂದ, ಕೈಮಗ್ಗದ ಹೂವುಗಳಿಂದ ಅಲಂಕೃತವಾದ “ಫ‌ುಲ್‌ಕರಿ’ ಎಂಬ ಮೇಲ್‌ವಸ್ತ್ರ ಅಥವಾ ಹೊದಿಕೆಯನ್ನು ಮಹಿಳೆಯರು ಧರಿಸುತ್ತಿದ್ದರು. ಇಂದಿಗೂ ಇದು ಪಂಜಾಬ್‌ನಲ್ಲಿ ಯಾವುದೇ ಸಭೆಸಮಾರಂಭದಿಂದ ಹಿಡಿದು ನಿತ್ಯದ ಉಡುಗೆ ತೊಡುಗೆಯ ಧಾರಣೆಯಲ್ಲಿ ಮುಖ್ಯ ಪಾತ್ರ ವಹಿಸುವುದು ಫ‌ುಲ್‌ಕರಿ! ಸಾಂಪ್ರದಾಯಿಕವಾಗಿ ಇದನ್ನು “ಶಾಲ್‌’ ರೀತಿಯಲ್ಲಿ ಲೆಹಂಗಾದ ಜೊತೆಗೆ ಕುರ್ತಾದ ಜೊತೆಗೂ ಬಳಸುತ್ತಾರೆ.

ಪಟಿಯಾಲಾ ಸಲ್ವಾರ್‌
ಸಲ್ವಾರ್‌ ಕಮೀಜ್‌ ಇಂದು ಎಲ್ಲೆಲ್ಲೂ ಜನಪ್ರಿಯವಾದ ಪಂಜಾಬ್‌ನ ದಿರಿಸು. ಪಟಿಯಾಲಾ ಸಲ್ವಾರ್‌ ಮೊದಲು ಪಂಜಾಬ್‌ನ ಪುರುಷರು ಧರಿಸುವ ಸಾಂಪ್ರದಾಯಿಕ ಉಡುಗೆಯಾಗಿತ್ತು. ತದನಂತರ ಮಹಿಳೆಯರೂ ಧರಿಸಲು ಪ್ರಾರಂಭಿಸಿದರು. ಸಡಿಲವಾದ, ಧರಿಸಲು ಆರಾಮದಾಯಕವಾದ ಈ ಸಾಂಪ್ರದಾಯಿಕ ಮಹಿಳೆಯರ ದಿರಿಸು ಆರಂಭವಾಗಿದ್ದು ಪಟಿಯಾಲದಲ್ಲಿ. ಇಂದೂ ಪಟಿಯಾಲಾ ಶೈಲಿಯ ಪಂಜಾಬಿ ಸಲ್ವಾರ್‌ ಎಲ್ಲೆಡೆಯೂ ಜನಪ್ರಿಯವಾಗಿದೆ.

ಘಾಗ್ರಾ
ನಾಲ್ಕು ಮುಖ್ಯ ವಸ್ತ್ರಗಳ ಜೋಡಣೆಯಿಂದ ಪಂಜಾಬಿ ಘಾಗ್ರಾ ತಯಾರಾಗುತ್ತದೆ. ಇಂದು ಇದು ಹಿಮಾಚಲ ಪ್ರದೇಶ ಹಾಗೂ ಹರಿಯಾಣಾದ ಮಹಿಳೆಯರೂ ಧರಿಸುವ ಸಾಂಪ್ರದಾಯಿಕ ಉಡುಗೆಯಾಗಿದೆ. “ಗಿದ್ಧಾ’ ಎಂಬ ಪ್ರಸಿದ್ಧ ಪಂಜಾಬಿ ಜಾನಪದ ನೃತ್ಯದ ಸಮಯದಲ್ಲಿ ಮಹಿಳೆಯರು ಈ ಪಂಜಾಬಿ ಘಾಗ್ರಾ ಧರಿಸುತ್ತಾರೆ.

Advertisement

ಪರಂದಿ
ಪಂಜಾಬಿ ಮಹಿಳೆಯರು ವಿಶೇಷ ಸಮಾರಂಭಗಳಲ್ಲಿ ಜಡೆಯ ಅಲಂಕಾರಕ್ಕಾಗಿ ಧರಿಸುವ ನೂಲಿನಿಂದ ನೇಯ್ದ ಕುತ್ಛದಂತಹ ಸಾಂಪ್ರದಾಯಿಕ ಅಲಂಕಾರಿಕ ಸಾಮಗ್ರಿಯೇ ಪರಂದಿ. ಪಂಜಾಬಿ ಮಹಿಳೆಯರಲ್ಲಿ ಅದರಲ್ಲೂ ವಧುವಿನ ಸಾಂಪ್ರದಾಯಿಕ ಉಡುಗೆ ತೊಡುಗೆಯೊಂದಿಗೆ ಅದೂ ಅಭಿನ್ನವಾಗಿ ಸೇರಿಹೋಗಿದೆ. ಇದಕ್ಕೆ ಪರಂದಿ ಅಥವಾ ಪರಂದಾ ಎಂದೂ ಕರೆಯುತ್ತಾರೆ.

ಸಲ್ವಾರ್‌ ಕಮೀಜ್‌
ಇಂದಿನ ಫ್ಯಾಷನ್‌ ಟ್ರೆಂಡ್‌ ಆಗಿರುವ ಸಲ್ವಾರ್‌ ಕಮೀಜ್‌ ಸಾಂಪ್ರದಾಯಿಕವಾಗಿ ಮಹಿಳೆಯರು ಧರಿಸುವಾಗ “ದುಪ್ಪಟ್ಟಾ’ದಂತಹ ಶಾಲ್‌ಗ‌ಳನ್ನು ಅಥವಾ ಫ‌ುಲ್‌ಕಾರಿ ಬಗೆಯ ಬಣ್ಣದ ಕಸೂತಿ ಶಾಲುಗಳನ್ನು ಧರಿಸುತ್ತಾರೆ.

ಕುರ್ತಾ
ಇಂದು ಎಲ್ಲೆಡೆಯೂ ಕುರ್ತಾ ಪ್ರಸಿದ್ಧ. ಆದರೆ, ಇದು ಆರಂಭವಾದದ್ದು 11ನೇ ಶತಮಾನದಲ್ಲಿ. ಇದು ಪಂಜಾಬ್‌ನ ಮಹಿಳೆಯರ (ಪುರುಷರೂ ಧರಿಸುತ್ತಾರೆ, ವಿನ್ಯಾಸ ಬೇರೆ) ಇನ್ನೊಂದು ಸಾಂಪ್ರದಾಯಿಕ ಉಡುಗೆ. ಮುಲ್ತಾನಿ, ಫ‌ುಲ್‌ಕರಿ, ಬಾಂದನಿ ಹಾಗೂ ಮುಕ್ತಸರಿ ಎಂಬ ವಿವಿಧ ಹೆಸರಿನ, ವೈವಿಧ್ಯದ ಕುರ್ತಾಗಳು ಸಾಂಪ್ರದಾಯಿಕ ಮಹತ್ವ ಹೊಂದಿವೆ.

ಸುತನ್‌
ಇದು ಅತೀ ಪ್ರಾಚೀನ ಸಾಂಪ್ರದಾಯಿಕ ತೊಡುಗೆ. ಮೌರ್ಯರ ಚಕ್ರಾಧಿಪತ್ಯದ ಸಮಯದಲ್ಲಿ ಈ ಬಗೆಯ ಉಡುಗೆ-ತೊಡುಗೆಯನ್ನು ಪಂಜಾಬ್‌ ಮಹಿಳೆಯರು ಧರಿಸುತ್ತಿದ್ದರು ಎಂಬ ಉಲ್ಲೇಖ ದೊರೆಯುತ್ತದೆ. ಈ ಪ್ರಾಚೀನ ಸಾಂಪ್ರದಾಯಿಕ ಉಡುಗೆ ಇಂದಿಗೂ ಪಂಜಾಬ್‌ನಲ್ಲಿ ಮಹಿಳೆಯರು ಧರಿಸುತ್ತಾರೆ.

ಚೋಲಾ
ಗುರುದ್ವಾರ ಮೊದಲಾದ ಪ್ರಾರ್ಥನಾ ಮಂದಿರಗಳಿಗೆ ಹೋಗುವಾಗ ಧರಿಸುವ ಸಾಂಪ್ರದಾಯಿಕ ಉಡುಗೆಯೇ ಚೋಲಾ.

ಇಂದು ವಿಶ್ವಾದ್ಯಂತ ಪ್ರಸಿದ್ಧವಾದುದು ಹಾಗೂ ಆಧುನಿಕ ಶೈಲಿಯ ಬದಲಾವಣೆ ಗಳೊಂದಿಗೆ ಎಲ್ಲೆಡೆಯೂ ಮಹಿಳೆಯರು ಧರಿಸುವ ದಿರಿಸುಗಳೆಂದರೆ ಪಂಜಾಬ್‌ ಮಹಿಳೆಯರ ಸಾಂಪ್ರದಾಯಕ ಉಡುಗೆಗಳಾದ ಸಲ್ವಾರ್‌ ಕಮೀಜ್‌ ಹಾಗೂ ಕುರ್ತಾ!

ಒಂದು ಸಂಸ್ಕೃತಿ ಹಾಗೂ ಸಂಪ್ರದಾಯ ಒಂದು ಭಾಗ ಅಥವಾ ರಾಜ್ಯಕ್ಕೆ ಸೀಮಿತವಾಗದೇ ಎಲ್ಲೆಡೆಯೂ ಸೇರಿ ಒಂದಾಗಿ ಜನಪ್ರಿಯವಾಗುವುದು ಅಚ್ಚರಿಯ ಹಾಗೂ ಸಂತಸದ ಸಂಗತಿ!

ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next